ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲುಸರ್ನ್‌ನಲಿ ದೋಣಿಯಲಿ...

Last Updated 17 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

‘ಸರೋವರದಲ್ಲಿ ದೋಣಿ ವಿಹಾರ ಮಾಡೋಣ. ಎಲ್ಲರೂ ದಂಡೆ ಮೇಲೆ ದೋಣಿಯವರೆಗೂ ಹೋಗಿ’ ಎಂದು ನಮ್ಮ ಟೂರ್ ಗೈಡ್ ಪ್ರೀತಮ್ ಹೇಳಿದರು. ಆ ಸೂಚನೆ ಸಿಕ್ಕಿದ್ದೇ ತಡ, ನಡೆಯುತ್ತಲೇ ಸರೋವರದತ್ತ ಹೆಜ್ಜೆ ಹಾಕಿದೆವು. ‌

ಲುಸರ್ನ್‌ ಸರೋವರ, ಸ್ವಿಡ್ಜರ್‌ಲೆಂಡ್‌ನ ಸುಂದರ ಪ್ರದೇಶಗಳಲ್ಲೊಂದು. ಆಲ್ಫ್ಸ್‌ ಪರ್ವತಗಳಲ್ಲಿರುವ ಹಿಮನದಿಗಳು ಕರಗಿ ಸೃಷ್ಟಿಯಾದ ಸರೋವರವಿದು. ಈ ಜಾಗಕ್ಕೆ ಹೋದರೆ, ಒಂದು ಕಡೆ ಆಲ್ಫ್ಸ್ ಪರ್ವತಗಳ ಮನಮೋಹಕ ದೃಶ್ಯಗಳು ಕಂಡು ಮೈ ಮನ ಅರಳುತ್ತದೆ. ಇನ್ನೊಂದೆಡೆ ನದಿ ಮತ್ತು ಸರೋವರಗಳು ಅರಳಿದ ಮನವನ್ನು ಉಲ್ಲಾಸದಲ್ಲಿ ತೇಲಿಸುತ್ತವೆ.

ಒಂದು ಬದಿ ಸುಂದರ ಸರೋವರ. ಅದರೊಳಗೆ ಶ್ವೇತ ವರ್ಣದ ರಾಜ ಹಂಸಗಳು ಈಜಾಡುತ್ತಿರುತ್ತವೆ. ಇನ್ನೊಂದು ಬದಿಯಲ್ಲಿ ಸಾಲು ಮರಗಳಿರುವ ಸರೋವರದ ದಂಡೆ. ದಂಡೆಯ ಮೇಲೆ ಕುಳಿತ ಪ್ರವಾಸಿಗರು ಹಂಸಗಳಿಗೆ ಆಹಾರ ನೀಡುತ್ತಿರುತ್ತಾರೆ. ಅವು ದಡಕ್ಕೆ ಬಂದು ಆಹಾರ ಸ್ವೀಕರಿಸಿ ಹೋಗುತ್ತವೆ. ಹಿಮಾವೃತ ಪರ್ವತಗಳ ಹಿಮ್ಮೇಳದಲ್ಲಿ ನೀಲಿ ಬಣ್ಣದ ಸರೋವರದಲ್ಲಿ ತೇಲುವ ರಾಜಹಂಸಗಳನ್ನು ನೋಡುವುದೇ ಒಂದು ಸೊಗಸು.

ದೋಣಿ ವಿಹಾರದ ಸೊಬಗು

ದಂಡೆಯಲ್ಲಿರುವ ಮರದ ಕೆಳಗಿನ ಬೆಂಚುಗಳ ಮೇಲೆ ಕುಳಿತು ಸರೋವರದ ಸೌಂದರ್ಯವನ್ನು ಹಲವರು ಆಸ್ವಾದಿಸುತ್ತಿದ್ದರು. ನಾವು ಪಕ್ಕದ ಬೆಂಚುಗಳ ಮೇಲೆ ಕುಳಿತು ಪಕೃತಿ ಸೌಂದರ್ಯವನ್ನು ಆರಾಧಿಸುತ್ತಿದ್ದೆವು. ತಂಗಾಳಿಗೆ ತೊಯ್ದಾಡುವ ಮರಗಿಡಗಳ ಎಲೆಗಳ ಸದ್ದು ಸಂಗೀತದಂತೆ ಕೇಳಿಸುತ್ತಿತ್ತು. ಸರೋವರದ ಹಿಮ್ಮೇಳದಲ್ಲಿನ ಹಿಮಾವೃತ ಆಲ್ಫ್ಸ್ ಪರ್ವತಗಳು ಸ್ವರ್ಗ ಇಲ್ಲೇ ಇದೆ ಎಂದು ಸಾರುವಂತಿತ್ತು.

ಈ ಸರೋವರದ ವಿಶೇಷ ದೋಣಿ ವಿಹಾರ. ಲುಸರ್ನ್ ಸರೋವರದಲ್ಲಿ ಪ್ರವಾಸಿಗರಿಗಾಗಿ ದೋಣಿ ವಿಹಾರ ಮತ್ತು ಕ್ರೂಸ್ ಸೌಲಭ್ಯವಿದೆ. ಸಂಜೆ ವೇಳೆ ದೋಣಿ ವಿಹಾರ ಮಾಡುತ್ತಾ ಸುತ್ತಲಿನ ಭೂದೃಶ್ಯಗಳನ್ನು, ಸೂರ್ಯಾಸ್ತವನ್ನೂ ಕಣ್ತುಂಬಿಕೊಂಡು ಊಟ ಮಾಡಬಹುದು. ದೋಣಿಯಲ್ಲಿ ಕಲಾವಿದರು ಪ್ರದರ್ಶಿಸುವ ಸಂಗೀತ ಕಲೆಯನ್ನೂ ಆಸ್ವಾದಿಸಬಹುದು.

ಪ್ರಕೃತಿ ಸೌಂದರ್ಯ ಆರಾಧಿಸುತ್ತಿದ್ದ ನಮಗೆ, ದೋಣಿ ವಿಹಾರಕ್ಕೆ ಕರೆ ಬಂತು. ಪ್ರತಿಯೊಬ್ಬರಿಗೂ ಸ್ಥಳ ನಿಗದಿಯಾಗಿತ್ತು.

ದೋಣಿಯಲ್ಲಿ ವಿಹರಿಸುತ್ತಲೇ, ವೈನ್ ಅಥವಾ ತಂಪು ಪಾನೀಯಗಳು, ಈರುಳ್ಳಿ ಪಕೋಡ, ಚಿಕನ್ ತಂದೂರಿ, ನೂಡಲ್ಸ್, ದಾಲ್, ವೆಜ್ ಕರಿ, ಚಿಕನ್ ಕರಿ, ಫಿಶ್ ಕರಿ... ಹೀಗೆ ಹೊಟ್ಟೆ ತುಂಬಿಸುವಷ್ಟು ಊಟ. ಊಟ ಮಾಡುವಾಗಲೇ ಆಲ್ಪೈನ್ ಹಾರ್ನ್ ಅಥವಾ ಅಪ್ಫೋರ್ನ್ ಎಂಬ ಉದ್ದನೆಯ ಕೊಳವೆಯಂತಹ ಸ್ಥಳೀಯ ಜಾನಪದ ವಾದ್ಯವನ್ನು ಊದುತ್ತಾ ರಂಜಿಸಿದರು. ನಮಗೂ ಆ ವಾದ್ಯವನ್ನು ಊದಿ ನೋಡಿ ಎಂದು ಆಹ್ವಾನಿಸಿದರು.

ದೋಣಿ ನಿಧಾನವಾಗಿ ಸರೋವರದಲ್ಲಿ ತೇಲುತ್ತಿತ್ತು. ಸುತ್ತಲಿನ ಬದಲಾಗುವ ಭೂದೃಶ್ಯಗಳನ್ನು ನೋಡುತ್ತಾ ಒಂದು ಸುತ್ತು ಹೆಚ್ಚಾಗಿಯೇ ಎಲ್ಲರೂ ತಿನಿಸುಗಳನ್ನು ಹೊಟ್ಟೆಗಿಳಿಸಿದರು. ಊಟದ ಶಾಸ್ತ್ರ ಮುಗಿಯುತ್ತಿದ್ದಂತೆ ಸೂರ್ಯಾಸ್ತ ನೋಡಲು ಎಲ್ಲರೂ ಡೆಕ್‌ಗೆ ಓಡಿದೆವು.

ಸೂರ್ಯಾಸ್ತ ನೋಡಿಕೊಂಡು ವಾಪಸ್ ಡೆಕ್‌ ಮೇಲಕ್ಕೆ ಬಂದೆವು. ಡೆಕ್‌ನ ಮೇಲೆ ಸಂಗೀತ ತಕ್ಕಂತೆ ಹೆಜ್ಜೆ ಹಾಕುತ್ತಾ ಎಲ್ಲರೂ ನೃತ್ಯ ಮಾಡುತ್ತಿದ್ದರು. ಮಕ್ಕಳು ದೊಡ್ಡವರು ಭೇದವಿಲ್ಲದೆ ಕುಣಿದು ಕುಪ್ಪಳಿಸಿದರು. ಭಾರತೀಯರಿಗಾಗಿಯೇ ಹಿಂದಿ ಹಾಡುಗಳನ್ನು ಕೂಡ ಹಾಕಿದ್ದರು. ಕತ್ತಲಾಗುತ್ತಿದ್ದಂತೆ ದೋಣಿ ದಡಕ್ಕೆ ಬಂದು ಸೇರಿತು.

ದಂಡೆಯಲ್ಲಿ ಲುಸರ್ನ್‌ ನಗರ

‘ಲುಸರ್ನ್’ ಸರೋವರದ ಹೆಸರನ್ನೇ ದಂಡೆಯಲ್ಲಿರುವ ನಗರಕ್ಕೂ ಇಟ್ಟಿದ್ದಾರೆ. ಈ ಸರೋವರದ ನೀರಿನ ಮೂಲ ಆಲ್ಫ್ಸ್ ಪರ್ವತಗಳ ಹಿಮನದಿಗಳು. ಲುಸರ್ನ್ ಮುಂದೆ ರೂಸ್ ನದಿಯಾಗಿ ಹರಿಯುತ್ತದೆ.

ಆಲ್ಫ್ಸ್ ಪರ್ವತಗಳ ಮನಮೋಹಕ ದೃಶ್ಯ, ಸುಂದರ ನದಿ, ಸರೋವರ, ಸ್ವಚ್ಛ ಹಾಗೂ ಆಹ್ಲಾದಕರ ಪರಿಸರದಿಂದಾಗಿ ಈ ತಾಣ ಖ್ಯಾತ ಪ್ರವಾಸಿ ಕೇಂದ್ರವಾಗಿ ರೂಪುಗೊಂಡಿದೆ.

ಈ ಸುಂದರ ಲುಸರ್ನ್‌ ನಗರಕ್ಕೆ ಭೇಟಿ ನೀಡಿದವರು ಚಾಪೆಲ್ ಬ್ರಿಡ್ಜ್‌, ಜೆಸೂಟ್ ಚರ್ಚ್‌ ಸೇರಿದಂತೆ ಸುತ್ತಲಿನ ತಾಣಗಳನ್ನು ಸುತ್ತಾಡುತ್ತಾರೆ. ನಂತರ ಬಾತು, ಹಂಸಗಳಿಗೆ ತಿಂಡಿ ತಿನಿಸುತ್ತಾ ಸರೋವರದ ಬಳಿ ಕುಳಿತು ಪ್ರಕೃತಿಯಲ್ಲಿ ಒಂದಾಗಲು ಬಹುತೇಕರು ಇಷ್ಟಪಡುತ್ತಾರೆ.

ಸುತ್ತಾಟದ ಜತೆಗೆ, ಲುಸರ್ನ್‌ ನಗರದ ಭೇಟಿಯ ನೆನಪಿಗಾಗಿ ಸಮೀಪದಲ್ಲೇ ಇರುವ ವಿವಿಧ ವಾಚ್ ಕಂಪೆನಿಗಳ ಮಳಿಗೆಗಳಿಗೆ ಭೇಟಿ ನೀಡಿ ವಾಚ್‌ಗಳನ್ನು ಖರೀದಿಸುತ್ತಾರೆ.

(ಚಿತ್ರಗಳು: ಲೇಖಕರವು)

***

ಹೋಗುವುದು ಹೇಗೆ?

ಟೂರ್‌ ಪ್ಯಾಕೇಜ್ ಕರೆದೊಯ್ಯುವ ಕಂಪನಿಗಳ ಮೂಲಕ ಯೂರೋಪ್‌ ಟೂರ್‌ ಮಾಡುವವರು, ತಮ್ಮ ಪಟ್ಟಿಯಲ್ಲಿ ಸ್ವಿಡ್ಜರ್‌ಲೆಂಡ್ ದೇಶವಿದ್ದರೆ, ಈ ಲುಸರ್ನ್‌ ಸರೋವರವನ್ನು ಸೇರಿಸಿಕೊಳ್ಳಲು ಹೇಳಿ. ಸಾಮಾನ್ಯವಾಗಿ ಪ್ಯಾಕೇಜ್‌ ಟೂರ್ ಮಾಡಿಸುವವರು ಈ ಸ್ಥಳಕ್ಕೆ ಕಡ್ಡಾಯವಾಗಿ ಕರೆದೊಯ್ಯುತ್ತಾರೆ.

ವೈಯಕ್ತಿಕವಾಗಿ ಯೂರೋಪ್ ಪ್ರವಾಸ ಕೈಗೊಳ್ಳುವವರಿಗೆ, ಭಾರತದಿಂದ ಜ್ಯೂರಿಚ್, ಜಿನಿವಾ ಅಥವಾ ಬಾಸೆಲ್ ನಗರಗಳಿಗೆ ನೇರವಾಗಿ ವಿಮಾನ ಸೌಲಭ್ಯವಿದೆ. ಅಲ್ಲಿಂದ ಲುಸರ್ನ್‌ ತಲುಪಲು ರೈಲಿನ ವ್ಯವಸ್ಥೆ ಇದೆ.

ಲುರ್ಸನ್‌ ನಗರದಲ್ಲೇ ಉತ್ತಮ ಹೋಟೆಲ್‌ಗಳಿವೆ. ಅಲ್ಲೇ ವಸತಿ ವ್ಯವಸ್ಥೆ ಮಾಡಿಕೊಳ್ಳಬಹುದು.

ಭೇಟಿ ನೀಡುವ ಅವಧಿ

ಮೇ ತಿಂಗಳಿನಿಂದ ಅಕ್ಟೋಬರ್‌ವರೆಗೆ ಲುಸರ್ನ್‌ ನಗರಕ್ಕೆ ಭೇಟಿ ನೀಡಲು ಉತ್ತಮ ಸಮಯ. ಫೆಬ್ರುವರಿ–ಮಾರ್ಚ್‌ ಅವಧಿಯಲ್ಲಿ ಕಾರ್ನಿವಲ್‌ ಜುಲೈನಲ್ಲಿ ಬ್ಲೂ ಬಾಲ್ಸ್‌ ಮ್ಯೂಸಿಕ್‌ ಫೆಸ್ಟಿವಲ್‌ ನಂತಹ ಕಾರ್ಯಕ್ರಮಗಳು ನಡೆಯುತ್ತವೆ. ಆಗಸ್ಟ್‌–ಸೆಪ್ಟೆಂಬರ್‌ ಅವಧಿಯಲ್ಲೂ ಸಂಗೀತ ಕಾರ್ಯಕ್ರಮಗಳಿರುತ್ತವೆ.

ಇನ್ನೂ ಏನೇನು ನೋಡಬಹುದು

ಚಾಪೆಲ್ ಬ್ರಿಜ್‌, ಪಿಲಟಸ್ ಪರ್ವತ ಶ್ರೇಣಿಗಳು, ರಿಗಿ ಸರೋವರಗಳ ಸಮೂಹ, ಸ್ವಿಸ್‌ ಮ್ಯೂಸಿಯಂ, ಸಿಂಹಸ್ಮಾರಕ (ಲಯನ್ ಮಾನ್ಯುಮೆಂಟ್), ಸ್ಟಾನ್ಸರ್‌ಹಾರ್ನ್‌ ಸ್ಥಳಗಳಿಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT