ಅದಿರು ಗಣಿಗಾರಿಕೆಗೆ ಹೆಸರುವಾಸಿಯಾಗಿರುವ ಬಳ್ಳಾರಿ ಜಿಲ್ಲೆಯ ಸಂಡೂರು ಸೆಪ್ಟೆಂಬರ್ನಲ್ಲಿ ಹಸಿರಿನಿಂದ ಕಂಗೊಳಿಸುತ್ತಿರುತ್ತದೆ. ಇಲ್ಲಿನ ಬಂಡ್ರಿ ಯಶವಂತನಗರ ಕಾಡು ಮಲೆನಾಡಿನಲ್ಲಿ ಇರುವ ಅನುಭವವನ್ನು ನೀಡುತ್ತದೆ. ಜನರಿಗೆ ಅಪರಿಚಿತವಾಗಿರುವ ಈ ಪ್ರದೇಶ ಸಂಡೂರಿನ ಒಡಲಲ್ಲಿ ತಣ್ಣಗೆ ಕುಳಿತಿದೆ.

ಬಳ್ಳಾರಿ ಜಿಲ್ಲೆಯ ಸಂಡೂರು ಕಬ್ಬಿಣದ ಅದಿರು ಗಣಿಗಾರಿಕೆಗೆ ಹೆಸರುವಾಸಿ. ಇಲ್ಲಿ ಗಣಿಗಾರಿಕೆ ಮತ್ತು ಅದಿರು ಸಾಗಾಣಿಕೆಯಿಂದ ಗಾಯಗೊಂಡ ಬೆಟ್ಟಗುಡ್ಡಗಳು, ರಸ್ತೆಗಳು.. ಹೀಗೆ ಪರಿಸರವೆಲ್ಲ ಸದಾ ಕೆಂಧೂಳನ್ನೇ ಉಸಿರಾಡುತ್ತವೆ. ಉತ್ತರ ಕರ್ನಾಟಕದ ‘ಆಕ್ಸಿಜನ್ ಬ್ಯಾಂಕ್’ ಎಂದೇ ಹೆಸರಾಗಿರುವ ಸಂಡೂರು ಮಳೆಗಾಲದಲ್ಲಿ ಪ್ರಕೃತಿ, ಚಾರಣ ಪ್ರಿಯರನ್ನು ಸೆಳೆಯುತ್ತದೆ. ಹಸಿರಿನ ಸೊಬಗಿನ ಜೊತೆಗೆ ಗಣಿಗಾರಿಕೆ ಸೃಷ್ಟಿಸಿದ ಸಂಕಟವನ್ನೂ ಅನುಭವಿಸುವ ಕರ್ಮ ಇಲ್ಲಿನ ಹಸಿರು ಕಣ್ಣು ತುಂಬಿಕೊಳ್ಳಲು ಅಪೇಕ್ಷೆಪಟ್ಟು ಬಂದವರದ್ದು. ಹಾಗಾದರೆ ಗಣಿಗಾರಿಕೆ ಮತ್ತು ಅದಿರು ಸಾಗಾಣಿಕೆ ಮುಕ್ತ ಕಾಡನ್ನು ಸಂಡೂರಲ್ಲಿ ಕಾಣಲಿಕ್ಕೆ ಸಾಧ್ಯವಿಲ್ಲವೇ? ಎನ್ನುವ ಪ್ರಶ್ನೆ ಮೂಡುತ್ತದೆ. ಆದರೆ ಸ್ವಚ್ಛ ಮತ್ತು ಸುಂದರ ಪ್ರಾಕೃತಿಕ ತಾಣವೊಂದು ಸಂಡೂರಿನ ಒಡಲಲ್ಲಿ ತಣ್ಣಗೆ ಕುಳಿತಿದೆ. ‘ಬಂಡ್ರಿ ಯಶವಂತನಗರ ಕಾಡು’ ಅಕ್ಷರಶಃ ಮಲೆನಾಡಿನ ಅನುಭೂತಿಯನ್ನು ನೀಡುತ್ತದೆ.

‘ಇಲ್ಲಿನ ನೀರ ಹರಿವಿನ ನಿನಾದ, ಖಗಗಳ ಇಂಚರ, ಶುದ್ಧ ಗಾಳಿ, ಪ್ರಶಾಂತ ವಾತಾವರಣ, ಸಮೃದ್ಧ ಹಸಿರು, ಒತ್ತುಕಟ್ಟಾದ ಹುಲ್ಲಿನ ಗಾದಿ, ಬಂಡೆಗಳು... ಇವೆಲ್ಲ ಧ್ಯಾನಕ್ಕೆ ಪ್ರೇರೇಪಿಸುತ್ತಿವೆ’ ಎನ್ನುತ್ತಲೇ ಗೆಳೆಯರೊಬ್ಬರು ಧ್ಯಾನಕ್ಕೆ ಕುಳಿತೇಬಿಟ್ಟರು. ‘ಸಂಡೂರಿನ ಎತ್ತರದ, ಸರಣಿ ಬೆಟ್ಟಗುಡ್ಡಗಳಿಗಿಂತ ಈ ತಾಣ ಅತ್ಯುತ್ತಮ. ಇಲ್ಲಿ ಗಣಿಗಾರಿಕೆ ಇಲ್ಲ. ಅದಕ್ಕಾಗಿಯೇ ಈ ಕಾಡು ಇನ್ನೂ ಉಳಿದಿದೆ’ ಎನ್ನುವುದು ಚಾರಣ ಶ್ರೀನಿವಾಸ್ ಅವರ ಅಭಿಪ್ರಾಯ.

ಬಳ್ಳಾರಿ ಜಿಲ್ಲೆಗೆ ಗಣಿ ನಾಡು ಎಂಬ ಪ್ರಖ್ಯಾತಿ ಹಾಗೆ ಕುಖ್ಯಾತಿ ತಂದು ಕೊಟ್ಟ ಸಂಡೂರಿನ ಖನಿಜ ಸಂಪತ್ತಿನ ಸಾಲು ಬೆಟ್ಟಗಳ ಸೆರಗಿನಲ್ಲೇ ಈ ತಾಣವಿದೆ. ಅಂದರೆ, ರಾಜ್ಯ ಹೆದ್ದಾರಿ-4ರ ಸಂಡೂರು-ಕೂಡ್ಲಿಗಿ ರಸ್ತೆಯಲ್ಲಿಯ ಬಂಡ್ರಿ, ಸೋಮಲಾಪುರ ಸುತ್ತಮುತ್ತ ಈ ಕಾಡು ಸಿಗುತ್ತದೆ. ಸಂಡೂರಿನ ಎತ್ತರದ ಬೆಟ್ಟಗುಡ್ಡಗಳ ಶ್ರೇಣಿಗಳು, ಅಲ್ಲಿನ ದಟ್ಟ ಕಾಡು, ಮಂಜು- ಮೋಡಗಳ ಜುಗಲ್ ಬಂದಿ, ಮಳೆಯ ಮೇಲಾಟದ ಮೇಲೆಯೇ ಹಲವರಿಗೆ ಕಣ್ಣು. ಹಾಗಾಗಿ ‘ಇದು ಸಾಧಾರಣ ಕಾಡು, ಅಲ್ಲಿ ಏನಿರುತ್ತೆ?’ ಎನ್ನುವ ನಿರ್ಲಕ್ಷ್ಯವೇ ಈ ತಾಣವನ್ನು ಅಪರಿಚಿತವಾಗಿರಿಸಿದೆ.

ಎಳ‘ನೀರ’ ಹಾಡು...

ಈ ದಿನಗಳಲ್ಲಿ ಇಲ್ಲಿ ಎಲ್ಲೆಲ್ಲೂ ನೀರ ಹಾಡು. ಅಸಂಖ್ಯಾತ ಝರಿಗಳು, ಹತ್ತಾರು ಹಳ್ಳ-ಕೊಳ್ಳಗಳು ಹುಟ್ಟಿ, ಕೆರೆ-ಕಟ್ಟೆಗಳನ್ನು ಸೇರುತ್ತವೆ. ಹೆಜ್ಜೆ ಹೆಜ್ಜೆಗೂ ನೀರ ಪಸೆಗಳಿವೆ. ‘ನಿಮಗೆ ಕಾಡಿಗಿಂತ ಇಲ್ಲಿನ ನೀರ ಹರಿವು ದಾರಿ ತಪ್ಪಿಸುತ್ತದೆ. ಜಲಕನ್ಯೆಯರಿಗೆ ಮನಸೋತು ಕಾನನದಲ್ಲಿ ತಪ್ಪಿಸಿಕೊಂಡ್ರೆ ನಾವು ಹೊಣೆ ಅಲ್ಲ..’ ಎಂದು ಜೊತೆಗಿದ್ದವರು ಎಚ್ಚರಿಸಿದ್ದು ಖರೆ ಅನಿಸಿತು. ಕಲ್ಲುಗಳನ್ನು ಮುಳುಗಿಸಿ, ತೇಲಿಸುವಂತೆ ವೈಯಾರ, ಗಾಂಭೀರ್ಯದಲಿ ಹರಿಯುವ ನೀರಿನ ಗತ್ತು-ಗಮ್ಮತ್ತು ಈ ಕಾಡಿನ ಗರ್ವ ಹೆಚ್ಚಿಸುತ್ತದೆ. ‘ಜುಳು, ಜುಳು, ದಬ ದಬ..’ ಹೀಗೆ ಸೃಷ್ಟಿಸುವ ಹರಿಯುವ ನೀರಿನ ಹಲವು ಸ್ವರಗಳು ಅಷ್ಟ ದಿಕ್ಕುಗಳಿಂದ ಅಲೆ ಅಲೆಯಾಗಿ ತೇಲಿ ಕಿವಿ ತುಂಬುತ್ತವೆ. ಒಂದೊಂದೆಡೆ ಅವುಗಳ ಮಧ್ಯೆ ಒಂದು ಆರೋಗ್ಯಕರ ಸಂಗೀತ ಸ್ಪರ್ಧೆ ಏರ್ಪಟ್ಟು, ಗೆಲ್ಲಲ್ಲು ಜಿದ್ದಿಗೆ ಬಿದ್ದು ಹರಿಯುವಂತೆ ಮತ್ತೊಂದೆಡೆ ‘ನಮ್ನಮ್ಮಲ್ಲೇ ಯಾಕೆ ಈ ಸ್ಪರ್ಧೆಗಿರ್ದೆ..’ ಎಂದು ಒಳಒಪ್ಪಂದವಾಗಿ ತಣ್ಣಗೆ ಹರಿಯುವ ಹಾಗೆ ಭಾಸವಾಗುತ್ತದೆ.

‘ಇಲ್ಲಿ ಗಣಿಗಾರಿಕೆ ಇಲ್ಲದಿದ್ದಕ್ಕೆ ನೀರು ಕೆಂಪಾಗಿಲ್ಲ. ಥೇಟ್ ಎಳನೀರು, ಅನ್ನದ ಗಂಜಿಯಂತಿದೆ. ಕುಡಿದರೆ ಅಮೃತ...’ ಎನ್ನುತ್ತಾ ಒಬ್ಬರು ಹಳ್ಳಕ್ಕೇ ಬಾಯಿ ಹಚ್ಚಿದರು.

‘ಜಲ’ನಾಡು..

ಚಾರಣದ ಉದ್ದಕ್ಕೂ ವೈವಿಧ್ಯಮಯ ಜಲಮೂಲಗಳು ಅಯಾಚಿತವಾಗಿ ಸಿಕ್ಕು ‘ಇದು ಬರದ ನಾಡಲ್ಲ, ಅಕ್ಷರಶಃ ಜಲದ ನಾಡು’ ಎಂದೆನಿಸಿತು. ಯಶವಂತನಗರ ಸಮೀಪ ಇರುವ ಹಳ್ಳವೊಂದಕ್ಕೆ ಸ್ಥಳೀಯರು ಜರುಗಳ್ಳ ಅನ್ನುತ್ತಾರೆ. ಆದರೆ ಇದು ಝರಿಗಳ ಹಳ್ಳ. ಸೋಮಲಾಪುರ, ಬಂಡ್ರಿಯ ವ್ಯಾಪ್ತಿಯ ಅಂದಾಜು ಎಂಟು ಸಾವಿರ ಹೆಕ್ಟೇರ್ ಕಾಯ್ದಿಟ್ಟ ಅರಣ್ಯದಲ್ಲಿ ಹಿರೇಹಳ್ಳ, ದೇಶ ಹಳ್ಳ, ನೀರು ತುಂಬ ಹಳ್ಳ, ಕಟ್ಟ ಹಳ್ಳ, ಬಂಡೆ ಮಡುಗಿನ ಹಳ್ಳ, ಸನ್ಯಾಸಿ ಕೆರೆ ಹಳ್ಳ.. ಹೀಗೆ ಹತ್ತಾರು ಹಳ್ಳಗಳು, ನೂರಾರು ಝರಿಗಳಿವೆ. ಇದರಿಂದ ಅನೇಕ ಚೆಕ್ಡ್ಯಾಂ, ಗೋಕಟ್ಟೆ, ಕೆರೆ-ಕಟ್ಟೆಗಳು ಭರ್ತಿ ಆಗಿ ಕಾಡೆಲ್ಲಾ ಸಗ್ಗದ ಸಿರಿ, ಉದುಕದಿಂದ ತುಂಬಿದೆ.

ಮೂರ್ತ, ಅಮೂರ್ತ ಕಲ್ಪನೆ ನೀಡುವ ಶಿಲೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತವೆ. ಅಲ್ಲಲ್ಲಿಯ ಸಮತಟ್ಟಾದ ಜಾಗ, ಹೆಬ್ಬಂಡೆ, ಹಾಸುಬಂಡೆಗಳು ವಿಶ್ರಾಂತಿ ಮತ್ತು ವ್ಯೂ ಪಾಯಿಂಟ್ಗಳಾಗಿವೆ. ಎಳೆ, ಹದ ಬಿಸಿಲು, ರವಿಯ ನೆರಳು ಬೆಳಕಿನ ಆಟ.. ಈ ಕಲ್ಲುಗಳ ಚೆಲುವನ್ನು ನೂರ್ಮಡಿಸಿ, ಕಣ್ಣು ಕೋರೈಸುತ್ತವೆ. ಬಿಳಿಕಲ್ಲು ಗುಡ್ಡವಂತೂ ಬೆಣಚು ಕಲ್ಲುಗಳ ಗಣಿ.

ಪರಿಸರದ ಬಗ್ಗೆ ಗಹನ ಚರ್ಚೆ ಮಾಡುತ್ತಾ ದಾರಿ ತಪ್ಪಿದೆವು. ಸೂರ್ಯಾಸ್ತ ಸಮೀಪಿಸಿದರೂ ದಾರಿ ಸಿಗದೇ ಪರದಾಡಿದೆವು. ಕಾಡು ಪ್ರಾಣಿಗಳೆಲ್ಲ ಚಿತ್ತದಲ್ಲಿ ಸುಳಿದು ಎದೆ ಬಡಿತ ಹೆಚ್ಚಿಸಿದವು. ಕೊನೆಗೆ ಗೈಡ್ ಅದ್ಹೇಗೋ ದಾರಿ ಪತ್ತೆ ಹಚ್ಚಿದರು. ಒಂದೆರೆಡು ಬೆಟ್ಟ ಹತ್ತಿ ಇಳಿದು, ಬೆವರು ಹರಿಸಿ ಮರಳುವಷ್ಟರಲ್ಲಿ ಹೋದ ಜೀವ ಮರಳಿ ಬಂತು.

ಯಾವ ಕಾಲ ಸೂಕ್ತ..?

‘ಸೀ ಸಂಡೂರು ಇನ್ ಸೆಪ್ಟೆಂಬರ್’ ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಮಳೆಗಾಲ ಅದರಲ್ಲೂ ಭರ್ಜರಿ ವರ್ಷಧಾರೆ ಆದರಂತೂ ಇನ್ನೂ ಚೆಂದ. ಇಲ್ಲಿ ಸುತ್ತಾಡಲು ಇತರೆಡೆ ಇರುವಂತೆ ನಿರ್ದಿಷ್ಟ ದಾರಿ ಇಲ್ಲ. ಜಾನುವಾರುಗಳು ಬೈತಲೆ ಎಳೆದಂತಹ ಅನೇಕ ಕವಲು ಕಾಲುದಾರಿಗಳನ್ನು ನಿರ್ಮಿಸಿದ್ದು, ಇವುಗಳು ನಿಸ್ಸಂದೇಹವಾಗಿ ಹಾದಿ ತಪ್ಪಿಸುತ್ತವೆ. ಹೀಗಾಗಿ ಸ್ಥಳೀಯರು, ಅದರಲ್ಲೂ ಕಾಡು ಬಲ್ಲವರು ಜೊತೆಗಿರಲಿ. ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಸಹಾಯ ಕೇಳಿ. ಎಲ್ಲಾ ವಯಸ್ಸಿನವರು ಚಾರಣ ಮಾಡಲು ಹೇಳಿ ಮಾಡಿಸಿದಂತಿದೆ. ಕಾಡಲ್ಲೇ ಶುದ್ಧ ನೀರು ಸಿಗುತ್ತದೆ. ಆಹಾರ, ಕುರುಕು ತಿಂಡಿ ಜೊತೆಗಿದ್ದರೆ ಸಾಕು.

ಹೀಗೆ ತಲುಪಿ

ಬೆಂಗಳೂರು, ಮಲೆನಾಡಿನ ಕಡೆಯಿಂದ ಬರುವವರು ಕೂಡ್ಲಿಗಿಗೆ ಬಂದು ಸಂಡೂರು ರಸ್ತೆ ಹಿಡಿದರೆ ಮೊದಲೇ ಬಂಡ್ರಿ ಸಿಗುತ್ತದೆ. ಉತ್ತರ ಕರ್ನಾಟಕದವರು ಹೊಸಪೇಟೆಗೆ ಬಂದು ಸಂಡೂರಿಗೆ ಇಲ್ಲವೆ ಬಳ್ಳಾರಿಯಿಂದ ಸಂಡೂರಿಗೆ ಬಂದು ಇಲ್ಲಿಗೆ ತಲುಪಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.