ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ: ಸೌಂದರ್ಯದ ರಾಣಿ ಅಂಬೋಲಿ

Last Updated 27 ಆಗಸ್ಟ್ 2022, 19:30 IST
ಅಕ್ಷರ ಗಾತ್ರ

ಮಳೆಗಾಲದಲ್ಲಿ ಅಂಬೋಲಿ ಅಂದೊಂಥರಾ ಧರೆಗೆ ಸ್ವರ್ಗವೇ ಇಳಿದಂತೆ ಭಾಸವಾಗುವ ತಾಣ. ಹೀಗಾಗಿಯೇ ಆಕೆಯನ್ನು
‘ಮಹಾರಾಷ್ಟ್ರದ ರಾಣಿ’ ಎಂದೂ ಕರೆಯುತ್ತಾರೆ. ಈ ಹಸಿರ ಜಗತ್ತಿನೊಳಗೆ ಕಾಣಸಿಗುವ ಜೀವಜಗತ್ತು ಬಲುಅಪರೂಪ. ಕತ್ತಿನಲ್ಲೊಂದು ಕ್ಯಾಮೆರಾ ಸಿಕ್ಕಿಸಿಕೊಂಡು ಈ ಲೋಕದೊಳಗೆ ಹೆಜ್ಜೆ ಇಟ್ಟರೆ ಸ್ವರ್ಗಕ್ಕೆ ಮೂರೇ ಗೇಣು...

ನಾವು ಬೆಟ್ಟದ ತುದಿಯ ಆ ಪುಟಾಣಿ ಊರು ತಲುಪಿದಾಗ ಸರಿರಾತ್ರಿಯಾಗಿತ್ತು. ದಟ್ಟವಾದ ಹಿಮ ಎಲ್ಲೆಡೆ ಆವರಿಸಿಕೊಂಡು ದಾರಿಯೇ ಕಾಣದಾಗಿತ್ತು. ಕಾರಿನ ಬೆಳಕು ಹೊಗೆಯಂತಹ ಬಿಳಿ ಮಂಜನ್ನು ಸೀಳಿ ಮುನ್ನುಗ್ಗದೆ ನಮ್ಮಲ್ಲಿ ಹೆದರಿಕೆ ಹುಟ್ಟಿಸಿತ್ತು. ಸಣ್ಣ ಎಡವಟ್ಟಾದರೂ ಕಾರು ಎಲ್ಲಿ ಜಾರಿ ಪ್ರಪಾತಕ್ಕೆ ಬೀಳುವುದೋ ಎಂಬ ಜೀವಭಯ. ವಾಹನ ಪಕ್ಕಕ್ಕೆ ನಿಲ್ಲಿಸಿ ಕೆಳಗಿಳಿದರೆ ಕಪ್ಪೆಗಳ ಮಿತಿಮೀರಿದ ಕಿರುಚಾಟ. ಮೋಡಗಳ ಒಳಗೆ ನಾವೆಲ್ಲರೂ ತೇಲಿ ಸಾಗುವ ಅಮೋಘ ಅನುಭವ. ಅಬ್ಬಾ! ಈ ಭೂಮಿಯಲ್ಲಿ ಹುಟ್ಟಿದ್ದು ಸಾರ್ಥಕವಾಯಿತೆಂಬ ವಿನೀತ ಪುಳಕ. ನಿಧಾನಕ್ಕೆ ಬಂದು ಮುಖಕ್ಕೆ ರಾಚುವ ಎಳೆನೀರ ಹನಿಗಳ ಸಿಂಚನ. ಒಂದು ವಿನಮ್ರ ಚಳಿಯನ್ನು ಆಹ್ಲಾದಕರವಾಗಿ ಅನುಭವಿಸಿದ ಹಿತದ ಕ್ಷಣಗಳವು.

ಬೆಳಗಾನ ಎದ್ದು ಊರ ನೋಡಲು ಹೊರಟರೂ ಮತ್ತದೆ ಮಂಜಿನ ಕಾಟ. ಇಡೀ ರಸ್ತೆ, ಕಾಡು, ಬೆಟ್ಟ, ಮನೆ, ಜನ, ಎಲ್ಲವೂ ಹೊಗೆಯಲ್ಲಿ ಅವಿತುಕೊಂಡಂತೆ. ಈ ಶ್ವೇತ ಮುಸುಕಿನ ಕನ್ಯೆಗೆ ಅಂಬೋಲಿ ಎಂದು ಕರೆಯುತ್ತಾರೆ. ನಮ್ಮ ಕೆಮ್ಮಣ್ಣುಗುಂಡಿ, ನಂದಿಬೆಟ್ಟ, ಹಿಮವದ್ ಗೋಪಾಲಸ್ವಾಮಿಯ ಬೆಟ್ಟಗಳ ತರಹದ ಗಿರಿಧಾಮ. ನಿಧಾನಕ್ಕೆ ಮೋಡಗಳ ಸೆರಗು ಕಣ್ಣು ತೆರೆದಾಗ ಕಾಣುವುದು ಸ್ವರ್ಗ ಸಮಾನಸೌಂದರ್ಯ. ಜತೆಗೆ ಆಗಸದಿಂದ ಪ್ರಪಾತಕ್ಕೆ ಎರಗುವ ಧಾರಾಕಾರದ ಜಲಪಾತಗಳು.

ಕಿತ್ತಲೆ ಬಣ್ಣದ ಮಲಬಾರ್‌ ಪಿಟ್‌ ವೈಪರ್ (ಹಪ್ಪಟ್ಟೆ ಹಾವು)
ಕಿತ್ತಲೆ ಬಣ್ಣದ ಮಲಬಾರ್‌ ಪಿಟ್‌ ವೈಪರ್ (ಹಪ್ಪಟ್ಟೆ ಹಾವು)

ಈ ತಾಣಪ್ರಕೃತಿ ಪ್ರಿಯರಿಗೆ ನೆಚ್ಚಿನ ಬೀಡು. 690 ಮೀಟರ್‌ ಎತ್ತರದಲ್ಲಿರುವ ಇದು ಗೋವಾದ ಕರಾವಳಿ ದಾಟಿಕೊಂಡು ನುಗ್ಗಿರುವ ಪಶ್ಚಿಮ ಘಟ್ಟದ ಎತ್ತರದ ಬೆಟ್ಟಗಳನ್ನು ತನ್ನ ತೋಳ ತೆಕ್ಕೆಯಲ್ಲಿ ಬಂಧಿಸಿಕೊಂಡಿದೆ. ಪ್ರಪಂಚದ ‘ಪರಿಸರ ಹಾಟ್-ಸ್ಪಾಟ್’ಗಳಲ್ಲಿ ಇದೂ ಒಂದು ಎಂದು ಖ್ಯಾತಿ ಪಡೆದಿದೆ. ಅಸಾಮಾನ್ಯ ಸಸ್ಯ ಪ್ರಭೇಧಗಳೂ, ವಿಶಿಷ್ಟ ಪ್ರಾಣಿ, ಪಕ್ಷಿ, ಸರಿಸೃಪಗಳ ತವರೂರು ಇದು. ಮುಖವನ್ನು ಬಲೂನಿನಂತೆ ಊದಿಸಿಕೊಂಡು ಪ್ರಣಯ ಗೀತೆ ಹಾಡುವ ‘ಅಂಬೋಲಿ ಕಪ್ಪೆ’ ಕೂಡ ಇಲ್ಲಿಯ ಪ್ರಮುಖ ಆಕರ್ಷಣೆ. ಮ್ಯಾಕ್ರೊ ಫೋಟೋಗ್ರಫಿ ಮಾಡುವ ಹಂಬಲದ ಜನರಿಗೆ ಇಲ್ಲಿನ ಬಣ್ಣಬಣ್ಣದ ಮಲಬಾರ್‌ ಪಿಟ್‌ ವೈಪರ್‌ ಹಾವುಗಳು ಹೆಡೆಯಾಡಿಸಿ ಕರೆಯುತ್ತವೆ.

ಸ್ಥಳೀಯ ಗೈಡ್ ಕಾಕಬೀಸೆ‌ ಎಂಬಾತನ ಹಿಡಿದುಕೊಂಡು ರಾತ್ರಿ ಕಾಡು ಸುತ್ತಲು ಹೊರಟೆವು. ನಮ್ಮ ಕೊರಳಲ್ಲಿ ಕ್ಯಾಮೆರಾಗಳು ನೇತಾಡುತ್ತಿದ್ದವು. ರಭಸವಾಗಿ ಬೀಸುವ ಗಾಳಿ, ನಡುವೆ ಸುಳಿವ ಮಳೆಯ ಹೊಡೆತ, ಜೊತೆಗೆ ಪದೇಪದೇ ಕಾಲಿಗೆ ಹತ್ತಿ ನಿಂತು ರಕ್ತವನ್ನು ಸಾಲವಾಗಿ ಕೇಳುವ ಇಂಬಳಗಳು. ಹಟಮಾರಿಗಳಾದ ನಾವು ಬಿಡದೆ ಸುತ್ತಾಡಿ ಮಲಬಾರ್‌ ಗ್ಲೈಡಿಂಗ್‌ ಕಪ್ಪೆಯ ಮರಿಯನ್ನು ಹುಡುಕಿದೆವು. ಹಪ್ಪಟ್ಟೆ ಹಾವು ಎಂದು ಕರೆಯಲಾಗುವ ಬಣ್ಣಬಣ್ಣದ ಮಲಬಾರ್‌ ಪಿಟ್‌ ವೈಪರ್‌ ಉರಗಗಳು ಸಿಕ್ಕವು. ರಾತ್ರಿಯ ನಿಸರ್ಗ ಜಗತ್ತಿನಲ್ಲಿ ಕಾಣುವ ಅನೇಕ ಜೀವಚರಗಳು ಹಗಲೊತ್ತಿನಲ್ಲಿ ಹುಡುಕಿದರೂ ಸಿಗುವುದಿಲ್ಲ. ನಿಶಾಚರಿಗಳಾಗಿ ಹೀಗೆ ಅಂಡಲೆಯುತ್ತಾ ಊಹೆಗೆ ನಿಲುಕದ ಚಿತ್ರವಿಚಿತ್ರ ಜೀವಜಾಲವನ್ನು ನೋಡಿ ನಲಿಯುವುದು ನಮ್ಮ ಮಟ್ಟಿಗಂತೂ ರೋಮಾಂಚನವೇ ಹೌದು.

ಅಂಬೋಲಿ ಬುಶ್‌ ಫ್ರಾಗ್‌
ಅಂಬೋಲಿ ಬುಶ್‌ ಫ್ರಾಗ್‌

ಅಂಬೋಲಿಗೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಅಕ್ಟೋಬರ್ ಮತ್ತು ಫೆಬ್ರುವರಿ ತಿಂಗಳು ಎನ್ನುತ್ತಾರೆ. ಆದರೆ ನಾವು ಹೋಗಿದ್ದು ಪಕ್ಕಾ ಮಳೆ ಸುರಿಯುವ ಸಮಯದಲ್ಲಿ. ಒಂದೊಂದು ಋತುವಿನಲ್ಲೂ ಈ ಜಾಗ ಕಾಣುವ ನೋಟ ವಿಭಿನ್ನ. ಸಿಗುವ ಆನಂದವೂ ವಿಶಿಷ್ಟವಾಗಿರುತ್ತದೆ. ಹೆಪ್ಪುಗಟ್ಟಿದ ಹಸಿರು ಕಾಡು, ಶ್ವೇತಮಯ ಮೋಡ, ಜಿಟಿಜಿಟಿ ಮಳೆಯಲ್ಲಿ ಅಂಬೋಲಿ ಅತ್ಯುತ್ತಮವಾಗಿತ್ತು. ಗಿರಿಧಾಮದಲ್ಲಿ ಕ್ಷಣಕ್ಷಣಕ್ಕೂ ಬದಲಾಗುವ ನಿಸರ್ಗದ ನಾಟಕೀಯ ದೃಶ್ಯಗಳು ಸಾಕಷ್ಟು ಮುದ ನೀಡಿದವು.

ಅಂಬೋಲಿ ಪ್ರಶಾಂತತೆ ಮತ್ತು ನೈಸರ್ಗಿಕ ಸೌಂದರ್ಯದ ಖನಿ. ಈ ಜನಪ್ರಿಯ ಗಿರಿಧಾಮವನ್ನು ‘ಮಹಾರಾಷ್ಟ್ರದ ರಾಣಿ’ ಎಂತಲೂ ಕರೆಯುತ್ತಾರೆ. ಅಂಬೋಲಿ ಜಲಪಾತ, ಶಿರ್ಗಾಂವ್ಕರ್ ಪಾಯಿಂಟ್, ಹಿರಣ್ಯಕೇಶಿ ದೇವಸ್ಥಾನ, ಮಾಧವಗಡ್ ಕೋಟೆ, ಸನ್ಸೆಟ್ ಪಾಯಿಂಟ್, ನಂಗರ್ತಾ ಜಲಪಾತಗಳಂತಹ ಅನೇಕ ಆಸಕ್ತಿದಾಯಕ ದೃಶ್ಯವೀಕ್ಷಣೆಯ ಸ್ಥಳಗಳು ಮನದಲ್ಲಿ ಉಳಿದು ಹೋಗುತ್ತವೆ.

ಗ್ಲೈಡಿಂಗ್‌ ಪ್ರಾಗ್‌
ಗ್ಲೈಡಿಂಗ್‌ ಪ್ರಾಗ್‌

ನೀವು ಸೊಂಪಾದ ಪರಿಸರದಲ್ಲಿ ಸುತ್ತಾಡುತ್ತಾ ಧರೆಯ ಮೇಲೊಂದು ಸ್ವರ್ಗವನ್ನು ಹುಡುಕುತ್ತಿದ್ದರೆ ಅಂಬೋಲಿಗೆ
ಪ್ರವಾಸಕ್ಕೆ ಹೋಗಲೇಬೇಕು. ಈ ಸ್ಥಳವು ನೈಸರ್ಗಿಕವಾಗಿ ಶಾಂತವಾಗಿದ್ದು ಹಿತವಾದ ಪರಿಸರದಿಂದ ಆಶೀರ್ವದಿಸಲ್ಪಟ್ಟಿದೆ. ಕೈಯಿಂದ ಮಾಡಿದ ಮರದ ಆಟಿಕೆಗಳು, ಮಸಾಲೆಗಳು ಮತ್ತು ಜೇನುತುಪ್ಪಕ್ಕೆ ಕೂಡ ಈ ಊರು ಹೆಸರುವಾಸಿ. ನೀವು ನಗರದ ಜೀವನಶೈಲಿಯಿಂದ ರೋಸಿ ಹೋದವರಾದರೆ ಇಲ್ಲಿನ ಉಸಿರುಕಟ್ಟುವ ಸೌಂದರ್ಯದಲ್ಲಿ ಕಳೆದುಹೋಗಬಹುದು. ಎಲ್ಲಕ್ಕಿಂತ ಮಿಗಿಲಾಗಿ ಅಲ್ಲಿ ಸಿಗುವ ಬೆಲ್ಲದ ಘಮಘಮ ಟೀ ಸವಿಯಲಾದರೂ ನೀವೊಮ್ಮೆ ಅಲ್ಲಿಗೆ ಹೋಗಲೇಬೇಕು.

ಎಲ್ಲೋ ಟೈಗರ್ ಮಾತ್‌ ಕ್ಯಾಟರ್‌ ಪಿಲ್ಲರ್
ಎಲ್ಲೋ ಟೈಗರ್ ಮಾತ್‌ ಕ್ಯಾಟರ್‌ ಪಿಲ್ಲರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT