ಮಂಗಳವಾರ, ಸೆಪ್ಟೆಂಬರ್ 28, 2021
25 °C
ಲೋಕಸಭಾ ಚುನಾವಣೆ: ಮತ ಎಣಿಕೆಗೆ ವಿಧಾನಸಭಾ ಕ್ಷೇತ್ರವಾರು ಪ್ರತ್ಯೇಕ ವ್ಯವಸ್ಥೆ

ಮತ ಖಜಾನೆಗೆ ಮೂರು ಸುತ್ತಿನ ಭದ್ರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಮೂರು ಲೋಕಸಭಾ ಕ್ಷೇತ್ರಗಳ ಜನರ ತೀರ್ಪುಗಳು ಅಡಕವಾಗಿರುವ ಮತಯಂತ್ರಗಳು  ಸ್ಟ್ರಾಂಗ್‌ ರೂಮ್‌ಗಳನ್ನು ಸೇರಿದ್ದು, ಇದಕ್ಕೆ ಮೂರು ಸುತ್ತುಗಳ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿದೆ.

ಆಯಾ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಇವಿಎಂಗಳನ್ನು ಪ್ರತ್ಯೇಕವಾಗಿ ಶೇಖರಿಸಲಾಗಿದೆ. ಸ್ಟ್ರಾಂಗ್‌ ರೂಮ್‌ಗಳ ಕಿಟಕಿ, ಬಾಗಿಲುಗಳಿಗೂ ಇಟ್ಟಿಗೆ ಜೋಡಿಸಿ, ಗೋಡೆ ಕಟ್ಟಿ ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಆ ಕೋಣೆಗಳ ಒಳಗೆ ವಿದ್ಯುತ್‌ ಸಂಪರ್ಕವನ್ನೂ ಕಡಿತಗೊಳಿಸಲಾಗಿದೆ. 

ಇವಿಎಂಗಳನ್ನು ಸಂಗ್ರಹಿಸಿ ಇಟ್ಟಿರುವ ಕೇಂದ್ರಗಳಿಗೆ ಭದ್ರತಾ ಸಿಬ್ಬಂದಿ ಮೂರು ಸುತ್ತಿನ ರಕ್ಷಣಾ ಕೋಟೆ ನಿರ್ಮಿಸಿದ್ದಾರೆ. ಸ್ಟ್ರಾಂಗ್‌ ರೂಮ್‌ಗಳಿಗೆ ಕೇಂದ್ರ ಕೈಗಾರಿಕಾ ಮೀಸಲು ಪಡೆಯ (ಸಿಐಎಸ್‌ಎಫ್‌) ಸಶಸ್ತ್ರ ಭದ್ರತಾ ಸಿಬ್ಬಂದಿ ಪಹರೆ ಕಾಯುತ್ತಿದ್ದಾರೆ. ಎರಡನೇ ಸುತ್ತಿನಲ್ಲಿ ರಾಜ್ಯ ಮೀಸಲು ಪಡೆಯ ಸಿಬ್ಬಂದಿ ಮತ್ತು ಹೊರಾಂಗಣದ ಮೂರನೇ ಸುತ್ತಿನಲ್ಲಿ ಸಿವಿಲ್‌ ಪೊಲೀಸರು ಮೂರು ಪಾಳಿಯಲ್ಲಿ ಕಾವಲು ಕಾಯುತ್ತಿದ್ದಾರೆ.

ಸಿ.ಸಿ.ಟಿ.ವಿ. ಕ್ಯಾಮೆರಾಗಳು ದಿನದ 24 ಗಂಟೆಯೂ ಯಾಂತ್ರಿಕ ಕಣ್ಣು ಬಿಟ್ಟುಕೊಂಡು ಕೇಂದ್ರದಲ್ಲಿನ ಚಲನವಲನಗಳನ್ನು ನೋಡುತ್ತಿವೆ.

ಮತ ಎಣಿಕೆ ಕೇಂದ್ರಗಳು ಹಾಗೂ ಸ್ಟ್ರಾಂಗ್‌ ರೂಮ್‌ಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್‌ ಪ್ರಸಾದ್‌ ಶನಿವಾರ ಪರಿಶೀಲಿಸಿದರು.

ಮತಎಣಿಕೆ: ಸಂಪೂರ್ಣ ಚಿತ್ರೀಕರಣ
‘ಮತ ಎಣಿಕೆಯ ಸಂಪೂರ್ಣ ಪ್ರಕ್ರಿಯೆಯನ್ನು ಚಿತ್ರೀಕರಣ ಮಾಡಲಾಗುವುದು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಮಂಜುನಾಥ್‌ ಪ್ರಸಾದ್ ಹೇಳಿದರು.

‘ಚಿತ್ರೀಕರಿಸಿದ ವಿಡಿಯೊಗಳನ್ನು ಎಡಿಟ್‌ ಮಾಡದೆಯೇ ಅವುಗಳನ್ನು ಸಿ.ಡಿಯಲ್ಲಿ ತುಂಬಿ ಎಲ್ಲ ಅಭ್ಯರ್ಥಿಗಳಿಗೆ ಒಂದೊಂದು ಪ್ರತಿ ನೀಡಲಾಗುವುದು. ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಅವರು ತಿಳಿಸಿದರು.

‘ಪಕ್ಷಗಳ ಏಜೆಂಟರು ಎಣಿಕೆ ಕೇಂದ್ರದ ಒಳಗೆ ನಿಗದಿತ ಜಾಗದಲ್ಲಿ ಕೂರಲು ಅವಕಾಶ ಕಲ್ಪಿಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಹೀಗಿರಲಿದೆ ಮತ ಎಣಿಕೆ ಪ್ರಕ್ರಿಯೆ
* ಪ್ರತಿ ವಿಧಾನಸಭಾ ಕ್ಷೇತ್ರದ ಇವಿಎಂಗಳಲ್ಲಿನ ಮತಗಳನ್ನು ಎಣಿಸಲು 15 ಟೇಬಲ್‌ಗಳ ವ್ಯವಸ್ಥೆ

* ಪ್ರತಿ ಟೇಬಲ್‌ನಲ್ಲಿ ಮೂವರು ಸಿಬ್ಬಂದಿ 1.ಎಣಿಕೆ ಮೇಲ್ವಿಚಾರಕ 2.ಎಣಿಕೆ ಸಹಾಯಕ 3.ಸೂಕ್ಷ್ಮ ವೀಕ್ಷಕ

* ಮೊದಲಿಗೆ ಅಂಚೆ ಮತಗಳ ಎಣಿಕೆ

* ಇವಿಎಂ ಮತಗಳ ಎಣಿಕೆ

* ಪ್ರತಿ ವಿಧಾನಸಭಾ ಕೇತ್ರದ ಐದು ವಿವಿಪ್ಯಾಟ್‌ಗಳನ್ನು ಲಾಟರಿ ಮೂಲಕ ಆಯ್ದುಕೊಂಡು ಅದರಲ್ಲಿನ ಮತಚೀಟಿಗಳನ್ನು ಎಣಿಸಿ, ಅದೇ ಬೂತ್‌ನ ಇವಿಎಂನಲ್ಲಿ ಚಲಾವಣೆಗೊಂಡ ಮತಗಳೊಂದಿಗೆ ತಾಳೆ ಹಾಕುವುದು

* ಒಂದು ವೇಳೆ ಇವಿಎಂ ಮತ್ತು ವಿವಿಪ್ಯಾಟ್‌ಗಳ ನಡುವೆ ವೋಟುಗಳ ವ್ಯತ್ಯಾಸ ಕಂಡುಬಂದರೆ, ವಿವಿಪ್ಯಾಟ್‌ನಲ್ಲಿ ದಾಖಲಾದ ಮತಗಳನ್ನೆ ಅಂತಿಮವಾಗಿ ಎಣಿಕೆಗೆ ಪರಿಗಣಿಸುವುದು

* ಫಲಿತಾಂಶ ಘೋಷಣೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು