ಭಾನುವಾರ, ಮಾರ್ಚ್ 26, 2023
23 °C

ಪ್ರವಾಸ: ವಿಸ್ಮಯ ವಿಂಡ್ಸರ್ ಕ್ಯಾಸಲ್

ಪುಷ್ಪಾ ಮೋಹನ ಮುದಕವಿ Updated:

ಅಕ್ಷರ ಗಾತ್ರ : | |

ಬ್ರಿಟನ್ ರಾಣಿ ಎರಡನೆಯ ಎಲಿಜಬೆತ್‌ಳ ನೆಚ್ಚಿನ ವಾರಾಂತ್ಯದ ನಿವಾಸವಾಗಿತ್ತು ಈ ವಿಸ್ಮಯ ವಿಂಡ್ಸರ್ ಕ್ಯಾಸಲ್. ಎಪ್ಪತ್ತು ವರ್ಷಗಳ ಸುದೀರ್ಘ ಆಳ್ವಿಕೆಯ ನಂತರ ಕಳೆದ ಸೆಪ್ಟೆಂಬರ್‌ 8ರಂದು ನಿಧನಳಾದ ರಾಣಿ ಶಾಶ್ವತವಾಗಿ ಇಲ್ಲಿಯೇ ವಿರಮಿಸಿದಳು.

ಬೇಸಿಗೆಯಲ್ಲಿ ಲಂಡನ್ ವಾಸ್ತವ್ಯದ ಸಮಯದಲ್ಲಿ ಒಂದು ಭಾನುವಾರ ಮಗಳೊಟ್ಟಿಗೆ ನಾವು ವಿಂಡ್ಸರ್ ಕ್ಯಾಸಲ್ ವೀಕ್ಷಣೆಗೆ ಹೊರಟು, ಲಂಡನ್ನಿನಿಂದ ಸುಸಜ್ಜಿತ ರೈಲಿನಲ್ಲಿ 11 ಗಂಟೆಗೆ ವಿಂಡ್ಸರ್‌ಗೆ ಬಂದಿಳಿದೆವು. ಲಂಡನ್‌ನಿಂದ ಸುಮಾರು 22 ಮೈಲಿಗಳ ಅಂತರದ ಬರ್ಕ್‌ಶೈರ್ ಪ್ರಾಂತ್ಯದ ವಿಂಡ್ಸರ್ ಎಂಬಲ್ಲಿದೆ ಈ ರಾಜನಿವಾಸ.

ಘನಗಾಂಭೀರ್ಯದ ದ್ಯೋತಕವಾದ ಕೋಟೆ, ಗೋಡೆ, ಗೋಪುರ, ಮೋಹಕವಾದ ಸುಂದರ ವಾಸ್ತುಶಿಲ್ಪ ಪ್ರವಾಸಿಗರನ್ನು ಚುಂಬಕದಂತೆ ಸೆಳೆಯುತ್ತದೆ. ಪ್ರತಿವರ್ಷ 15 ಲಕ್ಷ ಪ್ರವಾಸಿಗರು ಭೇಟಿ ನೀಡುವ ಆಕರ್ಷಣೀಯ ತಾಣ. ಈ ಕೋಟೆಯ ಸಾಮ್ರಾಜ್ಞಿಯಾಗಿದ್ದ ರಾಣಿ ಎಲಿಜಬೆತ್–2 ಒಳಗೊಂಡಂತೆ ಇಂಗ್ಲೆಂಡ್‌ನ 39 ಅಧೀಶ್ವರರ ನಿವಾಸ.

ರಾಣಿಯ ಮೆಚ್ಚಿನ ವಾರಾಂತ್ಯದ ವಾಸಸ್ಥಳ ಈ ವಿಂಡ್ಸರ್ ಕ್ಯಾಸಲ್. ಈ ಕೋಟೆಯ ಗೋಪುರದ ಮೇಲೆ ರಾಜಧ್ವಜ ಹಾರಾಡುತ್ತಿದ್ದರೆ ರಾಣಿ ವಾಸವಿರುವ ಕುರುಹು. ಸುಸಜ್ಜಿತ ಕೋಟೆಯ ಕಟ್ಟಡದಲ್ಲಿ ಸಾವಿರ ಕೋಣೆಗಳಿವೆ. ರಾಜವೈಭವಕ್ಕೆ ತಕ್ಕಂತೆ ಪೀಠೋಪಕರಣಗಳು, ವರ್ಣಚಿತ್ರಗಳು ಇಲ್ಲಿವೆ. ವೈಭವೋಪೇತ ರಾಜನಿವಾಸವಿದು. ಇಂಗ್ಲೆಂಡ್‌ ಅನ್ನು 1೦66ರಲ್ಲಿ ಗೆದ್ದ ವಿಲಿಯಮ್–1 ಎಂಬ ಮೊದಲ ನಾರ್ಮನ್ ರಾಜ ಈ ಕೋಟೆಯ ನಿರ್ಮಾತೃ. ಥೇಮ್ಸ್ ನದಿಯ ದಕ್ಷಿಣ ತಟದಲ್ಲಿ 13 ಎಕರೆ ಪ್ರದೇಶದ ಹುಲ್ಲುಹಾಸಿನ ಮಧ್ಯೆ ಸ್ಥಿತವಾದ ಈ ಕೋಟೆ ಮೂಲತಃ ನಾರ್ಮನ್ ಶೈಲಿಯದು. ಮಣ್ಣಿನ ದಿಬ್ಬದ ಮೇಲೆ ಕಟ್ಟಿಗೆ ಅಥವಾ ಕಲ್ಲಿನ ವರ್ತುಲಾಕಾರದ ರಚನೆ, ಸುತ್ತುವರಿದ ಪ್ರಾಕಾರದ ಸುತ್ತಲೂ ರಕ್ಷಣಾ ಕಾರಣಗಳಿಗಾಗಿ ಕಂದಕ ನಿರ್ಮಿಸಲಾಗಿದೆ. ಮೂಲತಃ ಮರದ ರಚನೆ ನಂತರ ಬಂದ ರಾಜ ರಾಣಿಯರ ಕಾಲದಲ್ಲಿ ಕಲ್ಲಿನ ರಚನೆಯೊಂದಿಗೆ ಇನ್ನಷ್ಟು ಆಲಂಕಾರಿಕವಾಗಿ ಮಾರ್ಪಾಡಾಗುತ್ತ ಬಂದಿದೆ. ಅಮೂಲ್ಯ ಕಲಾಕೃತಿಗಳು ಮಾತ್ರವಲ್ಲದೆ ವಿಶ್ವದ ಮೂಲೆ ಮೂಲೆಗಳಿಂದ ಬ್ರಿಟಿಷರು ಹೊತ್ತು ತಂದ ಉತ್ಕೃಷ್ಟ ವಸ್ತುಗಳನ್ನು ಈ ಅರಮನೆಯಲ್ಲಿ ಕಾಣಬಹುದು.

ವಿಂಡ್ಸರ್ ಕೋಟೆಯ ಮಧ್ಯದ ಸಿಲಿಂಡರಾಕಾರದ ಎತ್ತರದ ಗೋಪುರ ಸುಮಾರು ಮೈಲಿಗಳ ಅಂತರದಿಂದ ಗೋಚರಿಸುತ್ತದೆ. ಗೋಪುರದ ಇಕ್ಕೆಲಗಳಲ್ಲಿ ಚತುರ್ಭುಜಾಕೃತಿಯ ಸಂಕೀರ್ಣ ಕಟ್ಟಡಗಳಿವೆ. ಗೋಪುರದ ಪಶ್ಚಿಮ ಕಟ್ಟಡವನ್ನು ಲೋವರ್‌ ವಾರ್ಡ್‌ ಎಂದೂ ಪೂರ್ವಕ್ಕಿರುವುದನ್ನು ಅಪ್ಪರ್‌ ವಾರ್ಡ್‌ ಎಂತಲೂ ಕರೆಯಲಾಗುತ್ತದೆ.

ಲೋವರ್‌ ವಾರ್ಡ್‌ನಲ್ಲಿ 1348ರಲ್ಲಿ ಎಡ್ವರ್ಡ್‌–3 ನಿರ್ಮಿಸಿದ ಗೋಥಿಕ್ ಶೈಲಿಯ ವಾಸ್ತುವಿನಿಂದ ಕೂಡಿದ ಸೇಂಟ್‌ ಜಾರ್ಜ್ಸ್‌ ಚಾಪೆಲ್‌ ಮತ್ತು ಅಲ್ಬರ್ಟ್ ಮೆಮೋರಿಯಲ್ ಚಾಪೆಲ್‌ಗಳಿವೆ. ಸೇಂಟ್‌ ಜಾರ್ಜ್ಸ್‌ ಚಾಪೆಲ್‌ನಲ್ಲಿ ಇಂಗ್ಲೆಂಡ್‌ನ ಹತ್ತು ಅಧೀಶ್ವರರ ಸಮಾಧಿಗಳಿವೆ. ಶತಮಾನಗಳಿಂದ ರಾಜಮನೆತನದ ಪ್ರಾರ್ಥನಾ ಮಂದಿರವಾದ ಈ ಚಾಪೆಲ್‌ನಲ್ಲಿ ಮದುವೆಗಳೂ ಜರುಗುತ್ತವೆ. ಅಪ್ಪರ್‌ ವಾರ್ಡ್‌ನಲ್ಲಿ ರಾಜರ ವೈಭವೋಪೇತ ಅಪಾರ್ಟ್ಮೆಂಟ್‌ಗಳಿದ್ದು ಒಳಮಾಳಿಗೆ ಸುಂದರ ಪೇಂಟಿಂಗ್‌ಗಳಿಂದ ಅಲಂಕೃತಗೊಂಡಿದೆ. ಗ್ರ್ಯಾಂಡ್‌ ರೆಸಿಪ್ಶನ್‌ ರೂಮ್‌ನಲ್ಲಿ ರಾಣಿ ವಿಕ್ಟೋರಿಯಾಳ ಖಾಸಗಿ ಪ್ರಾರ್ಥನಾ ಮಂದಿರವಿದೆ. ಪ್ರಸಿದ್ಧ ಕಲಾವಿದರ (ಲಿಯೋನಾರ್ಡೊ ಡಾ ವಿಂಚಿ, ಮೈಕೆಲೆಂಜೆಲೊ, ರಾಫೆಲ್) ಕಲಾಕೃತಿಗಳಿಂದ ಗೋಡೆಗಳು ಅಲಂಕೃತಗೊಂಡು ಪ್ರವಾಸಿಗರ ಮನಸೆಳೆಯುತ್ತವೆ. ನಮ್ಮ ಭಾರತದ ಸುಂದರ ರತ್ನಗಂಬಳಿ ರಾಣಿ ವಿಕ್ಟೋರಿಯಾಳ ಪಟ್ಟಾಭಿಷೇಕದ ಸುವರ್ಣ ಮಹೋತ್ಸವದ ಅಂಗವಾಗಿ ಕೊಟ್ಟಿದ್ದು, ಅಲ್ಲಿನ ಇನ್ನೊಂದು ವಿಶೇಷ ಆಕರ್ಷಣೆ. ಭಾರೀ ಗಾತ್ರದ ಜೋಡಣೆರಹಿತ ರತ್ನಗಂಬಳಿ ಎಂಬುದು ನಮ್ಮ ಹೆಮ್ಮೆ. 1992ರಲ್ಲಾದ ಅಪಘಾತದಲ್ಲಿ ಕೆಲ ವಸ್ತುಗಳು, ಪೀಠೋಪಕರಣಗಳು, ಕೋಣೆಯ ಭಾಗಗಳು ನಾಶವಾದರೂ ಅದೃಷ್ಟವಶಾತ್ ರತ್ನಗಂಬಳಿಯನ್ನು ರಕ್ಷಿಸಲಾಯಿತು. ಅದನ್ನು ಸುತ್ತಲು 50 ಜನ ಬೇಕಾಯಿತಂತೆ. ನಾಶವಾದವುಗಳನ್ನು ನವೀಕರಿಸಿ ಪುನಃ 1997ರಲ್ಲಿ ಸಾರ್ವಜನಿಕರಿಗಾಗಿ ಪ್ರದರ್ಶನಕ್ಕೆ ಇಡಲಾಯಿತು.

ವಿಂಡ್ಸರ್ ಕ್ಯಾಸಲ್‌ನ ಮತ್ತೊಂದು ಪ್ರಮುಖ ಆಕರ್ಷಣೆ ರಾಣಿ ಮೇರಿಯ ಬೊಂಬೆ ಮನೆ. ಜಗತ್ಪ್ರಸಿದ್ಧವಾದದ್ದು. ಈಕೆ ಐದನೆಯ ಕಿಂಗ್ ಜಾರ್ಜ್‌ನ ಪತ್ನಿ. ರಾಣಿ ಎಲಿಜಬೆತ್‌ಳ ಅಜ್ಜಿ. 1921ರಿಂದ 1924ರ ಅವಧಿಯಲ್ಲಿ ಆಗಿನ ಪ್ರಸಿದ್ಧ ವಾಸ್ತುಶಾಸ್ತ್ರಜ್ಞ ಎಡ್ವಿನ್ ಲುಟೆನ್ಸ್‌ನಿಂದ ರಚಿತವಾದ ಇದನ್ನು ಬ್ರಿಟಿಷ್ ಜನತೆ ರಾಣಿಗಾಗಿ ಕೊಡುಗೆಯಾಗಿ ಕೊಟ್ಟದ್ದು. ಅದ್ಭುತ ಸೂಕ್ಷ್ಮ ಆಕಾರದ ಉತ್ಕೃಷ್ಟ ವಸ್ತುಗಳ ಭವ್ಯ ಮನೆ. 1:12 ಸ್ಕೇಲ್ ಪ್ರಮಾಣದಲ್ಲಿ ರಚಿಸಲಾದ ಸಾವಿರಾರು ಸಂಗತಿಗಳನ್ನೊಳಗೊಂಡ ವಸ್ತುವಿನ್ಯಾಸಗಳ ಮಿನಿಯೇಚರ್ ಆಕೃತಿಗಳನ್ನು ಅಲ್ಲಿ ಕಾಣಬಹುದಾಗಿದೆ ಉದಾ: ಪಿಠೋಪಕರಣ, ಸುಸಜ್ಜಿತ ಸ್ನಾನದ ಕೋಣೆ, ವಾಚನಾಲಯ, ಅಲ್ಲಿ ಪ್ರಸಿದ್ಧ ಲೇಖಕರಾದ ಆರ್ಥರ್ ಕಾನನ್ ಡಾಯಲ್, ರುಡ್ಯಾರ್ಡ್‌ ಕಿಪ್ಲಿಂಗ್‌ ಮುಂತಾದವರ ಸುಮಾರು 700 ಮಿನಿಯೇಚರ್ ಪುಸ್ತಕಗಳಿವೆ. ಕಾರು ಗ್ಯಾರೇಜ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕಾರುಗಳ ಸೂಕ್ಷ್ಮ ಆಕೃತಿಗಳಿವೆ. ಹೀಗೆ ಹಲವಾರು ಪ್ರತಿಕೃತಿಗಳ ಈ ಬೊಂಬೆ ಮನೆಯ ಅಚ್ಚರಿಯನ್ನು ನೋಡಿಯೇ ಅನುಭವಿಸಬೇಕು.

ಚೇಂಜಿಂಗ್ ದ ಗಾರ್ಡ್ಸ್‌ ಇಲ್ಲಿ ನೋಡತಕ್ಕ ಅಪರೂಪದ ವಿದ್ಯಮಾನ. ಬಣ್ಣ ಹಾಗೂ ವಾದ್ಯ ಶಬ್ದಗಳ ಅಪೂರ್ವ ಸಮ್ಮಿಲನದ ಆ ಸೈನಿಕರ ನಡೆ ಮೈನವಿರೇಳಿಸುವ ಅದ್ಭುತ ಅನುಭವ. 45 ನಿಮಿಷಗಳ ಈ ಪ್ರದರ್ಶನದಲ್ಲಿ ರಕ್ಷಣಾದಳದವರ ಕರ್ತವ್ಯ ಹಸ್ತಾಂತರದ ಕಾರ್ಯಕ್ರಮ ಜರುಗುವುದು. ಇದು ಬಹುತೇಕ ಸೋಮವಾರ, ಬುಧವಾರ, ಶುಕ್ರವಾರ, ಶನಿವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮ. ಪ್ರವಾಸದ ಮೊದಲು ಒಮ್ಮೆ ಖಚಿತಪಡಿಸಿಕೊಂಡಲ್ಲಿ ಈ ಪ್ರದರ್ಶನ ವೀಕ್ಷಿಸಲು ಸಾಧ್ಯ.

ಇಷ್ಟೆಲ್ಲಾ ಸುತ್ತಿ ಸುಸ್ತಾದರೂ ಬಹು ಸುಂದರವಾದ ಕೋಟೆ, ಸೊಬಗಿನಿಂದ ಕಂಗೊಳಿಸುವ ವಿಶಾಲವಾದ ಹಜಾರಗಳು, ಅವುಗಳನ್ನು ಅಲಂಕರಿಸಿರುವ ಅವರ ಕೌಶಲ, ಸಾರ್ವಜನಿಕರಿಗೆ ಸದಾ ತೆರೆದಿಟ್ಟು ನಿರ್ವಹಿಸುವ ವೈಖರಿ ಅಲ್ಲಿಂದ ಕಾಲ್ಕೀಳದಂತೆ ಮಾಡುತ್ತವೆ. ಮುಚ್ಚುವ ಸಮಯವಾದ್ದರಿಂದ ಹೊರಬರುವುದು ಅನಿವಾರ್ಯ. ಹೊಟ್ಟೆ ಚುರುಗುಟ್ಟುತ್ತಿದ್ದರಿಂದ ಸ್ಯಾಂಡ್‌ವಿಚ್, ಕಾಫಿ ಸೇವಿಸಿ ಉಲ್ಲಸಿತರಾಗಿ ಬಂದಂತೆಯೇ ಪುನಃ ರೈಲಿನಲ್ಲಿ ಲಂಡನ್‌ಗೆ ವಾಪಸಾದೆವು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು