ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದ್ರನಗರಿಯ ತುಣುಕಿನಂತೆ...

Last Updated 17 ಜುಲೈ 2019, 19:30 IST
ಅಕ್ಷರ ಗಾತ್ರ

ಶಾಲಾ ಪಠ್ಯಗಳಲ್ಲಿ ನೆದರ್ಲೆಂಡ್ಸ್‌ ಬಗ್ಗೆ ಓದಿದ್ದು ನೆನಪಿತ್ತು. ಇಲ್ಲಿ ಸಮುದ್ರದ ನೀರು ಒಳನುಗ್ಗದಂತೆ ಡೈಕ್ ಕಟ್ಟಲಾಗಿದೆ ಎಂದು. ಇದರ ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಂ, ಸೂರ್ಯರಶ್ಮಿಗೆ ಹೊಳೆವ ಕಡಲು ನದಿ ಕಾಲುವೆಗಳ ನೀರೊಳಗೆ ಮುಳುಗಿದ ಗದ್ದೆಯಂತೆ ಆಗಸದಿಂದ ಕಾಣುತ್ತದೆ. ಅದರ ಹೆಸರು ಬಂದಿದ್ದೇ ಆ್ಯಮ್‌ಸ್ಟರ್‌ಡ್ಯಾಂ ಹೊಳೆಗೆ ಕಟ್ಟಿದ ಡ್ಯಾಮಿನಿಂದ. ನೆದರ್ಲೆಂಡ್ಸ್‌ (ತಗ್ಗುಪ್ರದೇಶ ಎಂದರ್ಥ) ಸಮುದ್ರಮಟ್ಟಕ್ಕಿಂತ ಕೆಳಗಿನ ನೆಲವನ್ನು ಕಸಿದುಕೊಂಡು ಕಟ್ಟಿದ ದೇಶ. ಇದೊಂದು ಪ್ರಕೃತಿಯ ಜತೆ ಮನುಷ್ಯರ ಸಂಘರ್ಷ ಮತ್ತು ಗೆಲುವಿನ ಸಾಹಸಗಾಥೆ. ಡಚ್ ವರ್ಣಚಿತ್ರಗಳಲ್ಲೂ ಜಲಪ್ರಳಯದ ಕಾಲದಲ್ಲಿ ಜನ ಸಾಕುಪ್ರಾಣಿ ಸರಂಜಾಮು ಸಮೇತ ನಾವೆಯೇರುತ್ತಿರುವ ದೃಶ್ಯಗಳೇ ಇವೆ.

ಆ್ಯಮ್‍ಸ್ಟರ್‌ಡ್ಯಾಂ ರಸ್ತೆಗಳು ಅತಿವಿಶಾಲ. ಅವುಗಳೊಳಗೆ ಸೈಕಲ್, ಟ್ರಾಮ್, ಕಾರು, ಜನ ಚಲಿಸಲು ಬೇಕಾಗಿ ಪ್ರತ್ಯೇಕ ಪಥ; ಬದಿಯಲ್ಲೇ ದೋಣಿಗಾಲುವೆ. ನನಗೆ ಇಲ್ಲಿನ ಸೈಕಲ್ ಸಂಸ್ಕೃತಿ ಬಹಳ ಹಿಡಿಸಿತು. ಬಡವರು ಬಲ್ಲಿದ ಭೇದವಿಲ್ಲದೇ ತಮಗೆ ಮೀಸಲಾದ ರಸ್ತೆಯಲ್ಲಿ ಸವಾರರು ಹಕ್ಕಿಯಂತೆ ಹಾರುತ್ತಾರೆ. ಹಾದಿಹೋಕರು ಅಡ್ಡ ಬಂದರೆ ಕಾರುಗಳು ನಿಂತು ದಾರಿ ಬಿಡುತ್ತವೆ. ಆದರೆ ಸೈಕಲ್ ಸವಾರರು ಕೆಂಡಾಮಂಡಲ ಆಗುತ್ತಾರೆ.

ನಗರದ ತುಂಬ ಸೈಕಲ್‍ ನಿಲ್ದಾಣಗಳು. ಬೆಂಜ್ ವಾಹನಗಳಿಗೆ ಖ್ಯಾತವಾದ ಜರ್ಮನಿಯಲ್ಲೂ, ಹಿಟ್ಲರ್‌ ಇದ್ದ ಅರಮನೆಯ ಎದುರು ಮರಕ್ಕೆ ದನ ಕಟ್ಟುವಂತೆ ಸೈಕಲ್‌ಗಳನ್ನು ಕಂಬಗಳಿಗೆ ಕೀಲಿಸಿ, ಜನ ಹೋಗುತ್ತಿದ್ದರು. ಯೂರೋಪಿನಲ್ಲಿ ರಜೆದಿನಗಳಲ್ಲಿ ಇಡೀ ಕುಟುಂಬ ಚಿಳ್ಳೆ, ಚಟಾಕು ಸೇರಿದಂತೆ ಸೈಕಲ್ ಸವಾರಿಸುವುದು ಸಾಮಾನ್ಯ. ಗಾಳಿ ಶುದ್ಧವಾಗಿರುವ ಈ ನಗರ
ಗಳನ್ನು ನೋಡಿದರೆ ನಮ್ಮ ಮುಂಬೈ, ಬೆಂಗಳೂರು, ದೆಹಲಿ, ಕೋಲ್ಕತ್ತ ಹೊಗೆಗೂಡುಗಳೇ ದಿಟ.

ಬಹುಜನಾಂಗೀಯ ನಗರ

ಆ್ಯಮ್‌ಸ್ಟರ್‌ಡ್ಯಾಂ ಬಹುಜನಾಂಗೀಯ ನಗರ. ಡಚ್ಚರು ಆಳಿದ ನಾಡುಗಳಿಂದ ಜನ ಹೇರಳವಾಗಿ ವಲಸೆ ಬಂದಿದ್ದಾರೆ. ನಮ್ಮ ನಗರ ಪ್ರವಾಸದ ಮಾರ್ಗದರ್ಶಿ ಸುರಿನಾಮ್ ಮೂಲದವಳು. ಇಲ್ಲಿ ಇಂಡೋನೇಷ್ಯಾನ್ನರಿದ್ದಾರೆ; ವೆಸ್ಟ್‌ಇಂಡೀಸ್‌ನ ಕಪ್ಪುಜನರಿದ್ದಾರೆ; ಭಾರತದ ಬಂಗಾಳಿಗಳಿದ್ದಾರೆ- ಬಂಗಾಳದಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಇತ್ತಷ್ಟೆ. ವಸಾಹತುಶಾಹಿ ದೇಶಗಳು ತಾವಾಳಿದ ಕಡೆ ತಮ್ಮ ಸಂಸ್ಕೃತಿ ಭಾಷೆ ಹೇರುತ್ತವೆ. ಆದರೆ ಆಳಿಸಿಕೊಂಡ ನಾಡಿನ ಜನ ಆಳಿದವರ ದೇಶಕ್ಕೆ ವಲಸೆಹೋಗಿ ಬಹುಸಂಸ್ಕೃತಿಯ ಪರಿಸರ ನಿರ್ಮಿಸುತ್ತಾರೆ. ಯೂರೋಪ್‌ ಕೇವಲ ಬಿಳಿಯರ ನಾಡು, ಏಕಸಂಸ್ಕೃತಿಯ ಬೀಡು ಎಂಬುದು ಅರ್ಧಸತ್ಯ. ಆ್ಯಮ್‌ಸ್ಟರ್‌ಡ್ಯಾಂ ಜಗತ್ತಿನ ಪ್ರವಾಸಿಗರು ಭೇಟಿಕೊಡುವ ನಗರವಾಗಿದ್ದು, ಜಾಗತೀಕರಣದ ವ್ಯಾಪಾರಿ ಗುಣವು ಅದಕ್ಕೆ ಜನಾಂಗೀಯ ಸಹನೆಯನ್ನು ರೂಢಿಸಿದಂತಿದೆ. ಅಲ್ಲಲ್ಲಿ ನಮಗೆಲ್ಲೂ ವರ್ಣಭೇದದ ಝಳ ತಾಗಲಿಲ್ಲ.

ಆ್ಯಮ್‌ಸ್ಟರ್‌ಡ್ಯಾಂ ಹೊರವಲಯದಲ್ಲಿರುವ ಝನ್ ಹೊಳೆದಂಡೆಯ ವಿಂಡ್‍ಮಿಲ್ ನೋಡಲು ಝನ್‍ಸ್ಟಡ್ ಪಟ್ಟಣಕ್ಕೆ ಹೋಗಿದ್ದೆವು. ಈ ಗಾಳಿಯಂತ್ರಗಳೂ ಈಗಲೂ ಚಾಲೂ ಇವೆ. ಒಂದೆಡೆ ವಿಂಡ್‍ಮಿಲ್ ನೆರವಿಂದ ಮರಕೊಯ್ಯುವ ಕಾರ್ಖಾನೆಯಲ್ಲಿ ಚೆಲುವೆಯೊಬ್ಬಳು ದಿಮ್ಮಿಯ ಸಿಪ್ಪೆಯನ್ನು ಚುಂಚಕದಂತಹ ಗುದ್ದಲಿಯಿಂದ ಹೆಬ್ಬುತ್ತಿದ್ದಳು. ಗಾಳಿಯಂತ್ರ ಡಚ್ಚರ ರಾಷ್ಟ್ರೀಯ ಅಸ್ಮಿತೆ.

ಕಡಲು, ನೀರು, ನೌಕೆಗಳನ್ನು ಬಿಟ್ಟು ನೆದರ್ಲೆಂಡ್ಸ್‌ ಚರಿತ್ರೆಯ ವರ್ತಮಾನ ಎರಡೂ ಇಲ್ಲ. ಮ್ಯೂಸಿಯಂನಲ್ಲಿರುವ ವರ್ಣಚಿತ್ರಗಳು, ಬಿರುಗಾಳಿ, ಕುದಿವ ಕಡಲುಗಳ ನಡುವೆ ನೌಕೆಗಳು ಹೋರಾಡುವ ದೃಶ್ಯಗಳಿಂದ ತುಂಬಿವೆ. ಡಚ್ಚರ ಚಿತ್ರಕಲೆ, ರಾಜಚಿಹ್ನೆ ಹಾಗೂ ಶಿಲ್ಪಗಳಲ್ಲಿ ನೌಕೆ ಯುದ್ಧ, ಬಂದೂಕು, ಕುದುರೆ, ರಾಜ್ಯಾಭಿಷೇಕ, ತಕ್ಕಡಿಗಳೇ ರಾರಾಜಿಸುತ್ತಿವೆ. ಈ ಚರಿತ್ರೆಯ ಭಾಗವಾಗಿಯೇ ಇಲ್ಲಿ ಶಿಕ್ಷಣ ಕೈಗಾರಿಕಾ ಕ್ರಾಂತಿ ಸಂಶೋಧನೆ ಸಂಭವಿಸಿವೆ.

ಆ್ಯಮ್‍ಸ್ಟರ್‌ಡ್ಯಾಂ ವಿಶ್ವವಿದ್ಯಾಲಯ ಈಗಲೂ ಹಳೆಯ ಡಚ್ ವ್ಯಾಪಾರಿ ಕೋಠಿಯಿದ್ದ ಇಮಾರತಿನಲ್ಲೇ(ಕಟ್ಟಡದಲ್ಲೇ) ನಡೆಯುತ್ತಿದೆ; ಅದರ ಮೇಲೆ ನೌಕಾಯಾನ ಮತ್ತು ತಕ್ಕಡಿಚಿಹ್ನೆ ಉಳಿದುಕೊಂಡಿವೆ. ಬಹುಶಃ ವ್ಯಾಪಾರಿ ಕುಶಲತೆ ಯೂರೋಪಿನ ರಕ್ತನಾಳದಲ್ಲೇ ಸೇರಿದೆ. ನಾಡನ್ನು ಪ್ರವಾಸಿ ಕೇಂದ್ರವನ್ನಾಗಿಸಿ, ಸಣ್ಣಪುಟ್ಟ ಆಕರ್ಷಣೆಗೂ ಟಿಕೆಟ್‌ ಇಟ್ಟು ಹಣಮಾಡುವ ಚಾತುರ್ಯ ಅದಕ್ಕೆ ಚೆನ್ನಾಗಿ ಸಿದ್ಧಿಸಿದೆ. ಆ್ಯಮ್‌ಸ್ಟರ್‌ಡ್ಯಾಂ ಸ್ವಚ್ಛಂದತೆ ಪ್ರವಾಸಿಗರಿಗೆ ಪ್ರಿಯವಾಗಿದೆ.

ಕಡಲ ಕಿನಾರೆಯ ಶಹರು

ಆ್ಯಮ್‌ಸ್ಟರ್‌ಡ್ಯಾಂ - ಕೋಲ್ಕತ್ತ ಮುಂಬೈ ಇಸ್ತಾನ್‌ಬುಲ್ ವೆನಿಸ್‍ಗಳಂತೆ- ಕಡಲ ಕಿನಾರೆಯ ಶಹರು. ಶಹರದ ತುಂಬ ಬೃಹದಾಕಾರ ಹಳೇ ಕಟ್ಟಡ; ಅವುಗಳಲ್ಲಿ ಭೋಗಬದುಕಿನ ಸರಕು ತುಂಬಿದ ಮಾಲುಗಳು (ಒಂದು ಅಂಗಡಿಯ ಹೆಸರು ‘ಸೆಕ್ಸ್ ಮ್ಯೂಸಿಯಂ’!). ಇಲ್ಲಿನ ಪ್ರಸಿದ್ಧ ಥಾಯ್ ಚೀನಿ ಹೋಟೆಲ್‌ಗಳಲ್ಲಿ ಪ್ರವಾಸಿಗರು ಊಟಕ್ಕೆ ಪಾಳಿಯಲ್ಲಿ ನಿಂತು ಕಾಯುತ್ತಾರೆ; ಹೊಳೆಬದಿ ಕಾಲುವೆ ದಡದಲ್ಲಿ ಹಾಕಿದ ಕುರ್ಚಿಗಳಲ್ಲಿ ಕೂತು, ತಾಸುಗಟ್ಟಲೆ ಹರಟುತ್ತಾ ತಿನ್ನುವರು, ಕುಡಿಯುವವರು. ದೇಸಿ ವೈನು-ಬೀರು ಹೊಳೆಯಂತೆ ಹರಿಯುತ್ತವೆ. ಗಂಡುಹೆಣ್ಣುಗಳು ವಯೋಭೇದವಿಲ್ಲದೆ ಉದ್ರೇಕವಿಲ್ಲದೆ ಸಾರ್ವಜನಿಕವಾಗಿ ತಬ್ಬುವವರು; ಪ್ರೀತಿ ಹರಿಸುವಂತೆ ಹಗುರಾಗಿ ಮುತ್ತಿಡುವರು; ಇದನ್ನು ಯಾರೂ ವಿಚಿತ್ರವೆಂದು ಭಾವಿಸುವುದಿಲ್ಲ. ನನಗೆ ಬೇಂದ್ರೆಯವರ ‘ಕಲ್ಪವೃಕ್ಷ ವೃಂದಾವನಗಳಲಿ’ ಕವನ ನೆನಪಾಯಿತು. ನಿಜಕ್ಕೂ ಆ್ಯಮ್‌ಸ್ಟರ್‌ಡ್ಯಾಂ ಯೂರೋಪ್‌ನ ಇಂದ್ರನಗರಿ.

ನಾವಿಲ್ಲಿದ್ದ ದಿನಗಳಲ್ಲಿ ಫುಟ್‍ಬಾಲ್ ಪಂದ್ಯವಿತ್ತು. ಅಭಿಮಾನಿಗಳು ತಂತಮ್ಮ ಕ್ಲಬ್‌ನ ಚಿಹ್ನೆಯುಳ್ಳ ಅಂಗಿ ತೊಟ್ಟು, ಪತಾಕೆ ಹಿಡಿದು, ಬೀರು ಕ್ಯಾನನ್ನು ಕೈಯಲ್ಲಿರಿಸಿ ಸಿಗರೇಟು ಸೇದುತ್ತ ಹಾಡುತ್ತ ಪ್ರವಾಹದ ರೀತಿಯಲ್ಲಿ ಬೀದಿಗಳಲ್ಲಿ ತುಳುಕಾಡುತ್ತಿದ್ದರು. ಸಿಗರೇಟು ಕೊರೆ, ಬೀರಿನ ಕ್ಯಾನು, ಕೇಕ್‌ನ ಕವರುಗಳನ್ನು ಬೀದಿಯಲ್ಲಿ ಎಸೆಯುತ್ತ ಸ್ಟೇಡಿಯಂಗೆ ಹೊರಟಿದ್ದರು. ಉಸಿರುಗಟ್ಟಿಸುವ ಜರ್ಮನಿಯ ಘನಗಂಭೀರ ಶಿಸ್ತಿನಲ್ಲಿದ್ದು ಹೋಗಿದ್ದ ನಮಗೆ ಇದನ್ನು ನೋಡಿ, ಕೆಟ್ಟ ಸಮಾಧಾನ. ಇರುವೆಗಳಂತೆ ದುಡಿವ, ವಿರಾಮದಲ್ಲಿ ಗಂಧರ್ವರಂತೆ ಸುಖಪಡುತ್ತಾರೆ ಇಲ್ಲಿನ ಜನ.

ಆ್ಯಮ್‌ಸ್ಟರ್‌ಡ್ಯಾಂ- ಲಕ್ಷದ್ವೀಪ ಮಾರಿಷಸ್‍ಗಳ ಹಾಗೆ ಸಮುದ್ರಮಟ್ಟ ಏರಿದಂತೆ ಮುಳುಗಲಿರುವ ನಗರ. ಆದರೆ ಎಂದೋ ಬರಲಿರುವ ಸಾವನ್ನು ಮರೆತು ಜನ ನಿತ್ಯದಲ್ಲಿ ಬದುಕುವಂತೆ, ನಗರ ಉತ್ಕಟ ವಿಲಾಸದಲ್ಲಿ ಮೈಮರೆತಿದೆ. ಇದಕ್ಕೆ ತಕ್ಕಂತೆ ಬಹುತೇಕ ಪ್ರಜೆಗಳು ತಾವು ಯಾವ ಧರ್ಮಕ್ಕೂ ಸೇರಿದವರಲ್ಲ ಎಂದು ಘೋಷಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT