ಗುರುವಾರ , ಮೇ 13, 2021
39 °C

ಬೇಸಿಗೆಗೆ ಬದಲಾಗಲಿ ಮಲಗುವ ಕೋಣೆ ಅಲಂಕಾರ

ರೇಷ್ಮಾ Updated:

ಅಕ್ಷರ ಗಾತ್ರ : | |

Prajavani

ಮಲಗುವ ಕೋಣೆ ಎಂದರೆ ಎಲ್ಲರಿಗೂ ಒಂದು ರೀತಿಯ ಆಪ್ತಭಾವ. ದಣಿದು ಬಂದ ದೇಹಕ್ಕೆ ವಿಶ್ರಾಂತಿ ಸಿಗುವ ಈ ಜಾಗ ಸುಂದರವಾಗಿದ್ದಷ್ಟೂ ಮನಸ್ಸಿಗೆ ಖುಷಿ ಸಿಗುತ್ತದೆ. ಉತ್ತಮ ನಿದ್ದೆಗೆ ಕೋಣೆಯನ್ನು ನಾವು ಹೇಗೆ ಇರಿಸಿಕೊಂಡಿದ್ದೇವೆ ಎಂಬುದು ಮುಖ್ಯವಾಗುತ್ತದೆ. ಈಗಂತೂ ಬೇಸಿಗೆಕಾಲ. ಬೇಸಿಗೆಯಲ್ಲಿ ಕೋಣೆ ಒಳಗೆ ಗಾಳಿ, ಬೆಳಕು ಸರಾಗವಾಗಿ ಹರಡುವಂತೆ ನೋಡಿಕೊಳ್ಳಬೇಕು ಹಾಗೂ ಇರುವ ವಸ್ತುಗಳನ್ನೇ ಕೊಂಚ ಮರುಜೋಡಿಸಿ ಇನ್ನಷ್ಟು ಸುಂದರವಾಗಿ ಇರಿಸಿಕೊಳ್ಳುವಂತೆ ನೋಡಿಕೊಳ್ಳಬಹುದು.

ತಿಳಿಬಣ್ಣಗಳು

ಮಲಗುವ ಕೋಣೆಯ ಪ್ರಮುಖ ಆಕರ್ಷಣೆ ಎಂದರೆ ಹಾಸಿಗೆ. ಹಾಸಿಗೆಯ ಹಾಸು, ಹೊದಿಕೆ ಎಲ್ಲವೂ ಕೋಣೆಯ ಅಂದವನ್ನು ಹೆಚ್ಚಿಸುತ್ತವೆ. ಆ ಕಾರಣಕ್ಕೆ ಬೇಸಿಗೆಯಲ್ಲಿ ಬಣ್ಣಗಳ ಆಯ್ಕೆಯೂ ಮುಖ್ಯವಾಗುತ್ತದೆ. ಗರಿಗರಿಯಾದ ಬಿಳಿ ಬಣ್ಣ, ತಿಳಿನೀಲಿ ಹಾಗೂ ತಿಳಿ ಗುಲಾಬಿ ಬಣ್ಣದ ಹೊದಿಕೆಗಳು ಹೆಚ್ಚು ಸೂಕ್ತ ಎನ್ನಿಸುತ್ತವೆ. ಇದರೊಂದಿಗೆ ಈ ಬಣ್ಣಕ್ಕೆ ಹೊಂದುವಂತಹ ದಿಂಬಿನ ಕವರ್‌ಗಳನ್ನು ಜೋಡಿಸಬಹುದು. ಅದರಲ್ಲೂ ದೊಡ್ಡ ದೊಡ್ಡ ಹೂವಿನ ಚಿತ್ತಾರದ ಹಾಸಿಗೆಯ ಹಾಸು ನೋಡಲು ಅಂದವಾಗಿರುತ್ತದೆ, ಅಲ್ಲದೇ ಮನಸ್ಸಿಗೂ ಮುದ ನೀಡುತ್ತದೆ.

ಹಗಲಿನಲ್ಲಿ ಸೂರ್ಯನ ಕಿರಣ ನೇರವಾಗಿ ಬೀಳದಂತೆ ನೋಡಿಕೊಳ್ಳಿ

ಮಲಗುವ ಕೋಣೆಗೆ ಸೂರ್ಯನ ಕಿರಣ ನೇರವಾಗಿ ಬೀಳುವ ಸ್ಥಳದಲ್ಲಿ ಕಟ್ಟಿಸುವುದು ಸರಿಯಲ್ಲ. ಒಂದು ವೇಳೆ ನೇರವಾಗಿ ಬಿದ್ದರೂ ಹಾಸಿಗೆ ಅಥವಾ ಕೊಠಡಿಯ ಕನ್ನಡಿಯ ಮೇಲೆ ಬೀಳದಂತೆ ನೋಡಿಕೊಳ್ಳಿ. ಕನ್ನಡಿಯ ಮೇಲೆ ಬಿದ್ದ ಸೂರ್ಯನ ಕಿರಣದ ಪ್ರತಿಫಲನವೂ ಮನಸ್ಸಿಗೆ ಕಿರಿಕಿರಿ ಮಾಡಬಹುದು. ಅಲ್ಲದೇ ಉರಿಬಿಸಿಲಿನ ತಾಪ ನೇರವಾಗಿ ತಾಕಿದರೆ ಅದರ ಬಿಸಿ ಸಂಜೆಯ ಮೇಲೂ ಹಾಗೇ ಇರುತ್ತದೆ. ಆ ಕಾರಣಕ್ಕೆ ಬೇಸಿಗೆಯಲ್ಲಿ ಹತ್ತಿಯ ಪರದೆಗಳನ್ನು ಅಳವಡಿಸಿ. ಈಗಂತೂ ಹಲವರಿಗೆ ಮನೆಯಿಂದಲೇ ಕೆಲಸ. ಮಲಗುವ ಕೋಣೆಯಲ್ಲೂ ಕುಳಿತು ಕೆಲಸ ಮಾಡುವ ಕಾರಣ ಹಗಲಿನಲ್ಲಿ ಹೆಚ್ಚು ಹೊತ್ತು ಅಲ್ಲೇ ಕಳೆಯುತ್ತೇವೆ. ಹಾಗಾಗಿ ಸೂರ್ಯನ ಕಿರಣದ ತಾಪ ನೇರವಾಗಿ ತಾಕದಂತೆ ನೋಡಿಕೊಳ್ಳುವುದು ಅವಶ್ಯ.

ಬೆಳಕಿನ ಹೊಂದಾಣಿಕೆ

ಯಾವುದೇ ಕೋಣೆಯಾಗಲಿ ಬೆಳಕನ್ನು ಹೇಗೆ ಹೊಂದಿಸುತ್ತೇವೆ ಎನ್ನುವುದರ ಮೇಲೆ ಕೋಣೆಯ ಅಂದವು ಅವಲಂಬಿಸಿರುತ್ತದೆ. ಆದರೆ ಮಲಗುವ ಕೋಣೆ ಬೇರೆಲ್ಲಾ ಕೋಣೆಗಳಿಗಿಂತ ಭಿನ್ನವಾಗಿರುತ್ತದೆ. ಆ ಕಾರಣಕ್ಕೆ ಹೆಚ್ಚು ತೀಕ್ಷ್ಮವಲ್ಲದ ದೀಪಗಳನ್ನು ಇರಿಸಬೇಕು. ನಿಮ್ಮ ಕೋಣೆ ಚಿಕ್ಕದಾದರೆ ಗೋಡೆಗೆ ದೀಪಗಳನ್ನು ಅಳವಡಿಸುವುದು ಸೂಕ್ತ. ಇದರಿಂದ ಮೇಜು ಹಾಗೂ ಹೂದಾನಿ ಬಳಿ ಸಾಕಷ್ಟು ಜಾಗವಿರುತ್ತದೆ. ಜೊತೆಗೆ ಬಿಸಿಲು ಬೀಳುವ ದಿಕ್ಕಿಗೆ ವಿರುದ್ಧವಾಗಿ ದೀಪಗಳನ್ನು ಅಳವಡಿಸುವುದು ಉತ್ತಮ. 

ಬೇಸಿಗೆಗೆ ಸೂಕ್ತ ಹಾಗೂ ಅಂದ ಹೆಚ್ಚಿಸುವ ವಸ್ತುಗಳನ್ನು ಖರೀದಿಸಿ‌

ಮಲಗುವ ಕೋಣೆಯ ವಾರ್ಡ್‌ರೋಬ್‌ ಅಥವಾ ಮಂಚದ ಪಕ್ಕದ ಟೇಬಲ್‌ ಅನ್ನು ಕಾಲ ಕಾಲಕ್ಕೆ ಬದಲಾಯಿಸಿ. ಹೂದಾನಿಯಲ್ಲಿರುವ ಬಣ್ಣದ ಹೂಗಳನ್ನು ಬದಲಿಸಿ. ಬೇಸಿಗೆಗೆ ಸೂಕ್ತ ಎನ್ನಿಸುವ ವಸ್ತುಗಳನ್ನು ಇರಿಸಿಕೊಳ್ಳಿ.

ಹಳೇ ರೇಡಿಯೊ

ಹಳೆಯ ಕಾಲದ ರೇಡಿಯೊ ಅಥವಾ ಗ್ರಾಮಾಫೋನ್‌ ಅನ್ನು ಮಲಗುವ ಕೋಣೆಯಲ್ಲಿ ಇರಿಸಿಕೊಳ್ಳಬಹುದು. ಬೇಸರವಾದಾಗ ಹಳೆಯ ಹಾಡುಗಳನ್ನು ಕೇಳುವ ಮೂಲಕ ಆನಂದಿಸಬಹುದು. ಸುಖನಿದ್ದೆಗೂ ಸಂಗೀತ ಸಹಾಯ ಮಾಡುತ್ತದೆ. ಕೋಣೆಯ ಅಂದ ಹೆಚ್ಚಲು ಇದು ಸಹಕಾರಿ.

ಗೋಡೆಗೆ ಚಿತ್ರ

ಬೇಸಿಗೆಯಲ್ಲಿ ಬಿಸಿಲಿನ ತಾಪಕ್ಕೆ ಮನಸ್ಸಿಗೆ ಕಿರಿಕಿರಿ ಎನ್ನಿಸುವುದು ಸಹಜ. ಆ ಕಾರಣಕ್ಕೆ ಮನಸ್ಸಿಗೆ ಮುದ ನೀಡುವಂತಹ ಚಿತ್ರಗಳನ್ನು ಗೋಡೆಗೆ ನೇತು ಹಾಕಿಕೊಳ್ಳಿ. ಅಲ್ಲದೇ ನಿಮಗೆ ಪೇಟಿಂಗ್ ಹವ್ಯಾಸವಿದ್ದರೆ ಬಿಡುವಿನ ವೇಳೆಯನ್ನು ಸದು‍ಪಯೋಗ ಪಡಿಸಿಕೊಂಡು ನೀವೇ ಮಾಡಿದ ಪೇಂಟಿಂಗ್‌ನಿಂದ ಮಲಗುವ ಕೋಣೆಯನ್ನು ಅಲಂಕರಿಸಬಹುದು. ಅದರಲ್ಲೂ ಮರದ ಚೌಕಟ್ಟು ಇರುವ ಕನ್ನಡಿ ಖರೀದಿಸಿ ನಿಮಗೆ ಸೂಕ್ತ ಎನ್ನಿಸುವ ರೀತಿ ಪೇಂಟ್ ಮಾಡಿ ಇರಿಸಿಕೊಳ್ಳಬಹುದು. ಇದು ನಿಮ್ಮ ಹವ್ಯಾಸಕ್ಕೆ ಇಂಬು ನೀಡುವುದಲ್ಲದೇ ಅಂದ ಹೆಚ್ಚಿಸಲು ಸಹಕಾರಿ.

ನಿಮ್ಮನ್ನು ನೀವು ಅತಿಥಿ ಎಂದುಕೊಳ್ಳಿ

ಬೇರೆ ಕಾಲಕ್ಕೆ ಹೋಲಿಸಿದರೆ ಬೇಸಿಗೆಕಾಲದಲ್ಲಿ ಮನೆಗೆ ಅತಿಥಿಗಳು ಬರುವುದು ಹೆಚ್ಚು. ಅತಿಥಿಗಳು ಬಂದಾಗ ಮಾತ್ರ ಮಲಗುವ ಕೋಣೆಯನ್ನು ಸ್ಚಚ್ಛ ಮಾಡುವ ಬದಲು ಪ್ರತಿದಿನ ಸುಂದರವಾಗಿ ಇರಿಸಿಕೊಳ್ಳಿ. ಮಂಚದ ಬಳಿ ಚಿಕ್ಕ ಮೇಜು ಇರಿಸಿ ಅದರ ಮೇಲೆ ಸುಂದರ ವಿನ್ಯಾಸದ ಮಗ್‌ನಲ್ಲಿ ನೀರು ಇರಿಸಿ. ಅಷ್ಟೇ ಸುಂದರವಾದ ಲೋಟವನ್ನು ಇರಿಸಿಕೊಳ್ಳಿ. ನೆಲಕ್ಕೆ ಒಳ್ಳೆಯ ಕಾರ್ಪೆಟ್‌ ಹಾಸಿ. ಇದು ಬೇಸಿಗೆಯಲ್ಲಿ ತಂಪೂ ಹೌದು, ಕೋಣೆಯ ಅಂದವನ್ನೂ ಹೆಚ್ಚಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು