ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾರ್ಸೆಲ್‌ ಹುಡುಗರ ಹೊಟ್ಟೆಪಾಡು

Last Updated 18 ಮಾರ್ಚ್ 2019, 20:15 IST
ಅಕ್ಷರ ಗಾತ್ರ

ಇವತ್ಯಾಕೋ ಅಡುಗೆ ಮಾಡುವುದಕ್ಕೆ ಮನಸ್ಸಿಲ್ಲ ಎಂದು ಮನೆಯಾಕೆ ಹೇಳಿದ್ದೇ ತಡ ಪತಿರಾಯರು ಮೊಬೈಲ್‌ ಎತ್ತಿಕೊಂಡು ಪಿಜ್ಜಾ, ಕೆಎಫ್‌ಸಿ ಚಿಕನ್, ಪರೋಟಾ ಪನೀರ್ ಗ್ರೇವಿ, ಫ್ರೈಡ್‌ ರೈಸ್‌, ಹೈದರಾಬಾದಿ ಬಿರಿಯಾನಿ, ಚಿಕನ್‌ ನೂಡಲ್ಸ್‌, ಚಿಕನ್‌ ಚಿಲ್ಲಿ, ಫಿಷ್‌ ತವಾ ಫ್ರೈ... ಹೀಗೆ ತರಾವರಿ ಐಟಂ ಆರ್ಡರ್‌ ಮಾಡಿ, ಆನ್‌ಲೈನಿನಲ್ಲೇ ಹಣ ಪಾವತಿಸಿ ಮೊಬೈಲ್‌ ಕೆಳಗಿಡಬೇಕೆನ್ನುವಷ್ಟರಲ್ಲಿ ಕಾಲಿಂಗ್‌ ಬೆಲ್‌ ಬಡಿದುಕೊಳ್ಳುತ್ತದೆ. ಬಿಸಿಬಿಸಿ ಪಾರ್ಸೆಲ್‌ ತಂದ ಹುಡುಗ ಕೈಗಿತ್ತು ಬೆನ್ನು ಹಾಕಿ ತೆರಳುತ್ತಾನೆ.

ಪ್ರಮೋಷನ್‌ ಸಿಕ್ಕಿದ್ದೇ ತಡ ಗೆಳೆಯರ ಪಾರ್ಟಿ ಒತ್ತಡಕ್ಕೆ ಮಣಿದ ಕೂಡಲೇ ನೆನಪಾಗುವುದು uber eats, zomato, swiggy... ಪಾರ್ಟಿಗೊಂದು ನೆಪ ಬೇಕಷ್ಟೇ. ಅದು ಹುಟ್ಟುಹಬ್ಬ, ವಿವಾಹ ವಾರ್ಷಿಕೋತ್ಸವ, ಸೈಟ್‌, ಹೊಸ ಮನೆ, ಹೊಸ ಕಾರು ಎಲ್ಲದಕ್ಕೂ ಪಾರ್ಟಿ ಕೊಡಲೇಬೇಕು. ಅದಕ್ಕೆ ರೆಸ್ಟೋರೆಂಟ್‌ ಹುಡುಕೋದು ಬೇಡ. ಮದ್ಯಾಹ್ನದ ಊಟದ ಸಮಯವನ್ನೇ ಪಾರ್ಟಿ ಮೂಡ್‌ಗೆ ತಿರುಗಿಸಿದರೆ ಹೇಗೆ. ಆಗಲೂ ನೆನಪಾಗುವುದು ಆನ್‌ಲೈನ್‌.

ನಮ್ಮ ದಿಢೀರ್ ಪಾರ್ಟಿಗೆ, ಅಡುಗೆ ಮಾಡದಿರುವ ಉದಾಸೀನತೆಗೆ, ಬಾಯಿಚಪಲಕ್ಕೆ ತಕ್ಷಣ ಸ್ಪಂದಿಸುವ ಕೈಗಳ ಬಗ್ಗೆ ನಾವೆಷ್ಟು ಕನಿಕರಿಸಿದ್ದೇವೆ? ಬೈಕಿನ ಹಿಂಬದಿ ದೊಡ್ಡದೊಂದು ಊಟದ ಮೂಟೆ ಹೊತ್ತು ಗಲ್ಲಿಗಲ್ಲಿಗಳ ಮನೆ ಹುಡುಕಿ ನಗುಮೊಗದಿಂದಲೇ ಪಾರ್ಸೆಲ್‌ ಕೈಗಿತ್ತು ಹೋಗುವ ಹುಡುಗರ ಪಾಡು ಹೇಗಿರುತ್ತದೆ ಎಂದು ಕೇಳಿದ್ದೇವೆಯೇ? ಕೇಳಿದ್ದರೆ ನಾವು ಅವರ ಬಗ್ಗೆ ಹಗುರವಾಗಿ ಯೋಚಿಸಲು ಸಾಧ್ಯವೇ ಇಲ್ಲ.

ಬದುಕಿನ ಹಸಿವು ನೀಗಲು...

ನಮ್ಮ ಹಸಿವಿನ ಕರೆಗೆ ತಕ್ಷಣ ಸ್ಪಂದಿಸುವ ಈ ಹುಡುಗರಿಗೆ ಊಟದ ಹೊತ್ತು, ವಿರಾಮದ ಹೊತ್ತು ಎಂಬುದೇ ಇರುವುದಿಲ್ಲ. ಯಾರ ಹೊಟ್ಟೆಯ ಹಸಿವು ಎಷ್ಟು ಹೊತ್ತಿಗೆ ಕರೆಯುತ್ತದೋ ಅಲ್ಲಿಗೆ ಹೋದರೆ ಸರಿ. ಯಾಕೆಂದರೆ ಅವರದ್ದು ಕಮಿಷನ್‌ ಕೆಲಸ. ಗ್ರಾಹಕರ ಹಸಿವು ನೀಗಿದ ನಂತರವಷ್ಟೇ ತಮ್ಮ ಹೊಟ್ಟೆಗೆ ಊಟ. ಗ್ರಾಹಕರ ಊಟದ ಸಮಯ ಇವರು ಊಟಕ್ಕೆ ಹೋದರೆ ಕೆಲಸ ಕೆಟ್ಟಂತೆ. ಹಾಗಾಗಿ ಆರ್ಡರ್‌ ಕಡಿಮೆಯಾದ ಮೇಲೆ ಎಲ್ಲೋ ಗಾಡಿಯೋ, ಪುಟ್ಟ ಹೋಟೇಲಿನಲ್ಲಿಯೋ ಊಟದ ಶಾಸ್ತ್ರ ಮುಗಿಸುತ್ತಾರೆ. ಕೆಲಸ ಮುಗಿಸಿ ಮನೆ ಸೇರೋದು ಮಧ್ಯರಾತ್ರಿ. ಮಳೆ ಇರಲಿ, ಬಿಸಿಲಿರಲಿ ಟ್ರಾಫಿಕ್‌ ಇರಲಿ ಸ್ವಲ್ಪ ತಡವಾದರೆ ಗ್ರಾಹಕರ ರೇಗಾಟ ಸಹಿಸಬೇಕು. ಬದುಕಿನ ಅನಿವಾರ್ಯತೆ ಇಷ್ಟನ್ನೆಲ್ಲ ಬೇಡುತ್ತದೆ.

ಕರುಣೆ ಇರಲಿ

ಆನ್‌ಲೈನಿನಲ್ಲಿ ಆರ್ಡರ್‌ ಪಡೆದು ಆಹಾರ ಪೂರೈಸುತ್ತಿದ್ದ ಯುವಕನೊಬ್ಬ ಪಾರ್ಸೆಲ್‌ ಪೊಟ್ಟಣವನ್ನು ತೆರೆದು ಅದರಿಂದ ಸ್ವಲ್ಪ ಊಟ ತಿಂದುಬಿಟ್ಟಿದ್ದ. ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯವನ್ನು ವೈರಲ್ ಮಾಡಿದ್ದ ಕೆಲವರು ಆನ್‌ಲೈನ್‌ ಮೂಲಕ ಆಹಾರ ಖರೀದಿಸುವುದು ಎಷ್ಟು ಸುರಕ್ಷಿತ ಎಂಬ ಶೀರ್ಷಿಕೆಯಡಿ ಗ್ರಾಹಕರ ಪರವೇ ಕಾಳಜಿ ತೋರಿದ್ದರು. ಕೆಲವರಷ್ಟೇ ಮಾನವೀಯತೆಯ ದೃಷ್ಟಿಕೋನದಿಂದ ಹಸಿದವನ ಪರ ನಿಂತಿದ್ದರು. ತನಿಖೆ ನಡೆಸಿದ ಸಂಸ್ಥೆ ಆತನನ್ನು ಕೆಲಸದಿಂದ ತೆಗೆದು ಹಾಕಿ ಕೈತೊಳೆದುಕೊಂಡಿತು. ಆದರೆ, ಪಾರ್ಸೆಲ್‌ ಪೂರೈಸುವ ಯುವಕರಿಗೆ ಸರಿ ಹೊತ್ತಿನಲ್ಲಿ ಉಚಿತ ಅಥವಾ ಕಡಿಮೆ ದರದಲ್ಲಿ ಊಟ ನೀಡುವ ಆಫರ್‌ ಕೊಟ್ಟಿದ್ದರೆ ಅದೊಂದು ಮಾನವೀಯ ನಡೆಯಾಗುತ್ತಿತ್ತು.

ಬೈಕಿನಲ್ಲಿ ಪಾರ್ಸೆಲ್‌ ಆಹಾರ ಪೂರೈಸುವ ಹುಡುಗರು ಹೊತ್ತು ಹೊತ್ತಿಗೆ ಸರಿಯಾಗಿ ಊಟ ಮಾಡುತ್ತಾರೆಯೇ? ಹೋಟೆಲಿನಸಪ್ಲಯರ್‌, ಸದಾ ಕೈಬೆರಳುಗಳ ಸಂದಿಯಲ್ಲಿ ನೋಟಿನ ಕಂತೆ ಇಟ್ಟುಕೊಂಡಿರುವ ಕಂಡಕ್ಟರ್‌, ಬಟ್ಟೆ ಅಂಗಡಿಯ ಕೆಲಸಗಾರರು, ಚಿನ್ನದ ಅಂಗಡಿಯ ಉದ್ಯೋಗಿಗಳ ಬಗ್ಗೆ ಹೊರಗಿನ ಅನೇಕರಿಗೆ ಒಂದು ಬಗೆಯ ಧನ್ಯತಾ ಭಾವ ಇರುತ್ತದೆ. ಇವರದೂ ಅದೇ ಕತೆ.

ನಾವೇನು ಮಾಡಬಹುದು...

ಮನೆ ಬಾಗಿಲಿಗೆ ಪಾರ್ಸೆಲ್‌ ತಂದ ಹುಡುಗನಿಗೆ ನಗುಮುಖದ ಸ್ವಾಗತ ನೀಡಿ. ‘ಊಟ ಆಯ್ತಾ, ಕುಡಿಯಲೇನಾದರೂ ಬೇಕಾ’ ಕೇಳಿ. ಬೇಡವೆಂದರೂ ಸುಡುಬಿಸಿಲ ಹೊತ್ತು ತಣ್ಣಗಿನ ಮಜ್ಜಿಗೆಯನ್ನಾದರೂ ನೀಡಿ. ಹಣ್ಣೋ, ತಿನಿಸೋ ನೀಡಿ ಹೊಟ್ಟೆ ತಣ್ಣಗಾಗಿಸಿ. ಇದರಿಂದ ನಷ್ಟವೇನೂ ಆಗದು, ಬದಲಿಗೆ ನಿಮ್ಮ ಊಟದ ರುಚಿ ಹೆಚ್ಚೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT