ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ ಕಥನ: ಸಪೋನ್ ನೆ‍ಪ ವೈವಿಧ್ಯತೆಯ ಜಪ

ಶೈಲಾ. ವಿ.ಹೆಚ್.
Published 25 ಮೇ 2024, 14:21 IST
Last Updated 25 ಮೇ 2024, 14:21 IST
ಅಕ್ಷರ ಗಾತ್ರ

ನಾವು ದಂಪತಿ ಗ್ಯಾಂಗ್‌ಟಾಕ್‌ಗೆ ಹೋಗಿದ್ದೆವು. ಅದು ಚೀನಾದ ಗಡಿಗೆ ತಾಗಿರುವ ಸಿಕ್ಕಿಂನ ರಾಜಧಾನಿ. ಹೋಟೆಲ್ ಒಳಗೆ ಕಾಲಿಡುತ್ತಲೇ ಹುಡುಗನೊಬ್ಬ ಸ್ವಾಗತಿಸಿದನು. ಸೋಫಾದ ಕಡೆಗೆ ಕೈ ತೋರಿಸಿ ಹಿಂದಿಯಲ್ಲಿ ‘ಕುಳಿತು ಕೊಳ್ಳಿ’ ಎಂದ. ‘ಅರೆರೇ.. ಚೀನಾದಿಂದ ಇಲ್ಲಿಗೆ ಕೆಲಸಕ್ಕೆ ಬರುತ್ತಾರೆಯೆ? ಎಷ್ಟು ಚಂದ ಹಿಂದಿ ಕಲಿತು ಮಾತಾಡುತ್ತಾನೆ’ ಎಂದು ಆಶ್ಚರ್ಯವಾಯಿತು.

ಪತಿ ರಾಜಾರಾಮ್‌ ಅವರಿಗೆ ರಾತ್ರಿಯ ಊಟದ ಚಿಂತೆ ಉದ್ಭವಿಸಿತು. ‘ನಿಮ್ಮ ಹೋಟೆಲ್‌ನಲ್ಲಿ ಸೌತ್ ಇಂಡಿಯನ್ ಊಟ ಇದೆಯೋ’ ಎಂದು ಕೇಳಿದರು. ‘ಸೌತ್ ಇಂಡಿಯನ್ ಊಟ ಬೇಕಾದರೆ ಇಲ್ಲೇ ಹತ್ತಿರ ಮಾರ್ವಾಡಿ ಹೋಟೆಲ್‌ ಇದೆ, ಅಲ್ಲಿಗೆ ಹೋಗಬಹುದು’ ಎಂದರು. ನಮಗೆ ಖುಷಿ ಆಯಿತು.

ರಾತ್ರಿ ಊಟಕ್ಕೆ ಮಾರ್ವಾಡಿ ಹೋಟೆಲಿಗೆ ಹೋದೆವು. ಅಲ್ಲಿ ಕೆಲಸದವರು, ಮ್ಯಾನೇಜರ್ ಎಲ್ಲರೂ ಭಾರತೀಯರಂತೆ ಕಂಡರು. ಊಟಕ್ಕೆ ಅನ್ನ, ಮೊಸರು, ಸಾಂಬಾರ್ ಇದ್ದುದರಿಂದ ಖುಷಿಯಾಗಿ ಊಟ ಮಾಡಿದೆವು. ಅಲ್ಲಿಯವರೆಗೆ ಎಲ್ಲವೂ ಚೆನ್ನಾಗಿಯೇ ಇತ್ತು. 

ಮರುದಿನ ಬೆಳಗ್ಗೆ ಹೊಟೇಲಿನಲ್ಲಿ ತಿಂಡಿಗಾಗಿ ಕಾಫಿ ಟೇಬಲ್‌ಗೆ ಹೋಗಿ ಕುಳಿತೆವು. ಮೆನು ಕಾರ್ಡ್ ನೋಡಿದಾಗ ಎಲ್ಲಾ ಉತ್ತರ ಭಾರತದ ತಿಂಡಿಗಳೇ ಇದ್ದವು. ಪರೋಟ, ರೋಟಿ, ನಾನ್, ಚೋಲೆ ಬಟೂರ, ಕೊನೆಯಲ್ಲಿ ಪೂರಿ ಚೋಲೆ ಇತ್ತು. ಪತಿಗೆ ಉತ್ತರ ಭಾರತದ ತಿಂಡಿಗಳು ಇಷ್ಟವಾಗದ ಕಾರಣ ಪೂರಿ ಆರ್ಡರ್ ಮಾಡೋಣ ಎಂದು ಮಾತಾಡಿಕೊಂಡೆವು. ಅಷ್ಟರಲ್ಲೇ ಎದುರು ಟೇಬಲ್ಲಿಗೆ ಪೂರಿ ಬಂತು. ಅದನ್ನು ನೋಡುತ್ತಿದ್ದಂತೆ ನನ್ನ ಪತಿಗೆ ಗಾಬರಿ ಆಯಿತು. ಏಕೆಂದರೆ, ಆ ಪೂರಿ ಅಲ್ಲಿನ ರೊಟ್ಟಿಯಷ್ಟೇ ದಪ್ಪವಾಗಿತ್ತು. ‘ಅಯ್ಯೋ ಮಾರಾಯ್ತಿ, ಈ ಪೂರಿ ಹೇಗೆ ತಿನ್ನುವುದು’ ಎಂದು ಗಾಬರಿಯಾದರು.

ನನಗೆ ಉಪಾಯ ಹೊಳೆಯಿತು. ‘ಸೀದಾ ಅಡುಗೆ ಮನೆಗೆ ಹೋದೆ. ಅಲ್ಲಿ ಒಬ್ಬ ಚೀನಾದವನಂತೆ ನಿಂತಿದ್ದ. ನಗುತ್ತಾ ಹಿಂದಿಯಲ್ಲಿ ಹೆಸರು ಕೇಳಿದೆ. ಅವನು ಪ್ರತಿಯಾಗಿ ನಕ್ಕು ‘ಸಪೋನ್’ ಎಂದ.
‘ನಿನ್ನ ಹೆಸರು ಸುಂದರವಾಗಿದೆ, ಬಂಗಾಳ ಕಡೆಯವನಾ’ಎಂದು ಕೇಳಿದೆ. ‘ಇಲ್ಲ, ನಾನು ಇಲ್ಲಿಯವನೇ’ ಎಂದ. ‘ನಿನ್ನ ಹೆಸರು ಕೇಳಿ ಹಾಗೆ ಅಂದುಕೊಂಡೆ’ ಎಂದಾಗ, ‘ನನ್ನ ಹೆಸರಿನ ಅರ್ಥ ನಿಮಗೆ ಗೊತ್ತಾಯ್ತಾ?’ಎಂದ. ‘ಓಹೋ, ಡ್ರೀಮ್ ಎಂದಲ್ಲವೇ?’ಕೇಳಿದೆ. ‘ಹೌದು’ ಎಂದು ಸಂತೋಷಪಟ್ಟ. ‘ನನ್ನ ಅಮ್ಮ ಬಂಗಾಳದ ಹತ್ತಿರದ ಅಸ್ಸಾಮಿನವಳು. ಅವಳು ಪ್ರೀತಿಯಿಂದ ಇಟ್ಟ ಹೆಸರು. ನನ್ನ ತಂದೆ ಇಲ್ಲಿಯವರೇ’ ಎಂದ.

ಆಗ ನನ್ನ ಬೇಡಿಕೆ ಮುಂದಿಟ್ಟೆ. ‘ಪತಿಗೆ ಇಲ್ಲಿಯ ತಿಂಡಿಗಳಲ್ಲಿ ಪೂರಿ ಮಾತ್ರ ತಿನ್ನಬಹುದಾಗಿದೆ. ಆದರೆ ನೀವು ಮಾಡುವ ಪೂರಿ ತುಂಬಾ ದಪ್ಪವಾಗಿದೆ. ಅವರಿಗೆ ವಯಸ್ಸಾಗಿದೆ, ಆದ್ದರಿಂದ ಅದನ್ನು ತಿನ್ನುವುದು ಕಷ್ಟ. ಸ್ವಲ್ಪ ತೆಳ್ಳಗೆ ಮಾಡಿಕೊಡಲು ಆಗಬಹುದಾ?’ ಎಂದು ಕೇಳಿದೆ. ‘ಇಲ್ಲ, ನಾವು ಹೀಗೇ ಮಾಡಬೇಕು, ಇಲ್ಲದಿದ್ದರೆ ಮ್ಯಾನೇಜರ್ ಕೋಪ ಮಾಡಿಕೊಳ್ಳುತ್ತಾರೆ’ ಎಂದ. ‘ಮ್ಯಾನೇಜರ್‌ಗೆ ಹೇಳುವುದು ಬೇಡ. ನಾನೇ ತೆಳ್ಳಗಿನ ಪೂರಿ ಲಟ್ಟಿಸಿಕೊಡುತ್ತೇನೆ. ಎಣ್ಣೆಯಲ್ಲಿ ಹಾಕಿ ನೀವೇ ಕರಿದುಬಿಡಿ. ಮ್ಯಾನೇಜರ್ ಬರುವುದರೊಳಗೆ ತಿಂದುಬಿಡುತ್ತೇವೆ. ಪ್ಲೀಸ್...’ಎಂದೆ, ಆತ ಒಪ್ಪಿದ.

ಮನೆಯಲ್ಲಿ ಮಾಡುವಂತಹ ಪೂರಿಯನ್ನು ಮಾಡಿ ವೇಟರ್ ಕೈಯಲ್ಲಿ ಕೊಟ್ಟು ಕಳಿಸಿದೆ.  ಖುಷಿಯಿಂದ ನಾವಿಬ್ಬರೂ ಪೂರಿ ಚೋಲೆ ತಿಂದು ಕಾಫಿ ಕುಡಿದು ಹೊರಟೆವು. ಗುಡ್ಡಗಾಡು ನಗರವಾದ ಗ್ಯಾಂಗ್‌ಟಾಕ್‌ನ ಹಲವು ಜಾಗಗಳನ್ನು ಕಾಲ್ನಡಿಗೆಯಲ್ಲೇ ಸುತ್ತಾಡಿ, ತುಸುದೂರದ ಬಹುಎತ್ತರದ ಶಿಖರಕ್ಕೆ ರೋಪ್ ವೇ ಕ್ಯಾಬಿನ್‌ನಲ್ಲಿ ಕುಳಿತು ಸಾಗಿದ್ದಾಯಿತು. ರಾತ್ರಿ ಮಾರ್ವಾಡಿ ಹೋಟೆಲ್ ಊಟ ಮಾಡಿದೆವು.

ನಗುನಗುತ್ತಾ ನಮ್ಮೂರಿಗೆ ಸ್ವಾಗತ ಎಂದ ಮಕ್ಕಳು...
ನಗುನಗುತ್ತಾ ನಮ್ಮೂರಿಗೆ ಸ್ವಾಗತ ಎಂದ ಮಕ್ಕಳು...

ಮರುದಿನ ಬೆಳಿಗ್ಗೆ ಅದೇ ‘ಪೂರಿ’ ಪುನರಾವರ್ತನೆ ಮಾಡಿದೆವು.

ಮೂರನೆಯ ದಿನ ಜೀಪು ಬಂದು ಬೆಳಗಿನ ಜಾವ ನಮ್ಮನ್ನು ಕರೆದುಕೊಂಡು ಹೊರಟುಬಿಟ್ಟಿತ್ತು. ಆ ದಿನ ನಾತುಲಾ ಪಾಸ್ ಎನ್ನುವ ಚೀನಾ ಗಡಿಯ ಪ್ರದೇಶಕ್ಕೆ ಹೋಗಿದ್ದೆವು. ನೋಡಬೇಕಾದ ಜಾಗವನ್ನೆಲ್ಲಾ ನೋಡಿ ರಾತ್ರಿ ಮತ್ತದೇ ಮಾರ್ವಾಡಿ ಹೋಟೆಲಿಗೆ ಹೋಗಿ ಊಟ ಮಾಡಿದೆವು. ಅಲ್ಲಿಂದ ನಡೆದುಕೊಂಡು ನಮ್ಮ ಹೋಟೆಲ್ ಕಡೆ ಬರುತ್ತಾ ಇದ್ದೆವು. ಆಗ ಮೂರು ಜನ ಯುವಕರು ನಮ್ಮ ದಿಕ್ಕಿಗೆ ನಡೆದುಕೊಂಡು ಬರುತ್ತಿದ್ದರು. ಕತ್ತಲೆ ಬೇರೆ. ಅವರು ನಮ್ಮನ್ನು ಸಮೀಪಿಸುತ್ತಿದಂತೆಯೇ ಮಧ್ಯದಲ್ಲಿದ್ದ ಹುಡುಗನ ಮುಖದ ಮೇಲೆ ನಗು ಕಾಣಿಸಿತು. ಆತನ ಕಣ್ಣು ಪೂರ್ತಿ ಮುಚ್ಚಿದಂತೆ ಕಂಡರೂ ಮುಖದಲ್ಲಿದ್ದ ನಗುವಿನ ಆತ್ಮೀಯತೆ ಅನುಭವಕ್ಕೆ ಬಂದಿತು. ಆತ ನಮ್ಮ ಕಡೆಗೆ ಹೆಜ್ಜೆ ಹಾಕುತ್ತಾ ಬಂದನು. ಥಟ್ಟನೆ ನನಗೆ ಅವನ ಗುರುತು ಸಿಕ್ಕಿಬಿಟ್ಟಿತ್ತು. ಸ್ವಲ್ಪ ಹತ್ತಿರ ಬಂದ ಕೂಡಲೇ ‘ಸಪೋನ್’!.. ಕೆಲಸ ಮುಗಿಸಿ ಮನೆಗೆ ಹೊರಟುಬಿಟ್ಟೆಯಾ’ ಎಂದು ಕೇಳಿದೆ.

ಅಷ್ಟು ಕೇಳಿದ್ದೇ ನೋಡಿ, ಅವನಿಗೆ ಏನಾಯಿತು ಎಂದು ಕಣ್ಣು ಬಿಟ್ಟು ನೋಡುವಂತಾಯಿತು. ತಲೆಯನ್ನು ಅತ್ತ ಇತ್ತ ಕುಣಿಸಿದ. ತನ್ನ ಕಿವಿಗಳನ್ನು ತಾನೇ ಎಳೆದುಕೊಂಡ. ಕೈ ಎರಡು ಮುಷ್ಟಿ ಕಟ್ಟಿ ಮೇಲೆ ಕೆಳಗೆ ಆಡಿಸಿದ. ‘ನಿಮಗೆ ನನ್ನ ಗುರುತು ಸಿಕ್ಕಿ ಬಿಟ್ಟಿತು, ನಿಮಗೆ ನನ್ನ ಗುರುತು ಸಿಕ್ಕಿಬಿಟ್ಟಿತು.’ ಎನ್ನುತ್ತಾ ಕುಪ್ಪಳಿಸಿ, ಉಲ್ಲಾಸ ತುಂಬಿದ ಅವನ ಧ್ವನಿ ಉಕ್ಕೇರಿ ಹೊರಗೆ ಬಂತು. ‘ದಕ್ಷಿಣದವರು ಯಾರೂ ನಮ್ಮನ್ನು ಗುರುತು ಹಿಡಿಯುವುದಿಲ್ಲ. ನೀವು ನನ್ನ ಗುರುತು ಹಿಡಿದೇ ಬಿಟ್ಟಿರಿ’ ಅಂದ. ಅವನ ಕುಣಿತ ನೋಡಿ ನನ್ನ ಪತಿ ‘ಆಯ್ತು..ಆಯ್ತು’ ಎಂದು ಅವನ ಬೆನ್ನು ಚಪ್ಪರಿಸಿ ‘ಲೇಟಾಗುತ್ತಿದೆ, ಬೇಗ ಮನೆ ಸೇರಿಕೋ’ ಎಂದು ಕಳಿಸಿದರು.

ಸಿಕ್ಕಿಂನಲ್ಲಿ ನಡೆದ ಹಬ್ಬವೊಂದರ ದೃಶ್ಯ
ಸಿಕ್ಕಿಂನಲ್ಲಿ ನಡೆದ ಹಬ್ಬವೊಂದರ ದೃಶ್ಯ

ಮರುದಿನ ಬೆಳಿಗ್ಗೆ ನಮ್ಮ ಲಗೇಜ್‌ ತೆಗೆದುಕೊಂಡು ಡಾರ್ಜಿಲಿಂಗ್‌ಗೆ ಹೊರಡಲು ಬಂದೆವು. ಕಾಫಿ ಟೇಬಲ್ಲಿಗೆ ಹೋಗಿ ಕುಳಿತುಕೊಂಡರೆ ‘ಸಪೋನ್’ ನಮಗೆ ಬೇಕಾದ ಪುಟ್ಟ ಪುಟ್ಟ ಪೂರಿ ಚೋಲೆಯನ್ನು ತಾನೇ ಪ್ಲೇಟಲ್ಲಿ ತಂದು ಇಟ್ಟ. ಮುಖದಲ್ಲಿ ನಗು ತುಂಬಿತ್ತು. ಬಳಿಕ ಬಿಲ್‌ ಕೊಟ್ಟ ಕೂಡಲೇ ನಮ್ಮ ಹಿಂದೆ ಬಂದು ‘ಹೊರಟು ಬಿಟ್ಟಿದ್ದೀರಿ. ಎರಡು ದಿನ ಇದ್ದರೆ ಚೆನ್ನಾಗಿತ್ತು’ ಪ್ರೀತಿಯಿಂದಲೇ ಕೇಳಿದ. ಯಾವ ಜನುಮದ ನೆಂಟನೋ ಅಂದುಕೊಂಡೆ. ‘ಇದೇ ಕೊನೆ ಏನಲ್ಲ, ಮತ್ತೆ ಬರುತ್ತೇವೆ, ಯೋಚನೆ ಮಾಡಬೇಡ’ ಅಂದೆ. ‘ನಮ್ಮ ಬೆಂಗಳೂರನ್ನು ನೋಡಲು ನೀನು ಬಾ’ ಎಂದು ಪ್ರೀತಿಯಿಂದ ಆಹ್ವಾನವಿತ್ತು ಹೊರಟೆವು. ಅವನ ಆ ಕಿರಿದಾದ ಕಣ್ಣುಗಳಲ್ಲಿ ನಮಗೆ ವಿದಾಯ ಹೇಳುವಾಗ ವಿಷಾದ ಕಂಡಿತು.

ನಮ್ಮ ಮನತಟ್ಟಿದ ಈ ಘಟನೆ ಈಗ ನೆನಪಾದದ್ದು ಏಕೆ? ಕಾರಣವಿಷ್ಟೆ. ಇತ್ತೀಚೆಗೆ ಸ್ಯಾಮ್ ಪಿತ್ರೋಡಾ ಹೇಳಿದರಲ್ಲ, ಇಂಡಿಯಾದಲ್ಲಿ ಪೂರ್ವದವರು ಚೀನಾದವರ ಹಾಗೆ ಕಾಣುತ್ತಾರೆ. ದಕ್ಷಿಣದವರು ಆಫ್ರಿಕಾದವರಂತೆ, ಪಶ್ಚಿಮದವರು ಅರಬರ ತರಹಾ, ಉತ್ತರದವರು ಯೂರೋಪಿನವರ ರೀತಿ ಕಾಣುತ್ತಾರೆ ಎಂದು.. ನಾವು ಹೇಗೆ ಹೇಗೋ ಕಾಣುತ್ತಿರಬಹುದು. ಆದರೆ ದೇಶ ಒಂದೇ; ಮಾನವೀಯತೆಯಲ್ಲಿ ಒಂದೇ ತರಹದ ಮನುಷ್ಯತ್ವ ಇಟ್ಟುಕೊಂಡವರು. ಕಾಶ್ಮೀರದ ಶೃಂಗದಿಂದ ಹಿಡಿದು ಕನ್ಯಾಕುಮಾರಿ ಸಮುದ್ರತೀರದವರೆಗೆ ಓಡಾಡಿದ್ದೇವೆ. ರೂಪ, ಬಣ್ಣ, ಭಾಷೆ, ಊಟ, ತಿಂಡಿ ವಿಷಯಗಳಲ್ಲಿ ವ್ಯತ್ಯಾಸವಿದೆಯೇ ಹೊರತು, ಪ್ರೀತಿಯಿಂದ ಒಬ್ಬರನ್ನೊಬ್ಬರು ಕಾಣುವ ಆತ್ಮೀಯತೆಯ ಏಕತೆಗೆ ಬೆಲೆ ಕಟ್ಟಲಾಗದು. v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT