ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿಯಲ್ಲ, ಸರ್ಕಾರಿ ಟ್ರಾಮಾ ಸೆಂಟರ್‌

Last Updated 4 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಸರ್ಕಾರಿ ಆಸ್ಪತ್ರೆಗಳು ಕೂಡ ಅತ್ಯಾಧುನಿಕ ವೈದ್ಯಕೀಯ ಸೌಕರ್ಯಗಳನ್ನು ಹೊಂದುತ್ತಿರುವುದು ಒಳ್ಳೆಯ ಬೆಳವಣಿಗೆ. ಸರ್ಕಾರಿ ಆಸ್ಪತ್ರೆಗಳ ಘನತೆಯನ್ನು ಹೆಚ್ಚಿಸುವ ಆಧುನಿಕ ಟ್ರಾಮಾ ಸೆಂಟರ್‌ನಂಥ ವ್ಯವಸ್ಥೆಯ ಬಗ್ಗೆ ‘ಮೆಟ್ರೊ’ ಸಮಗ್ರ ವರದಿ ಇದು.

ಇದು ನಗರದ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ ‘ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ’ದ ನೋಟ. ಈ ಟ್ರಾಮಾ ಘಟಕಯಾವುದೇ ಖಾಸಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಿಂತ ಕಡಿಮೆ ಇಲ್ಲ. ತುರ್ತು ಚಿಕತ್ಸೆಗಾಗಿಯೇ ಪ್ರತ್ಯೇಕವಾಗಿ ನಿರ್ಮಿಸಲಾದ ಟ್ರಾಮಾ ಘಟಕವು ಅಪಘಾತ ಹಾಗೂ ತುರ್ತು ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿದೆ.

ಬೆಂಗಳೂರು ನಗರದಲ್ಲಿ ತುರ್ತು ಚಿಕಿತ್ಸೆಗೆ ಹೆಚ್ಚು ಖ್ಯಾತಿ ಪಡೆದಿರುವ ಈ ಘಟಕ ರಾಜ್ಯ ಸೇರಿದಂತೆ ದೇಶದಲ್ಲೇ ಉತ್ತಮ ‘ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ’ ಎಂದು ಪ್ರತಿ ವರ್ಷವೂ ಪ್ರಮಾಣ ಪತ್ರ ಪಡೆಯುತ್ತಿದೆ.

‘ಉತ್ತಮ ಸೌಲಭ್ಯ ನೀಡುವ ಈ ಕೇಂದ್ರವು 2016ರಲ್ಲಿ ಆರಂಭವಾಗಿತ್ತು. ಇಲ್ಲಿಗೆ ದಿನಕ್ಕೆ 70 ರಿಂದ 80 ರೋಗಿಗಳು ತುರ್ತು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಈ ಆಸ್ಪತ್ರೆ 200 ಬೆಡ್‌ಗಳನ್ನು ಮಾತ್ರ ಹೊಂದಿದೆ. ಬರುವ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುತ್ತದೆ. ಅದರಲ್ಲೂ ಸಂಜೆಯಾದರೆ ಸಾಕು ಅಪಘಾತವಾಗಿರುವವರ ಸಂಖ್ಯೆ ಹೆಚ್ಚು. ಬರುವ ರೋಗಿಗಳ ಸಂಖ್ಯೆ ಕಡಿಮೆ ಇಲ್ಲ. ಆದರೆ ಬೆಡ್‌ಗಳು ಇರುವಷ್ಟು ರೋಗಿಗಳನ್ನು ದಾಖಲಿಸಿಕೊಳ್ಳುತ್ತೇವೆ. ಮಿಕ್ಕಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ನಗರದಲ್ಲಿರುವ ಬೇರೆ ಸರ್ಕಾರಿ ಆಸ್ಪತ್ರೆಗೆ ಹೋಗುವಂತೆ ಸಲಹೆ ನೀಡುತ್ತೇವೆ’ ಎನ್ನುತ್ತಾರೆ ಡಾ. ಆಸಿಮಾ ಬಾನು.

ಅಪಘಾತದಲ್ಲಿ ಗಾಯಗೊಂಡವರು ಇಲ್ಲಿ ಹೆಚ್ಚಾಗಿ ದಾಖಲಾಗುತ್ತಾರೆ. ಆ ಸಂದರ್ಭದಲ್ಲಿ ಮೂಳೆಗಳಿಗೆ ಸಂಬಂಧಿಸಿದ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಅದಕ್ಕಾಗಿಯೇ ಪ್ರತ್ಯೇಕ ವಾರ್ಡ್‌ಗಳ ವ್ಯವಸ್ಥೆ ಮಾಡಲಾಗಿದೆ. ಲ್ಯಾಬ್ ವ್ಯವಸ್ಥೆ ಕೂಡ ಇದೆ. ಯಾವಾಗ ಬೇಕಾದರೂ ಅಪಘಾತದ ಕೇಸುಗಳು ಬರಬಹುದು ಹಾಗಾಗಿ ಈ ಕೇಂದ್ರವು 24 ಗಂಟೆಗಳ ಕಾಲ ಕಾರ್ಯ ನಿರ್ವಹಿಸುತ್ತದೆ. ಸ್ವಚ್ಛತೆ ಕಾಪಾಡಲು ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಸ್ನಾನ ಕೂಡ ಮಾಡಿಸಲಾಗುತ್ತದೆ. ವಾರಕ್ಕೆ ಒಂದು ಬಾರಿ ಅವರ ಸಂಪೂರ್ಣ ಆರೋಗ್ಯ ತಪಾಸಣೆ ಕೂಡ ಮಾಡಲಾಗುತ್ತದೆ ಎಂದು ಡಾ. ಆಸಿಮಾ ವಿವರಿಸುತ್ತಾರೆ.

ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿರುವ ಸ‌ರ್ಕಾರಿ ಆಸ್ಪತ್ರೆಯ ವೈದ್ಯರು ರೋಗಿಗಳನ್ನು ಚಿಕಿತ್ಸೆಗಾಗಿ ಈ ಕೇಂದ್ರಕ್ಕೆ ಕಳುಹಿಸುತ್ತಾರೆ. ಅಲ್ಲಿ ನೀಡುವ ಚಿಕಿತ್ಸೆ ಹಾಗೂ ಔಷಧಿ ಇಲ್ಲಿ ನೀಡಲಾಗುತ್ತದೆ. ಆದರೂ ರೋಗಿಗಳನ್ನು ಇಲ್ಲಿಗೆ ಕಳಿಸುತ್ತಾರೆ ಹಾಗಾಗಿ ರೋಗಿಗಳು ಹೆಚ್ಚುತ್ತಾರೆ ಎನ್ನುತ್ತಾರೆ ಇಲ್ಲಿನ ಶುಶ್ರೂಷಕರು.

ರೋಗಿಗಳು ಬಿಪಿಎಲ್‌ ಕಾರ್ಡ್‌ ಹೊಂದಿದ್ದರೆ ಅವರಿಗೆ 50% ರಿಯಾಯಿತಿ ಇದೆ, ‘ಆಯುಷ್ಮಾನ್‌ ಭಾರತ ಆರೋಗ್ಯ ಕರ್ನಾಟಕ’ (ಎಬಿಆರ್‌ಕೆ) ಕಾರ್ಡ್‌ ಹೊಂದಿದವರಿಗೆ ಎಲ್ಲಾ ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತದೆ. ಸ್ಪಚ್ಛತೆ ಕಾರ್ಯ ನಿರ್ವಹಿಸುವವರು ಹಾಗೂ ವಾರ್ಡ್‌ ಅಟೆಂಡರ್‌ಗಳು ಹೀಗೆ ಪ್ರತಿಯೊಂದು ಗುಂಪುಗಳಿಗೂ ಅವರದ್ದೇ ಆದ ಬಣ್ಣದ ವಸ್ತ್ರಗಳನ್ನು ನೀಡಲಾಗಿದೆ. ಬರುವ ರೋಗಿಗಳಿಗೆ ಕೆಲಸಗಾರರಿಂದ ತೊಂದರೆಯಾದರೆ ಅವರು ಧರಿಸಿದ ಬಣ್ಣದ ಹೆಸರು ಹೇಳಿದರೆ ಸಾಕು ಅವರನ್ನು ಗುರುತಿಸಿ ಕ್ರಮ ಜರುಗಿಸಲಾಗುತ್ತದೆ. ಯಾರಾದರೂ ಹಣ ಕೇಳಿದರೆ ನೇರವಾಗಿ ಅಧಿಕಾರಿಗಳಿಗೆ ಕರೆ ಮಾಡಿ ದೂರು ನೀಡಬಹುದು. ಅದಕ್ಕಾಗಿಯೇ ಗೋಡೆಗಳ ಮೇಲೆ ಮೊಬೈಲ್‌ ನಂಬರ್‌ ಕೂಡ ಬರೆಯಲಾಗಿದೆ.

ಸ್ಪಚ್ಛತೆಗೆ ಮೊದಲ ಆದ್ಯತೆ

ಪ್ರತಿಯೊಂದು ಕೊಠಡಿಯೂ ಸ್ವಚ್ಛವಾಗಿರಬೇಕು ಎಂಬುದು ವೈದ್ಯರ ಮೊದಲ ಮಾತು. ಆಸ್ಪತ್ರೆಯ ಒಳಗಡೆಯಾವುದೇ ಔಷಧಿಗಳ ವಾಸನೆ ಬರುವುದಿಲ್ಲ. ಒಳರೋಗಿಗಳಿಗೆ ನೀಡುವ ವಸ್ತ್ರ, ಹೊದಿಕೆ, ತಲೆದಿಂಬಿನ ಬಟ್ಟೆಗಳನ್ನು ಪ್ರತಿದಿನ ಸ್ವಚ್ಛಗೊಳಿಸಲಾಗುತ್ತದೆ. ಅದಕ್ಕಾಗಿಯೇ ವಿದ್ಯುತ್‌ ಲಾಂಡ್ರಿ ಇದ್ದು, ಪ್ರತಿದಿನ ವಸ್ತ್ರಗಳನ್ನು ಬದಲಾಯಿಸಿ ಸ್ವಚ್ಛಗೊಳಿಸಲಾಗುತ್ತದೆ. ರೋಗಿಗಳಿರುವ ಸ್ಥಳವು ಹೆಚ್ಚು ಸ್ಪಚ್ಛತೆಯಿಂದ ಕೂಡಿರಬೇಕು ಎಂಬ ಕಾರಣಕ್ಕೆ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುವುದು ಎನ್ನುತ್ತಾರೆ ಶುಶ್ರೂಷಕರು.

ಈ ಟ್ರಾಮಾ ಘಟಕವು 38 ಐಸಿಯು ಬೆಡ್‌ಗಳು, 120 ಎಮರ್ಜೆನ್ಸಿ ಬೆಡ್‌ಗಳು ಹಾಗೂ ತುರ್ತು ಚಿಕಿತ್ಸೆಗಾಗಿ 22 ಬೆಡ್‌ಗಳನ್ನು ಹೊಂದಿದೆ. ಇಲ್ಲಿರುವ ಸೌಲಭ್ಯ ಬೇರೆ ಯಾವ ಸರ್ಕಾರಿ ಆಸ್ಪತ್ರೆಗಳಲ್ಲಿ ಇಲ್ಲ. ಹಾಗಾಗಿ ಇಲ್ಲಿಗೆ ನಗರ ಸೇರಿದಂತೆ ಸುತ್ತಲಿನ ಜಿಲ್ಲೆಗಳಿಂದ ಜನರು ಹೆಚ್ಚಾಗಿ ಬರುತ್ತಾರೆ. ಆದರೆ ಎಲ್ಲರಿಗೂ ಚಿಕಿತ್ಸೆ ನೀಡಲು ವೈದ್ಯರು ಹರಸಾಹಸ ಮಾಡಬೇಕಾಗಿದೆ ಎನ್ನುತ್ತಾರೆ ರೋಗಿಯೊಬ್ಬರ ಸಂಬಂಧಿ ಪ್ರಕಾಶ್‌.

ಬರುವ ರೋಗಿಗಳು ಸರ್ಕಾರದ ಈ ಸೌಲಭ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.ಸಂಪೂರ್ಣ ಚಿಕಿತ್ಸೆ ಇಲ್ಲಿಯೇ ಪಡೆಯಲು ಬಯಸುತ್ತಾರೆ. ಆದರೆ ರೋಗಿಗಳು ಹೆಚ್ಚುವ ಕಾರಣ ನಮ್ಮ ಪ್ರಯತ್ನ ನಾವು ಮಾಡುತ್ತೇವೆ ಸಾಧ್ಯವಾದಷ್ಟು ರೋಗಿಗಳಿಗೆ ಚಿಕಿತ್ಸೆ ನೀಡುತ್ತೇವೆ. ಇದು ಒಂದು ದಿನದ ಸಮಸ್ಯೆಯಲ್ಲ ಪ್ರತಿದಿನ ನಡೆಯುತ್ತದೆ. ರೋಗಿಗಳು ಬೇರೆ ಆಸ್ಪತ್ರೆಗೆ ಹೋಗಲು ಹಿಂಜರಿಯುತ್ತಾರೆ. ಹಾಗಾಗಿ ಬೆಡ್‌ಗಳು ಖಾಲಿಯಾಗುವುದಿಲ್ಲ. ಬರುವ ರೋಗಿಗಳನ್ನು ದಾಖಲಿಸಿಕೊಳ್ಳದಿದ್ದರೆ ನಮ್ಮನ್ನು ದೂರುತ್ತಾರೆ ಎನ್ನುತ್ತಾರೆ ಡಾ. ಆಸಿಮಾ.

ನಗರದಲ್ಲಿ ಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರ ಒಂದೇ ಇರುವ ಕಾರಣ ಜನರು ಈ ಟ್ರಾಮಾ ಕೇಂದ್ರವನ್ನೇ ಅವಲಂಬಿಸಿದ್ದಾರೆ. ಹಾಗಾಗಿ ಪ್ರತಿದಿನ ಜನರಿಂದ ತುಂಬಿ ತುಳುಕುತ್ತದೆ. ಸರ್ಕಾರ ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ರೀತಿಯ ಪ್ರತ್ಯೇಕ ಟ್ರಾಮಾ ಘಟಕಗಳನ್ನು ನಿರ್ಮಿಸಬೇಕಾಗಿದೆ ಎಂಬುದು ಜನರ ಅಭಿಪ್ರಾಯ.

ಹೆಚ್ಚಿನ ಟ್ರಾಮಾ ಕೇಂದ್ರಗಳನ್ನು ನಿರ್ಮಿಸಿದರೆ ಅನುಕೂಲ

ಅಪಘಾತಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಟ್ರಾಮಾ ಕೇಂದ್ರಗಳನ್ನು ನಿರ್ಮಿಸಿದರೆ ಅನುಕೂಲವಾಗುತ್ತದೆ ಎಂದು ನಗರದನಾಗರಿಕರಾದ ಆನಂದವರ್ಮ ಹೇಳುತ್ತಾರೆ.

ಡಾ.ಆಸಿಮಾಬಾನು
ಡಾ.ಆಸಿಮಾಬಾನು

ಟ್ರಾಮಾ ಕೇಂದ್ರ ಯಾವ ಖಾಸಗಿ ಆಸ್ಪತ್ರೆಗಿಂತಲೂ ಕಡಿಮೆ ಇಲ್ಲ. ಅಂತಹ ಸೌಲಭ್ಯ ಇಲ್ಲಿ ನೀಡಲಾಗುತ್ತದೆ. ಆದರೆ ರೋಗಿಗಳ ಸಂಖ್ಯೆ ಹೆಚ್ಚಿರುವ ಕಾರಣ ಬೆಡ್‌ಗಳು ಸಾಲುವುದಿಲ್ಲ ಎಂದುಅಪಘಾತ ಮತ್ತು ತುರ್ತು ಚಿಕಿತ್ಸಾ ಕೇಂದ್ರದವಲಯಾಧಿಕಾರಿ ಡಾ. ಆಸಿಮಾ ಬಾನು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT