ಬುಧವಾರ, ಜೂನ್ 29, 2022
21 °C

ಮಹಿಳಾ ದಿನದಂದು ಗ್ರೇತಾ, ರಾಮಾಯಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಇಂದಿನ ರಾಕ್ಷಸ ಆರ್ಥಿಕತೆಯ ನೆಲೆ ಗಂಡಸುತನವಾದರೆ, ಪವಿತ್ರ ಆರ್ಥಿಕತೆಯ ತಾಯಿಯ ಬೇರು ಹೆಣ್ತನವಾಗಿದೆ. ಹೆಣ್ಣಿಗತನವೆಂಬ ಬೈಗುಳಕ್ಕೆ ಪಕ್ಕಾಗಿರುವ ಹೆಣ್ತನವು, ಕೂಲಿಪಡೆಯುವ ಕಾಯಕವೂ ಹೌದು. ಕೂಲಿ ಪಡೆಯದ ವಾತ್ಸಲ್ಯ ಕಾಯಕವೂ ಹೌದು.

ಮಾರ್ಚ್ 8ರ ಅಂತರರಾಷ್ಟ್ರೀಯ ಮಹಿಳಾದಿನದ ನಿಮಿತ್ತ ರಂಗಶಂಕರದಲ್ಲಿ ಗ್ರೇತಾ ಹಾಗೂ ರಾಮಾಯಣ  ಎಂಬ ಎರಡು ರಂಗಪ್ರದರ್ಶನಗಳನ್ನು ಆಯೋಜಿಸಲಾಗಿದೆ. ಹೆಸರಾಂತ ನಾಟಕಕಾರ ಹಾಗೂ ರಂಗ ನಿರ್ದೇಶಕ ಪ್ರಸನ್ನ ಅವರು ರಚಿಸಿ ನಿರ್ದೇಶಿಸಿರುವ ಈ ಎರಡು ರಂಗರೂಪಗಳಲ್ಲಿ ಎಂ.ಡಿ. ಪಲ್ಲವಿ, ನಾದ ಮಣಿನಾಲ್ಕೂರು, ಲಹರಿ, ದುರ್ಗಾ ದೇವಿ ನಟಿಸುತ್ತಿದ್ದಾರೆ. 

ರಾಮಾಯಣವೇ ಏಕೆ?

ಸೀತೆ ಹಾಗೂ ರಾಮರ ಪ್ರೀತಿಯ ಕತೆ ವಾಲ್ಮೀಕಿ ರಾಮಾಯಣ. ರಾಮಾಯಣ ಬರೀ ರಾಮನ ಕತೆಯಲ್ಲ. ಸೀತೆ ಇಲ್ಲದೆ ರಾಮನಿಲ್ಲ, ರಾಮನಿಲ್ಲದೆ ಸೀತೆಯಿಲ್ಲ. ಆದರೆ ರಾಮಾಯಣ ಮದುವೆಯ ಕತೆಯೂ ಹೌದು. ರಾಮನಂತಹ ರಾಮನೇ ಗಂಡನಾಗಿ ಹೆಂಡತಿ ಸೀತೆಯನ್ನು ಗೋಳುಹೊಯ್ದುಕೊಳ್ಳಬಲ್ಲನಾದರೆ ನಮ್ಮ–ನಿಮ್ಮಂತಹ ಸಾಧಾರಣ ಗಂಡಸರ ಕತೆಯೇನು ಎನ್ನುವ ಪ್ರಶ್ನೆ ಎತ್ತುತ್ತದೆ ರಾಮಾಯಣ. ನಾಗರಿಕತೆ ಹಾಗೂ ಪ್ರಕೃತಿಯ ನಡುವಿನ ಅಸಮಾನತೆಯ ಕತೆಯೂ ಹೌದು ರಾಮಾಯಣ. ಅತಿ ನಾಗರಿಕ ಅಹಂಕಾರದಿಂದ ಬೀಗುವ ಹಾಗೂ ಪ್ರಕೃತಿಯನ್ನು ಶೋಷಿಸಿ ಬದುಕುವ ರಾವಣ, ಸೀತೆಯನ್ನು ಬಲವಂತದಿಂದ ಕೊಂಡೊಯ್ದು ಬಂಧಿಸುವುದು ಇಂದಿನ ರಾಕ್ಷಸ ಮನೋವೃತ್ತಿಗೆ ರೂಪಕವಾಗಿದೆ.

ಗ್ರೇತಾ ಯಾಕೆ?

ಈ ಚೋಟುದ್ದದ ಹುಡುಗಿ ಗ್ರೇತಾ ಥುನ್‌ಬರ್ಗ್ ನೋಡಿ, ಯಾವ ಪುರುಷನೂ ಮಾಡದಿರುವ ಕೆಲಸವನ್ನು ಮಾಡಿ ತೋರಿಸಿದ್ದಾಳೆ. ಹೊಗೆ ಉಗುಳಿ ವಾತಾವರಣ ಬಿಸಿಮಾಡಿ, ನಮ್ಮ ಅವಸಾನಕ್ಕೆ ಕಾರಣರಾಗುತ್ತಿರುವ ರಾಕ್ಷಸರು ನಾವು ಎಂಬ ಕಟು ಸತ್ಯವನ್ನು ಮುಷ್ಕರದ ಮೂಲಕ ಎತ್ತಿಹಿಡಿದಿದ್ದಾಳೆ.

ಮುಷ್ಕರಕ್ಕೆ ಶಾಲೆಯ ತನ್ನ ಗೆಳೆಯ–ಗೆಳಯತಿಯರು ಮುಂದೆ ಬರಲಿಕ್ಕೆ ಸಿದ್ಧರಿರದಿದ್ದಾಗ, ಸ್ವೀಡನ್ನಿನ ಈ ಪೋರಿ, ತಾನೇ ಹೋಗಿ ಪಾರ್ಲಿಮೆಂಟಿನ ಮುಂದೆ, ತಾನೇ ಬರೆದ ಒಂದು ಪುಟ್ಟ ಮುಷ್ಕರದ ಫಲಕ ಹಿಡಿದು, ಒಂದು ದಿನ ಕುಳಿತು ಕೊಂಡಳು. ಪ್ರತಿ ಶುಕ್ರವಾರ ಹೀಗೇ ಮಾಡಿದಳು. ನಂತರ ಗೆಳೆಯ ಗೆಳತಿಯರೂ ಬಂದರು. ಪತ್ರಿಕೆಗಳೂ ಬಂದವು, ಎಲ್ಲ ಮಾಧ್ಯಮಗಳೂ ಬಂದವು. ಪಾರ್ಲಿಮೆಂಟ್‌ಗಳ ಒಳಗೇ ಕರೆದು ಈ ಹುಡುಗಿಯಿಂದ ಭಾಷಣ ಮಾಡಿಸಿದರು. ಅಷ್ಟೇ ಏಕೆ, ವಿಶ್ವಸಂಸ್ಥೆಯೇ ಕರೆಸಿ, ಜಗತ್ತಿನ ಎಲ್ಲ ರಾಷ್ಟ್ರಗಳ ಎಲ್ಲ ಪ್ರತಿನಿಧಿಗಳೆದುರು ನಿಲ್ಲಿಸಿ, ಈ ಹುಡುಗಿಯ ಮಾತುಕೇಳಿದರು. ಈಗ, ವಿಶ್ವದ ಎಲ್ಲ ಹುಡುಗ ಹುಡುಗಿಯರೂ ಮುಂದೆ ಬಂದಿದ್ದಾರೆ. ದನಿ ಎತ್ತಿ ಕೇಳುತ್ತಿದ್ದಾರೆ. ನಮ್ಮ ಭವಿಷ್ಯವನ್ನು ಹಾಳುಗೆಡವಲಿಕ್ಕೆ ನಿಮಗೇನು ಹಕ್ಕಿದೆ ಎಂದು.

ಗ್ರೇತಾ ಮತ್ತು ರಾಮಾಯಣ ನಾಟಕಗಳ ಪ್ರದರ್ಶನ: ನಿರ್ದೇಶನ–ಪ್ರಸನ್ನ
ಸ್ಥಳ:-ರಂಗಶಂಕರ, ಜೆ.ಪಿ. ನಗರ ಎರಡನೇ ಹಂತ. ಮಧ್ಯಾಹ್ನ 3.30 ಮತ್ತು ಸಂಜೆ 7.30. ಟಿಕೆಟ್‌ಗಳಿಗಾಗಿ bookmyshow.com ಸಂಪರ್ಕಿಸಿ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು