ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂತಿ, ಗುರುವಿಗೆ ನೃತ್ಯಾರ್ಪಣ

Last Updated 16 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಬೆಳದಿಂಗಳ ಜೊತೆಗೆ ಸರಸವಾಡಲು ಸಾಧ್ಯವೆ? ಮುಟ್ಟಿ ಮುದ್ದಾಡಬಹುದೆ? ತರ್ಕದ ಬಂಧದಲ್ಲಿ ಅಲ್ಲವಾದರೂ ಕಲೆಯ ಸೆಲೆಯಲ್ಲಿ ಈ ಎಲ್ಲವೂ ಸಾಧ್ಯ. ಚಂದಿರನ ಕಾಂತಿಯನ್ನು ಕೂಡ ಕೈಯಲ್ಲಿ ಹಿಡಿದು ಪ್ರೀತಿಯ ನಲ್ಲನಂತೆ ಗಲ್ಲಕ್ಕೆ ಮುತ್ತಿಡಬಹುದು. ಕ್ಷೀರಸಾಗರದಂತೆ ಹರಡುವ ಬೆಳಕಿನ ಜೊತೆಗೆ ಸಲ್ಲಾಪವನ್ನೂ ನಡೆಸಬಹುದು. ಇದು ಬರಿ ಕವಿ ಕಲ್ಪನೆಯ ಕಾವ್ಯವಾಗಿದ್ದರೂ ಆ ಅನುಭೂತಿ ವಾಸ್ತವ ಎನ್ನುವಂತೆ ಕಟ್ಟಿಕೊಟ್ಟವರು ಸುಂದರಿ ಸಂತಾನಂ ಅವರ ಶಿಷ್ಯರು.

ಅಗಲಿದ ತಮ್ಮ ಗುರು ಸುಂದರಿ ಅವರಿಗೆ `ನೃತ್ಯಾರ್ಪಣ~ ಮೂಲಕವೇ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು. ವಿದ್ಯೆ ಕಲಿಸಿಕೊಟ್ಟು ಕಲಾ ಪ್ರವಾಹದಲ್ಲಿ ಉತ್ಸಾಹದಿಂದ ಒಂದಾಗುವಂತೆ ಮಾಡಿದ ಗುರುವಿಗೆ ಆಪ್ತವಾಗಿದ್ದ ಪ್ರದರ್ಶನಗಳನ್ನೇ ರಂಗದ ಮೇಲೆ ತೆರೆದಿಟ್ಟರು. ನೃತ್ಯ ನಮನದ ಅಂಚಿನಲ್ಲಿ ಹರಿಣಿ ಸಂತಾನಂ, ನಮಿತಾ ಬಿ. ರಾವ್, ದೀಕ್ಷಾ ಶಾಸ್ತ್ರಿ ಹಾಗೂ ನಯನ ಆರ್. ಸೋಮಯಾಜಿ ಅವರ ಕೆನ್ನೆಯ ಮೇಲೆ ಕಣ್ಣೀರ ಸಿಂಚನವಾದ ಗಳಿಗೆಯಂತೂ ಪ್ರೇಕ್ಷಕರೂ ಭಾವಪರವಶವಾದರು. ಗುರು-ಶಿಷ್ಯರ ಭಾವನಾತ್ಮಕ ಸಂಬಂಧವು ಅಗಲಿಕೆಯ ನಂತರವೂ ನಿರಂತರವಾಗಿ ಉಳಿಯುವಂತೆ ಮಾಡಿದ್ದೇ ಕಲಿಸಿದ ಭರತನಾಟ್ಯ ವಿದ್ಯೆ.

ಸುಂದರಿ ಅವರಂತೆಯೇ ಭಾವಾಭಿನಯಕ್ಕೆ ಹೆಚ್ಚು ಒತ್ತು ನೀಡಿ ರೂಪಿಸಿದ ನೃತ್ಯ ಪ್ರದರ್ಶನದ ಪ್ರತಿಯೊಂದು ಘಟ್ಟದಲ್ಲಿಯೂ ವಿಶಿಷ್ಟ ಎನ್ನಿಸುವ ಪ್ರಯೋಗಗಳು ಗಮನ ಸೆಳೆದವು. `ತುಂಬಿತು ಬೆಳದಿಂಗಳು...~ ಕಾವ್ಯ ರಚನೆಗೆ ಭಾವಗಳನ್ನು ತುಂಬಿದಾಗಲಂತೂ ಸುಂದರ ಲೋಕವೇ ವೇದಿಕೆಯ ಮೇಲೆ ತೆರೆದುಕೊಂಡಿತು. ಇಲ್ಲದ ವಸ್ತುವನ್ನು ಕೂಡ ಮುಟ್ಟಿ ಆನಂದಿಸಬಹುದು ಎನ್ನುವ ಭಾವನೆ ಮನದಲ್ಲಿ ಮೂಡುವಂತೆ ಮಾಡಿದ ರೀತಿಯಂತೂ ಅನನ್ಯ. ನಂದಕುಮಾರ್ ಅವರ ನೃತ್ಯಕ್ಕೆ ಒಪ್ಪುವಂಥ ಗಾಯನವು ಬೆಳದಿಂಗಳ ಕಲ್ಪನೆಯನ್ನು ಇನ್ನಷ್ಟು ಪ್ರಭಾವಿಯಾಗಿಸಿತು.

ನಯನ ಅವರು ರಂಗದ ಮೇಲೆ ಒಪ್ಪಿಸಿದ ನಯವಾದ ಲಾಸ್ಯ ಹಾಗೂ ದೀಕ್ಷಾ ಅವರ ಹಾಸ್ಯಭಾವ ಬೆರೆತ ರೌದ್ರ ಭಾವವಂತೂ `ಭಸ್ಮಾಸುರ ಸಂಹಾರ~ ರೂಪಕವನ್ನು ಪಕ್ಕಾ ರಂಜನೆ ಎನ್ನುವಂತೆ ಮಾಡಿದ್ದು ಮೆಚ್ಚುಗೆಗೆ ಪಾತ್ರವಾದ ಅಂಶ. ರೌದ್ರಭಾವವನ್ನು ಹಾಸ್ಯರಸ ಸ್ಪರ್ಶದ ಪ್ರಭಾವಳಿಯಿಂದ ಅಂದಗೊಳಿಸುವುದು ಖಂಡಿತ ಸುಲಭವಲ್ಲ. ಆದರೆ ಅಂಥದೊಂದು ಪ್ರಯೋಗವನ್ನು ಸಮರ್ಥವಾಗಿ ವೇದಿಕೆಗೆ ತರುವ ಜೊತೆಗೆ ಹತ್ತಾರು ಸಾರಿ ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.

ನೃತ್ಯ ಪ್ರದರ್ಶನವೆಂದರೆ ಅಡವುಗಳನ್ನು ಒತ್ತೊತ್ತಾಗಿ ಜೋಡಿಸಿದ ಕನಕಾಂಬರ ಮಾಲೆಯಲ್ಲ, ಅದರ ನಡುವೆ ಅಭಿನಯ ಎನ್ನುವ ತುಳಸಿಯ ಘಮವೂ ಇರಬೇಕು. ಈ ಅಂಶವನ್ನು ಸ್ಪಷ್ಟವಾಗಿ ಅರಿತ ಈ ಯುವ ಕಲಾವಿದೆಯರು ಅತಿರೇಕದ ಅಡವುಗಳ ಕಸರತ್ತು ಮಾಡಲಿಲ್ಲ. ಬದಲಿಗೆ ಅಭಿನಯದ ಕುಸುಮ ಬಾಣವು ಪ್ರೇಕ್ಷಕರ ಎದೆಯೊಳಗೆ ನಾಟುವಂತೆ ಮಾಡಿದರು. ಆದ್ದರಿಂದಲೇ ಭಾವಗಳು ಇದ್ದಲ್ಲಿ ರಸಗಳು ಸಲೀಸಾಗಿ ಉಕ್ಕಿಬರುತ್ತವೆ ಎನ್ನುವ ಮಾತು ಇಲ್ಲಿ ಸತ್ಯವಾಯಿತು.

ಸುಂದರಿ ಅವರ ನೃತ್ಯ ಪರಂಪರೆಯನ್ನು ಮುಂದುವರಿಸಿಕೊಂಡು ಸಾಗಿರುವ ಅವರ ಪುತ್ರಿ ಹರಿಣಿ ತನ್ನ ಗೆಳತಿಯರೊಂದಿಗೆ ರಂಗದ ಮೇಲೆ ಭಾವ-ಭಂಗಿಗಳ ರಂಗೋಲಿಯನ್ನೇ ಬಿಡಿಸಿಟ್ಟರು. ಪ್ರಸನ್ನ ಅವರ ನಟುವಾಂಗದ ತಾಳಕ್ಕೆ ಲಿಂಗರಾಜು, ವೇಣುಗೋಪಾಲನ್ ಹಾಗೂ ಡಾ.ಎಸ್. ನಟರಾಜಮೂರ್ತಿ ಅವರ ಮೃದಂಗ, ಕೊಳಲು ಹಾಗೂ ವಯೊಲಿನ್ ಸಾಂಗತ್ಯ ಸಿಕ್ಕಾಗ ಉಕ್ಕಿ ಹರಿಯಿತು ನೃತ್ಯ ಪ್ರವಾಹ. ವೇದಿಕೆಯು ತಮ್ಮ ಮನೆಯಂಗಳ ಎನ್ನುವಂತೆ ಮುಕ್ತ ಮನಸ್ಸಿನಿಂದ ವಿಸ್ತಾರವಾದ ಚಾರಿಯೊಂದಿಗೆ ಹೆಜ್ಜೆ ಹಾಕಿದರು ಚೆಂದದ ಅಲಂಕಾರದಿಂದ ಕಂಗೊಳಿಸಿದ ಕಲಾವಿದೆಯರು.

ಗುರುವಿನ ಗುರು ಡಾ.ಪದ್ಮಾ ಸುಬ್ರಹ್ಮಣ್ಯಂ ಅವರು ದಶಕಗಳ ಹಿಂದೆಯೇ ಸಂಯೋಜನೆ ಮಾಡಿದ್ದ `ಹರಿಣಿ ತಿಲ್ಲಾನ~ವನ್ನು ಸ್ವತಃ ಪದ್ಮಾ ಅವರೇ ಮೆಚ್ಚಿಕೊಳ್ಳುವಂತೆ ಮಾಡಿದ್ದು ವಿಶೇಷ. ತಾವು ಬಹಳ ಹಿಂದೆ ರೂಪಿಸಿದ ತಿಲ್ಲಾನವು ಈ ತಲೆಮಾರಿನವರೂ ಇಷ್ಟಪಟ್ಟು ಪ್ರದರ್ಶನ ಮಾಡಿದ್ದಕ್ಕೆ ಅವರಿಗೂ ಸಂತೋಷ. ಹರಿಣಿ ತಿಲ್ಲಾನ ಆಧುನಿಕ ಭರತನಾಟ್ಯದ ಒಂದು ಮಹತ್ವದ ಪ್ರಯೋಗ. ಇಂದಿನ ಸಾಮಾನ್ಯ ಪ್ರೇಕ್ಷಕರೂ ಮೆಚ್ಚಿಕೊಳ್ಳುವಂಥ ಅಯಸ್ಕಾಂತೀಯ ಶಕ್ತಿ ಅದರಲ್ಲಿದೆ. ಆದರೆ ಅದನ್ನು ರಂಗದ ಮೇಲೆ ಪ್ರದರ್ಶಿಸಲು ಸಾಧ್ಯವಾಗುವುದು ಪರಿಪಕ್ವ ಕಲಾವಿದೆಯರಿಂದ ಮಾತ್ರ. ಅಂಥದೊಂದು ಸಂಕೀರ್ಣವಾದ ತಿಲ್ಲಾನ ಪ್ರಸ್ತುತಪಡಿಸಿದ ಹರಿಣಿ ಸಂತಾನಂ, ನಮಿತಾ ಬಿ.ರಾವ್, ದೀಕ್ಷಾ ಶಾಸ್ತ್ರಿ ಹಾಗೂ ನಯನ ಆರ್.ಸೋಮಯಾಜಿ ಅವರನ್ನು ಪ್ರೌಢ ಕಲಾವಿದೆಯರೆಂದು ಒಪ್ಪಲೇಬೇಕು.
                 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT