ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಂಡಿಯಲ್ಲಿ ಆಹಾ..ರುಚಿ!

Last Updated 1 ಜನವರಿ 2020, 19:30 IST
ಅಕ್ಷರ ಗಾತ್ರ
ADVERTISEMENT
""
""

‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎನ್ನುವುದು ಹಳೇ ಗಾದೆ. ಪುದುಚೇರಿಯಲ್ಲಿ ಈ ಗಾದೆಯ ‘ಮೊದಲರ್ಧ ಸರಿ, ಉತ್ತರಾರ್ಧ ಸರಿಯಿಲ್ಲ’ ಅನ್ನಿಸಿತು. 1965ರ ಅಧಿಕೃತ ಭಾಷಾ ಕಾಯ್ದೆ ಪ್ರಕಾರ, ಈ ಕೇಂದ್ರಾಡಳಿತ ಪ್ರದೇಶದ ರಾಜ್ಯ ಭಾಷೆ ತಮಿಳು. ಆದರೆ ಮಾಹೆಯಲ್ಲಿ ಮಲಯಾಳಂ ಅಧಿಕೃತವಾದರೆ, ಯಾನಂನಲ್ಲಿ ತೆಲುಗು ಅಧಿಕೃತ. ಪ್ರವಾಸಿಗರು ಸಾಮಾನ್ಯವಾಗಿ ಮಾತನಾಡುವುದು ಇಂಗ್ಲಿಷ್‌. ಸರ್ಕಾರಿ ದಾಖಲೆಗಳೂ ಇಂಗ್ಲಿಷ್‌ನಲ್ಲಿವೆ. ಈ ಮಧ್ಯೆ ಫ್ರೆಂಚ್‌ ಕೂಡಾ ಇಲ್ಲಿ ಅನಧಿಕೃತ ಸರ್ಕಾರಿ ಭಾಷೆಯೇ. ಇಷ್ಟು ಭಾಷೆಗಳಲ್ಲಿ ಯಾವ ಮಾತು ಆಡಿದರೂ ಇಲ್ಲಿ ಜಗಳ ನಡೆಯುವುದಿಲ್ಲ.

ಇನ್ನು ಊಟದ ವಿಷಯ. ‘ಊಟ ಬಲ್ಲವ’ ಎಂದರೆ, ಹಿತವಾಗಿ ಮಿತವಾಗಿ ತಿನ್ನುವಾತ ಎಂದರ್ಥ. ಪಾಂಡಿಯಲ್ಲಿ ಇದಕ್ಕೆ ತದ್ವಿರುದ್ಧ. ಯಾವ ಹೊತ್ತಲ್ಲಿ ಹೋದರೂ ನಾಲಗೆ ನಿಮ್ಮ ಮಾತು ಕೇಳುವುದಿಲ್ಲ! ಮಾಹೆಯಲ್ಲಿ ಕಾಣ ಸಿಗುವ ಅರಬ್ಬೀ ಸಮುದ್ರಕ್ಕೆ ತದ್ವಿರುದ್ಧವಾಗಿ, ಪುದುಚೇರಿಯಲ್ಲಿ ತಣ್ಣಗೆ ಪ್ರಶಾಂತವಾಗಿ ಅಲೆಗಳನ್ನೆಬ್ಬಿಸುವ ಬಂಗಾಳ ಕೊಲ್ಲಿಯು, ಬಗೆಬಗೆಯ ಮೀನುಗಳನ್ನು ಮೊಗೆಮೊಗೆದು ದಡಕ್ಕೆ ಕಳುಹಿಸುತ್ತದೆ. ರುಚಿಕರ, ತಾಜಾ ಮೀನುಗಳು ಹೀಗೆ ರಾಶಿ ರಾಶಿ, ಕೈಗೆಟುಕುವ ದರದಲ್ಲಿ ಸಿಕ್ಕಾಗ, ಹೊಟ್ಟೆ ತುಂಬ ತಿನ್ನದೇ ಬಿಡುವುದು ‘ಮೀನಿನ ತಲೆ ತಿನ್ನುವವರ’ ಪಾಲಿಗೆ ಜಾಣತನದ ನಿರ್ಧಾರವಂತೂ ಅಲ್ಲ! ನಮ್ಮ ಕರಾವಳಿಯಲ್ಲಿ ಸಾವಿರಾರು ರೂಪಾಯಿ ಸುರಿದು ಮೀನು ತಿನ್ನಲಾಗದೆ ಬರ ಅನುಭವಿಸುತ್ತಿರುವವರು ಪಾಂಡಿಗೆ ಹೋಗಬೇಕು. ಆಹಾ.. ರುಚಿಯೇ!

ಈ ಹೋಟೆಲ್ಲಿನ ಹೆಸರೇ ಮೀನುಪ್ರಿಯರನ್ನು ಸೆಳೆಯುತ್ತಿದೆ– ಫಿಶೋರೆಂಟ್‌! (ರೆಸ್ಟೋರೆಂಟ್‌ ಅಲ್ಲ, ತಟ್ಟೆಯಲ್ಲಿ ಮೀನಿನ ರಾಶಿ ನೋಡಿದರೆ ‘ಅನ್‌ರೆಸ್ಟ್‌’ ಖಚಿತ!) ಫ್ಯಾಮಿಲಿ ಮೀಲ್‌ ಫ್ಲಾಟರ್‌ ತೆಗೆದುಕೊಂಡು ನಾಲ್ವರು ಎದುರುಬದುರಾಗಿ ಕುಳಿತೆವು. ಸೂಪ್‌, ಫಿಶ್‌ ಫಿಂಗರ್‌, ಚಿಕನ್‌ ಸ್ಟ್ರಿಪ್ಸ್‌, ಬಿಬಿಕ್ಯೂ ಫಿಶ್‌, ಗ್ರಿಲ್ಡ್‌ ಪ್ರಾವ್ನ್, ಕ್ರ್ಯಾಬ್‌ ಫ್ರೈ, ಸ್ಕ್ವಿಡ್‌ ಫ್ರೈ, ನೆಥಿಲಿ ಫ್ರೈ, ಲ್ಯಾಬ್‌ಸ್ಟರ್‌ ಗ್ರಿಲ್, ಫಿಶ್‌ ಕರಿ...! ಜೊತೆಗೆ ಚಪಾತಿ, ಆಪಂ, ವೈಟ್‌ ರೈಸ್. ಊಟದ ಕೊನೆಗೆ ಎಳನೀರ್‌ ಪಾಯಸಂ!

ಅಂಬೂರ್‌ ಸಾಲೈನಲ್ಲಿ ಪುಟ್ಟ ಹೋಟೆಲ್ಲಿನ ಬೋರ್ಡ್‌ ‘71 ಬೆಸ್ಟ್‌ ಇಡ್ಲೀಸ್‌’ ನೋಡಿಯೇ ದಂಗಾಗಿ ಒಳಗೆ ಹೋದೆವು. ರುಚಿಗಿಂತ ಇಡ್ಲಿಯ ವೈವಿಧ್ಯಗಳನ್ನು ಓದುವುದರಲ್ಲೇ ಖುಷಿ. ಮಸಾಲಾ ಇಡ್ಲಿ, ಪಾಲಕ್‌ ಇಡ್ಲಿ, ಪುಡಿ ಇಡ್ಲಿ, ಮಿನಿ ಇಡ್ಲಿ, ಮಂಚೂರಿ ಇಡ್ಲಿ, ಮೂಂಗ್‌ದಾಲ್‌ ಇಡ್ಲಿ, ಹೆಸರುಬೇಳೆ ಇಡ್ಲಿ... ಉದ್ದಕ್ಕೇ ಮೆನುವನ್ನು ಓದುತ್ತಾ ಹೋದಂತೆ ಉಸಿರು ಎಲ್ಲಿ ಬಿಡ್ಲಿ.. ಎನ್ನುವ ಆತಂಕ!

ಅಧಿಕೃತ ಇಟಾಲಿಯನ್‌ ಐಸ್‌ಕ್ರೀಮ್‌ ಸವಿಯಲು ‘ಗೆಲಾಟೊ’ ಇದೆ. ಬೀಫ್‌ ಪ್ರಿಯರಿಗೆ ‘ಮಾಮಲ್ಲ ಪ್ರೊಟೀನ್‌’ ಎಂಬ ಹೋಟೆಲಿದೆ. ಮುಸ್ಲಿಮರ ಅಡುಗೆಯ ರುಚಿ ಸವಿಯಲು ಖಾನ್‌ಸಾಬ್‌ ಬಿರಿಯಾನಿ ಸಿಗುತ್ತದೆ. ಫ್ರೆಂಚ್‌ ಬೇಕರಿಗೆ ಹೋದರೆ, ಹೊರಗೆ ಬರಲು ಮನಸ್ಸಾಗುವುದೇ ಇಲ್ಲ. ಬ್ರೆಡ್‌, ಕುಕೀಸ್‌ಗಳ ಅಪಾರ ವೈವಿಧ್ಯ ಗಮನ ಸೆಳೆಯುತ್ತದೆ. ಬೆಂಗಳೂರಲ್ಲೂ ಫ್ರೆಂಚ್‌ ಬೇಕರಿಗಳಿವೆ. ಆದರೆ ಪಾಂಡಿಯ ಫ್ರೆಂಚ್‌ ಬೇಕರಿ ‘ಒನ್‌ ಆ್ಯಂಡ್‌ ಓನ್ಲೀ’. ಏಕೆಂದರೆ ಈ ಬೇಕರಿಗೆ ಪ್ಯಾರಿಸ್ಸಿನಿಂದಲೇ ಮೈದಾ ಸಹಿತ ಎಲ್ಲ ವಸ್ತುಗಳೂ ಬರುತ್ತವೆ. ಅದಕ್ಕೆಂದೇ ಅವರು ‘ಒರಿಜಿನಲ್‌ ಹೋಮ್‌ ಮೇಡ್‌’ ಎಂದು ಬೋರ್ಡು ಹಾಕಿದ್ದಾರೆ.

ಬೀಚ್‌ ರಸ್ತೆಯಲ್ಲಿ ‘ವಫಾಲ್ಸ್‌’ ಮುಂದೆ ಭಾರೀ ಜನಸಂದಣಿ. ಮುಕ್ಕಾಲುಗಂಟೆ ಕಾಯ್ದರೂ ತಿಂಡಿ ಸಿಗಲಿಲ್ಲ. ಪ್ಯಾನ್‌ ಕೇಕ್‌ ಮಾಡುವ ಹಿಟ್ಟಿನಿಂದ ದೋಸೆಯಂತಹದ್ದೇ ಒಂದು ತಿಂಡಿ. ಕಾದು ಕಾದು ಸುಸ್ತಾಗಿ ತಿನ್ನುವ ಆಲೋಚನೆ ಕೈಬಿಟ್ಟೆವು.

ಪಾಂಡಿಯಲ್ಲಿ ಫ್ರೆಂಚ್‌ ಬ್ರೇಕ್‌ಫಾಸ್ಟ್‌ ಮಾಡುವುದೂ ಒಂದು ರುಚಿಕರ ಅನುಭವ. ಸಾಮಾನ್ಯವಾಗಿ ಫ್ರೆಂಚ್‌ ತಿಂಡಿ ಹೆಚ್ಚು ಸ್ಪೈಸೀ ಆಗಿರುವುದಿಲ್ಲ. ಲೆಟ್ಯೂಸ್‌, ಸೌತೆಕಾಯಿ ಮತ್ತಿತರ ಮಿಶ್ರಣದ ತಂದೂರಿ ಚಿಕನ್‌ ಕ್ರೊಯ್ಸೆಂಟ್‌ ರುಚಿ ಬಾಯಲ್ಲಿ ನೀರೂರಿಸುತ್ತದೆ. ಅಲ್ಲೇ ಮೊಟ್ಟೆ ಮತ್ತು ಹಂದಿಮಾಂಸದ ತಂದೂರಿಯೂ ಸಿಗುತ್ತದೆ. ಮುರುಗ ಕೆಫೆಗಳ ಉತ್ತಪ್ಪಂನಲ್ಲಿ ಗೋಡಂಬಿಗಳು ರಾಶಿ ಬಿದ್ದಿರುವುದನ್ನು ನೋಡುವುದೇ ಚಂದ. ಅದಕ್ಕೆ ಖಾರಾ ಚಟ್ನಿ, ತೆಂಗಿನಕಾಯಿ ಚಟ್ನಿಯ ಸಖತ್‌ ಕಾಂಬಿನೇಷನ್‌. ಚೆಟ್ಟಿ ಸ್ಟ್ರೀಟ್‌ನ ಫಿಲ್ಟರ್‌ ಕಾಫಿ, ಅಲ್ಲಲ್ಲಿ ಕಾಣಸಿಗುವ ಅರ್ಕಾಟ್‌ ಬಿರಿಯಾನಿ, ಸುಲ್ತಾನ್‌ ಪೇಟೆಯ ಪರೋಟಾ...– ಆಹಾ ಪಾಂಡಿಗೆ ಪಾಂಡಿಯೇ ಸಾಟಿ. ಇದು ತಿನ್ನುವವರ ಸ್ವರ್ಗ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT