ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾನೂ ಕನ್ನಡಮ್ಮ’ -ಅನ್ಯ ಭಾಷಿಗರ ಕಾಣಿಕೆ

Last Updated 4 ನವೆಂಬರ್ 2019, 8:45 IST
ಅಕ್ಷರ ಗಾತ್ರ

ಬೀದರು ನನ್ನ ಕಿರೀಟ
ಚೆಂದವೋ ಪ್ರಕೃತಿ ಮಾಟ
ಗುಲ್ಬರ್ಗದ ಬಿಸಿಲಿನ ಆಟ
ಜೊತೆ ಜೋಳದ ರೊಟ್ಟಿಯ ಊಟ

ನಾನೂ ಕನ್ನಡಮ್ಮ ಎಂಬ ಈ ಹಾಡು ಶುರುವಾಗುವುದು ಹೀಗೆ. ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಅನ್ಯ ಭಾಷಿಗರು ಕನ್ನಡ ನಾಡು ನುಡಿಗಾಗಿ ಅರ್ಪಿಸಿದ ಸಂಗೀತ ಕಾಣಿಕೆ ಇದು. 'ಫ್ರಮ್ ಮಗ್ ಟು ಮೈಕ್' ಖ್ಯಾತಿಯ ಗಾಯಕ ಸುನಿಲ್ ಕೋಶಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದ ಈ ಹಾಡಿನ ರಚನೆ ಮತ್ತು ಪರಿಕಲ್ಪನೆ ಡಾ. ವಿ. ನಾಗೇಂದ್ರ ಪ್ರಸಾದ್ ಅವರದ್ದು.

ದೇಶದ ವಿವಿಧ ರಾಜ್ಯಗಳಿಂದ ಬಂದು ಬೆಂಗಳೂರಿನಲ್ಲಿ ನೆಲೆಸಿರುವ ಅನ್ಯ ಭಾಷೆಯ ಗಾಯಕರು ಹಾಡಿದ ಆಲ್ಬಂ ಇದು ಎಂಬುದು ವಿಶೇಷ. ಡಾಕ್ಟರ್, ಇಂಜಿನಿಯರ್, ವಿಜ್ಞಾನಿ, ಕಂಪನಿಯೊಂದರ ಸಿಇಒ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ವ್ಯಕ್ತಿಗಳೇ ಇಲ್ಲಿ ಗಾಯಕರು. ರಾಜ್ಯದ ಮೂವತ್ತು ಜಿಲ್ಲೆಗಳ ವೈಶಿಷ್ಟ್ಯವನ್ನು ಬಣ್ಣಿಸುವ ಈ ಹಾಡಿನ ಕ್ರಿಯೇಟಿವ್ ಡೈರೆಕ್ಟರ್ ಸುನಿಲ್ ಕೋಶಿಯವರ ಪತ್ನಿ ಅರ್ಚನಾ ಹಳ್ಳಿಕೇರಿ. ನಿರ್ದೇಶನ ಸಂತೋಷ ಬೆಟಗೇರಿ ಅವರದ್ದು.

ಮೂಲತಃ ಕೇರಳದವರಾದ ಸುನಿಲ್ ಕೋಶಿ 'ಫ್ರಮ್ ಮಗ್ ಟು ಮೈಕ್' ಎಂಬ ಕಾರ್ಯಾಗಾರದ ಮೂಲಕ ಬಾತ್ರೂಮ್ ಗಾಯಕರ ಕೈಗೆ ಮೈಕ್ ಕೊಟ್ಟು ವೇದಿಕೆಯಲ್ಲಿ ಹಾಡುವಂತೆ ಮಾಡಿದವರು. ಐಟಿ ಜಗತ್ತು ಬಿಟ್ಟು ತಮ್ಮ ಹವ್ಯಾಸವನ್ನೇ ಕಾಯಕವಾಗಿಸಿಕೊಂಡ ಸುನಿಲ್ ಆಗ ಕನ್ನಡ ಸಿನಿಮಾ ರಂಗದಲ್ಲಿ ಸಂಗೀತ ನಿರ್ದೇಶಕರಾಗಿದ್ದಾರೆ.

ಈ ಗಾಯಕರಲ್ಲಿ 9 ಮಂದಿ ಅನ್ಯಭಾಷಿಗರಾಗಿದ್ದು ಎಲ್ಲರಿಗೂ ಕನ್ನಡ ಪದಗಳ ಉಚ್ಛಾರಣೆ ಜತೆಗೆ ಒಂದಷ್ಟು ಕನ್ನಡವನ್ನು ಕಲಿಸಿಕೊಟ್ಟಿದ್ದು ಅರ್ಚನಾ ಹಳ್ಳಿಕೇರಿ. ಹಾಡುವುದಕ್ಕಿಂತ ಮುನ್ನ ಕನ್ನಡದಲ್ಲಿ ಸಂವಹನ ಮಾಡುವುದನ್ನೂ ಕಲಿಸಿದ್ದ ಅರ್ಚನಾ ಕನ್ನಡ ಕಲಿಕೆಯ ಅಗತ್ಯವನ್ನೂ ಈ ಗಾಯಕರಿಗೆ ಮನವರಿಕೆ ಮಾಡಿಸಿದ್ದಾರೆ ಅಂತಾರೆ ಸುನಿಲ್.

ಕನ್ನಡ ನಾಡಿನ ಉದ್ದಗಲಕ್ಕೂ ಸಂಚರಿಸಿ ಬೆಂಗಳೂರಿಗೆ ಬಂದಾಗ ಇಲ್ಲಿನ ಕನ್ನಡ ಹೇಗಿರುತ್ತದೆ ಎಂಬುದರ ಬಗ್ಗೆಯೂ ಈ ಹಾಡಿನಲ್ಲಿ ಹೇಳಲಾಗಿದೆ. ‘ಕನ್ನಡ್ ಗೊತ್ತಿಲ್ಲ, ತೆರಿಯಿಲೆ’ ಎಂದು ಹೇಳುವ ಮಂದಿ ನಡುವೆ ಕನ್ನಡ ಕಲಿಯೋಕೆ ಟ್ರೈ ಮಾಡ್ತೀನಿ, ನನಗೂ ಕನ್ನಡ ಬರುತ್ತೆ ಎಂದು ಹೇಳಿದವರನ್ನು ಕೇಳುವಾಗ ಸಂತೋಷವಾಯಿತು ಎಂದು ಹೇಳುವ ಮೂಲಕ ಹಾಡು ಕೊನೆಯಾಗುತ್ತದೆ. ಬೆಂಗಳೂರಿಗೆ ಬಂದ ಮೇಲೆ ಕನ್ನಡ ಕಲಿತಿರುವ ಮಲಯಾಳಿ ಸುನಿಲ್, ಇತರರೂ ಕನ್ನಡ ಕಲಿಯಿರಿ ಎಂಬ ಸಂದೇಶವನ್ನು ಈ ಆಲ್ಬಂ ಮೂಲಕ ದಾಟಿಸಿದ್ದಾರೆ.

ಸುನಿಲ್ ಕೋಶಿ
ಸುನಿಲ್ ಕೋಶಿ

ನವೆಂಬರ್ 1ರಂದು ಬಿಡುಗಡೆಯಾದ ಈ ಆಲ್ಬಂಗೆ ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದೆ. ಎಲ್ಲ ಜಿಲ್ಲೆಗಳ ವೈಶಿಷ್ಟ್ಯವನ್ನು ಸುಲಭವಾಗಿ ನೆನಪಿಡಲು ಈ ಹಾಡು ಸಹಾಯವಾಯಿತು. ನಮ್ಮ ರಾಜ್ಯದಲ್ಲಿ ಇಷ್ಟೊಂದು ಚಂದದ ಸ್ಥಳಗಳಿವೆ ಎಂಬುದು ಗೊತ್ತಾಯ್ತು ಎಂದು ಜನರು ಪ್ರತಿಕ್ರಿಯಿಸುವಾಗ ಖುಷಿಯಾಗುತ್ತದೆ. ಹಾಡಿನ ಮೂಲಕ ರ‍್ನಾಟಕದ ಸೊಗಡನ್ನು ಮತ್ತು ಕನ್ನಡ ಕಲಿಕೆಯ ಸಂದೇಶವನ್ನು ದಾಟಿಸಬೇಕು ಎಂಬ ಉದ್ದೇಶ ನನ್ನದಾಗಿತ್ತು. ಅದು ಸಫಲವಾಗಿದೆ ಎಂದು ಭಾವಿಸುತ್ತೇನೆ.

-ಸುನಿಲ್ ಕೋಶಿ

ಹಾಡಿನ ಲಿಂಕ್ :https://bit.ly/329wBHD

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT