ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್‌ ಕೇಕ್‌ ತಯಾರಿಸಿ ಸ್ವಾವಲಂಬಿಯಾದ ಟೆಕ್ಕಿ

Last Updated 24 ಜೂನ್ 2019, 19:45 IST
ಅಕ್ಷರ ಗಾತ್ರ

ಐಟಿ ಕಂಪನಿಯಲ್ಲಿ ಕೆಲಸ, ಕೈತುಂಬ ಸಂಬಳ, ಇಷ್ಟೆಲ್ಲಾ ಅನುಕೂಲತೆಗಳು ಇದ್ದರೂ, ಅತಶ್ರೀಗೆ ಸ್ವಾವಲಂಬಿಯಾಗಿ ಬುದುಕುವ ಕನಸು ಮಾತ್ರ ಕೈಗೂಡಿರಲಿಲ್ಲ.

ಗ್ರಾಫಿಕ್‌ ಡಿಸೈನ್‌ ಬಗ್ಗೆ ಅವರಿಗೆ ಮೊದಲೇ ಒಲವು ಇತ್ತು. ಆದರೆ ಯಾವತ್ತೂ ಬೇಕರಿ ತಿನಿಸುಗಳನ್ನು ಮಾಡುವ ಸಾಹಸಕ್ಕೆ ಮಾತ್ರ ಕೈಹಾಕಿದವರು ಅಲ್ಲ. ಪತಿ ಹಲವು ಬಾರಿ ಕೇಳಿದರೂ ಅಡುಗೆಮನೆಯಿಂದ ಮಾತ್ರ ದೂರ ಉಳಿದಿದ್ದರು.

ಐಟಿ ಕಂಪನಿಯಲ್ಲಿ ಹಗಲಿರುಳು ದುಡಿದರೂ ನೆಮ್ಮದಿ ಇರಲಿಲ್ಲ. ಒಂದು ದಿನ ಈ ಕೆಲಸ ಬಿಡಲು ಗಟ್ಟಿ ನಿರ್ಧಾರ ಮಾಡಿದರು. ಗ್ರಾಫಿಕ್‌ ಡಿಸೈನರ್‌ ಆಗಿ ಬಡ್ತಿ ಪಡೆದುಕೊಂಡರು. ಆದರೆ ಈ ಕೆಲಸವೂ ಅಷ್ಟೊಂದು ಕೈಹಿಡಿಯಲಿಲ್ಲ.

‘ಮದುವೆಯಾದ ಮೇಲೆ ಮೊದಲ ಬಾರಿಗೆ ಪತಿಯ ಹುಟ್ಟುಹಬ್ಬ ಆಚರಿಸಬೇಕಿತ್ತು. ಅವರ ಇಷ್ಟದಂತೆ ನಾನೇ ಕೇಕ್‌ ಮಾಡಿಬಿಡೋಣ ಎಂದು ನಿರ್ಧರಿಸಿದೆ. ಒಂದೆರಡು ದಿನ ಇಂಟರ್‌ನೆಟ್‌ ನೋಡಿ ಪೂರ್ಣ ಮಾಹಿತಿ ಪಡೆದುಕೊಂಡು ಕೇಕ್‌ ಮಾಡಿದೆ. ಕೇಕ್‌ ತಿಂದವರೆಲ್ಲಾ ಮುಖ ಸಣ್ಣ ಮಾಡಿಕೊಂಡರು. ಆ ದಿನ ತುಂಬಾ ಬೇಸರ ಆಗಿತ್ತು. ಇದನ್ನೇ ಸವಾಲಾಗಿ ತೆಗೆದುಕೊಂಡು ಪ್ರತಿ ದಿನ ಸಮಯ ಸಿಕ್ಕಾಗಲೆಲ್ಲ ಕೇಕ್‌ ಮಾಡುವುದನ್ನು ರೂಢಿಮಾಡಿಕೊಂಡೆ. ಆ ಬಳಿಕ ಕಪ್‌ ಕೇಕ್‌ ಮಾಡಿ ಪತಿಗೆ ರುಚಿ ತೋರಿಸಿದೆ. ಅವರು ವ್ಹಾವ್‌ ಎಂದದ್ದು ಇನ್ನೂ ನೆನಪಿದೆ’ ಎಂದು ನೆನಪಿನ ಬುತ್ತಿ ತೆರೆದಿಟ್ಟರು.

‘ಮದುವೆಯಾದ ಮೇಲೆ ನಾನು ಈ ಮಟ್ಟದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬಲ್ಲೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ನನ್ನ ಕೇಕ್‌ ಅಭಿರುಚಿ ನನ್ನನ್ನು ಕೈಬಿಡಲಿಲ್ಲ. ಅಂತರರಾಷ್ಟ್ರೀಯ ಮಟ್ಟದಲ್ಲಿ ನನ್ನನ್ನು ಇಂದು ಗುರುತಿಸಿದೆ. ಮೊದಲು ಸ್ನೇಹಿತರು, ಅಕ್ಕ ಪಕ್ಕದ ಮನೆಯವರು, ಸಂಬಂಧಿಕರಿಂದ ಕೇಕ್‌ ಮಾಡಿಕೊಡುವಂತೆ ಆರ್ಡರ್ ಬರುತ್ತಿತ್ತು. ನಿಧಾನವಾಗಿ ಇದನ್ನೇ ಹೆಚ್ಚು ಮಾಡುತ್ತಾ ಹೋದೆ. ಅಂಗಡಿಯನ್ನೂ ತೆರೆದೆ. ಈಗಲೂ ನಾನು ಇದನ್ನು ವ್ಯವಹಾರ ಎಂದು ಕರೆಯುವುದಿಲ್ಲ. ಹವ್ಯಾಸ ಎನ್ನುತ್ತೇನೆ. ಯಾಕೆಂದರೆ ಆರ್ಡರ್ ಇದೆ ಅಂತ ಬೇಕಾಬಿಟ್ಟಿ ಮಾಡುವುದಿಲ್ಲ. ಆರ್ಡರ್‌ ಬಂದ ಮೇಲೆ ಸಮಯ ತೆಗೆದುಕೊಂಡು ಅಗತ್ಯ ಇದ್ದಷ್ಟೇ ತಯಾರಿಸುತ್ತೇವೆ. ನಾಳೆಗೆ ಇರಲಿ ಎಂದು ಒಂದು ಕೇಕನ್ನೂ ಹೆಚ್ಚು ಮಾಡುವುದಿಲ್ಲ. ಅದಕ್ಕೇ ಗ್ರಾಹಕರು ಈಗಲೂ ನಾನು ಮಾಡಿದ ಕೇಕ್‌ ತಿನ್ನಲು ಇಷ್ಟಪಡುತ್ತಾರೆ’ ಎನ್ನುವುದು ಅತಶ್ರೀ ಮಾತು.

ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮೇಲೆ ಬಂದ ಅತಶ್ರೀ ಅದೇ ಮಾದ್ಯಮಗಳಲ್ಲಿ ತಮ್ಮ ಕೇಕ್‌ ಅಭಿರುಚಿಯನ್ನು ಹಂಚುತ್ತಾ ಹೋದರು. ಒಂದು ವರ್ಷದಲ್ಲಿ 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇವರ ಬಳಿ ಕೇಕ್‌ ಮಾಡುವುದನ್ನು ಕಲಿತುಕೊಂಡಿದ್ದಾರೆ.

‘ಕೇಕ್‌ ಮಾಡುವುದನ್ನು ಕಲಿಸಿಕೊಡುವಂತೆ ವಿದ್ಯಾರ್ಥಿಗಳು ಆಗಾಗ ಕೇಳಿಕೊಳ್ಳುತ್ತಲೇ ಇದ್ದರು. ಆದರೆ ಬಿಡುವು ಸಿಕ್ಕಿರಲಿಲ್ಲ. ಈಗ ಒಂದು ವರ್ಷದಲ್ಲಿ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಕಾರ್ಯಾಗಾರ ಆಯೋಜಿಸಿದ್ದೇನೆ. ಆನ್‌ಲೈನ್‌ನಲ್ಲೂ ತರಗತಿ ತೆಗೆದುಕೊಳ್ಳುತ್ತೇನೆ. ಕೇಕ್‌ಗಿಂತಲೂ ಇದು ತುಂಬಾ ದೊಡ್ಡಮಟ್ಟದ ಯಶಸ್ಸನ್ನು ನನಗೆ ತಂದುಕೊಟ್ಟಿದೆ. ಉಪನ್ಯಾಸಕಿಯಾಗಿ ನಾನು ಈಗ ಎಲ್ಲೆಡೆ ಗುರುತಿಸಿಕೊಳ್ಳುತ್ತಿದ್ದೇನೆ. ಬಂದ ಅವಕಾಶಗಳನ್ನು ಮುಕ್ತವಾಗಿ ಸ್ವೀಕರಿಸಿದೆ. ಇದು ನನಗೆ ಬದುಕುವ ಹಾದಿಯನ್ನು ತೋರಿಸಿತು’ ಎಂದು ಅವರು ಹೆಮ್ಮೆಪಡುತ್ತಾರೆ.

ಕೇಕ್‌ ಮಾಡುವ ಕಲೆ
‘ಕೇಕ್‌ ಮಾಡುವುದು ಒಂದು ಕಲೆ. ಇದರ ಹಿಂದೆ ವಿಜ್ಞಾನ ಅಡಕವಾಗಿದೆ. ಮೊಟ್ಟೆ ಹಾಕದೇ ಕೇಕ್‌ನಲ್ಲಿ ರುಚಿ ಸಿಗುವಂತೆ ಮಾಡುವುದು ತುಂಬಾ ಕಷ್ಟ. ಅದರಲ್ಲೂ ಶುಗರ್‌ಲೆಸ್‌ ಕೇಕ್‌ ಮಾಡುವುದು ಇನ್ನೂ ಕಷ್ಟ. ಈ ಎಲ್ಲಾ ಪ್ರಯೋಗಗಳನ್ನು ಮಾಡಿದರಷ್ಟೇ ನಾವು ಮುಂದೆಬರಲು ಸಾಧ್ಯ. ಒಂದೇ ರೀತಿ ಕೇಕ್‌ ಮಾಡುತ್ತಿದ್ದರೆ ಉದ್ಯಮದಲ್ಲಿ ನಮ್ಮನ್ನು ಯಾರೂ ಗುರುತಿಸುವುದಿಲ್ಲ. ಬಟರ್‌ ಕ್ರೀಮ್‌ ಕೇಕ್‌ಗಳನ್ನು ಕೂಡ ಮಾಡಲು ಕಲಿತಿದ್ದೇನೆ’ ಎನ್ನುತ್ತಾರೆ ಕಪ್‌ಕೇಕ್‌ ನೇಷನ್‌ ಸ್ಟುಡಿಯೋದ ಮಾಲಕಿ ಅತಶ್ರೀ.

ಕೇಕ್‌ ಮಾಡುವುದನ್ನು ಅತಶ್ರೀ ಯಾರಿಂದಲೂ ಕಲಿತುಕೊಂಡಿಲ್ಲ. ಸಲಹೆಯನ್ನೂ ಪಡೆದುಕೊಂಡಿಲ್ಲ. ನಿರಂತರ ಪ್ರಯತ್ನ ಹಾಗೂ ಶ್ರಮದಿಂದಲೇ ಅವರು ಎಲ್ಲವನ್ನೂ ಸಾಧಿಸಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT