ಸೋಮವಾರ, ಮಾರ್ಚ್ 27, 2023
24 °C
ಅರಿವು ಹರಿವು

ಪಾನೀಯದ ಕಥೆ

ಸೂರ್ಯ Updated:

ಅಕ್ಷರ ಗಾತ್ರ : | |

ಪಾನೀಯದ ಕಥೆ

ಪಾನೀಯ ಇಲ್ಲದೇ ಮನುಷ್ಯನ ಜೀವನ ಸಾಗದು. ಮಾನವ ಮತ್ತು ಪಾನೀಯದ ಸಂಬಂಧ ಮನುಕುಲದ ಆರಂಭದಿಂದಲೇ ಇದೆ. ಮಾನವ ಸೇವಿಸಿದ ಮೊದಲ ಪಾನೀಯ ಎಂದರೆ ನೀರು. ನೀರು ಇಲ್ಲದಿದ್ದರೆ ಮನುಷ್ಯ ಇಲ್ಲ. (ಮನುಷ್ಯ ಬಿಡಿ; ಪ್ರಾಣಿ ಸಂಕುಲಗಳೂ ಉಳಿಯವು). ಆ ಬಳಿಕ ಮಾನವನಿಗೆ ಅರಿವು ಮೂಡಿದಂತೆ ಬೇರೆ ಬೇರೆ ಪಾನೀಯಗಳ ಬಗ್ಗೆ ಅರಿತುಕೊಂಡ. ನೀರಿನ ನಂತರ ಮಾನವ ಹೆಚ್ಚಾಗಿ ಬಳಸಿದ ಪಾನೀಯ ಎಂದರೆ ಹಾಲು.ಆಧುನಿಕ ಪಾನೀಯಗಳು, ಅಂದರೆ, ಲಘು ಪಾನೀಯ, ಮದ್ಯಗಳೆಲ್ಲ ನಾಗರಿಕತೆ ಬೆಳೆದ ನಂತರ ಪರಿಚಿತಗೊಂಡಂತಹವು. ಅಲೆಮಾರಿಯಾಗಿದ್ದ ಮಾನವ ಒಂದು ಕಡೆ ನೆಲೆನಿಂತು ಜೀವನ ಸಾಗಿಸಲು ಆರಂಭಿಸಿದಾಗಿನಿಂದ ತನ್ನ ಅವಶ್ಯಕತೆಗಳಿಗೆ ಬೇಕಾದ ವಸ್ತುಗಳನ್ನು ತಯಾರಿಸುತ್ತಾ ಅಥವಾ ಉತ್ಪಾದಿಸುತ್ತಾ ಬಂದ. ಅವುಗಳಲ್ಲಿ ಪಾನೀಯವೂ ಒಂದು.ತಾನಿದ್ದ ಪ್ರದೇಶಗಳ ಸುತ್ತಮುತ್ತ ಸಿಗುತ್ತಿದ್ದ ಸಸ್ಯಜನ್ಯ ವಸ್ತುಗಳಿಂದ, ತಾನು ಬೆಳೆಸಿದ ಮರಗಳಿಂದ ದೊರೆಯುತ್ತಿದ್ದ ಫಲಪುಷ್ಪಗಳಿಂದ ಪಾನೀಯ ತಯಾರಿಸುವುದನ್ನು ಮಾನವ ಕಲಿತ.8000 ವರ್ಷಗಳ ಹಿಂದೆಯೇ ಸಾಮಾನ್ಯ ಪಾನೀಯಗಳ (ನೀರು, ಹಾಲು ಇತ್ಯಾದಿ) ಜೊತೆಗೆ ಮದ್ಯದಂತಹ ಪಾನೀಯವನ್ನು  ಜನರು ಬಳಸುತ್ತಿದ್ದರು ಎಂಬುದಕ್ಕೆ ಪುರಾವೆಗಳು ಲಭ್ಯವಾಗಿವೆ. ಕ್ರಿ.ಪೂ. 6000ದ ಅವಧಿಯಲ್ಲಿ ಜಾರ್ಜಿಯಾದಲ್ಲಿ, ಕ್ರಿ.ಪೂ 5000ದಲ್ಲಿ ಇರಾನಿನಲ್ಲಿ ವೈನ್‌ (ಸಾಮಾನ್ಯವಾಗಿ ದ್ರಾಕ್ಷಾರಸವನ್ನು ವೈನ್‌ ಎಂದು ಕರೆಯುತ್ತಾರೆ) ತಯಾರಿಸುತ್ತಿದ್ದರು ಎಂಬುದಕ್ಕೆ ಪುರಾತತ್ವ ದಾಖಲೆಗಳು ಲಭ್ಯವಾಗಿವೆ.ಪುರಾತನ ನಾಗರಿಕತೆಯ ಜನರು ಬರವಣಿಗೆಯನ್ನು ಕಲಿಯುವುದಕ್ಕೂ ಮೊದಲೇ ಬಿಯರ್‌ ತಯಾರಿಸಿರಬಹುದು ಎಂದು ಇತಿಹಾಸ ತಜ್ಞರು ಊಹಿಸಿದ್ದಾರೆ. ಬಿಯರ್‌ ಮತ್ತು ತಿಂಡಿಯ ಆವಿಷ್ಕಾರವು ಮಾನವ ಹೊಸ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಮತ್ತು ನಾಗರಿಕತೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಪ್ರೇರಣೆಯಾಯಿತು ಎಂಬ ಪ್ರತಿಪಾದನೆಯನ್ನೂ ತಜ್ಞರು ಮುಂದಿಡುತ್ತಾರೆ.ಪುರಾತನ ಈಜಿಪ್ಟ್‌ನಲ್ಲಿ ಬಿಯರ್‌ ಸಾಮಾನ್ಯ ಪಾನೀಯವಾಗಿತ್ತು. ಸಾಮಾಜಿಕ, ಧಾರ್ಮಿಕವಾಗಿಯೂ ಇದಕ್ಕೆ ಮಹತ್ವ ಇತ್ತು. ಜನರೆಲ್ಲ ಒಂದೆಡೆ ಸೇರಿ ಸಾಮೂಹಿಕವಾಗಿ ಬಿಯರ್‌ ಸೇವಿಸುತ್ತಿದ್ದರಂತೆ. ಪ್ರಾಚೀನ ರೋಮ್‌ನಲ್ಲೂ ಇದೇ ರೀತಿಯ ಸಂಪ್ರದಾಯ ಇತ್ತು. 4000 ವರ್ಷಗಳ ಹಿಂದೆ ಪುರಾತನ ಬ್ಯಾಬಿಲೋನ್‌ನಲ್ಲೂ ಇದರ ಬಳಕೆ ಇತ್ತು.ಮದುವೆ ಸಮಾರಂಭಗಳಲ್ಲಿ ಬಿಯರ್‌ ಪ್ರಮುಖ ಪಾನೀಯವಾಗಿತ್ತು. ಆ  ಸಂದರ್ಭದಲ್ಲಿ ಜೇನುತುಪ್ಪದಿಂದ ಮಾಡಿದ ಬಿಯರ್‌ ಹೆಚ್ಚು ಪ್ರಚಲಿತದಲ್ಲಿತ್ತು. ವಧುವಿನ ತಂದೆ ವರನಿಗೆ ಇಷ್ಟವಾದ ಬಿಯರ್‌ ಕೊಡಿಸಬೇಕಿತ್ತಂತೆ. ಪುರಾತನ ಸಮಾಜದಲ್ಲಿನ ಕೆಲವು ಧರ್ಮಗಳು ಮದ್ಯವನ್ನು ದೇವರ ಉಡುಗೊರೆ ಎಂದೇ ನಂಬಿದ್ದವು. ಕೆಲವು ಧರ್ಮಗಳು ಅಮಲು ಪದಾರ್ಥಗಳ ಮೇಲೆ ನಿಷೇಧ ಹೇರಿದ್ದವು. ಶಾಂಗ್‌ ಆಡಳಿತದ (ಕ್ರಿ.ಪೂ 1500–ಕ್ರಿ.ಪೂ 1046) ಅಡಿಯಲ್ಲಿ ಚೀನಾದ ಯುನ್ನಾನ್‌ ಪ್ರಾಂತ್ಯದಲ್ಲಿ ಚಹಾ ಪರಿಚಯವಾಯಿತು. ಅದು ಔಷಧೀಯ ಪೇಯವಾಗಿತ್ತು.ಮಧ್ಯಕಾಲೀನ ಯುಗದಲ್ಲಿ ಸಾಮಾನ್ಯ ಜನರು ಕೂಡ ಮದ್ಯ ಸೇವಿಸುತ್ತಿದ್ದರು. ಸಾಮಾನ್ಯವಾಗಿ ಅದು ಏಲ್‌ (ಬಾರ್ಲಿಯನ್ನು ಹುಳಿಬರಿಸಿ ತಯಾರಿಸಿದ ಮದ್ಯ) ಆಗಿತ್ತು. ಇದರ ಜೊತೆಗೆ ಸೇಬುಹಣ್ಣಿನ ಮದ್ಯ ಮತ್ತು ಜೇನಿನ ಮದ್ಯವನ್ನು ಸೇವಿಸುತ್ತಿದ್ದರು. 10ನೇ ಶತಮಾನದ ಹೊತ್ತಿಗೆ ಕಾಫಿ ಬಗ್ಗೆ ಜನರಿಗೆ ತಿಳಿಯಿತು. ಕಾಫಿಯ ಸ್ವಾದವನ್ನು ಸವಿದವರಲ್ಲಿ ಇಥೋಪಿಯನ್ನರು ಮೊದಲಿಗರು ಎಂದು ನಂಬಲಾಗಿದೆ.15–16ನೇ ಶತಮಾನದ ವೇಳೆಗೆ ಕಾಫಿ ಹೆಚ್ಚು ಜನಪ್ರಿಯವಾಯಿತು. ಆ ಹೊತ್ತಿಗಾಗಲೇ ಸುಧಾರಿತ ಪಾನೀಯಗಳನ್ನು ತಯಾರಿಸುವ ಬಗೆಯನ್ನು ಜನರು ಅರಿತರು. ನೀರನ್ನು ಶುದ್ಧೀಕರಿಸುವುದು, ಹಾಲು ಸೇರಿದಂತೆ ಇತರ ಪೇಯಗಳನ್ನು ನಿರ್ದಿಷ್ಟ ಉಷ್ಣತೆಯಲ್ಲಿ ಬಿಸಿ ಮಾಡುವುದು, ಹಣ್ಣುಗಳಿಂದ ರಸತೆಗೆಯಲು ಯಂತ್ರಗಳ ಬಳಕೆ ಹೀಗೆ... ಪಾನೀಯ ತಯಾರಿಕೆಯಲ್ಲಿ ಹೊಸ ತಂತ್ರಜ್ಞಾನಗಳ ಬಳಕೆ ಆರಂಭವಾಯಿತು. ಕೈಗಾರಿಕಾ ಕ್ರಾಂತಿ ಪಾನೀಯ ಕ್ಷೇತ್ರದಲ್ಲಿ ಹೊಸ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿತು.ಈಗ ಪಾನೀಯದ್ದೇ ಬೃಹತ್‌ ಮಾರುಕಟ್ಟೆ. ಆಲ್ಕೊಹಾಲ್‌ ಅಂಶ ಹೊಂದಿರುವ, ಹೊಂದಿರದೇ ಇರುವ... ಹೀಗೆ ಅಸಂಖ್ಯ ಬಗೆಯ ಪಾನೀಯಗಳಿವೆ. ಮಾರುಕಟ್ಟೆಯಲ್ಲಿ ಲಘು ಪಾನೀಯಗಳಿಗಿಂತ, ಮದ್ಯದ ಅಂಶ ಹೊಂದಿರುವ ಪಾನೀಯಗಳದ್ದೇ ಹೆಚ್ಚು ಕಾರುಬಾರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.