ಸೋಮವಾರ, ಏಪ್ರಿಲ್ 19, 2021
31 °C

ಮೊಹರಂ ಭಾವೈಕ್ಯದ ತಳಪಾಯ

ನದಾಫ ಎಚ್. ಹತ್ತಿಮತ್ತೂರು Updated:

ಅಕ್ಷರ ಗಾತ್ರ : | |

ಇಸ್ಲಾಮಿಕ್ ಮೊಹರಂ ತಿಂಗಳು ಆರಂಭವಾಗುತ್ತಿದ್ದಂತೆಯೇ ಮೊಹರಂ ಆಚರಣೆ ಪ್ರಾದೇಶಿಕವಾಗಿ ವೈವಿಧ್ಯಮಯ ರೀತಿಯಲ್ಲಿ ನಡೆಯುತ್ತದೆ. ಈ ಆಚರಣೆಗೆ ಒಂದು ಇತಿಹಾಸವಿದೆ.

ಇಸ್ಲಾಮಿಕ್‌ನ ಜಿಲ್ಹೇಜ್ ತಿಂಗಳ ಕೊನೆಗೆ ಚಂದ್ರದರ್ಶನ ಆಗುತ್ತಿದಂತೆ ಮೊಹರಂ ತಿಂಗಳು ಆರಂಭವಾಗುತ್ತದೆ. ಈ ಚಂದ್ರದರ್ಶನವಾಗುತ್ತಿದ್ದಂತೆ ತಲೆತಲಾಂತರದಿಂದ ನಡೆದುಕೊಂಡು ಬಂದ ಸಂಪ್ರದಾಯದಂತೆ ಗ್ರಾಮದ ಗೌಡಕಿ ಮನೆತನದ ಮುಖಂಡನು ಆಲೆಕುಣಿ ತೆಗೆಯಲು ಗುದ್ದಲಿಪೂಜೆ ಮಾಡುತ್ತಾನೆ. ಕೆಲವೊಂದು ಗ್ರಾಮಗಳಲ್ಲಿ ಮುಲ್ಲಾನೆ ಈ ನೇಮ ಮಾಡುತ್ತಾನೆ. ಇಲ್ಲಿಂದಲೇ ಈ ಹಬ್ಬ ಪ್ರಾರಂಭವಾಗುತ್ತದೆ. ಗುದ್ದಲಿ ಪೂಜೆ ಮಾಡಿದ ಐದನೇ ದಿನಕ್ಕೆ ದೇವರ(ಅಲೈ)ನ್ನು ಪ್ರತಿಷ್ಠಾಪಿಸಿ ಐದು ದಿನಗಳವರೆಗೆ ಸಂಪ್ರದಾಯದಂತೆ ಆರಾಧಿಸುತ್ತಾರೆ.

ಪ್ರತಿಷ್ಠಾಪನೆ ಮಾಡಿದ ಕೆಲವು ವಿಶೇಷ ದಿನಗಳಂದು ರಾತ್ರಿ ಅರ್ಹತೆ ಪಡೆದ ವ್ಯಕ್ತಿಗಳ ಮೈಯಲ್ಲಿ ದೇವರು ಮೈದುಂಬಿಕೊಳ್ಳುತ್ತದೆ. ಆಗ ಅವರು ಈ ಆಲೈದೇವರುಗಳನ್ನು ಹಿಡಿದುಕೊಂಡು ಗ್ರಾಮದ ಬೀದಿಗಳಲ್ಲಿ ನಡೆಯುತ್ತಾ ಪ್ರಮುಖ ಹಿಂದೂ ದೇವಸ್ಥಾನದ ದೇವತೆಗಳನ್ನೂ ಭೇಟಿ ಮಾಡುತ್ತಾರೆ.

ಈ ಸಂದರ್ಭದಲ್ಲಿ ಗ್ರಾಮಸ್ಥರು ಇವರ ನಡುವೆ ರಕ್ತಸಂಬಂಧವನ್ನು ಕಲ್ಪಿಸುತ್ತ, ಅಕ್ಕ ತಮ್ಮ ಅಥವಾ ಅಣ್ಣ ತಂಗಿ ವರ್ಷಕ್ಕೊಮ್ಮೆ ಭೇಟಿಯಾಗುತ್ತಾರೆ. ಇವರಿಬ್ಬರೂ ಒಂದೇ ತಾಯಿಯ ಮಕ್ಕಳು ಎಂದು ಹೇಳುತ್ತಾ ತಮ್ಮ ತಮ್ಮಲ್ಲಿಯೇ ನಂಬಿಕೊಳ್ಳುತ್ತಾರೆ. ದೇವರು ಹಿಡಿದವರ ಮೈಮೇಲೆ ದೇವರ ಅವತಾರ ಬರುತ್ತದೆ ಎಂಬ ನಂಬುಗೆಯ ಮೇಲೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ದೇವರನ್ನು ಹೊತ್ತವರ ಪಾದವನ್ನು ಹಿಡಿದು ಹರಕೆ ಹೊರುತ್ತಾರೆ. ಹೀಗೆ ಹೊತ್ತಂತ ಹರಕೆಗಳು ಇಡೇರಿರುವುದರಿಂದ ಅವರ ನಂಬಿಕೆಗೆ ಸಾಕ್ಷಿಯಾಗಿವೆ.

ಐದನೇ ದಿನ ಬೆಳಿಗ್ಗೆ ಆಲೆಕುಣಿ ತೆಗೆದ ತಗ್ಗಿಗೆ ಕಟ್ಟಿಗೆಯನ್ನು ಹಾಕಿ ಕೆಂಡಮಾಡಿ ಆ ಕೆಂಡದ ಮೇಲೆ ಐದು ಸಲ ದೇವರನ್ನು ಹಿಡಿದವರು ನಡೆಯುತ್ತಾರೆ. ಅವರ ಮೈಯಲ್ಲಿ ದೇವರ ಅವತಾರ ಇರುವುದರಿಂದ ಅವರಿಗೆ ಬಿಸಿ ತಾಗುವುದಿಲ್ಲ ಎಂಬ ನಂಬಿಕೆ ಜನಪದರಲ್ಲಿದೆ. ಐದನೇ ದಿನ ಸಂಜೆ ಹೊಳಿಗೆ ಹೋಗುವುದು ಅಂದರೆ ಪ್ರತಿಷ್ಠಾಪನೆ ಮಾಡಿದ ಸ್ಥಳವನ್ನು ಬಿಟ್ಟು ಊರಿನ ಪಕ್ಕ ಹೊಳೆ, ಹಳ್ಳ, ಕೆರೆ, ಬಾವಿ, ಹೊಂಡದ ದಂಡೆಗಳಿಗೆ ಹೋಗಿ ಅಲ್ಲಿ ಮುದ್ರಿಕೆಗಳನ್ನು ಬಿಚ್ಚಿ ಮುಖ ತೊಳೆದು ಎಲ್ಲ ಮುದ್ರಿಕೆಗಳನ್ನು ಒಟ್ಟುಗೂಡಿಸಿ ಬಟ್ಟೆಯಲ್ಲಿ ಕಟ್ಟಿ ಅದನ್ನು ತಲೆ ಮೇಲೆ ಹೊತ್ತು ನ್ಯಾಯಕ್ಕಾಗಿ ಹೋರಾಡಿ ಬಲಿದಾನವಾದ ಹಸನ್-ಹುಸೇನರನ್ನು ಬೀಳ್ಕೊಡುವ ಹಾಡನ್ನು ಹಾಡುತ್ತ ಬಂದು ಆ ಮುದ್ರಿಕೆಯ ಗಂಟನ್ನು ಪ್ರತಿಷ್ಠಾಪನೆ ಮಾಡಿದ ಸ್ಥಳದಲ್ಲಿ ಇಡುತ್ತಾರೆ.

ಕೆಲವೊಂದು ಗ್ರಾಮಗಳಲ್ಲಿ ಈ ಮುದ್ರಿಕೆಯ ಗಂಟನ್ನು ಅಕ್ಕಸಾಲಿಗನ ಮನೆಯಲ್ಲಿಯೋ, ಗೌಡನ ಮನೆಯಲ್ಲಿಯೋ, ಕುಲಕರ್ಣಿಯ ಮನೆಯಲ್ಲಿಯೋ, ಶಾನಭೋಗರ ಮನೆಯಲ್ಲಿಯೋ, ಮುಲ್ಲಾನ ಮನೆಯಲ್ಲಿಯೋ ಇಡುವ ಸಂಪ್ರದಾಯವಿದೆ. ಈ ಮನೆಯವರು ಮುಂದಿನ ವರ್ಷದವರೆಗೂ ಗಂಟನ್ನು ಬಿಚ್ಚದೆ, ಇಟ್ಟ ಜಾಗದಿಂದ ಕದಲಿಸದೇ ದಿನಾಲು ಅದಕ್ಕೆ ಪೂಜೆ ಮಾಡುತ್ತಾ ಇರುತ್ತಾರೆ. ಹಿಂದೂ ಮುಸ್ಲಿಂಮರು ಕೂಡಿಕೊಂಡು ಆಚರಿಸುವ ಈ ಹಬ್ಬದಲ್ಲಿ ಅನೇಕರು ಅನೇಕ ರೀತಿಯಲ್ಲಿ ತಮ್ಮ ತಮ್ಮ ಬೇಡಿಕೆಯ ಹರಕೆಗಳನ್ನು ವಿವಿಧ ರೂಪಗಳಲ್ಲಿ ತೀರಿಸಿ ಅತೀ ವಿಜೃಂಭಣೆಯಿಂದ ಎಲ್ಲ ಸಮುದಾಯದವರು ಒಟ್ಟುಗೂಡಿ ಆಚರಿಸುವುದೇ ಬಲು ಚಂದ. ಮೊಹರಂ ಎಲ್ಲ ಧರ್ಮದವರ ಒಂದು ಶ್ರದ್ಧಾ ಭಕ್ತಿಯ ಆಚರಣೆಯಾಗಿ ಹೊರಹೊಮ್ಮಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು