ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೌಂಟ್‌ ಎವರೆಸ್ಟ್‌ ಏರಿದ 10 ನೇಪಾಳಿ ಪರ್ವತಾರೋಹಿಗಳು

Published 11 ಮೇ 2024, 10:11 IST
Last Updated 11 ಮೇ 2024, 10:11 IST
ಅಕ್ಷರ ಗಾತ್ರ

ಕಠ್ಮಂಡು: ಪರ್ವತಾರೋಹಿಗಳಿಗೆ ಮಾರ್ಗದರ್ಶನ ನೀಡುವ ಹತ್ತು ನೇಪಾಳಿ ಸಾಹಸಿಗಳು ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಶಿಖರವನ್ನು ಶುಕ್ರವಾರ ರಾತ್ರಿ ಯಶಸ್ವಿಯಾಗಿ ಏರಿದ್ದಾರೆ. ಈ ವರ್ಷದ ವಸಂತ ಋತುವಿನಲ್ಲಿ ಆರೋಹಣಕ್ಕೆ ಶಿಖರ ಮುಕ್ತವಾದ ನಂತರ ಮೊದಲ ಯತ್ನ ಇದಾಗಿದೆ.

‘ಡ್ಯಾಂಡಿ ಶೆರ್ಪಾ ಅವರ ನಾಯಕತ್ವದ ತಂಡವು 8,848.86 ಮೀಟರ್ ಎತ್ತರದ ಶಿಖರವನ್ನು ಶುಕ್ರವಾರ ರಾತ್ರಿ 8.15ಕ್ಕೆ ತಲುಪಿದರು’ ಎಂದು ಆಯೋಜಕರಾದ ಸೆವೆನ್ ಸಮ್ಮಿಟ್ ಟ್ರೆಕ್‌ ಸಂಸ್ಥೆಯ ಥಾಣಿ ಗುರಾಗೈನ್‌ ಹೇಳಿದ್ದಾರೆ.

ಶಿಖರ ಏರುವವರಿಗೆ ಅನುಕೂಲವಾಗಲೆಂದು ಹಗ್ಗ ಅಳವಡಿಸುವ ಕಾರ್ಯದಲ್ಲಿ ತೊಡಗಿದ್ದ ಈ ತಂಡ ತಮ್ಮ ಕಾರ್ಯದೊಂದಿಗೆ ಮೌಂಟ್ ಎವರೆಸ್ಟ್‌ನ ತುದಿ ತಲುಪಿದ್ದಾರೆ. ಇವರು ಶುಕ್ರವಾರ ಬೆಳಿಗ್ಗೆ ತಮ್ಮ ಕಾರ್ಯ ಆರಂಭಿಸಿದರು. ರಾತ್ರಿ ಪೂರ್ಣಗೊಳಿಸಿದ್ದಾರೆ.

‘ಮೌಂಟ್ ಎವರೆಸ್ಟ್ ಏರಲು ವಸಂತ ಕಾಲದಲ್ಲಿ ಅವಕಾಶ ಕಲ್ಪಿಸಲಾಗುತ್ತದೆ. ಅದಕ್ಕೂ ಪೂರ್ವದಲ್ಲಿ ಪರ್ವತಾರೋಹಿಗಳಿಗೆ ನೆರವಾಗುವ ಉದ್ದೇಶದಿಂದ ಹಗ್ಗವನ್ನು ಅಳವಡಿಸಲಾಗುತ್ತದೆ. ನೇಪಾಳ ಮತ್ತು ವಿದೇಶಿ ಪರ್ವತಾರೋಹಿಗಳು ಈಗಾಗಲೇ ಮೌಂಟ್ ಎವರೆಸ್ಟ್‌ನ ಬೇಸ್‌ಪಾಯಿಂಟ್ ಬಳಿ ಬರುತ್ತಿದ್ದಾರೆ’ ಎಂದು ಪ್ರವಾಸೋದ್ಯಮ ಇಲಾಖೆಯ ಪರ್ವತಾರೋಹಣ ವಿಭಾಗದ ಅಧಿಕಾರಿ ಚುನ್ ಬಹದ್ದೂರ್ ತಮಾಂಗ್ ತಿಳಿಸಿದರು.

ಶುಕ್ರವಾರ ಮೌಂಟ್ ಎವರೆಸ್ಟ್ ಏರಿದವರಲ್ಲಿ ತೇನ್‌ಸಿಂಗ್‌ ಗ್ಯಾಲ್‌ಜೆನ್‌ ಶೆರ್ಪಾ, ಪೆಂಬಾ ತಾಷಿ ಶೆರ್ಪಾ, ಲಕ್ಪಾ ಶೆರ್ಪಾ, ದಾವಾ ರಿಂಜಿ ಶೆರ್ಪಾ. ದಾವಾ ಶೆರ್ಪಾ, ಪಾಮ್ ಸೊರ್ಜಿ ಶೆರ್ಪಾ, ಸುಕ್ ಬಹದ್ದೂರ್ ತಮಾಂಗ್, ನಂಗ್ಯಾಲ್‌ ದೊರ್ಜೆ ತಮಾಂಗ್‌ ಹಾಗೂ ಲಕ್ಪಾ ರಿಂಜಿ ಶೆರ್ಪಾ ಸೇರಿದ್ದಾರೆ.

ಈ ಋತುಮಾನದಲ್ಲಿ ಮೌಂಟ್ ಎವರೆಸ್ಟ್ ಏರಲು 41 ತಂಡಗಳಿಂದ 414 ‍ಪರ್ವತಾರೋಹಿಗಳು ಅರ್ಜಿ ಸಲ್ಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT