ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಜಿ ರಸ್ತೆಯ ಫರಾ ಟವರ್‌ನಲ್ಲಿ ಬೆಂಕಿ ಅವಘಡ: ತಪ್ಪಿದ ಭಾರಿ ಅನಾಹುತ

Last Updated 18 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಎಂ.ಜಿ. ರಸ್ತೆಯಲ್ಲಿರುವ ಆರಂತಸ್ತಿನ ಕಟ್ಟಡ ‘ಫರಾ ಟವರ್‌’ನಲ್ಲಿ ಬುಧವಾರ ಮಧ್ಯಾಹ್ನ 2.45ರ ಸುಮಾರಿ ಬೆಂಕಿ ಅವಘಢ ಸಂಭವಿಸಿದ್ದು, ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ.

ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಪಕ್ಕದ ಬಾರ್ಟನ್‌ ಸೆಂಟರ್‌ ಕಟ್ಟಡದ ನಿರ್ವಹಣೆ ನೋಡಿಕೊಳ್ಳುವ ನೌಕರರು ಧಾವಿಸಿ ಬಂತು ಕಟ್ಟಡದ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದ್ದಾರೆ.

ನೆಲಮಹಡಿಯಲ್ಲಿ ಯುಕೋ ಬ್ಯಾಂಕಿನ ಶಾಖೆಯಿದ್ದು, ಮಹಡಿಗಳಿಗೆ ಹೋಗುವ ಮೆಟ್ಟಿಲುಗಳಿರುವ ಬಳಿಯಲ್ಲಿ ಕಟ್ಟಡಕ್ಕೆ ವಿದ್ಯುತ್‌ ಪೂರೈಸುವ ನಿಯಂತ್ರಣ ಪ್ಯಾನೆಲ್‌ ಇದೆ. ಇಲ್ಲಿ ಸಣ್ಣಗೆ ಕಾಣಿಸಿಕೊಂಡ ಬೆಂಕಿಯಿಂದ ವಿದ್ಯುತ್‌ ಉಪಕರಣಗಳು ಸುಡಲು ಆರಂಭವಾಗಿದೆ. ಕೆಲವೇ ಕ್ಷಣಗಳಲ್ಲಿ ಇಡೀ ಕಟ್ಟಡದಲ್ಲಿ ದಟ್ಟವಾದ ಹೊಗೆ ತುಂಬಿಕೊಂಡಿದೆ.

ಇದ್ದಕ್ಕಿದ್ದಂತೆ ದಟ್ಟ ಹೊಗೆ ಆವರಿಸಿಕೊಳ್ಳುತ್ತಿದ್ದಂತೆ ಕಟ್ಟಡದ ಎರಡನೇ ಮಹಡಿಯಲ್ಲಿರುವ ಡಿಟಿಡಿಸಿ ಕೊರಿಯರ್‌ ಸೆಂಟರ್‌, ಮೂರನೇ ಮಹಡಿಯಲ್ಲಿರುವ ಐಟಿ ತರಬೇತಿ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳು ಸೇರಿ 150ಕ್ಕೂ ಹೆಚ್ಚು ಮಂದಿ ಗಾಬರಿಗೊಂಡಿದ್ದಾರೆ. ಅಷ್ಟೇ ಅಲ್ಲದೆ, ಕಟ್ಟಡದಿಂದ ಕೆಳಗೆ ಜಿಗಿಯಲು ಮುಂದಾಗಿದ್ದಾರೆ. ಆದರೆ, ಬೆಂಕಿ ನಂದಿಸಲು ಬಂದಿದ್ದ ಸಮೀಪದ ಕಟ್ಟಡ ನೌಕರರು ಮತ್ತು ಸಾರ್ವಜನಿಕರು, ‘ಗಾಬರಿ ಪಡುವಂತದ್ದೇನೂ ಇಲ್ಲ. ಮೆಟ್ಟಿಲುಗಳ ಮೂಲಕ ಇಳಿದು ಬರುವಂತೆ’ ಸಲಹೆ ನೀಡುವಂತೆ ಸಲಹೆ ನೀಡಿದ್ದಾರೆ. ಆದರೂ ಆತಂಕಗೊಂಡ ಮೂರ್ನಾಲ್ಕು ಮಂದಿ ಕಟ್ಟಡದ ಹಿಂಭಾಗದಲ್ಲಿರುವ ಕಿಟಿಕಿ ಮೂಲಕ ಹಗ್ಗದ ನೆರವಿನಿಂದ ಕೆಳಗಿಳಿದಿದ್ದಾರೆ. ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳಕ್ಕೆ ದೌಡಾಯಿಸಿದ್ದಾರೆ.

‘ಲಿಫ್ಟ್‌ ಪಕ್ಕದ ಭದ್ರತಾ ಕೊಠಡಿಯಲ್ಲಿ ಸಿಡಿದ ಶಬ್ಧ ಕೇಳಿತು. ಕೂಡಲೇ ಬೆಂಕಿ ಕಾಣಿಸಿಕೊಂಡು ದಟ್ಟವಾದ ಹೊಗೆ ಆವರಿಸಿತು. ತಕ್ಷಣವೇ ಇಲ್ಲಿದ್ದ ಮೇನ್‌ ಪವರ್‌ ಯೂನಿಟ್‌ ನಿಲ್ಲಿಸಿದೆ. ಲಿಫ್ಟ್‌ ಒಳಗೆ ಯಾರೂ ಇರಲಿಲ್ಲ. ಇದರಿಂದ ಯಾವುದೇ ಹಾನಿಯಾಗಿಲ್ಲ’ ಎಂದು ಭದ್ರತಾ ಕಟ್ಟಡ ಸಿಬ್ಬಂದಿ ಗಜೇಂದ್ರ ತಿಳಿಸಿದರು.

ಘಟನಾ ಸ್ಥಳಕ್ಕೆ ಭೇಟಿ ನೀಡಿದ ರಾಜ್ಯ ಅಗ್ನಿಶಾಮಕದಳ ಎಡಿಜಿಪಿ ಸುನೀಲ್ ಅಗರವಾಲ್‌, ‘ಘಟನೆ ನಡೆದ ಮಾಹಿತಿ ಸಿಕ್ಕಿದ ತಕ್ಷಣ ನಮ್ಮ ಸಿಬ್ಬಂದಿ ಸ್ಥಳಕ್ಕೆ ತಲುಪಿದ್ದಾರೆ. ಅಲ್ಲದೆ ಹೆಚ್ಚಿನ ಅನಾಹುತ ಸಂಭವಿಸದಂತೆ ಕ್ರಮ ತೆಗೆದುಕೊಂಡಿದ್ದಾರೆ’ ಎಂದರು.

ಮೇಲ್ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದ್ಯಾರ್ಥಿಗಳು ಪ್ರಾಣಭಯದಿಂದ ಹಾರಿ ರಕ್ಷಣೆ ಪಡೆಯುವ ಯೋಚನೆಯಲ್ಲಿದ್ದ ದೃಶ್ಯ ಕಂಡು ಬಂತು –ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌
ಮೇಲ್ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವಿದ್ಯಾರ್ಥಿಗಳು ಪ್ರಾಣಭಯದಿಂದ ಹಾರಿ ರಕ್ಷಣೆ ಪಡೆಯುವ ಯೋಚನೆಯಲ್ಲಿದ್ದ ದೃಶ್ಯ ಕಂಡು ಬಂತು –ಪ್ರಜಾವಾಣಿ ಚಿತ್ರ / ಇರ್ಷಾದ್‌ ಮಹಮ್ಮದ್‌

‘ಎಲೆಕ್ಟ್ರಿಕ್ ಕೊಠಡಿಯಲ್ಲಿ ತುಂಬಾ ವಿದ್ಯುತ್‌ ವೈರ್‌ಗಳಿದ್ದವು. ಹೊಗೆ ಆವರಿಸಿಕೊಂಡಿದ್ದರಿಂದ ಜನರು ಗಾಬರಿಗೊಂಡರು. ಕಟ್ಟಡದಲ್ಲಿದ್ದವರ ಪೈಕಿ ಕೆಲವರು ಭೀತಿಯಿಂದ ಕಟ್ಟಡದ ಮೇಲೆ ಹೋದರು. ಎಲ್ಲರನ್ನೂ ಸುರಕ್ಷಿತವಾಗಿ ಹೊರಗೆ ಕರೆದುಕೊಂಡು ಬರಲಾಗಿದೆ. ಯಾರಿಗೂ ಯಾವುದೇ ತೊಂದರೆ ಆಗಿಲ್ಲ. ಶಾರ್ಟ್ ಸರ್ಕೀಟ್‌ನಿಂದ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ. ಈ ಬಗ್ಗೆ ತನಿಖೆ ಮಾಡುತ್ತೇವೆ. ಕಟ್ಟಡಕ್ಕೆ ಇಲಾಖೆಯಿಂದ ಪಡೆದ ವಾಸ್ತವ್ಯ ದೃಢೀಕರಣ ಪತ್ರ ಇದೆಯೇ ಎಂದೂ ಪರಿಶೀಲಿಸುತ್ತೇವೆ’ ಎಂದೂ ಹೇಳಿದರು.

ಪಾರಾದ 200 ಟೆಕಿಗಳು!

ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ಕನಸು ಹೊತ್ತು ನಾನಾ ರಾಜ್ಯಗಳಿಂದ ಬೆಂಗಳೂರಿಗೆ ಬಂದ ನೂರಾರು ಯುವ ಎಂಜಿನಿಯರಿಂಗ್‌ ಪದವೀಧರರ ಕನಸುಗಳು ಬುಧವಾರ ಸ್ವಲ್ಪ ಯಡವಟ್ಟಾಗಿದ್ದರೂ ಬೆಂಕಿಯ ಜ್ವಾಲೆಯಲ್ಲಿ ಕಮರಿ ಹೋಗುತ್ತಿದ್ದವು! ಅದೃಷ್ಟವಶಾತ್‌ ಸ್ವಲ್ಪದರಲ್ಲಿಯೇ ದೊಡ್ಡ ಅನಾಹುತವೊಂದು ತಪ್ಪಿದೆ.

ಐದಾರು ತಿಂಗಳ ಹಿಂದೆ (ಮೇ ತಿಂಗಳು) 25ಕ್ಕೂ ಹೆಚ್ಚುವಿದ್ಯಾರ್ಥಿಗಳನ್ನು ಬಲಿಪಡೆದ ಸೂರತ್‌ ಕೋಚಿಂಗ್‌ ಸೆಂಟರ್‌ ಬೆಂಕಿ ಅವಘಡ ಮಾಸುವ ಮುನ್ನವೇ ಮತ್ತೊಂದು ದುರಂತ ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ನಗರದ ಎಂ.ಜಿ. ರಸ್ತೆಯ ಬಾರ್ಟನ್‌ ಸೆಂಟರ್‌ ಪಕ್ಕದಲ್ಲಿರುವ ಯುಕೋ ಬ್ಯಾಂಕ್‌ ಕಟ್ಟಡದಲ್ಲಿ ಮಧ್ಯಾಹ್ನ ಶಾರ್ಟ್‌ ಸರ್ಕೀಟ್‌ನಿಂದ ಏಕಾಏಕಿ ಬೆಂಕಿ ಕಾಣಿಸಿಕೊಂಡಿತು. ನೆಲಮಹಡಿಯಲ್ಲಿ ಯುಕೋ ಬ್ಯಾಂಕ್‌ ಇದ್ದರೆ ಮೇಲಿನ ಮೂರ‍್ನಾಲ್ಕು ಮಹಡಿಗಳಲ್ಲಿ ಕಚೇರಿಗಳು ಮತ್ತು ಕೋಚಿಂಗ್‌ ಸೆಂಟರ್‌ ಇದೆ.

ಎರಡು ಮತ್ತು ಮೂರನೇ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೆಬ್‌ಸ್ಟೆಕ್ಸ್‌ ಅಕಾಡೆಮಿಯಲ್ಲಿ ನಾನಾ ರಾಜ್ಯಗಳಿಂದ ಬಂದಿರುವ ನಾಲ್ಕರಿಂದ ಐದುನೂರು ವಿದ್ಯಾರ್ಥಿಗಳು ಎಂಬೆಡೆಡ್‌ ಟೆಕ್ನಾಲಜಿ ತರಬೇತಿ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರ, ದೆಹಲಿ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಗುಜರಾತ್‌ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಿಂದ ಎಂಜಿನಿಯರಿಂಗ್‌ ಮುಗಿಸಿದ ನೂರಾರು ಪದವೀಧರರು ಇಲ್ಲಿದ್ದಾರೆ. ಆರು ತಿಂಗಳ ತರಬೇತಿ ಅವಧಿ ಪೂರ್ಣಗೊಳಿಸಿದರೆ ವಿವಿಧ ಕಂಪನಿಗಳಲ್ಲಿ ಸಂಸ್ಥೆಯೇ ಉದ್ಯೋಗ ಕೊಡಿಸುತ್ತದೆಯಂತೆ.

‘ಅಕಾಡೆಮಿಯಲ್ಲಿ ನಾಲ್ಕು ನೂರರಿಂದ ಐದು ನೂರು ಎಂಜಿನಿಯರಿಂಗ್‌ ಪದವೀಧರರು ತರಬೇತಿ ಪಡೆಯುತ್ತಿದ್ದಾರೆ. ಐದಾರು ಬ್ಯಾಚ್‌ಗಳಿದ್ದು, ಬೇರೆ, ಬೇರೆ ಅವಧಿಯಲ್ಲಿ ಕ್ಲಾಸ್‌ ನಡೆಯುತ್ತವೆ. ಪ್ರತಿ ಬ್ಯಾಚ್‌ನಲ್ಲಿ 45–50 ಜನರಿದ್ದಾರೆ.ಬುಧವಾರ ಮಧ್ಯಾಹ್ನ ಬೆಂಕಿ ಅವಘಡ ನಡೆದಾಗ ಮೂರ‍್ನಾಲ್ಕು ಬ್ಯಾಚ್‌ಗಳ ಸುಮಾರು 200 ವಿದ್ಯಾರ್ಥಿಗಳು ಕ್ಲಾಸ್‌ನಲ್ಲಿದ್ದರು’ ಎಂದು ಸ್ಥಳದಲ್ಲಿದ್ದ ಸಂಸ್ಥೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದರು.

‘ತರಗತಿಯಲ್ಲಿ ಮೊದಲು ಹೊಗೆ ಬರಲು ಆರಂಭವಾಯಿತು. ಕೆಲ ನಿಮಿಷಗಳಲ್ಲಿ ಹೊಗೆ ದಟ್ಟವಾಗಿ ಆವರಿಸಿತು. ಬೆಂಕಿಯ ಜ್ವಾಲೆ ಕಾಣಿಸಿಕೊಂಡಿತು’ ಎಂದು ವಿದ್ಯಾರ್ಥಿಗಳು ‘ಮೆಟ್ರೊ’ ಜತೆ ಅನುಭವ ಹಂಚಿಕೊಂಡರು.

‘ಕೂಡಲೇ ನಾವೆಲ್ಲರೂ ಗಾಬರಿಯಿಂದ ಮೆಟ್ಟಿಲಿನಿಂದ ಕೆಳಗೆ ಓಡಿ ಬಂದೆವು. ಇಡೀ ಕಟ್ಟಡದಲ್ಲಿ ಒಂದು ಚಿಕ್ಕ ಲಿಫ್ಟ್ ಮಾತ್ರ ಇದೆ’ ಎಂದು ಮುಂಬೈನ ಯುವಕ ತಿಳಿಸಿದ.

ಈಕೋಚಿಂಗ್‌ ಸೆಂಟರ್‌ನಲ್ಲಿ ಯುವಕರಿಗಿಂತ ಯುವತಿಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದು,ಘಟನೆಯ ನಂತರ ಜೀವಭಯದಿಂದತಂಡೋಪತಂಡವಾಗಿ ಕೆಳಗೆ ಧಾವಿಸಿದ ವಿದ್ಯಾರ್ಥಿಗಳು ಗುಂಪು, ಗುಂಪಾಗಿ ರಸ್ತೆಯಲ್ಲಿ ನಿಂತಿದ್ದರು. ಗಾಬರಿಯಿಂದ ಬಿಕ್ಕಳಸಿ ಅಳುತ್ತಿದ್ದ ಸಹಪಾಠಿಗಳನ್ನು ಅವರ ಗೆಳೆಯರು ಸಂತೈಸುತ್ತಿದ್ದರು.‘ಅಗ್ನಿಶಾಮಕದಳ ಸಿಬ್ಬಂದಿ ನಮಗೆ ನೆರವಾದರು’ ಎಂದು ವಿದ್ಯಾರ್ಥಿಗಳು ಕೃತಜ್ಞತೆ ಸಲ್ಲಿಸಿದರು.

‘ಇಕ್ಕಟ್ಟಾದ ಮೆಟ್ಟಿಲು, ಕಿರಿದಾದ ಪ್ಯಾಸೇಜ್‌, ಚಿಕ್ಕ ಲಿಫ್ಟ್‌, ಸಾಕಷ್ಟು ಗಾಳಿಯಾಡಲು ಕಿಟಕಿಗಳ ಕೊರತೆಯಿಂದ ಹೊಗೆ ದಟ್ಟವಾಗಿ ಆವರಿಸಿತ್ತು. ಇಡೀ ಕಟ್ಟಡದ ವಿದ್ಯುತ್‌ ಸರ್ಕೀಟ್‌ ಬೋರ್ಡ್‌ ಮೆಟ್ಟಿಲು ಕೆಳಗೆ ಇದೆ. ಅಲ್ಲಿಯೇ ಶಾರ್ಟ್‌ ಸರ್ಕೀಟ್‌ನಿಂದ ಬೆಂಕಿ ಹೊತ್ತಿಕೊಂಡಿದೆ’ ಎಂದು ವಿದ್ಯಾರ್ಥಿಗಳು ದೂರಿದರು. ಅವಘಡ ನಡೆದಾಗ ಬೆಂಕಿ ನಂದಿಸಲುಕೋಚಿಂಗ್‌ ಸೆಂಟರ್‌ ಮತ್ತು ಕಟ್ಟಡದಲ್ಲಿ ಯಾವುದೇಸುರಕ್ಷತಾ ಕ್ರಮ ಅಳವಡಿಸಿಲ್ಲ ಎಂದರು.

**

‘ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡ ತಕ್ಷಣ ನಮ್ಮ ಕಟ್ಟಡದಲ್ಲಿ ಕೆಲಸ ಮಾಡುವ ಭದ್ರತಾ ಸಿಬ್ಬಂದಿ ಮತ್ತು ಬೆಂಕಿ ನಂದಿಸುವ 25 ಸಿಲಿಂಡರ್‌ಗಳ ಸಹಿತ ಓಡಿ ಬಂದೆ. ದಟ್ಟವಾದ ಹೊಗೆಯ ಮಧ್ಯೆಯೇ, ಇಡಿ ಕಟ್ಟಡಕ್ಕೆ ವಿದ್ಯುತ್‌ ಸಂಪರ್ಕ ನಿಯಂತ್ರಣ ಪ್ಯಾನೆಲ್‌ ಇರುವ ಕೊಠಡಿಗೆ ನುಗ್ಗಿ ಸಂಪರ್ಕ ಕಡಿತಗೊಳಿಸಿದೆ. ಮೆಟ್ಟಿಲುಗಳ ಮೂಲಕ ಮಹಡಿಗಳಿಗೆ ತೆರಳಿ ಎಲ್ಲರನ್ನೂ ಕೆಳಗೆ ಹೋಗುವಂತೆ ಸೂಚಿಸಿದೆ’ ಎಂದು ಘಟನೆಯ ವೇಳೆ ಸಮಯಪ್ರಜ್ಞೆ ಮೆರೆದ ಬಾರ್ಟನ್‌ ಸೆಂಟರ್‌ ಕಟ್ಟಡದ ನಿರ್ವಹಣೆಕಾರ ಮೌಲಾನಾ ಅಲಿ ಹೇಳಿದರು.

ಮೌಲಾನಾ ಅಲಿ
ಮೌಲಾನಾ ಅಲಿ

‘ಅಗ್ನಿಶಾಮಕ ಸಿಬ್ಬಂದಿ ತಲುಪುವಷ್ಟರಲ್ಲಿ ಕಟ್ಟಡದ ಒಳಗಿದ್ದ ಎಲ್ಲರೂ ಹೊರಗೆ ಬಂದಿದ್ದರು. ಆದರೂ ಗಾಬರಿಯಿಂದ 2–3 ಮಂದಿ ಕಟ್ಟಡದ ಕಿಟಿಕಿ ಮೂಲಕ ಹೊರಗೆ ಜಿಗಿದಿದ್ದಾರೆ. ಅವರಿಗೂ ಯಾವುದೇ ಗಾಯಗಳಾಗಿಲ್ಲ. ಈ ಕಟ್ಟಡದಲ್ಲಿ ಬೆಂಕಿ ನಂದಿಸುವ ಯಾವುದೇ ಉಪಕರಣ ಇರಲಿಲ್ಲ. ಹೀಗಾಗಿ, ನಾವು ಕೆಲಸ ಮಾಡುವ ಕಟ್ಟಡದ ಉಪಕರಣಗಳನ್ನೇ ಬಳಸಿದೆವು. ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿಲ್ಲ’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT