ಬುಧವಾರ, ನವೆಂಬರ್ 30, 2022
16 °C

ಪ್ರವಾಸ– ವಿಂಡ್‌ಮಿಲ್‌ ವಿಲೇಜ್‌:ಭೂಲೋಕದ ಸ್ವರ್ಗ ನೆದರ್ಲೆಂಡ್ಸ್‌ನ ಝಾನ್ಸ ಶಾನ್ಸ್‌

ಪ್ರಹ್ಲಾದ ಪರ್ವತಿ Updated:

ಅಕ್ಷರ ಗಾತ್ರ : | |

Prajavani

ನೆದರ್ಲೆಂಡ್ಸ್‌ನ ಯಾವುದೇ ಊರಿಗೆ ಹೋದರೂ ನೀವು ನದಿ, ಕಾಲುವೆ ಕಾಣುವುದಷ್ಟೇ ಅಲ್ಲ, ಅವುಗಳ ಮೂಲಕವೇ ಪ್ರವಾಸ ಸಾಗುತ್ತದೆ. ನೀರಿನ ಸಮೃದ್ಧ ಸೌಲಭ್ಯವಿರುವ ಈ ದೇಶದ ಜಲಸಾರಿಗೆ ನಿರ್ವಹಣೆ ಹಾಗೂ ಅದರ ಬಳಕೆಯ ವಿಧಾನ ಅನುಕರಣೀಯ. ಅಂತೆಯೇ ನದಿ, ನದಿ ತೀರ ಮತ್ತು ಬಯಲು ಪ್ರದೇಶದಲ್ಲಿ ಗಾಳಿ ಯಂತ್ರಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಈ ರಾಷ್ಟ್ರ ಸ್ವಾವಲಂಬಿ. ಹದಿನಾಲ್ಕನೇ ಶತಮಾನದಲ್ಲಿ ತಗ್ಗು ಪ್ರದೇಶದ್ದಲ್ಲಿದ್ದ ನೀರನ್ನು ಎತ್ತಲು ಹಾಗೂ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆಗೆ ಈ ಗಾಳಿಯಂತ್ರಗಳು ಬಳಕೆಯಾಗುತ್ತಿದ್ದವು.

ನೆದರ್ಲೆಂಡ್ಸ್‌ನ ರಾಜಧಾನಿ ಆ್ಯಮ್‌ಸ್ಟರ್‌ಡ್ಯಾಮ್‌ನ ಗೌಜು-ಗದ್ದಲ ಗಡಿಬಿಡಿಯ ವಾತಾವರಣದಿಂದ 45 ಕಿ.ಮೀ. ದೂರವಿರುವ, ಡಚ್ ಸಂಸ್ಕೃತಿಯನ್ನು ಬಿಂಬಿಸುವ ಝಾನ್ಸ ಶಾನ್ಸ್‌ ಗ್ರಾಮ, ಪ್ರಾಚೀನ ಗಾಳಿಯಂತ್ರ(ವಿಂಡ್‌ಮಿಲ್‌)ಗಳಿಂದಾಗಿ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಝಾನ್ ನದಿಯ ದಂಡೆಯ ಹಸಿರು ಹುಲ್ಲುಗಾವಲಿನ ಈ ರಮ್ಯ ನಿಸರ್ಗ ಪ್ರದೇಶ ನೋಡಲು ಪ್ರತಿದಿನ ಪ್ರವಾಸಿಗರ ದಂಡೇ ಬರುತ್ತದೆ.

ನೆದರ್ಲೆಂಡ್ಸ್‌ನ ಯಾವುದೇ ಊರಿಗೆ ಹೋದರೂ ನೀವು ನದಿ, ಕಾಲುವೆ ಕಾಣುವುದಷ್ಟೇ ಅಲ್ಲ, ಅವುಗಳ ಮೂಲಕವೇ ಪ್ರವಾಸ ಸಾಗುತ್ತದೆ. ನೀರಿನ ಸಮೃದ್ಧ ಸೌಲಭ್ಯವಿರುವ ಈ ದೇಶದ ಜಲಸಾರಿಗೆ ನಿರ್ವಹಣೆ ಹಾಗೂ ಅದರ ಬಳಕೆಯ ವಿಧಾನ ಅನುಕರಣೀಯ. ಅಂತೆಯೇ ನದಿ, ನದಿ ತೀರ ಮತ್ತು ಬಯಲು ಪ್ರದೇಶದಲ್ಲಿ ಗಾಳಿ ಯಂತ್ರಗಳಿಂದ ವಿದ್ಯುತ್ ಉತ್ಪಾದನೆಯಲ್ಲಿ ಈ ರಾಷ್ಟ್ರ ಸ್ವಾವಲಂಬಿ. ಹದಿನಾಲ್ಕನೇ ಶತಮಾನದಲ್ಲಿ ತಗ್ಗು ಪ್ರದೇಶದ್ದಲ್ಲಿದ್ದ ನೀರನ್ನು ಎತ್ತಲು ಹಾಗೂ ಕೃಷಿ ಭೂಮಿಗೆ ನೀರಾವರಿ ವ್ಯವಸ್ಥೆಗೆ ಈ ಗಾಳಿಯಂತ್ರಗಳು ಬಳಕೆಯಾಗುತ್ತಿದ್ದವು.

ವಿಂಡ್‌ಮಿಲ್ ಗ್ರಾಮ: ಝಾನ್ ನದಿ ತೀರದಲ್ಲಿರುವ ಝಾನ್ಸ ಶಾನ್ಸ್‌ ಗ್ರಾಮಕ್ಕೆ ಭೇಟಿ ನೀಡಿದಾಗ ಹೊಸ ಲೋಕವೇ ಕಣ್ಮುಂದೆ ತೆರೆದುಕೊಳ್ಳುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲಾ ಕಂಡುಬರುವ ಬೃಹತ್ ವಿಂಡ್‌ಮಿಲ್‌ಗಳು, ಹಚ್ಚ ಹಸಿರಿನಿಂದ ಕೂಡಿದ ಹುಲ್ಲುಗಾವಲಿನ ವನಸಿರಿಯ ಸೊಬಗು, ಹಸು, ಕುರಿ ಮೇಯುತ್ತಿರುವ ದೃಶ್ಯ, ಸುಂದರ ಕಟ್ಟಿಗೆಯ ಮನೆಗಳು, ವಸ್ತು ಸಂಗ್ರಹಾಲಯ- ಹೀಗೆ ಹೆಜ್ಜೆ ಹಾಕುತ್ತಾ ಗತಕಾಲದ ಹಳ್ಳಿಯೊಂದನ್ನು ಪ್ರವೇಶಿಸಿದ ಅನುಭವವಾಗುತ್ತದೆ. ಇಂದಿಗೂ ಸಂರಕ್ಷಿಸಲ್ಪಟ್ಟ ಎಂಟು ಪ್ರಾಚೀನ ವಿಂಡ್‌ಮಿಲ್‌ನ ಈ ಸ್ಥಳ ‘ವಿಂಡ್‌ ಮಿಲ್ ವಿಲೇಜ್’ ಎಂಬುವುದಾಗಿ ಖ್ಯಾತಿ ಪಡೆದಿದೆ. ಪಾದಚಾರಿ ರಸ್ತೆ ಮೂಲಕ ಅಥವಾ ಸೈಕಲ್‌ನಲ್ಲಿ ಸುತ್ತುತ್ತಾ ಈ ಪ್ರದೇಶವನ್ನು ವೀಕ್ಷಿಸಬಹುದು.

ಮಗನ ಜೊತೆಗೆ ನಾನು ಆ್ಯಮ್‌ಸ್ಟರ್‌ಡ್ಯಾಮ್‌ ಸೆಂಟ್ರಲ್ ರೈಲು ನಿಲ್ದಾಣದಿಂದ ರೈಲಿನಲ್ಲಿ ಇಪ್ಪತ್ತು ನಿಮಿಷ ಪ್ರಯಾಣಿಸಿ ಝಾನ್ಸ ಶಾನ್ಸ್‌ ನಿಲ್ದಾಣದಲ್ಲಿ ಇಳಿದುಕೊಂಡೆವು. ನಿಲ್ದಾಣದ ಹೊರಗಡೆ ಇರುವ ಬಾಡಿಗೆ ಸೈಕಲ್‍ಗಳ ಅಂಗಡಿಯಲ್ಲಿ ನಮ್ಮ ಅಧಿಕೃತ ಗುರುತಿನ ಪತ್ರ ನೀಡಿ ಸೈಕಲ್‌ ಬಾಡಿಗೆ ಪಡೆದು, ಮೂರು ಕಿ.ಮೀ. ಪ್ರಯಾಣಿಸಿ ಝಾನ್ ನದಿಯ ಸೇತುವೆ ದಾಟುತ್ತಲೇ ಈ ಗ್ರಾಮ ತೆರೆದುಕೊಂಡಿತು. ಅಚ್ಚುಕಟ್ಟಾದ ಪಾದಚಾರಿ ಹಾಗೂ ಸೈಕಲ್ ರಸ್ತೆ, ಎಲ್ಲೆಡೆ ಮಾಹಿತಿ ಫಲಕ, ಆಹ್ಲಾದಕರ ಹವಾಮಾನದಿಂದಾಗಿ ಪ್ರಯಾಣ ಆಯಾಸವೆನಿಸಲಿಲ್ಲ.

ಅಷ್ಟರಲ್ಲಾಗಲೇ ಧಫ್ ಧಫ್ ಸದ್ದು ಮಾಡುತ್ತಿದ್ದ ವಿಂಡ್‌ಮಿಲ್ ಒಂದು ನಮ್ಮನ್ನು ಸೆಳೆಯಿತು. ನಿಗದಿತ ಶುಲ್ಕ ನೀಡಿ ‘ಡಿ ಕ್ಯಾಟ್’ ಎಂಬ ಈ ಮಿಲ್‌ ಪ್ರವೇಶಿಸಿದೆವು. 1696ರಲ್ಲಿ ಕಾರ್ಯಾರಂಭಗೊಂಡ ಈ ಮಿಲ್‌, ಅಗ್ನಿ ಅವಘಡದಿಂದ 1782ರಲ್ಲಿ ಪುನರ್ ನಿರ್ಮಾಣವಾಗಿದೆಯೆಂದು ಅಲ್ಲಿರುವ ಮಾರ್ಗದರ್ಶಕ ತಿಳಿಸಿದ. ಈ ಮಿಲ್‌ನಲ್ಲಿ ಬಣ್ಣ ತಯಾರಿಕೆಗೆ ಅಗತ್ಯವಾದ ಕಚ್ಚಾ ವಸ್ತುಗಳನ್ನು ಪುಡಿ ಮಾಡಲಾಗುತ್ತಿದೆ. ನೆಲ ಮಹಡಿಯಲ್ಲಿರುವ ರುಬ್ಬುವ ಕಲ್ಲುಗಳ ಯಂತ್ರಗಳಲ್ಲಿ (ನಮ್ಮಲ್ಲಿರುವ ಹಿಟ್ಟಿನ ಗಿರಣಿ ಮಾದರಿ) ವಿವಿಧ ಕಚ್ಚಾ ವಸ್ತುಗಳನ್ನು ಹಾಕುತ್ತಾರೆ. ಅವುಗಳು ಗಾಳಿ ಯಂತ್ರದ ಶಕ್ತಿಯಿಂದ ಜೋಡಿಸಲ್ಪಟ್ಟ ಬೆಲ್ಟ್‌ನಿಂದ ತಿರುಗಿ, ಪುಡಿಯಾಗಿ ಸೀಮೆಸುಣ್ಣದ ಪೌಡರ್ ರೀತಿಯಲ್ಲಿ ಹೊರ ಬರುತ್ತದೆ. ಮಿಲ್‌ ನದಿ ತೀರದಲ್ಲಿರುವುದರಿಂದ ಹೀಗೆ ತಯಾರಿಸಲಾದ ಸರಕನ್ನು ದೋಣಿ ಮೂಲಕ ರವಾನಿಸುತ್ತಾರೆ.

ಆಗ ಸಾವಿರಾರು ಈಗ ಆರು!

ಝಾನ್ ನದಿಯ ದಡದಲ್ಲಿ ವಾಸಿಸುತ್ತಿದ್ದ ಜನರು ವಿವಿಧ ವ್ಯಾಪಾರ ಹಾಗೂ ಮೀನುಗಾರಿಕೆಯಿಂದ ಶ್ರೀಮಂತರಾಗಿದ್ದರಂತೆ. ಅವರು ವಾಣಿಜ್ಯದ ವಿವಿಧೋದ್ದೇಶಗಳಿಗೆ ಇಂತಹ ವಿಂಡ್‍ಮಿಲ್‍ಗಳನ್ನು 1600ರಲ್ಲಿಯೇ ನಿರ್ಮಿಸಿದ್ದರು. ಮರ, ಬಾರ್ಲಿ ಹಾಗೂ ಅಕ್ಕಿಯಿಂದ ಕಾಗದ, ಎಣ್ಣೆ ಬೀಜಗಳಿಂದ ತೈಲವನ್ನಲ್ಲದೇ ತಂಬಾಕು ಹಾಗೂ ಸೆಣಬನ್ನು ಸಹ ಇಲ್ಲಿ ತಯಾರಿಸಲಾಗುತ್ತಿತ್ತಂತೆ. ಒಂದೊಮ್ಮೆ ಒಂದು ಸಾವಿರ ವಿಂಡ್‌ಮಿಲ್‌ಗಳು ಈ ನದಿ ತೀರದಲ್ಲಿದ್ದವಂತೆ. ಈಗ ನೋಡಲು ಹದಿಮೂರು ಮಿಲ್‌ಗಳಿದ್ದರೂ ಕಾರ್ಯನಿರ್ವಹಿಸುತ್ತಿರುವುದು ಕೇವಲ ಆರು! ಖಾಸಗಿ ಒಡೆತನದಲ್ಲಿರುವ ಇವುಗಳು ಸಾಸಿವೆ ಹಾಗೂ ಇತರ ಎಣ್ಣೆ ಕಾಳುಗಳಿಂದ ತೈಲ ಉತ್ಪಾದನೆ, ಬಣ್ಣ (ಡೈ) ತಯಾರಿಕೆಗೆ ಇಂದಿಗೂ ಬಳಕೆಯಾಗುತ್ತಿವೆ.

ಚಾಕೊಲೆಟ್ ನದಿ: ನದಿಯಲ್ಲಿ ಸುತ್ತಾಡಿ ವಿಂಡ್ ಮಿಲ್‌ಗಳ ವೀಕ್ಷಣೆ ಮತ್ತು ಮೀನುಗಾರಿಕೆ ನಡೆಯುವ ವೊಲೆಂಡಮ್ ಪ್ರದೇಶವನ್ನು ನೋಡಲು ‘ವಿಂಡ್ ಮಿಲ್ ಕ್ರೂಸ್’ ಪ್ರವಾಸವನ್ನು ನಿಯಮಿತವಾಗಿ ಆಯೋಜಿಸುತ್ತಾರೆ. ನಿಗದಿತ ಶುಲ್ಕ ಪಾವತಿಸಿ ಈ ಪ್ರವಾಸದ ಆನಂದ ಸವಿಯಬಹುದು. ನೂರಾರು ವರ್ಷಗಳಿಂದ ಗಾಳಿ, ಮಳೆ, ಬಿಸಿಲಿಗೆ ತಲೆಯೊಡ್ಡಿ ನಿಂತ ಮಿಲ್‌ಗಳನ್ನು ನದಿಯಲ್ಲಿ ವಿಹರಿಸುತ್ತಾ ನೋಡುವ ಅನುಭವವೇ ಬೇರೆ. ಝಾನ್ ಕೈಗಾರಿಕಾ ವಲಯ ಬೃಹತ್ ಕೊಕೋ ಸಂಸ್ಕರಣೆಗೆ ವಿಶ್ವ ಪ್ರಸಿದ್ಧವಾಗಿದೆ. ಇದರಿಂದಾಗಿ ಝಾನ್ ನದಿಗೆ ಚಾಕೊಲೆಟ್‌ ನದಿ ಎಂಬ ಉಪನಾಮವಿದೆ.

ಝಾನ್ ಮ್ಯೂಸಿಯಂ: ವಿಂಡ್ ಮಿಲ್‌ಗಳ ಮತ್ತೊಂದು ಭಾಗದಲ್ಲಿ ಝಾನ್ ಮ್ಯೂಸಿಯಂ ಇದೆ. ಅಲ್ಲಿ 17ಮತ್ತು 18 ನೇ ಶತಮಾನದಲ್ಲಿದ್ದ ವಿಂಡ್ ಮಿಲ್‌ಗಳ ವಿವರ, ನದಿಯ ನೋಟದ ಪ್ರಾಚೀನ ಚಿತ್ರಕಲೆಗಳು, ಝಾನ್ ಇತಿಹಾಸ, ಇಲ್ಲಿಯ ಎರಡನೇ ಮಹಾಯುದ್ಧದ ಕಥೆ ಹೇಳುವ ಸ್ಮಾರಕಗಳು, ಸಾಕ್ಷ್ಯಚಿತ್ರ ಪ್ರದರ್ಶನ, ಕರಕುಶಲ ವಸ್ತುಗಳು, ಡಚ್ ಗಡಿಯಾರಗಳ ಸಂಗ್ರಹ ಮತ್ತು ಈ ಪ್ರದೇಶದ ಆಧುನಿಕ ಕೈಗಾರಿಕಾ ಬೆಳವಣಿಗೆಯನ್ನು ಸಚಿತ್ರವಾಗಿ ತೋರಿಸಲಾಗಿದೆ. ಯುರೋಪಿನ ಜನಜೀವನದಲ್ಲಿ ಚೀಸ್ ತಯಾರಿಕೆ ಹಾಗೂ ಬಳಕೆ ಹಾಸುಹೊಕ್ಕಾಗಿದೆ. ಡಚ್ ಚೀಸ್ ತಯಾರಿಕೆಯ ಪ್ರಾತ್ಯಕ್ಷಿಕೆ ಮಳಿಗೆ ಇಲ್ಲಿದ್ದು, ಅನೇಕ ಬಗೆಯ ಚೀಸ್ ಪ್ರದರ್ಶನ ಇಲ್ಲಿದೆ.

ನಮಗೆ ಬಹಳ ಕುತೂಹಲಕಾರಿಯಾಗಿ ಕಂಡಿದ್ದು ಇಲ್ಲಿ ತಯಾರಾಗುವ ಮರದ ದಿಮ್ಮಿಯಿಂದ ತಯಾರಾದ ಬೂಟುಗಳ(ಕ್ಲಾಗ್) ಮಳಿಗೆ. ಜೌಗು ಪ್ರದೇಶದಲ್ಲಿ ಕಾಲುಗಳಿಗೆ ಶೀತದ ಪರಿಣಾಮ ತಟ್ಟಬಾರದೆಂದು ಇಲ್ಲಿನ ಗ್ರಾಮೀಣ ಜನರು ಇವುಗಳನ್ನು ಬಳಸುತ್ತಿದ್ದರಂತೆ. ವಿಶಿಷ್ಟವಾದ ವಿಲೋ ಮರದ ಕಟ್ಟಿಗೆಯಿಂದ ಇವುಗಳನ್ನು ತಯಾರಿಸುತ್ತಾರೆ. ಈಗ ಅವುಗಳು ಸ್ಮರಣಿಕೆಗಳಾಗಿದ್ದರೂ, ಸ್ಕೇಟಿಂಗ್ ಮಾಡಲು ಇವುಗಳನ್ನು ಉಪಯೋಗಿಸುತ್ತಾರೆ. ಪ್ರವಾಸಿಗರ ಗಮನ ಸೆಳೆಯುವ ಈ ಮಳಿಗೆಯಲ್ಲಿ ಪ್ರವಾಸಿಗರ ಖರೀದಿ ಜೋರಾಗಿತ್ತು.

ನೆದರ್‌ಲ್ಯಾಂಡ್‌ ದೇಶವನ್ನು ಗುರುತಿಸುವದೇ ಈ ಗಾಳಿ ಯಂತ್ರಗಳಿಂದ. ಡಚ್ ಸಂಸ್ಕೃತಿಯೊಂದಿಗೆ ಅವು ಹಾಸು ಹೊಕ್ಕಾಗಿ ಬೆಸೆದುಕೊಂಡಿವೆ. ಇವುಗಳು ಈ ದೇಶದ ಪುನರುಜ್ಜೀವಕ್ಕೆ ಬಹು ಮಹತ್ವದ ಕೊಡುಗೆ ನೀಡಿವೆ. ಯುರೋಪಿನ ಮೊದಲ ವಿಂಡ್‍ಮಿಲ್‌ 1040ರಲ್ಲಿ ಬೆಲ್ಜಿಯಂನಲ್ಲಿ ನಿರ್ಮಿಸಲಾಯಿತು. ನೆದರ್‌ಲ್ಯಾಂಡ್ ಸಮುದ್ರ ಮಟ್ಟಕ್ಕಿಂತ ಕೆಳಗಿದ್ದುದರಿಂದ ಈ ದೇಶದ ಹೆಚ್ಚಿನ ಭಾಗವು ನೀರಿನ ಅಡಿಯಲ್ಲಿತ್ತು. ತಗ್ಗು ಪ್ರದೇಶದಿಂದ ನೀರನ್ನು ಪಂಪ್ ಮಾಡಿ ಆಚೆಗಿನ ತೊರೆಗಳಿಗೆ ಸಾಗಿಸಿ, ಅಂತರ್ಜಲ ಮಟ್ಟ ಕಾಪಾಡಿಕೊಳ್ಳುವುದರೊಂದಿಗೆ, ಇಲ್ಲಿದ್ದ ಭೂಮಿಯನ್ನು ಕೃಷಿಗೆ ಹಾಗೂ ವಾಸ ಯೋಗ್ಯವಾಗಿಸುವಲ್ಲಿ ಇವುಗಳು ಪಾತ್ರ ಮಹತ್ವದ್ದು. ಡಚ್ಚರು ವಿಂಡ್‌ಮಿಲ್‌ಗಳನ್ನು ಕಂಡು ಹಿಡಿದಿಲ್ಲವಾದರೂ, ಅವುಗಳ ಸಾಮರ್ಥ್ಯವನ್ನು ಗುರುತಿಸಿ, ತಂತ್ರಜ್ಞಾನವನ್ನು ಗಮನಾರ್ಹವಾಗಿ ಸುಧಾರಿಸಿದರು. ವಿಂಡ್‌ಮಿಲ್ ಚಾಲಿತ ಸಾ ಮಿಲ್ಲುಗಳ(ಮರ ಕೊರೆಯುವ ಗರಗಸದ ಮಿಲ್)ವ್ಯಾಪಕ ಬಳಕೆಯಿಂದಾಗಿ 17ನೇ ಶತಮಾನದಲ್ಲಿ ಡಚ್ಚರು ಮರದ ಹಡಗು ನಿರ್ಮಾಣದಲ್ಲಿ ಪ್ರಾಬಲ್ಯ ಸಾಧಿಸಿ, ಸಮುದ್ರಯಾನದಲ್ಲೂ ವಿಶ್ವಖ್ಯಾತಿಗಳಿಸುವದಲ್ಲದೇ ದೇಶದ ಆರ್ಥಿಕೋನ್ನತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ವರ್ಷಕ್ಕೊಮ್ಮೆ ಇಲ್ಲಿ ‘ರಾಷ್ಟ್ರೀಯ ಮಿಲ್ ಡೇ’ ಆಚರಿಸಲಾಗುತ್ತದೆ. ಮೇ ತಿಂಗಳಿನ ಎರಡನೇ ಶನಿವಾರದಂದು ಆಚರಿಸಲಾಗುವ ಈ ದಿನದಂದು ಎಲ್ಲ ಸಂದರ್ಶಕರಿಗೆ ವಿಂಡ್‌ಮಿಲ್‌ಗಳ ಬಾಗಿಲು ತೆಗೆದು ಅವುಗಳನ್ನು ಪರಿಚಯಿಸಲಾಗುತ್ತದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು