ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನ್ಯಸಂಪತ್ತಿನ ‘ಭದ್ರಾ’ ನೆಲೆಯಲ್ಲಿ

Last Updated 10 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ಮುಗಿಲು ಚುಂಬಿಸುವ, ಬೃಹದಾಕಾರದ ಮರಗಳು. ದಪ್ಪ ಹಾಗೂ ಆಳೆ­ತ್ತ­ರ­ವಾಗಿ ಬೆಳೆ­ದು ನಿಂತ ಬಿದಿ­ರು, ಕಾಡಿನ ಮೌನವನ್ನು ಭೇದಿಸುವ ಹಕ್ಕಿಗಳ ಕಲರವ, ಕಣ್ಣೆದುರಿಗೆ ಚಂಗನೆ ಹಾರಿ ಹೋಗುವ ಜಿಂಕೆಗಳು – ನಾಲ್ಕು ನೂರ ತೊಂಬತ್ತೆರಡು ಚ.ಕಿ.ಮೀದಷ್ಟು ವಿಸ್ತಾರವಿರುವ ಭದ್ರಾ ವನ್ಯಜೀವಿ ಅಭಯಾರಣ್ಯದಲ್ಲಿ ಹೆಜ್ಜೆ ಹಾಕುತ್ತಿದ್ದಾಗ, ಹೀಗೆ ಕಾನನದ ಸಂಪತ್ತು ಕಣ್ಣೆದುರು ಪರದೆಯಂತೆ ತೆರೆದುಕೊಂಡಿತು.

ಹುಲಿಯ ಸಂರಕ್ಷಣೆಗಾಗಿ ಸರ್ಕಾರ ಗುರುತಿಸಿರುವ ಈ ಭದ್ರಾ ರಕ್ಷಿತಾರಣ್ಯ ಇರುವುದು ಪಶ್ಚಿಮಘಟ್ಟದ ಸಾಲಿನಲ್ಲಿ. ಕಾಫಿಯ ನಾಡು ಚಿಕ್ಕ­ಮ­ಗ­ಳೂರು ಜಿಲ್ಲೆ ವ್ಯಾಪ್ತಿಯಲ್ಲಿರುವ ಈ ತಾಣ ನಿಸರ್ಗ ಪ್ರವಾ­ಸೋ­ದ್ಯಮದ ಪ್ರಮುಖ ಸ್ಥಳಗಳಲ್ಲಿ ಪ್ರಮುಖವಾದದು. ಈ ತಾಣದ ಮೊದಲ ಹೆಸರು ‘ಜಾಗರ ಕಣಿವೆ’. 1974 ರಲ್ಲಿ ಭದ್ರಾ ಅರಣ್ಯವೆಂದು ಮರು ನಾಮ­ಕ­ರಣವಾಯಿತು. 1998 ರಲ್ಲಿ ಹುಲ್ಲಿ
ಸಂರ­ಕ್ಷಿತ ಪ್ರದೇಶ ಎಂದು ಘೋಷಿ­ಸ­ಲ್ಪ­ಟ್ಟಿದೆ.

ಜಿಲ್ಲಾ ಕೇಂದ್ರ ಚಿಕ್ಕ­ಮ­ಗ­ಳೂ­ರಿ­ನಿಂದ 38 ಕಿ.ಮೀ.ದೂರ­ದಲ್ಲಿ ಇರುವ ಭದ್ರಾ ಅಭ­ಯಾ­ರಣ್ಯ ಅನೇಕ ಪ್ರಾಣಿ, ಪಕ್ಷಿ­ಗಳ ಆವಾ­ಸ­ಸ್ಥಾನ. ಪ್ರಮು­ಖ­ವಾಗಿ ಕಾಡೆಮ್ಮೆ, ಹುಲಿ, ಆನೆ, ಚಿರತೆ, ಜಿಂಕೆ ಸೇರಿ­ದಂತೆ ನಾನಾ ಬಗೆಯ ಪ್ರಾಣಿ­ಗಳು ಇಲ್ಲಿ ನೆಲೆಸಿವೆ. ಅಪ­ರೂ­ಪದ ಪುನುಗು ಬೆಕ್ಕು ಇಲ್ಲಿನ ಪ್ರಮುಖ ಆಕ­ರ್ಷಣೆ. ವರ್ಷ­ಪೂರ್ತಿ ಹರಿಯುವ ಸೋಮ­ವಾ­ಹಿನಿ ನದಿ ಪ್ರಾಣಿ­ಗ­ಳಿಗೆ ಪ್ರಮುಖ ನೀರಿನ ಆಸರೆ. ನಿಸರ್ಗ ಪ್ರವಾ­ಸೋ­ದ್ಯ­ಮಕ್ಕೆ ಹೆಸರು ಪಡೆದ ಭದ್ರಾ ಅಭಯಾರಣ್ಯ ಮುತ್ತೋಡಿ, ಹೆಬ್ಬೆ, ಲಕ್ಕ­ವಳ್ಳಿ, ತಣಿ­ಗೆ­ಬೈಲು ವಲ­ಯ­ಗ­ಳಾಗಿ ವಿಂಗ­ಡಣೆಯಾಗಿದೆ.

ಲಕ್ಕ­ವಳ್ಳಿ ಹಾಗೂ ಮುತ್ತೋಡಿ ವಲ­ಯ­ಗ­ಳಲ್ಲಿ ಮಾತ್ರ ಪ್ರವಾ­ಸಿ­ಗ­ರಿಗೆ ಪ್ರವೇಶ. ಚಿಕ್ಕಮಗ­ಳೂರು ಮಲ್ಲಂ­ದೂರು ಮಾರ್ಗವಾಗಿ ಮುತ್ತೋಡಿ ಪ್ರವೇಶಿಸಬಹುದು. ಲಕ್ಕ­ವಳ್ಳಿ ಜಂಗಲ್‌ ಲಾಡ್ಜ್ ಬಳಿ­ಯಿಂದ ಅಭಯಾರಣ್ಯ ಪ್ರವೇ­ಶಿಸಿದರೆ, ದಟ್ಟ ಅರಣ್ಯವನ್ನು ಹೊಕ್ಕ ಅನು­ಭವ ನಿಮ್ಮದಾಗುತ್ತದೆ. ಬೆಳಿಗ್ಗೆ ಹಾಗೂ ಸಂಜೆ ಸುತ್ತಾಡಿದರೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಣಿಗಳನ್ನು ನೋಡಬಹುದು. ಮರ­ಗ­ಳನ್ನು ಸೀಳುತ್ತಾ ನಿಂತ ಆನೆ­ಗಳು, ಕಾಡೆಮ್ಮೆ, ನವಿ­ಲಿನ ನರ್ತನ ಕಾಣಬಹುದು. ಅದೃಷ್ಟ ಚೆನ್ನಾಗಿದ್ದರೆ ಹುಲಿಯ ದರ್ಶ­ನವೂ ಆದೀತು. ಕಡು ಬೇಸಿಗೆಯ ದಿನ­ಗ­ಳಲ್ಲಿ ಬೆಂಕಿ­ಯಿಂದ ವನ್ಯ ಸಂಪ­ತ್ತನ್ನು ರಕ್ಷಿ­ಸುವ ಉದ್ದೇ­ಶ­ದಿಂದ ಪ್ರವಾ­ಸಿ­ಗರ ಪ್ರವೇಶ ನಿರ್ಬಂಧಿಸಲಾಗಿರುತ್ತದೆ.

ಈ ವನ್ಯಜೀವಿಧಾಮದಲ್ಲಿ ಎಲ್ಲೆಂದರಲ್ಲಿ ಸುತ್ತಾಡುವ ಹಾಗಿಲ್ಲ. ಅರಣ್ಯ ಇಲಾಖೆ ನಿಗ­ದಿ­ಪ­ಡಿ­ಸಿದ ಮಾರ್ಗ­ದಲ್ಲಿ ಅರಣ್ಯ ಸಿಬ್ಬಂದಿ ಬೆಂಗಾ­ವ­ಲಿ­ನಲ್ಲಿ ಈ ಕಾಡು ಸುತ್ತಬೇಕು. ಕಾಡು ಸುತ್ತಾಡುವ ಪ್ರವಾ­ಸಿ­ಗ­ರಿಗೆ ನಿರ್ದಿಷ್ಟ ದರ ನಿಗದಿಪಡಿ ಸಲಾಗಿದೆ. ಶುಲ್ಕದ ಜತೆಗೆ ಅರಣ್ಯ ಇಲಾ­ಖೆಯ ಪೂರ್ವಾ­ನು­ಮ­ತಿಯೂ ಅಗತ್ಯ.

ಮತ್ತೋಡಿ­ಯಲ್ಲಿ ಉಳಿ­ದು­ಕೊ­ಳ್ಳಲು ಸೂಕ್ತ ಕೊಠಡಿ, ಕಾಟೇಜ್ ವ್ಯವಸ್ಥೆ ಇದೆ. ಊಟೋ­ಪ­ಚಾ­ರಕ್ಕೆ ಅಗತ್ಯ ಇರುವ ವಸ್ತು­ಗ­ಳನ್ನು ತೆಗೆದುಕೊಂಡು ಹೋದರೆ ರುಚಿ­ಕರ ಅಡು­ಗೆ­ಯನ್ನು ತಯಾರಿಸಿ ಕೊಡುವ ಸೌಲ­ಭ್ಯವೂ ಇದೆ. ಪ್ರವಾ­ಸಿ­ಗರು ತಮ್ಮ ತಿನಿಸುಗಳನ್ನು ಕೊಂಡೊ­ಯ್ಯಲು ಅಡ್ಡಿ­ಯಿಲ್ಲ.

ಈ ಅಭಯಾರಣ್ಯಕ್ಕೆ ಗಂಗೆ­ಗಿರಿ, ಹೆಬ್ಬೆ­ಗಿರಿ, ಮುಳ್ಳ­ಯ್ಯ­ನ­ಗಿರಿ, ಬಾಬಾಬು­ಡನ್‌ಗಿರಿ ಶಿಖ­ರ­ಗಳು ಕಾವ­ಲು­ಗೋ­ಡೆ­ಯಂತೆ ನಿಂತಿವೆ. ಈ ಗಿರಿಗಳ ಮೇಲೆ ನಿಂತರೆ ಸುತ್ತಲೂ ಮುಗಿ­ಲೆ­ತ್ತ­ರಕ್ಕೆ ಬೆಳೆ­ದು­ನಿಂತ ಹಸಿರ ರಾಶಿ ಕಣ್ಮನ ತುಂಬಿ­ಕೊ­ಳ್ಳು­ತ್ತದೆ. ಪ್ರಶಾಂತ ಪರಿ­ಸ­ರ­ದಲ್ಲಿ ಹೆಜ್ಜೆಗ­ಳನ್ನು ಹಾಕುತ್ತಾ ಸಾಗಿ­ದರೆ ಹಕ್ಕಿ­ಗಳ ಕಲ­ರವ ಸಂಗೀ­ತದ ರಸ­ದೌ­ತಣ ಉಣ­ಬ­ಡಿ­ಸು­ತ್ತದೆ.

ಹೆಬ್ಬೆ ವಲ­ಯ­ದಲ್ಲಿ ಭದ್ರಾ ನದಿಯ ಹಿನ್ನೀರು, ಅದ­ರಲ್ಲಿ ದೋಣಿ ಮೂಲಕ ಸಾಗುವ ಪರಿ ಅದ್ಭುತ. ಕಾಡು, ವನ್ಯಜೀವಿ ಸಂಪತ್ತು ಕುರಿತು ಅಧ್ಯಯನ ಮಾಡಲು ಇದೊಂದು ವಿಶ್ವ­ವಿ­ದ್ಯಾ­ಲಯದಂತೆ ನೆರವಾಗುತ್ತದೆ. ಹೀಗಾಗಿ ಪರಿಸರ ಪ್ರೇಮಿಗಳಿಗೆ ಈ ಜಾಗ ಗ್ರಂಥ ಬಂಡಾರ.

ಭದ್ರಾ ಅರಣ್ಯ ನೋಡಿಕೊಂಡು, ಚಿಕ್ಕಮಗಳೂರು ತಲುಪಿ, ಅಲ್ಲಿಂದ ಮುಳ್ಳ­ಯ್ಯ­ನ­ಗಿರಿ, ಬಾಬಾ­ಬು­ಡನ್‌ಗಿರಿಯನ್ನೂ ನೋಡಿಬರಬಹುದು.

ಲಕ್ಕ­ವ­ಳ್ಳಿ­ಯಲ್ಲಿ ಭದ್ರಾ ಜಲಾ­ಶಯ ಸಮೀ­ಪದ ಪ್ರವಾಸಿ ತಾಣ. ಇಲ್ಲಿ ಉಳಿ­ದು­ಕೊ­ಳ್ಳಲು ಸರ್ಕಾರಿ ವಸತಿ ಗೃಹ (08261 -257121 ) ಅಥವಾ ಕಿಸೆ ಗಟ್ಟಿ ಇದ್ದ­ವರು ಜಂಗಲ್ ರೆಸಾರ್ಟ್ (08261 215425)ನಲ್ಲೂ ಉಳಿ­ಯ­ಬ­ಹುದು. ಚಿಕ್ಕ­ಮ­ಗ­ಳೂ­ರಿ­ನಲ್ಲಿ ಭದ್ರಾ ವನ್ಯ­ಜೀವಿ ವಲ­ಯದ ಸಂಪರ್ಕ ಸಂಖ್ಯೆ 08262-234904.

ಹೋಗುವುದು ಹೇಗೆ ?

ಚಿಕ್ಕ­ಮ­ಗ­ಳೂ­ರಿಗೆ ರಾಜ್ಯದ ಬಹು­ತೇಕ ಎಲ್ಲ ಜಿಲ್ಲೆ­ಗ­ಳಿಂದ ಬಸ್ಸಿನ ಸೌಲಭ್ಯ ಇದೆ. ರೈಲಿನ ಮೂಲಕ ಬರುವವರು ಕಡೂ­ರಿಗೆ ಬಂದು ಚಿಕ್ಕಮಗಳೂರು ತಲುಪಬಹುದು. ಶಿವಮೊಗ್ಗ– ತರೀಕರೆ ಕಡೆಯಿಂದ ಬರುವ ಪ್ರವಾಸಿಗರಿಗೆ ಲಕ್ಕ­ವಳ್ಳಿ ಮೂಲಕ ಅರಣ್ಯ ಪ್ರವೇಶಿಸಬಹುದು.

ಚಿಕ್ಕ­ಮ­ಗ­ಳೂ­ರಿ­ನಲ್ಲಿ ವಾಸ್ತವ್ಯವಿದ್ದು ಭದ್ರಾ ಅಭ­ಯಾರ­ಣ್ಯಕ್ಕೆ ಬೆಳಿಗ್ಗೆ ಹೋಗಿ ಸಂಜೆಗೆ ಹಿಂದಿರುಗಲು ಅವಕಾಶವಿದೆ. ಹಾಗೆಯೇ, ಜಂಗಲ್‌ ಲಾಡ್ಜ್‌ ನಲ್ಲಿ ಉಳಿಯುವ ಆಸಕ್ತಿ ಇರುವವರಿಗೂ, ಕಾಡಿನೊಳಗೆ ಅವಕಾಶವಿದೆ. ಅದಕ್ಕೆ ಇಲಾಖೆಯ ಪೂರ್ವಾನುಮತಿ ಪಡೆಯಬೇಕು.

(ಚಿತ್ರಗಳು : ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT