ಶನಿವಾರ, 20 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಶ್ಮೀರದ ಏಳು ಸರೋವರಗಳ ಚಾರಣ: ಆರ್ಕಿಡ್ ಅಂಗಳದಲಿ...

Last Updated 7 ಜನವರಿ 2023, 19:30 IST
ಅಕ್ಷರ ಗಾತ್ರ

ಕಾಶ್ಮೀರದ ಏಳು ಸರೋವರಗಳನ್ನೊಮ್ಮೆ ನೋಡಬೇಕು ಎಂದು ಕಂಡಿದ್ದ ಕನಸು ನನಸಾದ ಕ್ಷಣವದು. ಗಡಸರ್‌ ಸುಂದರಿಯನ್ನೇ ನೆನೆಯುತ್ತಾ 14,000 ಅಡಿಗಳೇರಿದ ಸಾಹಸ, ಝರಿಗಳ ಇಂಪಾದ ಜೋಗುಳವನ್ನು ಹೀಗೆ ನೆನಪಿಸಿಕೊಳ್ಳುತ್ತಾ...

***

ಹಿಮಾಲಯದ ಮಡಿಲಲ್ಲಿ ಮಗುವಾಗುವ ಆಸೆಗಳು ಗರಿಗೆದರಿದ್ದವು. ಕಾಶ್ಮೀರದ ಏಳು ಸರೋವರಗಳ ಚಾರಣಕ್ಕೆ ಹೊರಟು ನಿಂತಾಗ ಪುಳಕ!

ತಿಳಿ ನೀಲಿ ದಾಲ್ ಸರೋವರದ ಅಂಚಿನ ಹೋಟೆಲ್‍ನಲ್ಲಿ ರೂಮ್‌ ಕಾದಿರಿಸಿದ್ದೆವು. ಕೆಹವಾದ ಉಗಿ ಸೇವಿಸುತ್ತಾ ದಾಲ್ ಸರೋವರಕ್ಕೆ ಸುತ್ತು ಬರಲು ಹೊರಟು ನಿಂತಾಗ ಎಳೆ ಬಿಸಿಲು ನೀರಿಗೆ ಚಿಮ್ಮಿ ಆಹ್ಲಾದಕರ ವಾತಾವರಣ. ನೀರ ಮೇಲೆ ತೇಲುತ್ತಾ ಚಹಾ ಕಾಯಿಸುವವರು, ಕೇಸರಿ ಮಾರುವವರು, ಓಲೆ ಮಾರುವವರು ದೋಣಿ ಹಿಡಿದೇ ಬರುತ್ತಿದ್ದರು. ಕೊನೆಗೆಲ್ಲವೂ ನೀಲಿಯಾಗಿ ಸಂಪೂರ್ಣ ಕರಗುತ್ತಿತ್ತು.

ಮೊದಲ ನಂಬ್ರದ ಗೇಟಿನೆದುರು ನಮ್ಮ 40 ಚಾರಣಿಗರ ಸಂತೆ ನೆರೆದಿತ್ತು. ನನಗಂತೂ ತವಕ. ಎಲ್ಲರೂ ಸಪ್ತ ಸರೋವರದ ಕನಸಿನಲ್ಲಿದ್ದರು. ಟೆಂಪೊ ಟ್ರಾವೆಲರ್‌ ಮೂಲಕ ನಾವು ಸೋನ್ ಮಾರ್ಗದ ದಾರಿ ಹಿಡಿದೆವು.

ಸೋನ್‌ ಮಾರ್ಗ್‌ ಎಂಬ ಸ್ವರ್ಗ: ಅದು ನಿಶ್ಯಬ್ದದ ಸ್ವಪ್ನ ಲೋಕ. ಪರ್ವತಗಳು ಸೈನಿಕರಂತೆ ನಮ್ಮನ್ನು ಸುತ್ತುವರಿದಿದ್ದವು. ನದಿಯೊಂದು ಸ್ವರ್ಗ ಲೋಕವನ್ನು ಸೃಷ್ಟಿಮಾಡಿತ್ತು. ಸೋನ್ ಮಾರ್ಗಕ್ಕೆ ಕೆಲವೇ ಕಿ.ಮೀ. ಹಿಂದೆ ನಮ್ಮ ಕ್ಯಾಂಪ್. ಸ್ವಪ್ನಲೋಕ ಸೃಷ್ಟಿಸಿದ ನದಿ, ರಾತ್ರಿ ದುಃಸ್ವಪ್ನದಂತೆ ಕಾಡಿತ್ತು. ಹಂಸ ತೂಲಿಕದ ಮೇಲೆ ಮಲಗಿದ ನನಗೆ, ಒಂಟೆ ಮೇಲೆ ಮಲಗಿದ ಅನುಭವ. ನದಿ ಭೋರ್ಗರೆತಕ್ಕೆ ನಿದ್ದೆ ಹಾರಿ ಹೋಗಿತ್ತು.

ನಿಚ್‌ನಾಯ್‌ ಪಾಸ್‌ನತ್ತ: ಕನಸು ಹೆಕ್ಕುತ್ತಾ ಕಪ್ಪಿರುವೆ ಸಾಲಿನಂದದಿ ಹೊರಟಿತ್ತು ಚಾರಣಿಗರ ಮೆರವಣಿಗೆ ನಿಚ್‌ನಾಯ್‌ವರೆಗೆ. ದೂರದ ಸೋನ್ ಮಾರ್ಗ ಎದ್ದಿತ್ತಷ್ಟೆ. ಏರುದಾರಿಯಲ್ಲಿ ಕುರಿ ಗಾಹಿಗಳ ಹಿಂಡು. ಸಾಲು ಸಾಲು ಓಕ್‌ ಮರಗಳ ಮೆರವಣಿಗೆ. ದೂರದಲ್ಲಿ ಹಿಮ ಬೆಟ್ಟಗಳು. ಬೆಳಗಿನ ಅವಲಕ್ಕಿ ಎರಡು ಗಂಟೆಯ ನಡಿಗೆಯಲ್ಲಿ ಕರಗಿ ಹೋಗಿತ್ತು. ತಂದ ಕೆಲವು ತಿಂಡಿಗಳನ್ನು ಹಂಚಿ ತಿಂದು ಹೆಜ್ಜೆ ಎಣಿಸುತ್ತಾ ಸಾಗಿದೆವು. ಶೀತಲ ಮಯವಾದ ವಾತಾವರಣದಲ್ಲಿ ಬಿಸಿ ಬಿಸಿ ಕೆಹವಾ ಸಿಕ್ಕಾಗ ಸ್ವರ್ಗವೇ ಗಂಟಲಿಗಿಳಿದಂತೆ. ಇಷ್ಟು ಎತ್ತರದಲ್ಲಿ ಬಂದು ಥಂಡಿಯ ಜಾಗದಲ್ಲಿ ಚಹಾ ಅಂಗಡಿ ಇಟ್ಟ ಪುಣ್ಯಾತ್ಮನ ಸಾಹಸಕ್ಕೆ ಸಲಾಂ.

ಇಲ್ಲಿಂದ ಮುಂದೆ ಇಳಿಜಾರಿನ ಹಾದಿಯಲ್ಲಿ ಲಿಡ್ಡರ್ ನದಿಗುಂಟ ಸಾಗಿದಾಗ ಸಣ್ಣ ತೊರೆಯ ಬಳಿ ನಮ್ಮ ಕ್ಯಾಂಪ್ ನಮಗಾಗಿ ಕಾದಿತ್ತು. ನಾನು ಮತ್ತು ಗೆಳೆಯ ನಾಗರಾಜ ಹಿಮಾಲಯದ ಹೂಗಳನ್ನು ನೋಡುತ್ತಾ ಗುರಿ ಸೇರಿದೆವು. ದೊಡ್ಡ ಬೆಟ್ಟದ ಬುಡದ ಸಣ್ಣ ಝರಿಯ ಸನಿಹವೇ ನಮ್ಮ ಬಿಡಾರ. ಇದನ್ನು ನೋಡುತ್ತಲೇ ನಮಗೆ 11.6 ಕಿ.ಮೀ. ನಡಿಗೆ ಸಾರ್ಥಕ ಎನಿಸಿಬಿಟ್ಟಿತು. ನಾನಂತು ಖುಷಿಯಲ್ಲಿ ಝರಿಯ ಜೋಗುಳವನ್ನಾಲಿಸಲು ಕ್ಯಾಮೆರಾ ಎತ್ತಿಕೊಂಡು ಹೊರಟೆ.

ಗಡಸರ್‌ ಸುಂದರಿ ಮುಡಿಯಲ್ಲಿ ಹಿಮವಿಟ್ಟುಕೊಂಡು ಸೊಂಟಕ್ಕೆ ಹೂವ ತಡಿಕೆ ಹೊದ್ದು ನಿಂತಾಗ ಹೀಗೆ ಕಾಣುತ್ತಾಳೆ...
ಗಡಸರ್‌ ಸುಂದರಿ ಮುಡಿಯಲ್ಲಿ ಹಿಮವಿಟ್ಟುಕೊಂಡು ಸೊಂಟಕ್ಕೆ ಹೂವ ತಡಿಕೆ ಹೊದ್ದು ನಿಂತಾಗ ಹೀಗೆ ಕಾಣುತ್ತಾಳೆ...

ಕಶ್ಮೀರಿ ಹುಕ್ಕಾ ಸೇದುತ್ತಾ ಕುಳಿತ ಅಜ್ಜನೊಬ್ಬ ನನ್ನ ಕ್ಯಾಮೆರಾದೊಳಗೆ ಬಂದಿಯಾದ. ಸಣ್ಣ ಝರಿಯ ಜೋಗುಳದಲಿ, ನಕ್ಷತ್ರಗಳ ಹೊದಿಕೆ ಅಡಿಯಲಿ ನಿದ್ರಾ ದೇವಿಯ ವಶವಾಗಿದ್ದು ತಿಳಿಯಲೇ ಇಲ್ಲ!

ವಿಷ್ಣು ಸರ್ ಸರೋವರದಲ್ಲಿ: ಶೀತಲಮಯವಾದ ನಿಚ್‌ನಾಯ್‌ಯ ಮೋಡ ಕವಿದ ವಾತಾವರಣದಲ್ಲಿ ಶಾಸ್ತ್ರಕ್ಕೆಂಬಂತೆ ಬೆಳಗಿನ ಉಪಹಾರ ಸೇವಿಸಿ ಹೊರಟಿದ್ದೆವು. ಅದು ಸಣ್ಣ ಕಲ್ಲುಗಳ ಏರುದಾರಿ. ಎರಡು ಬೃಹತ್ ಪರ್ವತಗಳ ನಡುವಿನ ಕವಲ ನಡುವೆ ಪ್ರಯಾಣ. ಅಲ್ಲಲ್ಲಿ ಹಿಮ ದರ್ಶನ. ಹಿಮವನ್ನು ಎಂದೂ ನೋಡದವರಂತೆ ಮುಟ್ಟಿ, ತಿಂದು ಅಲ್ಲಿ ಜಿಗಿದು ಖುಷಿಪಟ್ಟೆವು. ಇಲ್ಲಿನ ತುದಿಯ ಎತ್ತರ 13,615 ಅಡಿ. 10.30ರೊಳಗೆ ನಮ್ಮ ತಂಡದ ಐವರು ಬೆಟ್ಟದ ತುದಿಯಲ್ಲಿದ್ದೆವು.

ಮುಂದೆ ನಿಚ್‍ನಾಯ್ ಪಾಸ್ ಕ್ರಾಸ್ ಮಾಡಲು ತಯಾರಾದೆವು. ನಿಚ್‌ನಾಯ್ ಪಾಸ್ ಸಂಪೂರ್ಣ ಹಿಮಭರಿತವಾಗಿತ್ತು. ಈ ಹಿಂದೆ ಹಿಮದಲ್ಲಿ ನಾನು ಬಿದ್ದುದರಿಂದ ಪಾಸ್ ದಾಟಲು ನಮ್ಮ ತಂಡದ ಸತೀಶ್ ಅವರ ಸಹಕಾರ ಪಡೆದು ನಿಧಾನಕ್ಕೆ ದಾಟಿದೆ. ಪಾಸ್ ದಾಟುವಲ್ಲಿ ಅನೇಕ ಮ್ಯೂಲ್ ಮತ್ತು ಕುದುರೆಗಳು ಎಡವುತ್ತಿದ್ದವು. ಬೆಟ್ಟಗಳ ರಕ್ಷಣಿಯಲ್ಲಿ ಸುತ್ತಲೂ ಹಳದಿ, ಬಿಳಿ, ಮತ್ತು ನೀಲಿ ಹೂಗಳು ಅರಳಿನಿಂತಿದ್ದವು.

ನಿಚ್‍ನಾಯ್ ಪಾಸ್‍ನಲ್ಲಿ ಹುಟ್ಟುವ ಝರಿಯೊಂದು ಪೂರ್ವಾಭಿಮುಖವಾಗಿ ಹರಿಯುತ್ತಿತ್ತು. ಅದರ ದಂಡೆಯಲ್ಲೇ ಕೂತು ತಂದ ತಣ್ಣಗಿನ ಬುತ್ತಿ ಬಿಚ್ಚಿ ತಿಂದೆವು. ವಾಹ್ ಆಹ್ಲಾದ. ನನ್ನೊಳಗೆ ಕಣಿವೆ ಸೌಂದರ್ಯವನ್ನು ಇಳಿಸುತ್ತಾ ನಿಧಾನಕ್ಕೆ ಎಲ್ಲರಿಗಿಂತ ಕೊನೆಯವನಾಗಿ ತಲುಪಿದೆ. ಸ್ವಲ್ಪ ಹೊತ್ತು ಕ್ಯಾಂಪ್‌ನಲ್ಲಿ ವಿರಮಿಸಿ ಸಂಜೆ ಹೊತ್ತಿಗೆ ಸ್ನಾನಮಾಡಿ ವಿಷ್ಣು ಸರ್ ಸರೋವರಕ್ಕೆ ಹೋಗಿ ಬಂದೆವು. ಕಾಲು ತೋಯಿಸಿ ಕುಳಿತಾಗ ಲೋಕ ಮರೆತ ಅನುಭವ.

ರಾತ್ರಿ ಹಿಮ ನದಿಗಳಲ್ಲಿ ಕಂಡು ಬರುವ ವಿಶಿಷ್ಟ ಟ್ರೋಟ್ ಮೀನಿನ ಸಮಾರಾಧನೆ ನಡೆದಿತ್ತು.

ಗಡಸರ್ ಸರೋವರದತ್ತ: ಬೆಳಿಗ್ಗೆ 7.15ಕ್ಕೆಲ್ಲ ತಿಂಡಿ ತಿಂದು ಪ್ಯಾಕ್ಡ್ ಲಂಚ್ ಹಿಡಿದು ಶಾಲಾ ಮಕ್ಕಳಂತೆ ಸಾಲಾಗಿ ಪುಳಕದಿಂದ ಹೊರಟು ನಿಂತೆವು. ಇದೊಂದು ಸುದೀರ್ಘ ದಿನವಾಗುತ್ತದೆಂದು ಎಲ್ಲರೂ ಮಾನಸಿಕವಾಗಿ ತಯಾರಾದೆವು. ಅದೆಲ್ಲಕ್ಕಿಂತಲೂ ಮುಖ್ಯವಾಗಿ 14,000 ಅಡಿ ಎತ್ತರದ ಗಡಸರ್ ಪಾಸ್ ದಾಟುತ್ತೇವೆಂಬ ಪುಳಕ!

ಕಿಷನ್ ಸರ್ ಸರೋವರದ ಬಳಿ ಬರುತ್ತಲೇ ಎದೆ ಬಡಿತ ವಿಪರೀತ! ಸರೋವರದ ಸನಿಹವೇ ಇದ್ದ ದುರಂಧರನಂತಹ ಶಿಖರಾಗ್ರ ಕಾಣುತ್ತಲೇ ಮನದಲ್ಲೇಕೋ ಕಸಿವಿಸಿ. ಕಪ್ಪಿರುವೆ ಸಾಲಿನಂತೆ ಚಲಿಸುತ್ತಿರುವ ಶಿಸ್ತಿನ ಚಾರಣಿಗರು. ಸ್ವಲ್ಪ ಅಶಿಸ್ತು ತೋರಿದರೂ ಕಿಶನ್‌ ಸರ್‌ ಸರೋವರದ ಪಾಲು. ಈ ಸರೋವರದ ಸೌಂದರ್ಯ ಸವಿಯದಂತೆ ಮಗ್ಗುಲ ಮುಳ್ಳಾಗಿ ನಿಂತಿತು ಗಡಸರ್‌ ಪಾಸ್‌. ಎದೆ ಝಲ್ ಎನಿಸುವ ಎತ್ತರ. ಮ್ಯೂಲ್‍ಗಳು ಮಾತ್ರ ಚಲಿಸುವಂತಹ ಓಣಿ ದಾರಿ.‌ ಕೊನೆಯ ಹಂತವಂತೂ ಬಲು ಕಠಿಣ. ಸಣ್ಣ ಕಲ್ಲುಗಳು ಬೂಟುಗಾಲಿಗೆ ಸಿಕ್ಕಿ ಕಾಲು ಜಾರುತ್ತಲಿತ್ತು. ಯಾವನೋ ಪುಣ್ಯಾತ್ಮ ನನ್ನನ್ನು ತುದಿ ತಲುಪಿಸಿದ.

ಹೂವ ಗಂಧ ತೇಲಿ ಬಂತು: ಹಸಿರು ಪಾಚಿ ಕಟ್ಟಿದಂತಹ ಒಂದೊಂದು ಸರೋವರದ ತುಣುಕೂ ಆಕಾಶದಿಂದ ಉದುರಿದ ವಿಶಿಷ್ಟ ತುಣುಕಿನಂತೆ ಗೋಚರಿಸುತ್ತಿತ್ತು. ಪಾಸ್‍ನ ಬಲ ಮಗ್ಗುಲಿಗೆ ಇದ್ದ ಎಲ್ಲಾ ಹಿಮಕರಗಿತ್ತು. ಜೊತೆಗೆ ಬಿಸಿಲು ಬಂದು ನಮ್ಮ ಅದೃಷ್ಟಕ್ಕೆ ನಿರಾಯಾಸವಾಗಿ ಪರ್ವತ ಏರಿದ್ದೆವು. ತೀವ್ರ ಇಳಿಜಾರಿನ ಕಣಿವೆ ಇಳಿಯುತ್ತಲೇ ಕಾಶ್ಮೀರದ ಹೂ ಕಣಿವೆ ಎದುರಾಗಿತ್ತು. ನೆತ್ತಿಯ ಮೇಲೆ ಕಂಡ ಕೆಂಡದ ಕೆಂಪು ಕುಸುಮಗಳು ಇಲ್ಲೆಲ್ಲೂ ಕಾಣಲಿಲ್ಲ. ಶ್ವಾಸಕೋಶದೊಳಗೆ ನುಗ್ಗುವ ಪ್ರತಿ ಉಸಿರಿನಲ್ಲೂ ಹೂವಗಂಧ. ಸ್ನೋ ಬಳಿದುಕೊಂಡು ನಿಂತ ಪ್ರತೀ ಶಿಖರದಿಂದ ಸಣ್ಣಗೆ ಝರಿಗಳು ಉದಯಿಸಿದ್ದವು. ಸ್ವಲ್ಪ ದೂರ ಬರುತ್ತಲೇ ಮಿಲಿಟರಿ ತಪಾಸಣೆ ನಡೆದಿತ್ತು.

ಮಧ್ಯಾಹ್ನದ ಹೊತ್ತಿಗೆ ಗಡಸರ್ ಸುಂದರಿ ನಮ್ಮೆದುರು ನಿಂತಿದ್ದಳು! ಮುಡಿಯ ತುಂಬಾ ಸ್ನೋ ಬಳಿದು ಸೊಂಟಕ್ಕೆ ಹೂವ ತಡಿಕೆ ಹೊದ್ದು ಗಿರಿಗಳ ನಡುವೆ ವೈಯಾರ ತೋರಿದಳು. 14,000 ಅಡಿಗಳೇರಿದ ಸಾಹಸಕ್ಕೆ ಕೊಂಬು ಮೂಡಿತು ನಮಗೆ. ಮುಂದಿನ ಮೂರು ಗಂಟೆಗಳ ನಡಿಗೆ ಎಲ್ಲಾ ಕೊಂಬು ಕಹಳೆಯನ್ನು ಕತ್ತರಿಸಿ ಹಾಕಿ ಬಿಟ್ಟಿತ್ತು. ಸವೆಸಿದರೂ ಸವೆಯದ ಹಾದಿ. ಹಾದಿ ಮುಗಿಯಲಿ ಎಂಬ ಪ್ರಾರ್ಥನೆ. ಹೂವ ಹಾಸಿಗೆಯಲಿ ಸೀಳುಮಾಡಿದಂತಹ ದಾರಿಯಲಿ ಮುಗಿಯದ ತಿರುವು ಮುರುವು. ನಾನು ಝರಿಯೊಂದರಲ್ಲಿ ಸ್ನಾನಕ್ಕಿಳಿದೆ. ಬರೋಬ್ಬರಿ 16.ಕಿ.ಮೀ ನಡಿಗೆ ಎಲ್ಲರನ್ನೂ ಹೈರಾಣಾಗಿಸಿತ್ತು. ಆದರೆ, ನಾನಂತೂ ಫ್ರೆಶ್‌ ಇದ್ದೆ ಎಂಬುದೇ ಆಶ್ಚರ್ಯ!

ಕುರಿ ಮೇಯಿಸಲು ಬಂದ ಕುಟುಂಬವೊಂದು ಹೊಟ್ಟೆ ಬಿರಿಯೆ ಲಸ್ಸಿ ಕೊಟ್ಟು ಹೊಟ್ಟೆ ತಂಪು ಮಾಡಿತು. 200ಕ್ಕೂ ಹೆಚ್ಚು ಕುರಿಗಳ ಕುಟುಂಬವದು. ಒಂದು ಕುರಿ ₹ 20 ಸಾವಿರದಿಂದ ₹ 1 ಲಕ್ಷದವರೆಗೆ ಬಿಕರಿ ಆಗುತ್ತೆ ಎಂದ. ಅಕ್ಕಿ, ದಾಲ್ ಎಲ್ಲವನ್ನೂ ಗಂಗ್ ಬಲ್‍ನಿಂದ ತರಬೇಕು ಎಂದು ಆ ಕುಟುಂಬದ ಮಾಲೀಕ ನಮ್ಮನ್ನು ಅಚ್ಚರಿಗೆ ಕೆಡಹಿದ. ನಮ್ಮ ನಾಲ್ಕು ಪಟ್ಟು ಇವರ ನಡಿಗೆ. ಅರ್ಧಲೀಟರ್ ಹಾಲು ಕೊಡುವ ಕುರಿ ಇಲ್ಲಿನ ತಂಪು ಹವೆಗೆ ಒಂದೂವರೆ ಲೀಟರ್ ಹಾಲು ಕೊಡುತ್ತದೆ ಎಂದು ಸಂತಸದಿಂದ ಮತ್ತಿಷ್ಟು ಲಸ್ಸಿ ಸುರಿದ.

ಗಡಸರ್‌ನಿಂದ ಸಾತ್‌ ಸರ್ ಸರೋವರದವರೆಗೆ ಮುಂದಿನ ಕತೆಯನ್ನು ಸ್ಪಲ್ಪ ಫಾಸ್ಟ್ ಫಾರ್ವರ್ಡ್‌ ಮಾಡುವೆ. ಚುಮು ಚುಮು ಚಳಿಗೆ ಕಾಫಿ ಹೀರಿ ತಿಂಡಿ ಸವಿದು ಜಾರುವ ಹಿಮಗಡ್ಡೆಯನ್ನು ದಾಟಿ ಬೆಟ್ಟದಲ್ಲಿ ಕಾಣುವ ಗೆರೆಗಳಂತಹ ದಾರಿಯಲಿ ಏರು ಪ್ರಯಾಣ. ಸಾವಿರ ಸಾವಿರ ಹೂಗಳ ಸಾತ್‌. ಜೊತೆಗೊಂದಿಷ್ಟು ವೈಲ್ಡ್‌ ಸ್ಟ್ರಾಬೆರಿಗಳು. ಸುತ್ತಲಿನ ಆಹ್ಲಾದಕರ ವಾತಾವರಣಕ್ಕೆ ಮನಸೊತಿತ್ತು.

ಏರಿಳಿತದ ದಾರಿಯಲಿ ಸಾಗಿ ಅತಿ ಸುಂದರ ಸಾತ್ ಸರ್ ಸರೋವರವನ್ನು ತಲುಪಿದೆವು.

ಚಳಿಯಲ್ಲಿ ಕುಳಿತು ದಾಲ್ ಚಾವಲ್ ಸವಿದಿದ್ದು ಒಂದು ಅನನ್ಯ ಅನುಭೂತಿ. ಸಹ ಚಾರಣಿಗರು ಶತಮಾನದಿಂದ ನಿದ್ದೆಯೇ ಮಾಡದವರಂತೆ ತಮ್ಮ ತಮ್ಮ ನಿದ್ರಾ ಚೀಲದೊಳಗೆ ಅವಿತರು. ಹೊಟ್ಟೆಯೊಳಗೆ ದಾಲ್‌ ಪಾಪಡ್, ಹೊರಗಡೆ ಜಡಿ ಮಳೆಯ ಸಹಕಾರ ಬೇರೆ. ಜೋಗುಳಕ್ಕೆ ಗಿರಿಗಳೆಡೆಯಿಂದ ಬೀಸುವ ಕುಳಿರ್ಗಾಳಿಯ ಸಾತ್. ಗೆಳೆಯನೊಬ್ಬ, ನಮ್ಮ ತಂಡದ ಡಾಕ್ಟರ್‌ ಒಬ್ಬರ ಎಚ್ಚರಿಕೆಯ ನಡುವೆಯೂ ವೈಲ್ಡ್‌ ಸ್ಟ್ರಾಬೆರಿಯನ್ನು ಮಂಗನಂತೆ ಮುಕ್ಕಿ ಪಾಯಿಖಾನೆ ಸೇರಿದ!

ಗಂಗ್‌ಬಲ್ ಸರೋವರಕ್ಕೆ: ಸಾತ್ ಸರ್ ಗುಡಾರದಿಂದ ಗಂಗ್‍ಬಲ್ ಕಡೆಗೆ ಬೆಳಿಗ್ಗೆ 8ಕ್ಕೆ ಹೊರಟು ನಿಂತೆವು. ಮೊದಲೆರಡು ಗಂಟೆ ಕಲ್ಲುಗಳೊಂದಿಗೆ ಸರಸಕ್ಕೆ ಬಿದ್ದೆವು. ದಾರಿಯುದ್ದಕ್ಕೂ ಬಂಡೆಗಳು. ಅವುಗಳಿಂದ ದಾರಿ ತಪ್ಪಿದ್ದೂ ತಿಳಿಯಲಿಲ್ಲ.

ಪರ್ವತದ ತಪ್ಪಲಲ್ಲಿ ಹೂವಿನ ರಾಶಿ
ಪರ್ವತದ ತಪ್ಪಲಲ್ಲಿ ಹೂವಿನ ರಾಶಿ

ಸುಮಾರು ಮೂರು ಗಂಟೆ ಮಂಜು ಕವಿದ ದಾರಿಯಲಿ ನಡೆದು ಮೂರನೆಯ ಜಾಜ್ ಪಾಸ್ ತಲುಪಿದೆವು. ತುದಿಯಲ್ಲಿ ಸ್ವಲ್ಪವೇ ಹಿಮ ಕವಿದಿತ್ತು. ತುದಿ ತಲುಪಿ ಹಿಮದಲಿ ಸ್ವಲ್ಪ ಹೊತ್ತು ಆಟ ಆಡಿದೆವು. ಜಾಜ್ ಪಾಸ್ ತುದಿಯಲ್ಲಿ ಕುಳಿತು ಸುಮಧುರ ಹಾಡು ಹಾಡಿದೆವು. ಮುಂದೆ ಸುಮಾರು ಎರಡು ಗಂಟೆಯ ಹೊತ್ತಿಗೆ ಗಂಗ್‌ಬಲ್ ಸರೋವರದ ದಂಡೆಯಲ್ಲಿದ್ದೆವು. ಗಂಗ್‌ಬಲ್‌ನ ಸೌಂದರ್ಯವನ್ನು ಮನಸಾರೆ ಸವಿದು ಹರಮುಖ್ ಶಿಖರವನ್ನು ಕಣ್ಣಲೇ ಧ್ಯಾನಿಸಿ ಅಲ್ಲೇ ಬಿಡಾರ ಹೂಡಿದ್ದ ಮೀನುಗಾರರನ್ನು ಮಾತಾಡಿಸಿದೆವು. ಯಾರು ಚಾರಣ ಮಾಡದ ಹರಮುಖ ಶಿಖರದ ಹಿಮದಿಂದಲೇ ತನ್ನೊಡಲನ್ನು ತುಂಬಿಸಿಕೊಳ್ಳುತ್ತಿರುವ ಗಂಗ್‌ಬಲ್ ಸರೋವರ ನೋಡುತ್ತಲೇ ದಂಗಾದೆವು. ವಿಶಾಲ ಆಕಾಶ ಚಪ್ಪರದಡಿ ಒಂದೆಡೆ ಗಂಗ್‌ಬಲ್ ಸ್ಥಿರವಾಗಿ ನಿಂತಿದೆ. ಗಂಗ್‌ಬಲ್‌ ಸರೋವರದ ಸನಿಹವೇ ನಂದ್‌ ಕೋಲ್‌ ಸರೋವರವೂ ಹರಡಿಕೊಂಡಿತ್ತು. ಅದರ ನೋಟವನ್ನ ತುಂಬಿಕೊಂಡು ಗುಡಾರದ ಕಡೆ ನಡೆದೆವು. ನಂದ್‌ ಕೋಲ್‌ನಿಂದ ಹೊರಟ ಝರಿಯೊಂದು ಕಣಿವೆಗೆ ಇಳಿಯುತ್ತಿತ್ತು. ಪ್ರವಾಹೋಪಾದಿಯಲ್ಲಿ ಹರಿವ ನೀರಿಗೆ ಸಣ್ಣದಾದ ಮರದ ದಿಮ್ಮಿಯನ್ನು ಅಡ್ಡಲಾಗಿ ಇರಿಸಲಾಗಿತ್ತು. ದಾಟುವಾಗ ಭಯಕ್ಕೆ ಹೃದಯ ಬಾಯಿಗೆ ಬಂದಂಥ ಅನುಭವ!

ನಾರಾನಾಗಕ್ಕೆ: ಏಳು ಸರೋವರ ನೋಡಿದ ಖುಷಿ, ಮಳೆ ಹಿಡಿಸಿದ ಕಸಿವಿಸಿಯಿಂದ ಪ್ರಾರಂಭವಾದ ಚಾರಣದ ಕೊನೆಯ ದಿನ ಸುಖವಾದ ಸುಪತ್ತಿಗೆಯ ಜೊತೆಗೆ ಹಂಸತೂಲಿಕದ ಯೋಚನೆಗಳಿಂದ ತುಂಬಿತ್ತು. ವಿಪರೀತ ಕಲ್ಲಿನ ರಾಶಿಯನ್ನು ದಾಟಿಕೊಂಡು, ಓಕ್ ಮರಗಳ ದಾರಿಯಲ್ಲಿ ಹನಿಮಳೆಯಲ್ಲಿ ನಡೆಯುತ್ತಾ ನಾರಾನಾಗ್ ಪಟ್ಟಣ ತಲುಪಿ ಅಲ್ಲಿಂದ ಶ್ರೀನಗರಕ್ಕೆ ಬಂದೆವು. ಅತ್ಯಂತ ಕಠಿಣವೂ ಆಹ್ಲಾದಕರವೂ ಆದ ಚಾರಣಕ್ಕೆ ತೆರೆಬಿದ್ದಿತು. ಚಿತ್ರಗಳ ಮೂಲಕ ನೆನಪನ್ನು ಹರವಿ ಕೂತಾಗ ಏನೋ ಖುಷಿ. ಜೀವನದಲ್ಲಿ ಒಮ್ಮೆಯಾದರೂ ಈ ಚಾರಣ ಮಾಡಬೇಕೆಂಬ ಕನಸು ಕೈಗೂಡಿದಕ್ಕೆ ಮಸ್ತ್‌ ಖುಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT