ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಫ್ಯಾಶನ್ ಸ್ಟ್ರೀಟು; ರೆಡಿಮೇಡ್‌ ಕ್ಲಾತು!

Last Updated 30 ಮಾರ್ಚ್ 2019, 19:31 IST
ಅಕ್ಷರ ಗಾತ್ರ

ಆ ಫುಟ್‌ಪಾತ್‌ನಲ್ಲಿ ಸಾಲು ಸಾಲು ಅಂಗಡಿಗಳು. ಯಾವುದೇ ಜಾಹೀರಾತುಗಳನ್ನು ಈ ಯಾವ ಅಂಗಡಿಯವರೂ ನೀಡುವುದಿಲ್ಲ. ಆದರೆ ವರ್ಷವಿಡೀ ಅಲ್ಲಿ ಕಿಕ್ಕಿರಿದ ಗ್ರಾಹಕರು. ದೇಶದಾದ್ಯಂತದಿಂದ ಮುಂಬೈಗೆ ಬಂದ ಪ್ರವಾಸಿಗರು ಈ ಫುಟ್‌ಪಾತ್ ಅಂಗಡಿಗಳಿಗೆ ಭೇಟಿ ನೀಡಿ ಖರೀದಿಸುವ ಇಚ್ಛೆಯಲ್ಲಿರುತ್ತಾರೆ.

ಇದೇನಪ್ಪಾ ಯಾವ ಜಾಹೀರಾತುಗಳನ್ನೂ ನೀಡದೆ ಇಲ್ಲಿನ ಅಂಗಡಿಗಳು ಇಷ್ಟೊಂದು ಪ್ರಸಿದ್ಧಿಯೇ? ಇಷ್ಟೊಂದು ಇಲ್ಲಿ ವ್ಯಾಪಾರವೇ... ಎಂದು ಅಚ್ಚರಿ ಪಡುವಿರಾ?

ಹಾಗಿದ್ದರೆ ಬನ್ನಿ ದಕ್ಷಿಣ ಮುಂಬೈನ ಚರ್ಚ್‌ಗೇಟ್ ಸ್ಟೇಷನ್ ಬಳಿಗೆ. ಇಲ್ಲಿ ಯಾರಲ್ಲಿ ವಿಚಾರಿಸಿದರೂ ಹೇಳುತ್ತಾರೆ- ಈ ಫುಟ್‌ಪಾತ್ ಬಜಾರ್‌ಅನ್ನು. ಇದರ ಹೆಸರು ಫ್ಯಾಶನ್ ಸ್ಟ್ರೀಟ್.

ಹೌದು, ದಕ್ಷಿಣ ಮುಂಬೈನ ಕ್ರಾಸ್ ಮೈದಾನ ಮತ್ತು ಆಜಾದ್ ಮೈದಾನಗಳಂತಹ ಹೆರಿಟೇಜ್ ಮಹತ್ವವಿರುವ ಮೈದಾನಗಳ ನಡುವಿನ ರಸ್ತೆಯಲ್ಲಿ ಹಾದು ಹೋಗುವಾಗ ಈ ಫ್ಯಾಶನ್ ಸ್ಟ್ರೀಟ್‌ನ ಸೌಂದರ್ಯ ಕಾಣಬಹುದು.

ಫ್ಯಾಶನ್ ಸ್ಟ್ರೀಟ್‌ಅನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಎಫ್.ಎಸ್. ಫುಟ್‌ಪಾತ್‌ನಲ್ಲಿದ್ದ ಹೊರತೂ ಇದು ಖರೀದಿದಾರರ ಮೊದಲ ಇಷ್ಟದ ಬಜಾರ್ ಆಗಿದೆ. ಮುಂಬೈನ ಪ್ರವಾಸಿ ಸ್ಥಳವಾಗಿಯೂ ಇದನ್ನು ಗುರುತಿಸಲಾಗುತ್ತದೆ. ಈ ಫ್ಯಾಶನ್ ಸ್ಟ್ರೀಟ್‌ನಲ್ಲಿ ಸುಮಾರು 400ರಷ್ಟು ಅಂಗಡಿಗಳಿವೆ. ಇವುಗಳಲ್ಲಿ ಲೇಡೀಸ್ ಡ್ರೆಸ್, ಪಂಜಾಬಿ ಸೂಟ್, ಸ್ಕರ್ಟ್– ಟಾಪ್, ಶರ್ಟ್ಸ್, ಜೀನ್ಸ್, ಟ್ರ್ಯಾಕ್ ಸೂಟ್, ಪೈಜಾಮ, ಬರ್ಮುಡ, ಮಕ್ಕಳ ರೆಡಿಮೇಡ್ ಡ್ರೆಸ್, ಶೂ, ಚಪ್ಪಲಿ, ಆಟಿಕೆ, ಹ್ಯಾಂಡ್ ಬ್ಯಾಗ್ಸ್, ಬೆಲ್ಟ್, ಜುವೆಲ್ಲರಿ ಐಟಮ್ಸ್... ಇತ್ಯಾದಿ ಇತ್ಯಾದಿ ಅಗ್ಗದ ದರದಲ್ಲಿ ಸಿಗುವುದು. ಆದರೆ ಗಿರಾಕಿಗಳಿಗೆ ಅತಿ ಹೆಚ್ಚು ಚೌಕಾಸಿ ಮಾಡಲು ತಿಳಿದಿರಬೇಕು. ಇಲ್ಲಿನ ವಸ್ತುಗಳ ಗುಣಮಟ್ಟ ಚೆನ್ನಾಗಿರುತ್ತದೆ. 800 ರೂಪಾಯಿ ಬೆಲೆಯ ಜೀನ್ಸ್ ಚೌಕಾಸಿ ಮಾಡಲು ಗೊತ್ತಿದ್ದರೆ 400 ರೂಪಾಯಿಗೂ ಸಿಗಬಹುದು. ಇಷ್ಟೊಂದು ಪ್ರಮಾಣದಲ್ಲಿ ಗ್ರಾಹಕ ಮತ್ತು ಸೇಲ್ಸ್‌ಮ್ಯಾನ್ ನಡುವೆ ಚೌಕಾಸಿಯು ಬಹುಶಃ ಬೇರೆ ಯಾವುದೇ ಫುಟ್‌ಪಾತ್‌ ಬಜಾರ್‌ಗಳಲ್ಲಿ ಕಾಣಸಿಗದು.

ಮುಂಬೈಗೆ ಬರುವ ಪ್ರವಾಸಿಗರಿಗೂ ಫ್ಯಾಶನ್ ಸ್ಟ್ರೀಟ್‌ನಲ್ಲಿ ಕಡಿಮೆ ದರದಲ್ಲಿ ವಸ್ತುಗಳು ಸಿಗುತ್ತವೆ ಎಂದು ತಿಳಿದಿರುತ್ತದೆ. ಚರ್ಚ್‌ ಗೇಟ್ ಕಡೆ ಬರುವ ಪ್ರವಾಸಿಗರು ಫ್ಯಾಶನ್ ಸ್ಟ್ರೀಟ್‌ಗೆ ಭೇಟಿ ಕೊಡುವುದನ್ನು ತಪ್ಪಿಸಲಾರರು. ಇದು ಪ್ರವಾಸಿಗರಿಗೆ ಮಾತ್ರವಲ್ಲ, ಮುಂಬಯಿ ನಿವಾಸಿಗಳಿಗೂ ಇಷ್ಟದ ಬಜಾರ್‌ ಆಗಿದೆ. ಮುಂಬೈಕರ್ ಕೂಡಾ ಡ್ರೆಸ್ ಖರೀದಿಗೆ ಇಲ್ಲಿಗೇ ಬರುತ್ತಾರೆ.

ರೆಡಿಮೇಡ್ ಬಟ್ಟೆಗಳಿಗೆ ಮುಂಬಯಿಯಲ್ಲಿ ಬಹು ದೊಡ್ಡ ಬಜಾರ್ ಎಂದರೆ ಇದೇ. ಇಲ್ಲಿನ ಫೇರಿವಾಲಾರು (ಅಂಗಡಿಯವರು) ಮೊದಲು ಗೇಟ್ ವೇ ಆಫ್ ಇಂಡಿಯಾದ ಬಳಿ ವ್ಯಾಪಾರ ಮಾಡುತ್ತಿದ್ದವರು. ಆದರೆ ಅದು ಕ್ರಮೇಣ ಕಿಕ್ಕಿರಿದ ಪ್ರವಾಸಿಗರಿಂದ ತುಂಬುತ್ತಿದ್ದಂತೆ ಈ ಫೇರಿವಾಲಾರನ್ನು ಅಲ್ಲಿಂದ ಎಬ್ಬಿಸಲಾಯಿತು. ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಚೌಕ್ ಮ್ಯೂಸಿಯಂನಿಂದ ಮುಂದಕ್ಕೆ ಫುಟ್‌ಪಾತ್‌ನಲ್ಲಿ ಜಾಗ ನೀಡಲಾಯಿತು. ಅಲ್ಲಿಂದ ಡಿ.ಎನ್.ರೋಡ್ ಪರಿಸರದಲ್ಲಿ ಫೇರಿವಾಲಾರು ತಮ್ಮ ದಂಧೆ ಆರಂಭಿಸಿದರು.

ಆ ದಿನಗಳಲ್ಲಿ ಡಿ.ಎನ್.ರೋಡ್ ಪರಿಸರದಲ್ಲಿ ಫುಟ್‌ಪಾತ್‌ಗಳಲ್ಲೇ ಜನ ಶೌಚ ಮಾಡುತ್ತಿದ್ದರು. ಕೊಳಕಾಗಿದ್ದ ಫುಟ್‌ಪಾತ್‌ನಲ್ಲಿ ಜನರ ಓಡಾಟ ಕಡಿಮೆ ಇರುತ್ತಿತ್ತು. ಈ ಕೊಳಕು ಪರಿಸರದ ಫುಟ್‌ಪಾತ್‌ಗಳನ್ನು ಫೇರಿವಾಲಾರು ಸ್ವಚ್ಛ ಮಾಡಿದರು. ಅಂದಿನ ಕೊಳಕು ಫುಟ್‌ಪಾತ್‌ಗಳೇ ಇಂದು ದೇಶದಾದ್ಯಂತ ಪ್ರಸಿದ್ಧಿ ಪಡೆದಿರುವ ಫ್ಯಾಶನ್ ಸ್ಟ್ರೀಟ್ ಆಗಿದೆ. ಯಾರೂ ಆ ದಿನಗಳಲ್ಲಿ ಕನಸು ಕಂಡಿರಲಿಲ್ಲ- ಈ ಫುಟ್‌ಪಾತ್ ಒಂದು ದಿನ ಚಿನ್ನ ನೀಡಬಹುದಾದ ಬಜಾರ್ ಎನ್ನಿಸಿಕೊಳ್ಳಬಹುದು ಎಂದು!

ಚರ್ಚ್‌ಗೇಟ್ ಸ್ಟೇಷನ್ ಇಳಿದು ಎಡಕ್ಕೆ ಪಾರಸಿ ಬಾವಡಿ, ಅಲ್ಲಿಂದ ಮುಂದೆ ಭಾವುರಾವ್ ಪಾಟೀಲ್ ಮಾರ್ಗ, ಅದೇ ಫುಟ್‌ಪಾತ್‌ನಲ್ಲಿ ನಡೆದಾಗ ಫ್ಯಾಶನ್ ಸ್ಟ್ರೀಟ್‌ನ ಸ್ಟಾಲ್‌ಗಳನ್ನು ಕಾಣಬಹುದು. ಭಾರತದ ಬಹುದೊಡ್ಡ ಪುಟ್‌ಪಾತ್ ಬಜಾರ್‌ನಲ್ಲಿ ನೀವೀಗ ಹಾದು ಹೋಗುತ್ತಿದ್ದೀರಿ.

ಈ ಫ್ಯಾಶನ್ ಸ್ಟ್ರೀಟ್‌ನಲ್ಲಿ 388ರಷ್ಟು ಅಂಗಡಿಗಳಿವೆ ಎಂಬ ಉಲ್ಲೇಖ ಇದೆಯಾದರೂ ಇಲ್ಲಿ 400ಕ್ಕೂ ಹೆಚ್ಚು ಸ್ಟಾಲ್‌ಗಳಿವೆ. ಆದರೆ ಅಸ್ತವ್ಯಸ್ತ ಸ್ವರೂಪದಲ್ಲಿ ಹರಡಿಕೊಂಡಿವೆ. ಹೀಗಾಗಿ 2014ರಿಂದ ಇದರ ‘ರೀಡೆವಲಪ್‌ಮೆಂಟ್‌’ ಯೋಜನೆ ನಡೆಯುತ್ತಿದೆ. ಮುಂಬೈ ಹೆರಿಟೇಜ್ ಕನ್ಸರ್ವೇಷನ್ ಇದರ ಮರು ಅಭಿವೃದ್ಧಿಗೆ ಅನುಮತಿ ನೀಡಿದೆ.

ಇಲ್ಲಿನ ಅಂಗಡಿಯನ್ನು ಪಡೆಯಬೇಕಾದರೆ ಲಕ್ಷಗಟ್ಟಲೆ ಡಿಪಾಸಿಟ್ ಕಟ್ಟಬೇಕು. ತಿಂಗಳ ಬಾಡಿಗೆಯೂ ಹತ್ತರಿಂದ ಇಪ್ಪತ್ತೈದು ಸಾವಿರ ರೂಪಾಯಿ ತನಕ ಇರುತ್ತದೆ. ಡಿಪಾಸಿಟ್ ಇಲ್ಲದಿದ್ದರೆ ತಿಂಗಳ ಬಾಡಿಗೆ ಹೆಚ್ಚಿದೆಯಂತೆ. ಅನೇಕರು ಇಲ್ಲಿನ ಸ್ಟಾಲ್‌ಗಳನ್ನು ನಡೆಸಲು ಬಾಡಿಗೆಗೆ ಪಡೆಯುತ್ತಾರೆ. ಏಪ್ರಿಲ್, ಮೇ - ಜೂನ್ ತಿಂಗಳಲ್ಲಿ ವಿಶೇಷ ಸೀಜನ್. ಪ್ರವಾಸಿಗರ ಸಂಖ್ಯೆಯೂ ಅಧಿಕ. ಅದೇ ರೀತಿ ದೀಪಾವಳಿ- ಈದ್- ದಸರಾ ಸಮಯದಲ್ಲೂ ವ್ಯಾಪಾರ ಹೆಚ್ಚಾಗಿರುತ್ತದೆ.

ಇಂದು ಫ್ಯಾಶನ್ ಸ್ಟ್ರೀಟ್‌ನ ಸ್ಟಾಲ್‌ಗಳವರು ವಿದೇಶಿ ಪ್ರವಾಸಿಗರನ್ನು ಹೆಚ್ಚಿಗೆ ಲೂಟಿ ಮಾಡುತ್ತಿರುವ ಕಾರಣ, ವಿದೇಶಿಯರು ಈ ಕಡೆ ಬರುವುದನ್ನು, ಖರೀದಿಸುವುದನ್ನು ಕಡಿಮೆ ಮಾಡುತ್ತಿದ್ದಾರೆ. ಹಳೆಯ ಅಂಗಡಿಯವರ ಪ್ರಕಾರ ಇದಕ್ಕೆ ಹೊಸ ಅಂಗಡಿಯವರು ಪ್ರವಾಸಿಗರನ್ನು ಲೂಟಿ ಮಾಡುತ್ತಿದ್ದು, ಫ್ಯಾಶನ್ ಸ್ಟ್ರೀಟ್‌ನ ಹೆಸರು ಕೆಡಿಸುತ್ತಿದ್ದಾರೆಂಬ ಆರೋಪವೂ ಕೇಳಿ ಬರುತ್ತಿದೆ.

ಮುಂಬೈ ಚರ್ಚ್‌ಗೇಟ್‌ ಸ್ಟೇಷನ್‌ ಬಳಿ ಫುಟ್‌ಬಾತ್‌ ಶಾಪಿಂಗ್‌
ಮುಂಬೈ ಚರ್ಚ್‌ಗೇಟ್‌ ಸ್ಟೇಷನ್‌ ಬಳಿ ಫುಟ್‌ಬಾತ್‌ ಶಾಪಿಂಗ್‌

ಈಗ್ಗೆ ಹತ್ತು ವರ್ಷಗಳಲ್ಲಿ ದೃಶ್ಯ ಬದಲಾಗುತ್ತಿದೆ. ಇಲ್ಲಿನ ಕಾರುಬಾರು 40 ಶೇಕಡದಷ್ಟು ಇಳಿಕೆಯಾಗಿದೆ ಎನ್ನುತ್ತಾರೆ. ಒಂದೊಮ್ಮೆ 200 ಅಂಗಡಿಗಳಿದ್ದರೆ ಇಂದು 400ಕ್ಕೂ ಹೆಚ್ಚು ಇವೆ. ಆದರೆ ಬಜಾರ್ ಒಂದು ರೀತಿಯಲ್ಲಿ ವಿಭಜನೆ ಆಗಿದೆ. ಆನ್‌ಲೈನ್‌ ಖರೀದಿಯೂ ಹೆಚ್ಚಿರಬಹುದು. ಖರ್ಚಿನಷ್ಟು ಆದಾಯ ಬರುತ್ತಿಲ್ಲ ಎನ್ನುತ್ತಾರೆ ಹಿಂದಿನ ಅಂಗಡಿಯವರು. ಕಾಯಂ ಗ್ರಾಹಕರಿಗೆ ನೀಡುತ್ತಿದ್ದ ಸಾಲವನ್ನೂ ಈಗ ಅನೇಕರು ನಿಲ್ಲಿಸಿದ್ದಾರೆ. ಹಾಗಿದ್ದೂ ಫ್ಯಾಶನ್ ಸ್ಟ್ರೀಟ್‌ನಲ್ಲಿ ಅಂಗಡಿ ಸಿಗೋದು ಮಾತ್ರ ಕಷ್ಟ.

ದೇಶದ ಎಲ್ಲಾ ಕಡೆಯ ರೆಡಿಮೇಡ್ ವಸ್ತುಗಳನ್ನು ಇಲ್ಲಿ ಖರೀದಿಸಬಹುದು. ಶನಿವಾರ- ಭಾನುವಾರ ಹೆಚ್ಚು ಗ್ರಾಹಕರು. ಈ ಅಂಗಡಿಗಳವರ ಏಳಿಗೆಗಾಗಿ ಫ್ಯಾಶನ್ ಮಾರ್ಕೆಟ್ ಲೈಸನ್ಸ್ ವೆಲ್ಫೇರ್ ಅಸೋಸಿಯೇಶನ್ ಕೂಡ ಇದೆ. ಬಟ್ಟೆಗಳನ್ನು ಅಂಗಡಿ ಎದುರು ತೂಗು ಹಾಕುವುದನ್ನು ನೋಡಿದ ರಸ್ತೆಯಲ್ಲಿ ಹೋಗುವ ಪ್ರವಾಸಿಗರು ಒಂದು ಸಲ ಅಂಗಡಿಗೆ ಬಂದೇ ಬರುವುದು ವಾಡಿಕೆ.

ಈಗ ಎಲ್ಲಾ ಸ್ಟಾಲ್‌ಗಳಿಗೆ ಒಂದೇ ರೂಪು. ಹೊಸಲುಕ್ ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ. ಇದು ಪೂರ್ತಿಗೊಂಡರೆ ಆವಾಗ ಇಲ್ಲಿನ ಸೌಂದರ್ಯ ಇನ್ನಷ್ಟು ಹೆಚ್ಚಬಹುದು.

ಆದರೆ ಯಾರಾದರೂ ಫೋಟೋ ತೆಗೆದರೆ ಮಾತ್ರ ಅಂಗಡಿಯವರು ಚೂರು ಹೆದರುತ್ತಾರೆ. ಅವರ ಕಣ್ಣು ತಪ್ಪಿಸಿ ಉತ್ತಮ ಫೋಟೊ ಸಿಗುವುದು ಕಷ್ಟವೇ. ಯಾಕೆ ಫೋಟೋ ತೆಗೆದದ್ದು ಎನ್ನುವ ಪ್ರಶ್ನೆಯನ್ನೂ ಎದುರಿಸಬೇಕಾಗುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT