ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್‌ ರೋಗಿಗಳ ನೆರವಿಗೆ ‘ಪ್ರಮೇಯಾ ಫೆನ್ಸ್‌’

Last Updated 3 ಜನವರಿ 2020, 19:30 IST
ಅಕ್ಷರ ಗಾತ್ರ

ಕ್ಯಾ ನ್ಸರ್‌ ಎಂದು ಗೊತ್ತಾದಲೇ ರೋಗಿ ಧೃತಿಗೆಡುತ್ತಾನೆ. ಆತಂಕ, ಭೀತಿ ಹಾಗೂ ಭವಿಷ್ಯದ ಬಗ್ಗೆ ಅನಿಶ್ಚಿತತೆ ಕಾಡಲು ಶುರುವಾಗುತ್ತದೆ. ಇಂತಹ ಕ್ಯಾನ್ಸರ್‌ ರೋಗಿಗಳಿಗೆ ಚಿಕಿತ್ಸೆ ಜತೆಗೆ ಮಾನಸಿಕ ಬೆಂಬಲ ಹಾಗೂ ಧೈರ್ಯ ತುಂಬುವ ಕೆಲಸ ಮಾಡುತ್ತಿದೆ ಜಯನಗರದ ಪ್ರಮೇಯ ಹೆಲ್ತ್‌ ಕೇರ್‌ ಸಂಸ್ಥೆ.

ಆಸ್ಪತ್ರೆ ಅಲ್ಲದ, ರೋಗಿಗಳಿಗೆ ಸಕಾರಾತ್ಮಕ ಆಲೋಚನೆ ತುಂಬುವ ವಾತಾವರಣ ಕಲ್ಪಿಸುವುದು ಪ್ರಮೇಯಾದ ಉದ್ದೇಶ. ಹಾಗೇ ಕ್ಯಾನ್ಸರ್‌ ಕುರಿತಾದ ಜಾಗೃತಿ ಕಾರ್ಯಕ್ರಮ ಹಾಗೂ ಕ್ಯಾನ್ಸರ್‌ ಬರದಂತೆ ಹೇಗೆ ತಡೆಗಟ್ಟಬಹುದು ಎಂಬ ಕುರಿತು ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಕ್ಯಾನ್ಸರ್‌ ರೋಗಿಗಳಿಗೆ ಆರೋಗ್ಯಯುತ ಜೀವನ ನಡೆಸುವ ವಿಧಾನ ತಿಳಿಸಲು ಉಚಿತ ಕ್ಯಾನ್ಸರ್‌ ಸಪೋರ್ಟ್‌ ಪ್ರೋಗ್ರಾಮ್‌ ‘ಸಹಾಯ್‌ ಫೆನ್ಸ್‌’ ಆರಂಭಿಸಿದೆ. ಚಿಕಿತ್ಸೆ, ಆರೈಕೆ, ಚರ್ಮ ಹಾಗೂ ಕೂದಲ ರಕ್ಷಣೆ, ವಿಶ್ರಾಂತಿಯ ಅಗತ್ಯ ಹಾಗೂ ಫಿಟ್‌ನೆಸ್‌ ಹಾಗೂ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಡಲಾಗುತ್ತದೆ. ಹಿರಿಯ ತಜ್ಞರು ಹಾಗೂ ಥೆರಪಿಸ್ಟ್‌ಗಳು ಭಾಗವಹಿಸುತ್ತಾರೆ.

ಫೆನ್ಸ್‌ (FENS- ಫಂಕ್ಷನಲ್‌, ಎಮೋಶನಲ್‌, ನ್ಯೂಟ್ರಿಶಿನಲ್‌ ಹಾಗೂ ಸ್ಪಿರಿಚುವಲ್‌) ಇದರಲ್ಲಿ ಕ್ಯಾನ್ಸರ್‌ ಪೀಡಿತರು ಹಾಗೂ ಕ್ಯಾನ್ಸರ್‌ನಿಂದ ಗುಣಮುಖರಾದವರು, ಕ್ಯಾನ್ಸರ್‌ ಬಗ್ಗೆ ಅನುಮಾನ ಇರುವವರು ಭಾಗವಹಿಸಬಹುದು.ಇಲ್ಲಿ ಎಲ್ಲಾ ಗೊಂದಲ, ಆತಂಕಗಳಿಗೆ ತಜ್ಞರಿಂದ ಸಲಹೆ ಪಡೆಯಬಹುದು. ಯೋಗ, ವಿಶ್ಯುಲೈಜೇಷನ್‌, ಆರ್ಟ್‌ ಆ್ಯಂಡ್‌ ಡಾನ್ಸ್‌ ಥೆರಪಿಗಳನ್ನು ಮಾಡಲಾಗುತ್ತದೆ.

ಹಾಗೇ ಕ್ಯಾನ್ಸರ್‌ ರೋಗಿಗಳಿಗೆ ಯಾವ ರೀತಿ ಆಹಾರ ಸೇವಿಸಬೇಕು, ಕ್ಯಾನ್ಸರ್‌ ವಿರುದ್ಧ ಹೋರಾಡುವ ಗುಣವುಳ್ಳ ಆಹಾರಗಳು ಯಾವುವು ಎಂಬ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗುತ್ತದೆ.

‘ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ರೋಗಿಗಳಲ್ಲಿ ಶಕ್ತಿ ಕಡಿಮೆಯಾಗಿರುತ್ತದೆ. ಆಗ ಮಾಂಸ ಸೇವಿಸಿ ಎಂದು ಸಲಹೆ ನೀಡುತ್ತೇವೆ. ಆದರೆ ರೋಗಿಗಳು ಚಿಕಿತ್ಸೆ ಮುಗಿದ ಬಳಿಕವೂ ಅದನ್ನು ಮುಂದುವರಿಸುವುದರಿಂದ ದಪ್ಪಗಾಗುತ್ತಾರೆ. ಹಾರ್ಮೋನಲ್‌ ಮಾತ್ರೆ ತೆಗೆದುಕೊಂಡಾಗ ದೇಹದಲ್ಲಿ ಕೆಲ ಬದಲಾವಣೆಯಾಗುತ್ತದೆ. ನಮ್ಮ ಪರಿಸರದಲ್ಲೇ ಸುಲಭವಾಗಿ ಸಿಗುವ ಪೌಷ್ಟಿಕಾಂಶ ಆಹಾರದ ಬಗ್ಗೆ ತಿಳಿಸುತ್ತೇವೆ. ಶುಂಠಿ, ಅರಿಶಿನ ಕ್ಯಾನ್ಸರ್‌ ವಿರುದ್ಧ ಹೋರಾಡುವ ಗುಣ ಹೊಂದಿದೆ’ ಎಂದರು ಸಂಧ್ಯಾ.

ದೇವರಲ್ಲಿನ ನಂಬಿಕೆ ಹಾಗೂ ಸಕಾರಾತ್ಮಕ ಮನೋಭಾವದಿಂದ ರೋಗ ಅರ್ಧ ಗುಣವಾದಂತೆ. ಅದಕ್ಕಾಗಿ ಪ್ರಾಣಾಯಾಮ, ಧ್ಯಾನವನ್ನು ಹೇಳಿಕೊಡುತ್ತಾರೆ. ಕೆಲ ರೋಗಿಗಳಿಗೆ ಸುಖಾಸುಮ್ಮನೆ ಕೋಪ ಬರುತ್ತಿರುತ್ತದೆ. ಅಂತಹವರಿಗೆ ಕತೆ ಹೇಳುವ ಕಾರ್ಯಾಗಾರವನ್ನೂ ಇಲ್ಲಿ ನಡೆಸಿ, ಸಕಾರಾತ್ಮಕ ಆಲೋಚನೆಯನ್ನು ತುಂಬಲಾಗುತ್ತದೆ.

‘ಇಲ್ಲಿ ಸಪೋರ್ಟಿವ್ ಕೇರ್‌ ಚಿಕಿತ್ಸೆ ನೀಡಲಾಗುತ್ತದೆ. ಇಲ್ಲಿನ ಪರಿಣತರ ತಂಡವು ರೋಗಿಗಳಲ್ಲಿನ ಲಕ್ಷಣಗಳನ್ನು ಗುರುತಿಸಿ, ಪರಿಹಾರ ಒದಗಿಸಲು ನೆರವು ನೀಡುತ್ತದೆ. ಇಲ್ಲಿ ಬರೀ ದೈಹಿಕ, ಪೌಷ್ಠಿಕತೆಯಂತಹ ಆರೈಕೆಗೆ ಸೀಮಿತವಾಗುವುದಿಲ್ಲ. ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ’ ಎನ್ನುತ್ತಾರೆ ಸಂಧ್ಯಾರವಿ. ಆಸ್ಪತ್ರೆಯ ಸುತ್ತಲ ವಾತಾವರಣ ಹಸಿರಿನಿಂದ ಕೂಡಿದ್ದು, ರೋಗಿಗಳಿಗೆ ಆಪ್ತವಾಗುವಂತಿದೆ.

ಮಾನಸಿಕ ಬೆಂಬಲ ಅಗತ್ಯ

ಕ್ಯಾನ್ಸರ್‌ ಬಗ್ಗೆ ಜಾಗೃತಿ, ತಿಳುವಳಿಕೆ ಮೂಡಿಸುವ ಹಾಗೂ ಚಿಕಿತ್ಸೆ ಜೊತೆಗೆ ಮಾನಸಿಕ ಬೆಂಬಲ ನೀಡುವಂತಹ ಕಾರ್ಯಕ್ರಮ ರೂಪಿಸಲು ಕ್ಯಾನ್ಸರ್‌ ಸರ್ಜನ್‌ ಡಾ. ಸಂಧ್ಯಾ ರವಿ ಹಾಗೂ ಚಾರ್ಟರ್ಡ್‌ ಅಕೌಂಟೆಂಟ್‌ ಸುಧೀರ್‌ ಪೈ ನಾಲ್ಕು ವರ್ಷಗಳ ಹಿಂದೆ ಪ್ರಮೇಯ ಹೆಲ್ತ್‌ ಆರಂಭಿಸಿದರು.

ಜೀವನಶೈಲಿ ಬದಲಾವಣೆ, ವ್ಯಾಯಾಮರಹಿತ ಜೀವನ, ನಿದ್ದೆ ಮಾಡದೇ ಇರುವುದು, ಒತ್ತಡಗಳಿಂದ ಕಾಯಿಲೆ ಜಾಸ್ತಿಯಾಗುತ್ತಿವೆ. ದೇಹ ತೂಕ ಹೆಚ್ಚಿದ್ದರೆ ಅಂತಹವರಿಗೆ ಕ್ಯಾನ್ಸರ್‌ ಬರುವ ಸಾಧ್ಯತೆ ಹೆಚ್ಚು. ಹಾಗಾಗಿ ಸರಿಯಾದ ಆಹಾರ ಸೇವನೆ ಹಾಗೂ ವ್ಯಾಯಾಮದ ಮೂಲಕ ದೇಹತೂಕವನ್ನು ಸರಿಯಾಗಿಟ್ಟುಕೊಳ್ಳಬೇಕು. ಈಗ ಸ್ತನ ಕ್ಯಾನ್ಸರ್‌ ಹೆಚ್ಚುತ್ತಿರುವುದರಿಂದ ಗ್ರಾಮೀಣ ಭಾಗದ ಮಹಿಳೆಯರು 35 ವರ್ಷದ ನಂತರ ಒಮ್ಮೆಯಾದರೂ ವೈದ್ಯರಿಂದ ಪರೀಕ್ಷೆ ಮಾಡಿಸಿಕೊಳ್ಳಬೇಕು. ನಗರ ಪ್ರದೇಶದವರು 2–3 ವರ್ಷಗಳಿಗೊಮ್ಮೆ ಪರೀಕ್ಷೆ ಮಾಡಿಸಿಕೊಳ್ಳಿ. ಕ್ಯಾನ್ಸರ್‌ ಬೇಗ ಪತ್ತೆಯಾದರೆ ಬೇಗ ಗುಣಮಾಡಿಸಿಕೊಳ್ಳಬಹುದುಎನ್ನುತ್ತಾರೆ ಡಾ.ಸಂಧ್ಯಾರವಿ.

‘ಚಿಕಿತ್ಸೆ ಆರಂಭವಾದ ನಂತರ ಔಷಧಿಗಳ ಅಡ್ಡ ಪರಿಣಾಮ,ಆಯಾಸ,ನಿದ್ರಾಹೀನತೆಯಂತಹ ಕಹಿ ಅನುಭವಗಳನ್ನು ಅನುಭವಿಸಬೇಕು. ಸ್ತನ ಮತ್ತು ಗರ್ಭಕೋಶ ಕ್ಯಾನ್ಸರ್‌ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯರಲ್ಲಿ ದೇಹದ ರಚನೆಯಲ್ಲಿ ಬದಲಾವಣೆ ಕಂಡುಬರುತ್ತದೆ. ಅದರಲ್ಲಿ ಕೂದಲು ನಷ್ಟ, ಲೈಂಗಿಕತೆ ಮತ್ತು ಮಕ್ಕಳಾಗುವ ಸಮಸ್ಯೆ ಗಂಭೀರವಾದುದು. ಆರ್ಥಿಕ ಸಂಕಷ್ಟವೂ ಕಾಡುತ್ತದೆ. ಆಗ ಅವರಿಗೆ ಬೆಂಬಲ ,ಆರೈಕೆ ಮೂಲಕ ಧೈರ್ಯ ತುಂಬಬೇಕು. ಇದು ರೋಗಿಗಳನ್ನು ಬೇಗ ಗುಣಮುಖರಾಗುವಂತೆ ಮಾಡುತ್ತದೆ. ಇದೇ ತತ್ವವನ್ನು ಪ್ರಮೇಯಾದಲ್ಲಿ ಅನುಸರಿಸುತ್ತೇವೆ’ ಎನ್ನುವುದು ಅವರ ಮಾತು.

ಉಚಿತ ಚಿಕಿತ್ಸೆ

ಕ್ಯಾನ್ಸರ್‌ ‘ಫೆನ್ಸ್’ ಕಾರ್ಯಕ್ರಮಕ್ಕಾಗಿ www.prameyahealth.comಗೆ ಭೇಟಿ ನೀಡಿ ಮಾಹಿತಿ ತಿಳಿದುಕೊಳ್ಳಬಹುದು. ಅಥವಾ ಜಯನಗರದಲ್ಲಿನ ಪ್ರಮೇಯಾ ಹೆಲ್ತ್‌ಗೆ ನೇರ ಭೇಟಿ ನೀಡಬಹುದು. ಈ ಚಿಕಿತ್ಸೆ ಸಂಪೂರ್ಣ ಉಚಿತವಾಗಿರುತ್ತದೆ. ಜ.4ರಂದು ಫೆನ್ಸ್‌ ಕಾರ್ಯಕ್ರಮ ನಡೆಯಲಿದೆ.

ಪ್ರಮೇಯಾ ಹೆಲ್ತ್‌ ನಗರದ ಬೇರೆ ಬೇರೆ ಭಾಗಗಳಲ್ಲಿ ಜಾಗೃತಿ, ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಶಿಕ್ಷಣ ಸಂಸ್ಥೆಗಳು, ಕಾರ್ಪೋರೇಟ್‌ ಕಂಪನಿಗಳು, ಮಹಿಳಾ ಸಂಸ್ಥೆಗಳಿಗೆ ಭೇಟಿ ನೀಡಿ ಅಲ್ಲಿ ಮಾಹಿತಿ ನೀಡುತ್ತಾರೆ. ಸ್ತನಕ್ಯಾನ್ಸರ್‌ ಬಗ್ಗೆ ಸ್ವಯಂ ಪರೀಕ್ಷೆ ಪರೀಕ್ಷೆ ಮಾಡಿಸಿಕೊಳ್ಳುವ ಬಗ್ಗೆ ತರಬೇತಿ ನೀಡುತ್ತಾರೆ.

ಇಂದು ಜಾಗೃತಿ ಕಾರ್ಯಕ್ರಮ

ಟೊಳ್ಳು ಮೂಳೆ (ಆಸ್ಟಿಯೋಪೋರೊಸಿಸ್‌) ತಡೆ ಮತ್ತು ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ: ಪ್ರಾತ್ಯಕ್ಷಿಕೆ ಮತ್ತು ಉಪನ್ಯಾಸ– ಡಾ. ಆರತಿ ಪ್ರಸಾದ್‌, ಆಯೋಜನೆ– ಪ್ರಮೇಯ ಹೆಲ್ತ್‌ ಪ್ರಗ್ನ್ಯಾ, ಸ್ಥಳ– 250, 9ನೇ ಎ ಮುಖ್ಯ ರಸ್ತೆ, 3ನೇ ಬ್ಲಾಕ್‌, ಜಯನಗರ. ದಿನಾಂಕ– ಜನವರಿ 4, ಸಮಯ– ಮಧ್ಯಾಹ್ನ 3ರಿಂದ ಸಂಜೆ 5 ಪ್ರವೇಶ–ಉಚಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT