ಭಾನುವಾರ, ಜನವರಿ 17, 2021
18 °C

ಹಿಮ ಸುರಿಯುವ ಸಮಯ...

ಪಿನಾಕ Updated:

ಅಕ್ಷರ ಗಾತ್ರ : | |

Prajavani

ಕಾಶ್ಮೀರದಲ್ಲಿ ಈಗ ಹಿಮಪಾತದ ಸಮಯ. ಹಿಮ ಸುರಿಯುವ ಸಮಯದಲ್ಲಿ ತೆಗೆದ ಚಿತ್ರಗಳು ಕಲಾಕೃತಿಗಳಂತೆ ಕಂಗೊಳಿಸುವುದು ನಿಜವಾದರೂ ಸ್ಥಳೀಯರು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ರಾತ್ರಿ ಬೆಳಗಾಗುವ ಹೊತ್ತಿಗೆ 4–5 ಇಂಚಿನಷ್ಟು ಹಿಮ ಇಂಚಿಂಚು ಜಾಗವನ್ನೂ ಬಿಡದಂತೆ ಹರಡಿಕೊಂಡಿರುತ್ತದೆ. ಇದರಿಂದ ಸಂಚಾರ ಸ್ತಬ್ಧಗೊಂಡು ಹೆದ್ದಾರಿಗಳು ಹಿಮದ ಚಾದರವನ್ನೇ ಹೊದ್ದು ಮಲಗಿಬಿಡುತ್ತವೆ. ರಸ್ತೆಯಿಂದ ಹಿಮವನ್ನು ತೆಗೆಯುವುದು ಅಲ್ಲಿನ ಸ್ಥಳೀಯ ಆಡಳಿತಗಳ ಪಾಲಿಗೆ ಬಹುದೊಡ್ಡ ಹೊಣೆ. ಹಿಮವನ್ನು ತೆರವುಗೊಳಿಸಲು ಬೇಕಾದಷ್ಟು ಯಂತ್ರಗಳು ಇಲ್ಲ ಎನ್ನುವುದು ಅಲ್ಲಿನ ಅಧಿಕಾರಿಗಳ ಕಾಯಂ ಅಳಲು. ಆಡಳಿತಾತ್ಮಕವಾದ ಇಂತಹ ಸಮಸ್ಯೆಗಳನ್ನು ಬದಿಗಿಟ್ಟು ನೋಡಿದರೆ ನಿಸರ್ಗ ಬರೆಯುವ ಕಾವ್ಯವೇ ಈ ಹಿಮಪಾತ!


ದಾಲ್‌ ಸರೋರವರದ ದಂಡೆಯಲ್ಲಿ ತರಕಾರಿ ಮಾರಾಟ

ಇಲ್ಲಿನ ತಾಪಮಾನ ಈಗ ಸರ‍್ರನೆ ಮೈನಸ್‌ ಡಿಗ್ರಿಗೆ ಜಾರಿರುತ್ತದೆ. ನಾಲ್ಕು ದಿನಗಳ ಕೆಳಗೆ ಇಲ್ಲಿನ ತಾಪಮಾನ ಮೈನಸ್‌ 11 ಡಿಗ್ರಿ ಸೆಲ್ಸಿಯಸ್‌ನಷ್ಟಿತ್ತು! ಡಿಸೆಂಬರ್‌ 21ರಿಂದ ಜನವರಿ 31ರ ವರೆಗಿನ ಅವಧಿಯನ್ನು ಸ್ಥಳೀಯರು ‘ಚಿಲ್ಲೈ ಕಾಲನ್‌’ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಜನ ಮನೆಯನ್ನು ಬಿಟ್ಟು ಅವರು ಹೊರಗೆ ಬರುವುದು ತುಂಬಾ ಅಪರೂಪ. ಶೀತಗಾಳಿಗೆ ಸಿಕ್ಕರೆ ದೇಹದೊಳಗಿನ ರಕ್ತವೇ ಹೆಪ್ಪುಗಟ್ಟಿ ಹೋಗುತ್ತದೆ. ಚಿಲ್ಲೈ ಕಾಲನ್‌ ನಂತರ 20 ದಿನಗಳ ‘ಚಿಲ್ಲೈ ಖುರ್ದ್‌’ (ಕಡಿಮೆ ಶೀತ) ಇರುತ್ತದಂತೆ. ಕೊನೆಗೆ ಹತ್ತು ದಿನಗಳ ‘ಚಿಲ್ಲೈ ಬಚ್ಚಾ’ (ಶೀತದ ಮಗು) ಮೂಲಕ ಪ್ರಸಕ್ತ ಋತುವಿನ ಹಿಮಪಾತಕ್ಕೆ ಕಾಶ್ಮೀರ ಟಾಟಾ ಹೇಳುತ್ತದೆ. ಜಗತ್ಪ್ರಸಿದ್ಧ ದಾಲ್‌ ಸರೋವರದಲ್ಲೂ ಈ ಅವಧಿಯಲ್ಲಿ ನೀರು ಮಂಜುಗಡ್ಡೆಯಂತೆ ಆಗುತ್ತದೆ.


ಗಿಡ–ಮರಗಳೂ ತೊಟ್ಟಿವೆ ಹಿಮದ ಹೊದಿಕೆ

ಸ್ಥಳೀಯರಿಗೆ ಹಿಮಪಾತವೆಂದರೆ ಕಷ್ಟದ ಸಮಯವಾದರೆ ಪ್ರವಾಸಿಗರ ಪಾಲಿಗೆ ಅದೇ ಹಬ್ಬ. ಹಾಲಿನಂತೆ ಸುರಿಯುವ ಹಿಮವನ್ನು ನೋಡಲು ದೇಶ–ವಿದೇಶಗಳಿಂದ ಪ್ರವಾಸಿಗರು ಇಲ್ಲಿಗೆ ಧಾವಿಸಿ ಬರುತ್ತಾರೆ. ಉಣ್ಣೆಯ ಉಡುಪುಗಳನ್ನು ಧರಿಸಿ, ಗುಲ್‌ಮಾರ್ಗ್‌ ಇಲ್ಲವೆ ಪಹಲ್‌ಗಾಮ್‌ ಹಾದಿ ಹಿಡಿದರೆಂದರೆ ಅವರಿಗೆ ಸ್ವರ್ಗದಲ್ಲಿಯೇ ಇದ್ದಂತಹ ಅನುಭವ. ಗುಡ್ಡ–ಬೆಟ್ಟಗಳು ಕೂಡ ಹಿಮದ ಚಾದರ ಹೊದ್ದು ನಿಲ್ಲುವುದರಿಂದ ಎಲ್ಲಿ ನೋಡಿದರೂ ಶ್ವೇತವರ್ಣದ ಸಾಮ್ರಾಜ್ಯ ಸೃಷ್ಟಿಯಾಗಿರುತ್ತದೆ. ನೀರ್ಗಲ್ಲಿನ ಮೇಲೆ ಜಾರುವ ಆಟವಂತೂ ರೋಮಾಂಚಕಾರಿ ಅನುಭವ. ಚಳಿಗಾಲದ ಹಲವು ಕ್ರೀಡಾಕೂಟಗಳಿಗೆ ಗುಲ್‌ಮಾರ್ಗ್‌ ಆತಿಥ್ಯ ವಹಿಸುತ್ತದೆ. ಸ್ಥಳೀಯ ಆತಿಥ್ಯ ಉದ್ಯಮದ ಪಾಲಿಗೆ ಇದು ಗಳಿಕೆಯ ಋತು. ಅಂದಹಾಗೆ ನವದಂಪತಿಗಳ ಮಧುಚಂದ್ರಕ್ಕೂ ಇಲ್ಲಿನ ಹಿಮಪಾತ ತಕ್ಕಸಾಥ್‌ ನೀಡುವುದಂತೆ!


ಸುರಿಯುವ ಮಳೆಯಲ್ಲಿ ಸಾಗಿದೆ ಪಯಣ


ಶ್ರೀನಗರದ ಜಬರ್ವಾನ್‌ ಪರ್ವತದ ಹಿನ್ನೆಲೆಯಲ್ಲಿ ಕಂಡ ಹಿಮಪಾತದ ನೋಟ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು