ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಗಿಗೆ ಮಹಾಮಜ್ಜನ...

ಫೆಬ್ರುವರಿ 9 ರಿಂದ 18ರವರೆಗೆ ನಾಲ್ಕನೇ ಮಹಾಮಜ್ಜನ
Last Updated 4 ಫೆಬ್ರುವರಿ 2019, 19:30 IST
ಅಕ್ಷರ ಗಾತ್ರ

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಭಗವಾನ್ ಬಾಹುಬಲಿ ಮೂರ್ತಿಗೆ ಫೆ.9ರಿಂದ 18ರವರೆಗೆ ನಾಲ್ಕನೇ ಮಹಾಮಸ್ತಕಾಭಿಷೇಕ ನಡೆಯಲಿದೆ. ಇದು ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಅಭೂತಪೂರ್ವ ಕಾರ್ಯಕ್ರಮ. ಇತರೆಲ್ಲಾ ಉತ್ಸವಗಳಿಗಿಂತ ಭಿನ್ನವಾಗಿರುತ್ತದೆ. ಈ ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸಾವಿರಾರು ಜೈನ ಮುನಿಗಳು, ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.

ಮಸ್ತಕಾಭಿಷೇಕಕ್ಕೆ ಬರುವ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನೇತ್ರಾವತಿಯಿಂದ ಶ್ರೀಕ್ಷೇತ್ರದವರೆಗೆ ರಿಂಗ್‍ ರಸ್ತೆ ನಿರ್ಮಾಣವಾಗುತ್ತಿದೆ. ಧಾರ್ಮಿಕ ಆಚರಣೆಗಳಿಗೆ ಬಾಹುಬಲಿಯ ಮೂರ್ತಿಯ ಪಕ್ಕದಲ್ಲಿ ಕುಟೀರ, ಮುನಿ ಗಳು ಮತ್ತು ಗಣ್ಯರು ಕುಳಿತು ವೀಕ್ಷಿಸಲು ಗ್ಯಾಲರಿಗಳು, ಮೂರ್ತಿಯ ಹಿಂಬದಿಗೆ ಅಟ್ಟಣಿಗೆಯ ಪ್ರಭಾವಳಿಯ ಅಲಂಕಾರ ಸಿದ್ಧಗೊಳ್ಳುತ್ತಿದೆ. ಭೋಜನಕ್ಕೆ ಸಕಲ ವ್ಯವಸ್ಥೆ, ಅಲ್ಲಲ್ಲಿ ಪ್ರವೇಶ ದ್ವಾರಗಳು ನಿರ್ಮಾಣವಾಗುತ್ತಿವೆ.

ಬಾಹುಬಲಿಯ ಚರಿತ್ರೆಯನ್ನು ಸಾರುವ ಕಲಾಚಿತ್ರ ಗಳ ಪ್ರದರ್ಶನ, ವಿಶೇಷ ವಸ್ತು ಪ್ರದರ್ಶನಕ್ಕೂ ಏರ್ಪಾಡಾಗುತ್ತಿದೆ. ಸುರಕ್ಷತೆ ದೃಷ್ಟಿಯಿಂದ ಎಲ್ಲೆಡೆ ಸಿ.ಸಿ ಕ್ಯಾಮರಾಗಳ ಕಣ್ಗಾವಲಿದೆ. ವಸತಿಗೃಹಗಳು ಭಕ್ತರ ಆಗಮನಕ್ಕಾಗಿ ಕಾಯುತ್ತಿವೆ. ಸಂಜೆಯ ಮೆರುಗಿಗೆ ರಂಗು ನೀಡುವ ವಿದ್ಯುತ್ ದೀಪ, ಗೂಡುದೀಪಗಳು ಸಿದ್ಧಗೊಂಡಿವೆ.

ಮೂರ್ತಿ ಸ್ಥಾಪನೆಯ ಕಥೆ

ರಾಜ್ಯದ ವಿವಿಧ ಭಾಗಗಳಲ್ಲಿರುವ ಬಾಹುಬಲಿ ಮೂರ್ತಿಗಳಿಗೆ ಹೋಲಿಸಿದರೆ ಧರ್ಮಸ್ಥಳದ ಬಾಹುಬಲಿ ಭಿನ್ನ. ಧರ್ಮಸ್ಥಳದಲ್ಲಿ ಬಾಹುಬಲಿಯ ಮೂರ್ತಿ ಪ್ರತಿಷ್ಠಾಪನೆ ರತ್ನವರ್ಮ ಹೆಗ್ಗಡೆಯವರ ಬಹುದೊಡ್ಡ ಕನಸು. ರತ್ನವರ್ಮ ಹೆಗ್ಗಡೆಯವರು ಪತ್ನಿ ರತ್ನಮ್ಮರವರೊಂದಿಗೆ 1962ರಲ್ಲಿ ಕಾರ್ಕಳದಲ್ಲಿ ನಡೆದ ಮಹಾಮಜ್ಜನದಲ್ಲಿ ಪಾಲ್ಗೊಂಡಿದ್ದರು. ಅಲ್ಲಿಯ ಸೊಬಗನ್ನು ಕಣ್ತುಂಬಿಕೊಂಡ ಅವರು ಧರ್ಮಸ್ಥಳದಲ್ಲಿ ಬಾಹುಬಲಿ ಮೂರ್ತಿಯನ್ನು ಸ್ಥಾಪಿಸುವ ನಿರ್ಧಾರ ಕೈಗೊಂಡರು. ಮಂಗಳೂರಿ ನಲ್ಲಿ ವಕೀಲರಾಗಿದ್ದ ಕೆ.ಬಿ. ಜಿನರಾಜ ಹೆಗ್ಗಡೆಯವರೊಂದಿಗೆ ಚರ್ಚಿಸಿದಾಗ ಅವರು ಮೂರ್ತಿ ಕೆತ್ತನೆಗೆ ಕಾರ್ಕಳದ ಶಿಲ್ಪಿ ರೆಂಜಾಳ ಗೋಪಾಲ ಶೆಣೈಯವರ ಹೆಸರನ್ನು ಸೂಚಿಸಿದರು. ಮೂರ್ತಿ ಕೆತ್ತನೆಗೆ ಬೇಕಾದ ಕಲ್ಲಿನ ಹುಡುಕಾಟ ಶುರುವಾಯಿತು. ಕಾರ್ಕಳ ಸಮೀಪದ ಮಂಗಲಪಾದೆಯಲ್ಲಿರುವ ಸುಮಾರು ನೂರು ಅಡಿ ಎತ್ತರ, ಐವತ್ತೆಂಟು ಅಡಿಗಳ ಅಗಲ, ಐವತ್ತ ಮೂರು ಅಡಿ ಉದ್ದದ ಬೃಹತ್ ಶಿಲೆಯನ್ನು ಆಯ್ಕೆ ಮಾಡಿದರು.

1967ರ ವಿಜಯದಶಮಿಯಂದು ಮೂರ್ತಿ ಕೆತ್ತನೆ ಕೆಲಸ ಶುರುವಾಯಿತು. 1968ರಲ್ಲಿ ವೀರೇಂದ್ರ ಹೆಗ್ಗಡೆಯವರು ಧರ್ಮಾಧಿಕಾರಿ
ಯಾದರು. 39 ಅಡಿ ಉದ್ದದ ಮೂರ್ತಿಯ ಕೆತ್ತನೆ ಕೆಲಸ ಮುಗಿದ ನಂತರ ಅದನ್ನುಧರ್ಮಸ್ಥಳಕ್ಕೆ ಸಾಗಿಸುವುದು ಸವಾಲಿನ ಕೆಲಸವಾಯಿತು. ಮುಂಬೈನ ಮಂಗತ್ ರಾಮ್ ಸೋದರರ ಸಂಸ್ಥೆಯ ದೀನನಾಥ್ ಓಬಾನ್ ಅವರು ಸಾಗಾಣಿಕೆ ಜವಾಬ್ದಾರಿ ವಹಿಸಿಕೊಂಡರು. ಇದಕ್ಕಾಗಿ 250 ಅಶ್ವಶಕ್ತಿಯ, 46 ಗಾಲಿಗಳ ವಿಶೇಷ ಟ್ರಾಲಿ ಸಿದ್ಧಗೊಳಿಸಲಾಯಿತು. ಸಾಗಾಟಕ್ಕಾಗಿ 5 ನದಿಗಳು ಮತ್ತು 180 ಚಿಕ್ಕತೊರೆಗಳನ್ನು ದಾಟಲು ರೈಲ್ವೆ ಇಲಾಖೆಯವರು ಪೂರೈಸಿದ ಉಕ್ಕಿನ ಕ್ರಿಬ್‌ಗಳನ್ನು ಜೋಡಿಸಿ ತಾತ್ಕಾಲಿಕ ಸೇತುವೆಗಳನ್ನು ನಿರ್ಮಿಸಿದರು. ಸಾಗಾಟಕ್ಕೆ ಸುರತ್ಕಲ್‍ನ ಎನ್‍ಐಟಿಕೆ ಕಾಲೇಜಿನ ಎಂಜಿನಿಯರ್ ವಿಭಾಗದವರು ಸಹಕಾರ ನೀಡಿದರು.

ಪರೀಕ್ಷಾರ್ಥ ಪ್ರಯೋಗದ ನಂತರ

ಬಾಹುಬಲಿ ಮೂರ್ತಿ ಸಾಗಿಸುವ ಮೊದಲು ಪರೀಕ್ಷಾರ್ಥ ಪ್ರಯತ್ನಗಳು ನಡೆದವು. 40 ಅಡಿ ಉದ್ದದ ಬ್ರಹ್ಮಸ್ತಂಭದ ಶಿಲೆಯನ್ನು ಧರ್ಮಸ್ಥಳಕ್ಕೆ ಟ್ರಾಲಿ ಮುಖಾಂತರ ಸಾಗಿಸಿ ಪರೀಕ್ಷಿಸಲಾಯಿತು. ಎದುರಾದ ಸಣ್ಣ ಪುಟ್ಟ ಅಡಚಣೆಗಳೊಡನೆ ಅದು ಸುಸೂತ್ರವಾಗಿ ಕ್ಷೇತ್ರ ತಲುಪಿತು. ಮಾರ್ಗ ಮಧ್ಯೆ ಉಂಟಾದ ಕೆಲವೊಂದು ಅಡಚಣೆಗಳನ್ನು ಬಾಹುಬಲಿ ಮೂರ್ತಿ ಸಾಗಾಟಕ್ಕೂ ಮೊದಲು ಸರಿಪಡಿಸಿಕೊಂಡರು.

ಆರು ವರ್ಷಗಳಲ್ಲಿ ಕೆತ್ತನೆ ಕೆಲಸಗಳು ಮುಗಿದು ಮೂರ್ತಿ ಸಾಗಾಟಕ್ಕೆ ಸಿದ್ಧಗೊಂಡಿತು. 1973 ಫೆಬ್ರವರಿ 27 ರಂದು ಮೂರ್ತಿಯನ್ನು ವಿಶೇಷ ಟ್ರಾಲಿಯ ಮೇಲಿರಿಸಿ ಸಾಗಾಟಕ್ಕೆ ಚಾಲನೆ ನೀಡಲಾಯಿತು. ‘ಫೆಬ್ರುವರಿ 27 ಮಂಗಳವಾರದಂದು ಬಾಹುಬಲಿ ಮೂರ್ತಿಯನ್ನು ಶ್ರೀಕ್ಷೇತ್ರಕ್ಕೆ ತರುವ ಕಾರ್ಯ ಆರಂಭವಾಯಿತು. 10 ದಿನಗಳಲ್ಲಿ ಮುಗಿಯಬೇಕಿದ್ದ ಪಯಣ 23 ದಿನಗಳವರೆಗೂ ವಿಸ್ತರಿಸಿತು. ‘ಆ ಇಪ್ಪತ್ತಮೂರು ದಿನಗಳು ಎಂಬ ಕಿರುಚಿತ್ರವನ್ನೇ ನಿರ್ಮಿಸಬಹುದು. ಅಷ್ಟು ರೋಚಕವಾಗಿದ್ದವು ಮೂರ್ತಿಯ ಪಯಣದ ಸನ್ನಿವೇಶಗಳು. ಮಂಗಲಪಾದೆಯಿಂದ ಟಾರು ರಸ್ತೆಗೆ ಇದ್ದ ಕೇವಲ ನಾಲ್ಕು ಕಿ.ಮೀ. ದೂರವನ್ನು ಕ್ರಮಿಸಲು ಕೆಲವು ದಿನಗಳೇ ಬೇಕಾದವು’ ಎಂದು ಮೂರ್ತಿ ಸಾಗಾಟದ ಸಾಹಸಗಾಥೆಯನ್ನು ವೀರೇಂದ್ರಹೆಗ್ಗಡೆಯವರು ನೆನಪಿಸಿಕೊಳ್ಳುತ್ತಾರೆ.

ಮೂರ್ತಿ ನಿಲ್ಲಿಸಿದ ಬಗೆ

ಮೂರ್ತಿಯನ್ನು ಎತ್ತಿ ನಿಲ್ಲಿಸುವ ಕಾರ್ಯವನ್ನು ‘ಹಿಂದೂಸ್ತಾನ್ ಕನ್‍ಸ್ಟ್ರಕ್ಷನ್ ವರ್ಕ್ಸ್‌‘ ಎಂಬ ಮುಂಬೈ ಕಂಪನಿಗೆ ವಹಿಸಲಾಯಿತು. 39 ಅಡಿ ಎತ್ತರದ ಈ ಮೂರ್ತಿಯ ಪಾದದ ಕೆಳಗೆ 15 ಅಡಿ ಅಗಲ, 9 ಅಡಿ ದಪ್ಪನಾದ ಪೀಠ ಹಾಗೂ ಆದರೆ ಕೆಳಗೆ 13 ಅಡಿ ಉದ್ದವಾದ ತಳಪಾಯ ಸೇರಿಕೊಂಡಿತ್ತು. ‘ಟ್ರಾವೆಲಿಂಗ್ ಗ್ರಾಂಟಿ’(ಚಲಿಸುವ ಉಕ್ಕಿನ ಚೌಕಟ್ಟು) ಬಳಸಿಕೊಂಡು ಮೂರ್ತಿ ನಿಲ್ಲಿಸುವ ಕಾರ್ಯ ಆರಂಭವಾಯಿತು. ಅನೇಕ ತಂತ್ರಜ್ಞರು ಹಾಗೂ ಸಾವಿರಾರು ಜನರ ಸಹಾಯದಿಂದ ಮೂರ್ತಿಯನ್ನು ನಿಲ್ಲಿಸಲಾಯಿತು. ಮೂರ್ತಿ ಪ್ರತಿಷ್ಠಾಪನೆಯಾದ ನಂತರ ರಜತಗಿರಿ ಬೆಟ್ಟಕ್ಕೆ ‘ರತ್ನಗಿರಿ’ ಎಂದು ನಾಮಕರಣವಾಯಿತು.

ಟ್ರಾಲಿ ಎಳೆಯಲು ಆನೆಗಳ ಬಳಕೆ

‘ಅರಣ್ಯ ಇಲಾಖೆಯಿಂದ ತರಲಾದ 19 ಹಾಗೂ ಧರ್ಮಸ್ಥಳದ 2 ಆನೆಗಳನ್ನು ಬಳಸಿ ಟ್ರಾಲಿ ಎಳೆಸಲಾಯಿತು. ಆದರೆ ಆನೆಗಳೆಲ್ಲ ಒಮ್ಮೆಲೇ ಎಳೆಯಲು ವಿಫಲವಾದ್ದರಿಂದ ಈ ಪ್ರಯತ್ನ ಕೈಬಿಡಲಾಯಿತು. ನೂರಾರು ಸ್ವಯಂ ಸೇವಕರ ಸಹಕಾರ, ಉತ್ಕೃಷ್ಟ ಭಕ್ತಿಯ ಸೆಲೆ, ದಣಿವರಿಯದೇ. ಭಕ್ತಿಯಿಂದ ಮಾಡಿದ ಕಾಯಕದ ಫಲವಾಗಿ ‘ದೇವರೇ ನಡೆಸಿಕೊಂಡು ಬಂದ’ ಎಂಬ ರೀತಿಯಲ್ಲಿ ಮೂರ್ತಿಯನ್ನು ಶ್ರೀಕ್ಷೇತ್ರಕ್ಕೆ ತರಲಾಯಿತು. ಆಗಿನ ಕಾಲದ ಸ್ಥಿತಿಗತಿ ಅವಲೋಕಿಸಿದರೆ ಅದೊಂದು ವಿಸ್ಮಯ ಅನ್ನಿಸುತ್ತದೆ’ ಎಂದು ನೆನಪಿಸಿಕೊಳ್ಳುತ್ತಾರೆ ಹೆಗ್ಗಡೆಯವರು.

1975ರ ಡಿಸೆಂಬರ್ 26ರಂದು ರತ್ನಗಿರಿ ಬೆಟ್ಟದಲ್ಲಿ ಮೂರ್ತಿ ನಿಲ್ಲಿಸಲಾಯಿತು. ವಿದ್ಯಾನಂದ ಮುನಿಮಹರಾಜರ ಸಾನ್ನಿಧ್ಯದಲ್ಲಿ 1982ರಲ್ಲಿ ಬಾಹುಬಲಿಯ ಪ್ರತಿಷ್ಠಾಪನೆ ಮತ್ತು ಮೊದಲ ಮಹಾಮಜ್ಜನ ನಡೆಯಿತು. 1994ರಲ್ಲಿ ಆಚಾರ್ಯ ವರ್ಧಮಾನ ಸಾಗರ ಮುನಿಮಹಾರಾಜರ ಮಾರ್ಗದರ್ಶನ ಮತ್ತು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಎರಡನೆಯ ಮಸ್ತಕಾಭಿಷೇಕ ಜರಗಿತು. ಈ ಎರಡು ಮಹಾಮಜ್ಜನಗಳ ಧಾರ್ಮಿಕ ವಿಧಿ ವಿಧಾನಗಳಿಗೆ ಮೇಲುಸ್ತುವಾರಿ ವಹಿಸಿಕೊಂಡಿದ್ದವರು ರತ್ನಮ್ಮ ಹೆಗ್ಗಡೆಯವರು. 2007ರಲ್ಲಿ ಮೂರನೆಯ ಮಹಾಮಜ್ಜನವು ವೀರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ 108 ವರ್ಧಮಾನ ಸಾಗರ ಮುನಿ ಮಹಾ
ರಾಜರ ಸಾನ್ನಿಧ್ಯದಲ್ಲಿ ನಡೆಯಿತು.

ಈ ಬಾರಿ ನಾಲ್ಕನೆ ಮಹಾ ಮಸ್ತಕಾಭಿಷೇಕ ಹೆಗ್ಗಡೆಯವರ ನೇತೃತ್ವದಲ್ಲಿ ನಡೆಯುತ್ತಿದೆ. ಆಚಾರ್ಯ ವರ್ಧಮಾನ ಸಾಗರ ಮುನಿ ಮಹಾರಾಜರ ನೇತೃತ್ವದಲ್ಲಿ ಹಾಗೂ ವಾತ್ಸಲ್ಯ ವಾರಿಧಿ ಪುಷ್ಪದಂತಸಾಗರ ಮುನಿಮಹಾರಾಜರ ಹಾಗೂ ಸಮಸ್ತ ಆಚಾರ್ಯರು, ಮುನಿಗಳ ಮತ್ತು ಆರ್ಯಿಕಾ ಮಾತಾಜಿಯವರ ಉಪಸ್ಥಿತಿಯಲ್ಲಿ ಸಂಪನ್ನಗೊಳ್ಳಲಿದೆ. ಡಿ.ಸುರೇಂದ್ರಕುಮಾರ್ ಈ ಬಾರಿಯ ಮಸ್ತಕಾಭಿಷೇಕದ ಪ್ರಧಾನ ಸಂಚಾಲಕರಾಗಿದ್ದಾರೆ.

ವಿಶೇಷ ರೂಪಕ ಪ್ರದರ್ಶನ

ಮಹಾಮಸ್ತಕಾಭಿಷೇಕದ ಸಮಯದಲ್ಲಿ ಹೇಮಾವತಿ ಹೆಗ್ಗಡೆ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್‍ ಅವರು ಬಾಹುಬಲಿಯ ಕಥಾನಕವನ್ನು ಅಂದರೆ ಭರತ - ಬಾಹುಬಲಿಯ ಕಥೆಯನ್ನು ದೃಶ್ಯ ರೂಪಕವಾಗಿ ಪ್ರಸ್ತುಪಡಿಸುತ್ತಿದ್ದಾರೆ. ಈ ರೂಪಕ ಐದು ದಿನಗಳ ಕಾಲ ಪ್ರದರ್ಶನಗೊಳ್ಳಲಿದೆ. ಈ ರೂಪಕದ ಮೂಲಕವೇ ಬಾಹುಬಲಿಯ ವ್ಯಕ್ತಿತ್ವ, ತ್ಯಾಗ, ವಿರಕ್ತಿಯ ಉದ್ದೇಶವನ್ನು ಜನರಿಗೆ ತಲುಪಿಸಲಾಗುತ್ತಿದೆ. ಬೃಹತ್ ಮೂರ್ತಿ ಸ್ಥಾಪನೆಯ ಹಿಂದಿನ ಉದ್ದೇಶವನ್ನೂ ಈ ರೂಪಕದಲ್ಲಿ ಪ್ರಸ್ತುಪಡಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT