ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಅಖ್ಸ್' ತರುಣರ ಆತ್ಮಾನುಸಂಧಾನ

Last Updated 14 ಜುಲೈ 2013, 19:59 IST
ಅಕ್ಷರ ಗಾತ್ರ

ಸಂಗೀತವೆಂದರೆ ಆತ್ಮದ ಪ್ರತಿಬಿಂಬವೆಂಬುದು ಈ ಯುವಕರ ವ್ಯಾಖ್ಯಾನ. ಅವರ ಬ್ಯಾಂಡ್‌ನ ಹೆಸರು `ಅಖ್ಸ್'. ಉರ್ದು ಪದ ಆಖ್ಸ್‌ನ ಅರ್ಥವೂ ಅದುವೇ. `ಸಂಗೀತವೆಂದರೆ ನಮ್ಮದೇ ಬಿಂಬ. ಅಂದರೆ, ನಾವು ಯಾರು, ಏನು, ಯೋಚಿಸುವ ರೀತಿಯೇನು, ನಮ್ಮ ನಂಬಿಕೆಯೇನು ಇತ್ಯಾದಿ ಅಂಶಗಳೇ ಸಂಗೀತ. ಚುಟುಕಾಗಿ ಹೇಳುವುದಾದರೆ ನಮ್ಮಳಗಿನ ಬೆಳಕು ಸಂಗೀತ. ಅರ್ಥಾತ್, ಅದೊಂದು ಆತ್ಮಾನುಸಂಧಾನ' ಎಂದು ಪ್ರತಿಪಾದಿಸುತ್ತಾರೆ, ಅಖ್ಸ್‌ನ ಚುಕ್ಕಾಣಿ ಹಿಡಿದು ನಡೆಸುತ್ತಿರುವ ಐದೂ ಮಂದಿ.

ಟೆಕ್ಕಿಗಳಾಗಿ ತಿಂಗಳಿಗೆ ಆರಂಕಿ ವೇತನ ಪಡೆಯುತ್ತಿದ್ದವರು ಸಂಗೀತವನ್ನೇ ಧೇನಿಸುವ ನಿರ್ಧಾರದೊಂದಿಗೆ ನೌಕರಿಗೆ ಬೆನ್ನು ಹಾಕಿ ಸಂಗೀತ ಪಥಿಕರಾಗುವುದೆಂದರೆ ಅವರ ತುಡಿತ ಎಷ್ಟಿರಬೇಡ! `ಅಖ್ಸ್'ನ ಸದಸ್ಯರಾದ ಕ್ಸೇವಿಯರ್ ವಿಶಾಲ್, ಶ್ರೀಧರ್ ವರದರಾಜನ್, ರವೀಶ್ ಟಿರ್ಕೆ, ಯದುನಂದನ್ ನಾಗರಾಜ್ ಮತ್ತು ಅರ್ಜುನ್ ಎಂ.ಪಿ.ಎನ್. `ನಮ್ಮ ತಂಡದಲ್ಲಿ ಇಬ್ಬರು ಕ್ರೈಸ್ತರು ಮತ್ತು ಮೂವರು ಹಿಂದೂಗಳಿದ್ದೇವೆ. ಆದರೆ ನಾವು ಆಯ್ಕೆ ಮಾಡಿಕೊಂಡಿರುವದು ಉರ್ದು ಹೆಸರನ್ನು. ಸಂಗೀತಕ್ಕೆ ಯಾವುದೇ ಎಲ್ಲೆಗಳಿರಬಾರದು. ಅದು ಎಲ್ಲರ ಸ್ವತ್ತು, ಸಾರ್ವಕಾಲಿಕ ಸತ್ಯವದು ಎಂಬುದು ಬ್ಯಾಂಡ್‌ಗೆ ಉರ್ದು ಹೆಸರಿಟ್ಟಿರುವ ಬಗ್ಗೆ ರವೀಶ್ ಟಿರ್ಕೆ ನೀಡುವ ಸಮರ್ಥನೆ. ಬ್ಯಾಂಡ್‌ನ ಆದ್ಯಂತ ವೃತ್ತಾಂತವನ್ನು ಅವರ ಬಾಯಲ್ಲೇ ಕೇಳಿ...

`ಅಖ್ಸ್' ಹೇಗೆ ಭಿನ್ನವೆಂದರೆ...
ಹಿಂದುಸ್ತಾನಿ ಮತ್ತು ಶಾಸ್ತ್ರೀಯ ಸಂಗೀತವೂ ನಮ್ಮ ಬ್ಯಾಂಡ್‌ನಲ್ಲಿದೆ. ನಮ್ಮ ಪ್ರಕಾರ ಉತ್ತರ ಮತ್ತು ದಕ್ಷಿಣವನ್ನು ಬೆಸೆಯುವ ಮಾಧ್ಯಮ. ಬೆಂಗಳೂರಿನಲ್ಲಿ ಎಲ್ಲವೂ ಇದೆ. ಸಂಗೀತಾರಾಧಕರ ಸಂಖ್ಯೆಯೂ ದೊಡ್ಡದು. ಸಂಗೀತ ಕಾರ್ಯಕ್ರಮ ಎಲ್ಲೇ ನಡೆದರೂ ಅದು ಗೆಲ್ಲುತ್ತದೆ. ಇಲ್ಲಿನ ಜನರಿಗೆ ಕಲಾವಿದರ ಬಗ್ಗೆ, ಸಂಗೀತದ ವಿವಿಧ ಪ್ರಕಾರಗಳ ಬಗ್ಗೆ, ಫ್ಯೂಷನ್ ಬಗ್ಗೆ ಮಾಹಿತಿಯಿದೆ. ಕಲಾವಿದರೊಂದಿಗೆ ಚರ್ಚೆ ನಡೆಸಲೂ ಅವರು ಮುಂದಾಗುತ್ತಾರೆ. ಕೋಲ್ಕತ್ತಾ, ದೆಹಲಿ ಮತ್ತು ಮುಂಬೈನಲ್ಲಿ ಹಿಂದಿ ಹಾಡುಗಳನ್ನೇ ನೆಚ್ಚಿಕೊಂಡ ಬ್ಯಾಂಡ್‌ಗಳಿವೆ. ಬೆಂಗಳೂರೂ ಆ ನಗರಗಳಿಗಿಂತ ಕಮ್ಮಿಯೇನಿಲ್ಲ ಎಂದು ಸಾಬೀತುಪಡಿಸುವುದು ನಮಗೆ ಮುಖ್ಯವಾಗಿತ್ತು. ನಮ್ಮ ಒಂದೊಂದು ಕಾರ್ಯಕ್ರಮವೂ ಯಶಸ್ಸು ಗಳಿಸುತ್ತಿರುವುದನ್ನು ಕಂಡಾಗ ನಮ್ಮ ಗುರಿ ತಲುಪಿದ್ದೇವೆ ಎಂದೆನಿಸುತ್ತದೆ.

ನಾದದ ಬೆನ್ನೇರಿದ್ದು...
`ಟೆಕ್ಕಿಗಳಾಗಿದ್ದ ನಾವು ಅದನ್ನು ತೊರೆದು ಹೊಸ ಕ್ಷೇತ್ರದಲ್ಲಿ ಪೂರ್ಣಪ್ರಮಾಣದಲ್ಲಿ ದುಡಿಯಲು ತೀರ್ಮಾನಿಸುವುದು ನಿಜವಾದ ಸವಾಲು. ಆದರೆ ನಾವು ಗಂಭೀರ ಚಿಂತನೆ ನಡೆಸಿ ಪೂರ್ಣಪ್ರಮಾಣದಲ್ಲಿ ತಯಾರಿ ನಡೆಸಿಕೊಂಡ ಮೇಲೆ ಬ್ಯಾಂಡ್ ಶುರು ಮಾಡುವ ಸ್ಪಷ್ಟ ಗುರಿಯೊಂದಿಗೆ ನೌಕರಿ ಬಿಟ್ಟಿದ್ದರಿಂದ ನಮಗೆ ಗೊಂದಲವಿರಲಿಲ್ಲ. ಸಂಗೀತ ನಮ್ಮ ಸ್ಫೂರ್ತಿ, ಜೀವನೋತ್ಸಾಹ. ಹಾಗಾಗಿ ನಾದದ ಬೆನ್ನೇರಿ ಹೊರಟೇಬಿಟ್ಟೆವು.

ಬ್ಯಾಂಡ್‌ನಲ್ಲಿ ನಮ್ಮತನ...
`ಅಖ್ಸ್' ಹಿಂದಿ ಹಾಡುಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡಿದ್ದರೂ ನಾವು ಇಂಡೋ-ಏಷ್ಯನ್ ರಾಕ್ ಎಂದೇ ಕರೆದುಕೊಳ್ಳುತ್ತೇವೆ. ಭಾರತೀಯ ಜನಪದ ಸಂಗೀತ, ಫ್ಯೂಷನ್ ಮತ್ತು ಶಾಸ್ತ್ರೀಯ ಸಂಗೀತದ ಸಮಪಾಕವನ್ನು ನಾವು ಪ್ರಸ್ತುತಪಡಿಸುತ್ತೇವೆ.

ಒಂದಿಷ್ಟು ತೊಡಕು
`ಸಂಗೀತವೇ ನಮ್ಮ ಜೀವನದ ಆಯ್ಕೆ ಎಂಬ ವಾಸ್ತವವನ್ನು ಅರಿತುಕೊಂಡಿದ್ದೇ ನಾವು ಬ್ಯಾಂಡ್ ಶುರು ಮಾಡಿಬಿಟ್ಟೆವು. ಆದರೆ ಆರಂಭದಲ್ಲಿ ಸ್ವಲ್ಪ ಸಮಸ್ಯೆ ಎದುರಾಗಿದ್ದು ನಿಜ. ಆಗ ನಾನು ಮತ್ತು ಕ್ಸೇವಿಯರ್ ಚರ್ಚೆ ಮಾಡಿ ನಮ್ಮ ತಂಡಕ್ಕೆ ಹೊಸ ಚೈತನ್ಯ ತುಂಬಿದೆವು. ಮಾತ್ರವಲ್ಲ, ವೈಯಕ್ತಿಕ ಕಾಳಜಿ ಮತ್ತು ತೊಡಗಿಸಿಕೊಳ್ಳುವಿಕೆ ಎಲ್ಲರಿಗೂ ಕಡ್ಡಾಯ ಎಂಬುದನ್ನು ಪರಸ್ಪರ ಮನವರಿಕೆ ಮಾಡಿಕೊಂಡೆವು. ಅಲ್ಲಿಂದೀಚೆ ಏಕಭಾವದಿಂದ ಬ್ಯಾಂಡ್ ನಡೆಯುತ್ತಿದೆ.

ನಮ್ಮ ಹಾಡು ನಮ್ಮದು...
ನಾವು ಹಳೆಯ ಹಾಡುಗಳನ್ನು, ಆಲ್ಬಂಗಳನ್ನೇ ನಂಬಿ ಕೂತಿಲ್ಲ. ನಾನು ಹಾಡುಗಳನ್ನು ಬರೀತೇನೆ. ಕ್ಸೇವಿಯರ್ ಸಹಾಯ ಮಾಡುತ್ತಾರೆ. ಅಂದಹಾಗೆ ನಾನು ಬರೆಯೋದು ಹಿಂದಿ ಮತ್ತು ಉರ್ದುವಿನಲ್ಲಿ. ಕನ್ನಡದಲ್ಲಿ ನಮ್ಮದೇ ಆದ ಒಂದು ಟ್ರ್ಯಾಕ್ ಸಿದ್ಧಪಡಿಸುತ್ತಿದ್ದೇವೆ. ನಾವೆಲ್ಲರೂ ಕನ್ನಡ ಮಾತನಾಡುವವರೇ ಆದ್ದರಿಂದ ಕನ್ನಡದ ಟ್ರ್ಯಾಕ್ ನಮ್ಮ ಕನಸು.

ಆಲ್ಬಮ್ ಬಗ್ಗೆ...
ಬ್ಯಾಂಡ್‌ಗೆ ಸ್ವಂತದ ಆಲ್ಬಮ್ ಇದ್ದರೆ ಒಂದು ತೂಕ ಹೆಚ್ಚು. ಈ ವರ್ಷಾಂತ್ಯದಲ್ಲಿ ನಮ್ಮ ಆಲ್ಬಮ್ ಹೊರಬರಲಿದೆ. ಆದರೆ ವೀಡಿಯೊ ಆಲ್ಬಮ್ ಇಷ್ಟರಲ್ಲೇ ಬಿಡುಗಡೆಯಾಗಲಿದೆ. ನಮ್ಮ ಹಳೆಯ ಮತ್ತು ಹೊಸ ಹಾಡುಗಳನ್ನು www.youtube.com/ aksmusicindia &
www.reverbnation.com/akstheband ನಲ್ಲಿ ಆಸಬಹುದು. ಇವುಗಳನ್ನು ಇಂಟರ್‌ನೆಟ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶವನ್ನೂ ನೀಡಿದ್ದೇವೆ.

ನಮ್ಮ ಬೆಂಗಳೂರು ಎಂದರೆ...
ಆಗಲೇ ಹೇಳಿದಂತೆ ಇಲ್ಲಿ ಎಲ್ಲದಕ್ಕೂ ವಿಪುಲ ಅವಕಾಶಗಳಿವೆ. ಮಳೆಯಲ್ಲೂ ಶ್ರೋತೃಗಳು ಕಾರ್ಯಕ್ರಮಗಳಿಗೆ ಬರುವುದನ್ನು ಈ ಪರಿಯಲ್ಲಿ ಬೇರೆಲ್ಲೂ ಕಂಡಿಲ್ಲ. ನಾವು ಹಾಡುತ್ತಿದ್ದರೆ, ವಾದ್ಯ ನುಡಿಸುತ್ತಿದ್ದರೆ ಇಲ್ಲಿನ ಪ್ರೇಕ್ಷಕರಿಂದ ಸಿಗುವಷ್ಟು ಪ್ರೋತ್ಸಾಹ ಇನ್ನೆಲ್ಲೂ ಸಿಗುವುದಿಲ್ಲ. ಉತ್ತಮ ಮೌಲ್ಯಗಳಿರುವ ಜನರು. ಅಂದ ಹಾಗೆ ಈ ತಂಡದ ಸಂಪರ್ಕಕ್ಕೆ: 80505 70351/ aksmusicbangalore@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT