ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೆಂಪು ಕೋಟೆ’ಯಲ್ಲಿ ಬೆಳಕಿನೋಕುಳಿ: ಪ್ರವಾಸ ಲೇಖನ

400 ವರ್ಷಗಳಿಗೂ ಅಧಿಕ ಕಾಲ ಹಲವು ಘಟನೆಗಳನ್ನು ನೋಡಿದ ಇಲ್ಲಿನ ಕೆಂಪು ಕಲ್ಲುಗಳು.
Published 27 ಮೇ 2023, 23:45 IST
Last Updated 27 ಮೇ 2023, 23:45 IST
ಅಕ್ಷರ ಗಾತ್ರ
400 ವರ್ಷಗಳಿಗೂ ಅಧಿಕ ಕಾಲ ಹಲವು ಘಟನೆಗಳನ್ನು ನೋಡಿದ ಇಲ್ಲಿನ ಕೆಂಪು ಕಲ್ಲುಗಳು. ಮಳೆಗೆ ಒದ್ದೆಯಾಗುತ್ತಾ, ಬಿಸಿಲಿಗೆ ಹೊಳೆಯುತ್ತಾ, ಚಂದ್ರನ ಬೆಳದಿಂಗಳಲ್ಲಿ ಮಿನುಗುತ್ತಾ ಇರುವ ದೆಹಲಿಯ ‘ಕೆಂಪು ಕೋಟೆ’ಯೊಳಗೆ ಇದೀಗ ಹೊಸ ಲೋಕವೊಂದು ಸೃಷ್ಟಿಯಾಗಿದೆ.

ಪಶ್ಚಿಮದಲ್ಲಿ ಸೂರ್ಯಾಸ್ತವಾಗುತ್ತಿದ್ದಂತೆ ದೆಹಲಿಯ ಕೆಂಪು ಕೋಟೆ ಬಣ್ಣದೋಕುಳಿಯಲ್ಲಿ ಮುಳುಗೇಳಲು ಸಿದ್ಧವಾಗುತ್ತದೆ. ಕೋಟೆಯ ಒಳಗಿರುವ ಛತ್ತಾ ಬಜಾರ್‌ನಲ್ಲಿ ವ್ಯಾಪಾರಿಗಳು ದಿನದ ವ್ಯವಹಾರ ಪೂರ್ಣಗೊಳಿಸಿ ಮನೆಗೆ ಮರಳುವ ಸಮಯವದು. ಅಲ್ಲೊಂದು ಬೃಹತ್‌ ಆಕೃತಿ ಅಮಿತಾಬ್‌ ಬಚ್ಚನ್‌ ಧ್ವನಿಯೊಳಗಿಂದ ಜೀವತಳೆದು ಕಥಾ ಸಾಮ್ರಾಜ್ಯವೊಂದಕ್ಕೆ ಹೆಜ್ಜೆ ಇಡುತ್ತಾ ಸಾಗುತ್ತದೆ.

‘ತನ್ನ ಹಳೆಯ ರಾಜಧಾನಿ ಆಗ್ರಾವನ್ನು ಬಿಟ್ಟು ಷಹಜಹಾನ್‌ ಕೆಂಪು ಕೋಟೆಯ ಬುನಾದಿ ಹಾಕಿದ. ದೆಹಲಿಯನ್ನೇ ತನ್ನ ಹೊಸ ರಾಜಧಾನಿಯನ್ನಾಗಿ ಮಾಡಿಕೊಂಡು ಇಲ್ಲಿಂದಲೇ ಮುಗಲ್‌ ಸಾಮ್ರಾಜ್ಯವನ್ನು ಮುನ್ನಡೆಸಿದ...ಇಲ್ಲಿನ ಕೆಂಪು ಗೋಡೆಗಳು ಅದೆಷ್ಟೋ ಘಟನೆಗಳನ್ನು ನೋಡಿವೆ; ಇದೇ ಸ್ಥಳದಲ್ಲಿದ್ದುಕೊಂಡು ಇಡೀ ದೇಶವನ್ನು ಕೆಲವರು ಆಳಿದ್ದಾರೆ. ಇನ್ನು ಇದೇ ಸ್ಥಳದಲ್ಲಿ ದೇಶಭಕ್ತರ ಮೇಲೆ ಮೊಕದ್ದಮೆಗಳು ದಾಖಲಾದ ಉದಾಹರಣೆಗಳೂ ಇವೆ. ಈ ಕೋಟೆಯ ಮೇಲೆ ಆದ ದಾಳಿಗಳಿಗೂ ಲೆಕ್ಕವಿಲ್ಲ... 400 ವರ್ಷಗಳಿಗೂ ಅಧಿಕ ಕಾಲ ಸದೃಢವಾಗಿ ನಿಂತಿರುವ ಈ ಕೋಟೆ ಇಂದಿಗೂ ಭಾರತದ ಗುರುತಾಗಿದೆ...’

ಹೀಗೆ ಬಚ್ಚನ್‌ ಅವರ ಆ ಗಡಸು ಧ್ವನಿ ಇಳಿಸಂಜೆಯ ತಂಗಾಳಿ ಜೊತೆ ತೇಲಿಬರುತ್ತಿದ್ದರೆ, ವೀಕ್ಷಿಸುತ್ತಿರುವ ಪ್ರವಾಸಿಗರಿಗೂ 1648ರ ಆ ಅವಧಿಯಲ್ಲಿದ್ದಂಥ ಅನುಭವ. ಸಾರಂಗ್‌ ಸಂಗೀತದ ಹಿನ್ನೆಲೆಯಲ್ಲಿ ಯಮುನೆ ಕೋಟೆಯ ಹಿಂದೆಯೇ ಹರಿಯುತ್ತಿರುವಂಥ ಭಾವ.

ಅಷ್ಟರಲ್ಲೇ...

ಜೈಕಾರದ ಸದ್ದು. ಕೆಂಪು ಕೋಟೆ ಪೂರ್ಣಗೊಂಡ ಸುದ್ದಿ ತಿಳಿದು ಕಾಬೂಲ್‌ನಲ್ಲಿದ್ದ ಷಹಜಹಾನ್‌ ಆಗ್ರಾಗೆ ಬಂದು ಅಲ್ಲಿಂದ ಯಮುನಾ ನದಿ ಮೂಲಕ ತನ್ನ ಇಡೀ ಕುಟುಂಬದೊಂದಿಗೆ ಅದ್ಧೂರಿಯಾದ ತೇರಿನಲ್ಲಿ ತೇಲಿಬಂದು ಮೊದಲ ಬಾರಿ ಕೆಂಪು ಕೋಟೆಯೊಳಗೆ ಹೆಜ್ಜೆ ಇಡುತ್ತಿರುವಾಗ ಅಲ್ಲಿ ನಗಾರಿಗಳ ಸದ್ದು... 

ದೆಹಲಿ ಎಂದಾಕ್ಷಣ ಪ್ರವಾಸಿಗರ ಮನಸ್ಸಿನಲ್ಲಿ ಮೊದಲು ಮೂಡುವುದು ಆಗ್ರಾದಲ್ಲಿರುವ ತಾಜ್‌ಮಹಲ್‌. ಆ ನಂತರದಲ್ಲಿ ಇಂಡಿಯಾ ಗೇಟ್‌, ಕೆಂಪು ಕೋಟೆ ಹೀಗೆ ಉಳಿದ ಪ್ರವಾಸಿ ಸ್ಥಳಗಳ ಹೆಸರುಗಳು. ಹೀಗಿರುವಾಗ ತಾಜ್‌ಮಹಲ್‌ನಷ್ಟೇ ಪ್ರಾಮುಖ್ಯ ಹೊಂದಿರುವ ಕೆಂಪು ಕೋಟೆಯತ್ತ ಮತ್ತಷ್ಟು ಪ್ರವಾಸಿಗರನ್ನು ಸೆಳೆಯುವುದು ಹೇಗೆ? ಇದಕ್ಕೆ ‘ಜೈ ಹಿಂದ್‌’ ಮೂಲಕ ಉತ್ತರ ಕಂಡುಕೊಂಡಿದೆ ‘ದಾಲ್ಮಿಯಾ ಭಾರತ್‌ ಲಿ.’. ನೆರಳು, ಬೆಳಕಿನಾಟದಲ್ಲಿ ಕೆಂಪುಕೋಟೆಯನ್ನೇ ಬೃಹತ್‌ ಪರದೆಯನ್ನಾಗಿಸಿ, ಅದರೊಳಗಿರುವ ಪ್ರಮುಖ ಸ್ಥಳಗಳನ್ನು ವೇದಿಕೆಗಳನ್ನಾಗಿಸಿ ‘ಕೆಂಪು ಕೋಟೆ’ಯ ಇತಿಹಾಸವನ್ನು ಪ್ರೇಕ್ಷಕರಿಗೆ ನೃತ್ಯ, ಗೊಂಬೆಯಾಟದ ಮೂಲಕ ತೋರಿಸುವ ಕಾರ್ಯಕ್ರಮವೇ ಜೈ ಹಿಂದ್‌.   

ಕೇಂದ್ರ ಸರ್ಕಾರದ ಪ್ರವಾಸಿ ತಾಣಗಳ ದತ್ತು ಯೋಜನೆಯಡಿ ದಾಲ್ಮಿಯಾ ಕೆಂಪು ಕೋಟೆಯನ್ನು ದತ್ತು ಪಡೆದಿದೆ. 17ನೇ ಶತಮಾನದ ಈ ಯುನೆಸ್ಕೊ ಪರಂಪರೆಯ ತಾಣ ಇದೀಗ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪ್ರವಾಸಿಗರೆದುರಿಗೆ ಬಂದಿದೆ.

‘ಅಫ್ಸಾನ’ದೊಳಗೊಂದು 3ಡಿ ಕೋಟೆ

ಕೆಂಪು ಕೋಟೆ ಮುಖ್ಯದ್ವಾರದಿಂದ ಒಳಹೋಗುತ್ತಲೇ ಛತ್ತಾ ಬಜಾರ್‌ ಪ್ರವಾಸಿಗರನ್ನು ಎದುರುಗೊಳ್ಳುತ್ತದೆ. ಇದನ್ನು ದಾಟಿ ಮುಂದೆ ಹೆಜ್ಜೆ ಇಟ್ಟರೆ 150 ವರ್ಷ ಹಳೆಯ ಬ್ರಿಟಿಷರು ನಿರ್ಮಿಸಿದ ಕಟ್ಟಡವೊಂದಿದೆ. ಕೋಟೆಯನ್ನು ಬ್ರಿಟಿಷರು ವಶಕ್ಕೆ ಪಡೆದಾಗ ಷಹಜಹಾನ್‌ ನಿರ್ಮಿಸಿದ್ದ ಕಟ್ಟಡಗಳನ್ನು ಧ್ವಂಸಗೊಳಿಸಿ ಇದನ್ನು ನಿರ್ಮಿಸಲಾಗಿತ್ತಂತೆ. ಪ್ರಸ್ತುತ ಇದನ್ನೇ ಕೆಂಪು ಕೋಟೆಯ ಇತಿಹಾಸ, ವಾಸ್ತುಶಿಲ್ಪ, ಪರಂಪರೆ ಹಾಗೂ ಸಂಸ್ಕೃತಿಯನ್ನು ತಂತ್ರಜ್ಞಾನದ ಮುಖಾಂತರ ಕಟ್ಟಿಕೊಡುವ ಕಟ್ಟಡವಾಗಿ ಮಾರ್ಪಾಡುಗೊಳಿಸಿದೆ ದಾಲ್ಮಿಯಾ ಕಂಪನಿ. ನಾಲ್ಕು ವಲಯಗಳಲ್ಲಿ ಕೋಟೆಯ ಇತಿಹಾಸವನ್ನು ಇಲ್ಲಿ ಬಿಂಬಿಸಲಾಗಿದೆ. 

*‘ಸಫರ್‌’: ದೆಹಲಿ ಎಂಬ ಪ್ರದೇಶದ ಇತಿಹಾಸವನ್ನು ಹೇಳುವ ಈ ವಲಯದಲ್ಲಿ, ‘ಕೆಂಪು ಕೋಟೆ’ ಹಾಗೂ ಶಾಜಹಾನಬಾದ್‌ ಸ್ಥಾಪನೆ ಆಗುವುದಕ್ಕಿಂತ ಮುಂಚಿನ ನೆಲದ ಇತಿಹಾಸವಿದೆ. 

*‘ಜಿಂದಗಿ’: ಈ ವಲಯ ಕೋಟೆಯ ಅತ್ಯಾಕರ್ಷಕ ವಾಸ್ತುಶಿಲ್ಪ, ಅದರೊಳಗೆ ವಾಸವಿದ್ದ ದೊರೆಗಳ ಸಂಸ್ಕೃತಿ ಹಾಗೂ ಐಷಾರಾಮಿ ಜೀವನದ ಬಗೆಗಿನ ನೋಟವಿದೆ. 

*‘ತಾರೀಕ್‌’: ಇದು ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳುವ ಸ್ಥಳ. ಆಕರ್ಷಕ ಚಿತ್ರಗಳು ಹಾಗೂ 3ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಕೋಟೆ ನಿರ್ಮಾಣದ ಹಂತ ಹಂತದ ವಿವರಣೆಯನ್ನು ಇಲ್ಲಿ ಪ್ರವಾಸಿಗರು ಕಣ್ತುಂಬಿಕೊಳ್ಳಬಹುದು. 1707ರಲ್ಲಿ ಔರಂಗಜೇಬನ ನಿಧನದ ಬಳಿಕ ಮುಘಲ್‌ ಸಾಮ್ರಾಜ್ಯದ ಪತನದ  

*‘ಹಮ್‌ ಏಕ್‌ ಹೈ’: ಕೊನೆಯ ಹಂತದಲ್ಲಿ ಏಕತೆಯನ್ನು ಸಾರುವ ಕೊಠಡಿಯೊಂದಿದೆ. ಇಲ್ಲಿ ಭಾರತದ ಎಲ್ಲ ಭಾಷೆಗಳಲ್ಲಿ ‘ವಂದೇ ಮಾತರಂ’ ಎಂಬ ವಾಕ್ಯವನ್ನು ಬರೆಯಲಾಗಿದ್ದು, ಅದರ ಪಕ್ಕದಲ್ಲೇ ಇರುವ ವಾದ್ಯಗಳನ್ನು ಒತ್ತಿದರೆ ‘ವಂದೇ ಮಾತರಂ’ ಹಾಡಿಗೆ ಹಿನ್ನೆಲೆ ಸಂಗೀತವನ್ನು ಕೇಳಬಹುದು. ಜೊತೆಗೆ ಅಸಂಖ್ಯ ಅಶೋಕ ಚಕ್ರಗಳು ದೇಶಕ್ಕಾಗಿ ಬಲಿದಾನ ನೀಡಿದ ಸೈನಿಕರನ್ನು ಬಿಂಬಿಸುತ್ತವೆ. 

ಇವೆಲ್ಲವನ್ನು ವೀಕ್ಷಿಸುತ್ತಾ ದೃಶ್ಯಲೋಕಕ್ಕೆ ಕಾಲಿಡುವ ಕ್ಷಣವಿದು. ಕೆಂಪು ಕೋಟೆಯೊಳಗೆ ಮೂರು ವೇದಿಕೆಗಳಲ್ಲಿ 60ಕ್ಕೂ ಅಧಿಕ ಕಲಾವಿದರು ತೆರೆದಿಡುವ ವಿಭಿನ್ನ ಲೋಕದಲ್ಲಿ ಸುತ್ತಾಡಿ ಬರುವುದು ಇತಿಹಾಸದೊಳಗೊಂದು ಇಣುಕು ನೋಟದಂತೆ. 1739ರಲ್ಲಿ ನಡೆದ ನಾದಿರ್‌ ಶಾನ ದಾಳಿ ಹಾಗೂ ಆತನ ದುಷ್ಕೃತ್ಯ, ಕೋಹಿನೂರ್‌ ವಜ್ರದ ಹಿಂದಿನ ಕಥೆ, ಸಿಖ್‌ ಹಾಗೂ ಮರಾಠರ ಆಕ್ರಮಣ, ಬ್ರಿಟಿಷರ ದಾಳಿ, 1947ರ ಆಗಸ್ಟ್‌ 16ರಂದು ಕೆಂಪು ಕೋಟೆಯ ಮೇಲೆ ಮೊದಲ ಬಾರಿ ತಿರಂಗ ಹೀಗೆ ಹಲವು ಘಟನೆಗಳನ್ನು ದೃಶ್ಯರೂಪಕದಲ್ಲಿ ಕಟ್ಟಿಕೊಡಲಾಗಿದೆ. ಇದನ್ನು ಕಣ್ತುಂಬಿಕೊಳ್ಳುವುದು ಒಂದು ವಿಶಿಷ್ಟ ಅನುಭವವೇ ಸರಿ. 

ಜೈ ಹಿಂದ್‌ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದು. https://www.jaihind.show/

(ದಾಲ್ಮಿಯಾ ಕಂಪನಿಯ ಆಹ್ವಾನದ ಮೇರೆಗೆ ಲೇಖಕರು ದೆಹಲಿಗೆ ತೆರಳಿದ್ದರು)

‘3ಡಿ’ಯಲ್ಲಿ ಮೂಡಿಬಂದ ಕೆಂಪು ಕೋಟೆ 
‘3ಡಿ’ಯಲ್ಲಿ ಮೂಡಿಬಂದ ಕೆಂಪು ಕೋಟೆ 
‘ಜೈ ಹಿಂದ್‌’ಗೆ ಸಜ್ಜಾದ ಇಳಿಸಂಜೆಯ ಕೆಂಪು ಕೋಟೆ 
‘ಜೈ ಹಿಂದ್‌’ಗೆ ಸಜ್ಜಾದ ಇಳಿಸಂಜೆಯ ಕೆಂಪು ಕೋಟೆ 
‘ಕೆಂಪು ಕೋಟೆ’ಯೊಳಗೆ ಆಳಿದವರ್‍ಯಾರು? ತಂತ್ರಜ್ಞಾನದಲ್ಲಿ ಜೀವತಳೆದ ಕೋಟೆ 
‘ಕೆಂಪು ಕೋಟೆ’ಯೊಳಗೆ ಆಳಿದವರ್‍ಯಾರು? ತಂತ್ರಜ್ಞಾನದಲ್ಲಿ ಜೀವತಳೆದ ಕೋಟೆ 
‘ಕೆಂಪು ಕೋಟೆ’ಯ ಇತಿಹಾಸ ಬಿಚ್ಚಿಡುವ ಕಲಾವಿದರ ತಂಡ 
‘ಕೆಂಪು ಕೋಟೆ’ಯ ಇತಿಹಾಸ ಬಿಚ್ಚಿಡುವ ಕಲಾವಿದರ ತಂಡ 
ಬೃಹತ್‌ ಗೊಂಬೆಯಾಟದಲ್ಲಿ ಜೀವತಳೆದ ಷಹಜಹಾನ್‌ 
ಬೃಹತ್‌ ಗೊಂಬೆಯಾಟದಲ್ಲಿ ಜೀವತಳೆದ ಷಹಜಹಾನ್‌ 
ಛತ್ತಾ ಬಜಾರ್‌ನಲ್ಲಿ ಅಂದಿನ ಕಾಲದ ವಸ್ತುಗಳ ಪ್ರದರ್ಶನ 
ಛತ್ತಾ ಬಜಾರ್‌ನಲ್ಲಿ ಅಂದಿನ ಕಾಲದ ವಸ್ತುಗಳ ಪ್ರದರ್ಶನ 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT