ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಗನಾಥವೆಂಬ ಸುಂದರ ಚಾರಣ ತಾಣ

Last Updated 28 ಜುಲೈ 2018, 19:30 IST
ಅಕ್ಷರ ಗಾತ್ರ

ಹಿಮಾಲಯದ ಮಡಿಲಲ್ಲಿ ಹಸಿರು ಹೊದ್ದು ಮಲಗಿರುವ ಒಂದು ಪುಟ್ಟ ಹಳ್ಳಿ ಚೋಪ್ಟಾ. ರುದ್ರಪ್ರಯಾಗ ಜಿಲ್ಲೆಯಲ್ಲಿ, ಉಖೀಮಠ ಗೋಪೇಶ್ವರ ರಸ್ತೆಯಲ್ಲಿ [ರಾ.ಹೆ. 58] ಇರುವ ಈ ಪುಟ್ಟ ಗಿರಿಧಾಮ ಪ್ರವಾಸಿ ಋತುಗಳು ಹಾಗೂ ವಾರಾಂತ್ಯಗಳಲ್ಲಿ ಪ್ರವಾಸಿಗರಿಂದ ಗಿಜಿಗುಡುತ್ತಿರುತ್ತವೆ. ಉಳಿದ ದಿನಗಳಲ್ಲಿ ಏನೂ ಗೊತ್ತಿಲ್ಲದಂತೆ ತಣ್ಣಗೆ ಮಲಗಿರುತ್ತದೆ.

ದಟ್ಟ ಅರಣ್ಯಕ್ಕೆ, ಪ್ರಕೃತಿಯ ನಡುವಿನ ರೆಸಾರ್ಟುಗಳಿಗೆ, ಹಿಮಶಿಖರಗಳ ನೋಟಕ್ಕೆ ಪ್ರಸಿದ್ಧವಾಗಿರುವ ಚೋಪ್ಟಾ, ಇನ್ನೂ ಒಂದು ಕಾರಣಕ್ಕಾಗಿ ಜನಜನಿತ. ಜಗತ್ತಿನ ಅತೀ ಎತ್ತರದಲ್ಲಿನ ಶಿವಾಲಯ ತುಂಗನಾಥದ ಚಾರಣಕ್ಕೆ ಇದು ಪ್ರಾರಂಭದ ಸ್ಥಳ.

ತುಂಗನಾಥ ಪ್ರಸಿದ್ಧ ಪಂಚಕೇದಾರಗಳಲ್ಲಿ ಒಂದು. ಜಗತ್ತಿನ ಅತೀ ಎತ್ತರದಲ್ಲಿನ ಶಿವಾಲಯವೆಂದೊಡನೆ ಇದು ಜಗತ್ತಿನ ಅತೀ ಕಠಿಣ ಚಾರಣ ತಾಣವಾಗಬೇಕೆಂದೇನೂ ಇಲ್ಲವಲ್ಲ? ವಾಸ್ತವವಾಗಿ ಇದು ಸುಲಭದ, ಚೇತೋಹಾರಿಯಾದ, ಮಕ್ಕಳಿಂದ ವೃದ್ಧರವರೆಗೆ ನಡೆಯಲಾಗುವವರೆಲ್ಲರೂ ಹೋಗಬಹುದಾದ ಮತ್ತು ಹೋಗಲೇಬೇಕಾದ ಸುಂದರ ಚಾರಣ.

ಚೋಪ್ಟಾದಲ್ಲಿ ಸಾಕಷ್ಟು ವಸತಿಗೃಹಗಳಿವೆ. ಇಲ್ಲಿಂದ ತುಂಗನಾಥಕ್ಕೆ ನಾಲ್ಕು ಕಿ.ಮೀ.ಗಳ ಹಾದಿ. ಬೆಳಗ್ಗೆ ಬೇಗ ಎದ್ದು ಚುಮುಚುಮು ಚಳಿಗೆ ಆರಾಮವಾಗಿ ನಡೆದು ತುಂಗನಾಥ ತಲುಪಿ, ಬೇಕಿದ್ದರೆ ಇನ್ನೂ ಎತ್ತರದಲ್ಲಿರುವ ಚಂದ್ರಶಿಲಾ ನೋಡಿ ಸಂಜೆಯೊಳಗೆ ಮತ್ತೆ ಚೋಪ್ಟಾ ತಲುಪಬಹುದು.

ಚಂದ್ರಶಿಲಾದಿಂದ ಕಾಣುವ ಮನೋಹರ ದೃಶ್ಯ
ಚಂದ್ರಶಿಲಾದಿಂದ ಕಾಣುವ ಮನೋಹರ ದೃಶ್ಯ

ಬನ್ನಿ, ಒಮ್ಮೆ ಹೋಗಿ ಬರೋಣ

ತುಂಗನಾಥದ ನಡಿಗೆ ತುಂಬ ಖುಷಿ ಕೊಡುವಂಥಾದ್ದು. ಚೋಪ್ಟಾದಲ್ಲಿ ಹೆದ್ದಾರಿ ಬದಿಯಲ್ಲೇ ಕಾಣುವ ಕಾಂಕ್ರೀಟಿನ ಸ್ವಾಗತದ್ವಾರದ ಮೂಲಕವೇ ನಮ್ಮ ನಡಿಗೆ ಆರಂಭ. ಪ್ರಾರಂಭದಲ್ಲಿ ರ‍್ಹೊಡೋಡೆಂಡ್ರಾನ್ ಅಥವಾ ಬ್ರಾಂಜ್‌ನ ಕುಬ್ಜ ಮರಗಳ ನಡುವೆ ಸಾಗುವ ಹಾದಿ ಅಗಲವಾಗಿದ್ದು ಕಲ್ಲು ಹಾಸಿದೆ. ಕೆಲವೆಡೆ ಕಾಂಕ್ರೀಟ್ ಕೂಡಾ ಹಾಕಲಾಗಿದೆ. ನಿಧಾನವಾಗಿ ಏರುವ ಈ ಮರಗಳ ನಡುವಿನ ಹಾದಿಯಲ್ಲಿ ನೀವೇನಾದರೂ ಬೇಸಿಗೆಯಲ್ಲಿ ನಡೆದಾಡಿದರೆ ಹುಚ್ಚು ಹಿಡಿಯುವಷ್ಟು ಸುಂದರವಾಗಿರುತ್ತದೆ. ಒತ್ತೊತ್ತಾಗಿ ಬೆಳೆದ ಬ್ರಾಂಜ್ ಮರಗಳಲ್ಲೆಲ್ಲ ಕೆಂಪು, ಗುಲಾಬಿ ಬಣ್ಣದ ಹೂಗಳು ಎಲೆಗಳೇ ಕಾಣಿಸದಂತೆ ಅರಳಿ ನಿಂತು ಪರಿಸರವೆಲ್ಲ ವರ್ಣಮಯವಾಗಿರುತ್ತದೆ. ಮಳೆಗಾಲದಲ್ಲಿ ಈ ವರ್ಣವೈಭವ ಕಾಣದಿದ್ದರೂ ಸುತ್ತಲೂ ಹಸಿರು ನಳನಳಿಸುತ್ತದೆ. ಬ್ರಾಂಜ್ ಹೂಗಳು ಸಿಗದಿದ್ದರೂ ಸ್ಥಳೀಯರು ಈ ಹೂಗಳಿಂದ ತಯಾರಿಸುವ ಶರಬತ್ತು ವರ್ಷವಿಡೀ ಸಿಗುತ್ತದೆ. ಇದು ಆರೋಗ್ಯಕರ ಪಾನೀಯವೂ ಹೌದು.

ನಡೆಯುತ್ತಿದ್ದಂತೆಯೇ ದಾರಿ ಮೆಲ್ಲನೆ ಏರುತ್ತಾ ಮರಗಳನ್ನು ಕೆಳಗೇ ಬಿಟ್ಟು ಎತ್ತರದ ಬಯಲಿಗೆ ತೆರೆದುಕೊಳ್ಳುತ್ತದೆ. ವಾತಾವರಣ ತಿಳಿಯಾಗಿದ್ದರೆ ದಾರಿಯುದ್ದಕ್ಕೂ ಅಲ್ಲಲ್ಲಿ ಹಿಮಾಲಯದ ವಿಶಾಲ ಪರ್ವತಶ್ರೇಣಿಗಳನ್ನು ನೋಡಬಹುದು. ದಾರಿ ಅಗಲವಾಗಿಯೂ ಏರು ಹದವಾಗಿಯೂ ಇರುವುದರಿಂದ ಉಸಿರು ಸಿಕ್ಕಿಕೊಳ್ಳುವಷ್ಟು ಆಯಾಸವೇನೂ ಆಗುವುದಿಲ್ಲ. ಆದರೂ ದಾರಿಯುದ್ದಕ್ಕೂ ಅಲ್ಲಲ್ಲಿ ಸಿಗುವ ಧಾಬಾಗಳನ್ನು ಹೊಕ್ಕು, ಕಟ್ಟೆಗಳಲ್ಲಿ ಅವರು ಹಾಸಿದ ಕಂಬಳಿ (ಇವು ನಿಜವಾದ ಉಣ್ಣೆಯಿಂದ ತಯಾರಿಸಿದ ಅಸಲೀ ಕಂಬಳಿಗಳು)ಯ ಮೇಲೆ ಕುಳಿತು ಸೆಕೆ ಎನಿಸಿದರೆ ಬ್ರಾಂಜ್‌ನ ಶರಬತ್ತನ್ನೋ, ಇನ್ನೂ ಚಳಿ ಬಿಟ್ಟಿಲ್ಲ ಎನಿಸಿದರೆ ಹಬೆಯಾಡುವ ಬಿಸಿ ಬಿಸಿ ಚಹಾವನ್ನೋ ಹೀರುತ್ತಾ ಎದುರಿಗೆ ಕಾಣುವ ಹಿಮಶಿಖರಗಳ ಸೌಂದರ್ಯ ಸವಿಯಬಹುದು. ಅವಸರ ಬೇಡ, ಸ್ವಲ್ಪ ಹೆಚ್ಚೇ ಹೊತ್ತು ಕುಳಿತುಕೊಳ್ಳಿ. ಇಂಥ ಅನುಭವ ಮತ್ತೆ ಮತ್ತೆ ಸಿಗುವುದಿಲ್ಲ. ಹಿಮಾಲಯದ ಹಳ್ಳಿಗರು ಶುಂಠಿ, ಏಲಕ್ಕಿ ಇತ್ಯಾದಿ ಮಸಾಲೆಗಳನ್ನು ಹಾಕಿ ಕುದಿಸುವ ಚಹಾ ವಿಶ್ವವಿಖ್ಯಾತ. ತುಟಿಯ ಬಳಿ ಕೊಂಡೊಯ್ಯುತಿದ್ದಂತಯೇ ಮೂಗಿಗೆ ರಾಚುವ ಇದರ ಹಬೆ ಕಟ್ಟಿದ ಮೂಗನ್ನೂ ಕೂಡಲೇ ತೆರೆಸುತ್ತದೆ!!

ನೀವು ಸೆಪ್ಟಂಬರ್‌ನಂತಹ, ಪ್ರವಾಸಿಗರಿಲ್ಲದ ಋತುವಿನಲ್ಲಿ ಬಂದಿದ್ದರೆ, ನಿಮ್ಮ ಸುತ್ತಮುತ್ತ ಚಾರಣಿಗರು ಕಡಿಮೆಯಿದ್ದರೆ, ಕಣ್ಣಿಗೆ ರಾಚುವ ಹಸಿರಿನ ಜೊತೆ, ಹುಲ್ಲು ಮೇಯುತ್ತಾ ಹಾದಿಯ ಅಂಚಿನವರೆಗೆ ಬರುವ ಹಿಮಾಲಯನ್ ಭರಲ್‌ಗಳನ್ನೂ ಕಾಣಬಹುದು. ಕುರುಬರ ಹಟ್ಟಿಗಳೂ ಅಲ್ಲಲ್ಲಿ ಸಿಗುತ್ತವೆ.

ನಡೆಯುತ್ತಾ ಹೋಗುತಿದ್ದಂತೆ ನಾಲ್ಕೈದು ಧಾಬಾಗಳು, ಗೂಡಂಗಡಿಗಳು, ವಸತಿ ಕಟ್ಟಡಗಳು ಕಾಣಸಿಕ್ಕಿದರೆ ನೀವು ತುಂಗನಾಥ ತಲುಪಿದಂತೆ. ದೇಗುಲದ ಬಳಿ ಎತ್ತರದಲ್ಲಿ ಪಟಪಟಿಸುತ್ತಾ ಹಾರಾಡುತ್ತಿರುವ ಬಾವುಟಗಳು ನೀವು ಗಮ್ಯಸ್ಥಾನ ಸಮೀಪಿಸುತ್ತಿರುವುದನ್ನು ಖಾತರಿಪಡಿಸುತ್ತವೆ.

ತುಂಗನಾಥ ಸಮುದ್ರಮಟ್ಟದಿಂದ 3680 ಮೀಟರ್ ಎತ್ತರದಲ್ಲಿದ್ದು, ಜಗತ್ತಿನ ಅತೀ ಎತ್ತರದಲ್ಲಿನ ಶಿವಾಲಯ ಎನಿಸಿಕೊಂಡಿದೆ.

ಪುರಾಣದ ಕಥೆಯಂತೆ, ಪಾಂಡವರಿಂದ ತಪ್ಪಿಸಿಕೊಳ್ಳಲು ಎತ್ತಿನ ರೂಪ ಧರಿಸಿದ ಶಿವನು ಭೂಮಿಯೊಳಗೆ ನುಗ್ಗಲು ಯತ್ನಿಸುವಾಗ ಭೀಮನು ಆ ಎತ್ತನ್ನು ಮತ್ತೆ ಹೊರಗೆಳೆಯತೊಡಗುತ್ತಾನೆ. ಆಗ ಎತ್ತಿನ ರೂಪದ ಶಿವನ ಭಾಗಗಳು ಐದು ಕಡೆಗಳಿಂದ ಕಾಣಿಸಿಕೊಳ್ಳುತ್ತವೆ. ಆ ಸ್ಥಳಗಳೇ ಪಂಚಕೇದಾರಗಳು. ಅವುಗಳಲ್ಲಿ ಮೂರನೆಯದಾದ ತುಂಗನಾಥದಲ್ಲಿ ಶಿವನ ಬಾಹುಗಳು ಕಾಣಿಸಿಕೊಂಡವು ಎನ್ನಲಾಗುತ್ತದೆ.

ತುಂಗನಾಥದಲ್ಲಿ ಶಿವನ ಪುರಾತನ ಶಿಲಾಮಂದಿರದ ಜೊತೆ, ಪಾರ್ವತಿದೇವಿ, ಶಿವನ ಗಣವಾದ ಭೈರವನಾಥ ಹಾಗೂ ಪಂಚಪಾಂಡವರಿಗೆ ಮೀಸಲಾದ ಸಣ್ಣ ಗುಡಿಗಳಿವೆ. ಶಿವನ ಗುಡಿಯೆದುರು ನಂದಿಯ ಸುಂದರ ವಿಗ್ರಹವಿದೆ. ಮಧ್ಯಾಹ್ನದ ಮೊದಲು ನೀವಿಲ್ಲಿ ತಲುಪಿದರೆ ನಿಮ್ಮ ಕೈಗಳಿಂದಲೇ ತುಂಗನಾಥನಿಗೆ ಅಭಿಷೇಕ, ಅರ್ಚನೆ ಮಾಡಬಹುದು. ಚಳಿಗಾಲದಲ್ಲಿ ಈ ದೇವಾಲಯ ಮುಚ್ಚಿದ್ದು, ತುಂಗನಾಥನ ಸಾಂಕೇತಿಕ ಬಿಂಬವನ್ನು 19 ಕಿ.ಮೀ. ದೂರದ ಮುಕುಮಠ ಎಂಬಲ್ಲಿಗೆ ಒಯ್ದು ಪೂಜಿಸಲಾಗುತ್ತದೆ.

ಚಂದ್ರಶಿಲೆಯಲ್ಲಿನ ಗಂಗಾಮಂದಿರ
ಚಂದ್ರಶಿಲೆಯಲ್ಲಿನ ಗಂಗಾಮಂದಿರ

ಚಂದ್ರಶಿಲೆಯನ್ನೂ ನೋಡಿಬನ್ನಿ

ತುಂಗನಾಥನ ದರ್ಶನ, ಅರ್ಚನೆ ಮುಗಿಸಿ ಹೊರಗಿನ ಧಾಬಾದಲ್ಲಿ ಹೊಟ್ಟೆಗೇನಾದರೂ ಹಾಕಿಕೊಳ್ಳಿ. ಹೇಗೂ ಇಲ್ಲಿಯವರೆಗೆ ಬಂದಾಗಿದೆ. ಇನ್ನೂ ಒಂದೂವರೆ ಕಿ.ಮೀ ದೂರದಲ್ಲಿರುವ ಚಂದ್ರಶಿಲೆಯನ್ನೂ ನೋಡೇಬಿಡೋಣ... ನೀರಿನ ಬಾಟಲುಗಳನ್ನು ಇಲ್ಲೇ ತುಂಬಿಸಿಕೊಳ್ಳಿ. ಮುಂದೆ ಎಲ್ಲೂ ನೀರು ಸಿಗುವುದಿಲ್ಲ.

ಇನ್ನು ಚಂದ್ರಶಿಲೆಯವರೆಗೂ, ಸಿಮೆಂಟು, ಕಲ್ಲುಹಾಸುಗಳ ಹಂಗಿಲ್ಲದ, ನಡೆದೂ ನಡೆದೂ ತಯಾರಾದ, ಒಂದು ರೀತಿಯಲ್ಲಿ ನಿಜವಾದ ಚಾರಣದ ಹಾದಿ. ಏರು ತೀರಾ ಕಡಿದಾದುದು ಅಲ್ಲದಿದ್ದರೂ ಈವರೆಗೆ ನೀವು ನಡೆದು ಬಂದಷ್ಟು ಸುಲಭದ್ದಂತೂ ಅಲ್ಲ. ಇಲ್ಲಿನ ಗುಡ್ಡಗಳ ಸಾಲಿನ ತುತ್ತ ತುದಿಯ ಸ್ಥಳವೇ ಚಂದ್ರಶಿಲಾ. ಕೊನೆಗೂ ಇಲ್ಲಿಗೆ ತಲುಪಿದಾಗ ಅಬ್ಬಾ ಎನಿಸುವಷ್ಟು ಆಯಾಸವಾದರೆ, ಇಲ್ಲಿಂದ ಕಾಣುವ ದೃಶ್ಯ ಅಬ್ಬಬ್ಬ ಎನಿಸುವಷ್ಟು ಅದ್ಭುತವಾಗಿರುತ್ತದೆ.

ವಾತಾವರಣ ತಿಳಿಯಾಗಿರುವ ದಿನಗಳಲ್ಲಿ ಇಲ್ಲಿಂದ ಕಣ್ಣು ಹಾಯಿಸಿದಷ್ಟು ದೂರಕ್ಕೂ ಬೆಟ್ಟಗಳೇ ಕಾಣಿಸುತ್ತವೆ. ಮಳೆಗಾಲದ ಮಳೆಯಲ್ಲಿ ತೊಯ್ದು ಹಸಿರು ಚಿಮ್ಮುವ ಬೆಟ್ಟಗಳು ದೂರಕ್ಕೆ ಹೋದಂತೆ ಕಡುಹಸಿರಾಗಿ ನೀಲಿಯಾಗಿ ಕೊನೆಗೆ ಆಗಸದೊಂದಿಗೆ ಸೇರಿ ಹೋಗುತ್ತದೇನೋ ಎನ್ನುವ ಭ್ರಮೆ ಮೂಡಿಸುತ್ತದೆ. ನಡೆದು ಬಂದ ದಿಕ್ಕಿನತ್ತ ನೋಡಿದರೆ ಮುತ್ತು ಪೋಣಿಸಿದಂತೆ ಕಾಣುವ ಹಿಮಶಿಖರಗಳ ಶ್ರೇಣಿ. ಇಷ್ಟು ಕಷ್ಟಪಟ್ಟು ಇಲ್ಲಿಯವರೆಗೆ ಬಂದುದಕ್ಕೆ ಸಾರ್ಥಕ ಎನ್ನಿಸುವಂಥ ದೃಶ್ಯಗಳಿವು.

ಚಂದ್ರಶಿಲಾದ ತುದಿಯಲ್ಲಿ ಪ್ರಮುಖವಾಗಿ ಕಾಣುವುದು ಪುಟ್ಟದೊಂದು ಗಂಗಾಮಂದಿರ. ಇದು ಇಲ್ಲಿನ ಏಕೈಕ ಕಟ್ಟಡ! ನೀರೇ ಇಲ್ಲದ ಈ ಬೆಟ್ಟದ ತುದಿಯಲ್ಲಿ ಗಂಗೆಯ ಮಂದಿರ ಏಕೆ ಬಂತೋ ಗೊತ್ತಾಗುತ್ತಿಲ್ಲ. ಇನ್ನೂ ಕೊಂಚ ಮುಂದೆ ಬೆಟ್ಟದ ಕಡಿದಾದ ಭಾಗದಲ್ಲಿ ಪಂಚಮುಖಿ ಶಿವಲಿಂಗವೊಂದು ಎದುರಿನ ವಿಶಾಲ ದೃಶ್ಯಕ್ಕೆ ಸಾಕ್ಷಿಯೆಂಬಂತೆ ಸ್ಥಾಪಿತವಾಗಿದೆ. ಇಲ್ಲಿಂದ ಕಾಣುವ ಪ್ರಕೃತಿಯ ನೋಟ ಚಾರಣಿಗರನ್ನು ಭಾವುಕರನ್ನಾಗಿ ಮಾಡುತ್ತದೆ. ಅವರವರ ಭಾವಕ್ಕೆ ತಕ್ಕಂತೆ ನೋಡುಗರ ಪ್ರತಿಕ್ರಿಯೆ ಇರುತ್ತದೆ. ಕೆಲವರು ಗಂಟೆಗಟ್ಟಲೆ ಧ್ಯಾನಸ್ಥರಾದರೆ ಮೊದಲ ಬಾರಿ ಬಂದ ಕೆಲ ವಿದೇಶಿಯರು, ಶಿವನನ್ನೇ ಕಂಡಷ್ಟು ಭಾವೋದ್ವೇಗದಿಂದ ಒಬ್ಬರನ್ನೊಬ್ಬರು ಅಪ್ಪಿಕೊಂಡು ಆನಂದಬಾಷ್ಪ ಸುರಿಸುತ್ತಾರೆ. ಆಟ್ಟಹಾಸಗೈಯುತ್ತಾ ತಮ್ಮ ಜರ್ಕಿನ್, ಸ್ವೆಟರ್ ಬಿಚ್ಚಿ ಗಾಳಿಗೆ ತಿರುಗಿಸುತ್ತಾ ವಿವಿಧ ಭಂಗಿಗಳಲ್ಲಿ ಫೋಟೊ ತೆಗೆಸಿಕೊಳ್ಳುವವರೂ ಇದ್ದಾರೆ. ಪುರಾಣದ ಕಥೆಗಳ ಪ್ರಕಾರ ಇಲ್ಲಿ ಚಂದ್ರನು ಧ್ಯಾನಕ್ಕೆ ಕುಳಿತಿದ್ದ ಎನ್ನುತ್ತಾರೆ.

ಶ್ರೀರಾಮಚಂದ್ರನೂ ಇಲ್ಲಿ ತಪಸ್ಸನ್ನಾಚರಿಸಿದ್ದ ಎನ್ನಲಾಗುತ್ತದೆ. ಒಟ್ಟಿನಲ್ಲಿ ಇದು ಧ್ಯಾನಸ್ಥರಾಗಲು ಪ್ರಶಸ್ತವಾದ ಸ್ಥಳವಂತೂ ಹೌದು.

ತುಂಗನಾಥಕ್ಕೆ ಹೋಗುವ ದಾರಿ
ತುಂಗನಾಥಕ್ಕೆ ಹೋಗುವ ದಾರಿ

ಬನ್ನಿ ಕೆಳಗಿಳಿಯೋಣ

ಹಿಮಾಲಯದಲ್ಲಿ ಮಧ್ಯಾಹ್ನದ ಬಳಿಕ ಹವೆಯ ಬಗ್ಗೆ ಹೀಗೇ ಎಂದು ಹೇಳಲಾಗುವುದಿಲ್ಲ. ಅಚಾನಕ್ಕಾಗಿ ಮೋಡ ಮುಸುಕಿ ಮಳೆ ಬಂದರೂ ಬರಬಹುದು. ಕೆಸರಾದರೆ ಅಲ್ಲಲ್ಲಿ ಜಾರುವ ಈ ಚಂದ್ರಶಿಲೆಯ ಇಳಿಜಾರು ಹಾದಿಯನ್ನೊಮ್ಮೆ ಇಳಿದು ತುಂಗನಾಥ ಸೇರೋಣ.
ತುಂಗನಾಥದಲ್ಲಿ ಬೇಕಿದ್ದರೆ ಮತ್ತೊಮ್ಮೆ ಜಗತ್ತಿನ ಅತೀ ಎತ್ತರದ ಆಲಯದಲ್ಲಿ ಶಿವನನ್ನು ಮತ್ತೊಮ್ಮೆ ಭೇಟಿಯಾಗಿ. ನಾವೇನೂ ವಾರಕ್ಕೊಮ್ಮೆ ಇಲ್ಲಿ ಬರುವವರಲ್ಲವಲ್ಲ!

ಮನಸ್ಸಿಲ್ಲದ ಮನಸ್ಸಿನಿಂದ ಚೋಪ್ಟಾದ ಕಡೆ ಇಳಿಯಲು ಪ್ರಾರಂಭಿಸಿದರೂ ಇಲ್ಲಿನ ಅದ್ಭುತ ಅನುಭವ ನಮ್ಮ ಮನದಿಂದ ಇಳಿಯಲು ಕೇಳುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT