ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಜತೆ ನದಿ ನೀರು ಹಂಚಿಕೆ ಒಪ್ಪಂದ: ನಾಜೂಕಿನ ನಡೆ ಅವಶ್ಯ

Last Updated 27 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಾಶ್ಮೀರದ ಉರಿಯಲ್ಲಿ ಸೇನಾ ಶಿಬಿರದ ಮೇಲೆ ಪಾಕಿಸ್ತಾನ ಬೆಂಬಲಿತ ಉಗ್ರರು ನಡೆಸಿದ ದಾಳಿ ಈಗ ಎರಡೂ ದೇಶಗಳ ನದಿ ನೀರು ಹಂಚಿಕೆ ಒಪ್ಪಂದದ ಮೇಲೂ ಪರಿಣಾಮ ಬೀರುವ ಹಂತಕ್ಕೆ ಬಂದಿದೆ. ಇಷ್ಟು ದಿನ ಗಡಿಯಾಚೆಯಿಂದ ಬಂದು ನಮ್ಮ ದೇಶದೊಳಗೆ ಉಗ್ರರು ಮನಸ್ವೇಚ್ಛೆ ಹಾವಳಿ ಮಾಡಿದರೂ, ಅದು ರಾಜತಾಂತ್ರಿಕ ಮಟ್ಟದಲ್ಲಿ ಆರೋಪ– ಪ್ರತ್ಯಾರೋಪಗಳಿಗೆ, ಮಾತುಕತೆ ಸ್ಥಗಿತಕ್ಕೆ ಸೀಮಿತವಾಗಿರುತ್ತಿತ್ತು.

ಇನ್ನೂ ಹೆಚ್ಚೆಂದರೆ ವಾಣಿಜ್ಯ– ವ್ಯವಹಾರಗಳ ಮೇಲೆ ಒಂದಿಷ್ಟು ಪರಿಣಾಮ ಬೀರುತ್ತಿತ್ತು. ಆದರೆ ಈಗ ನದಿ ನೀರನ್ನೇ ಪಾಕಿಸ್ತಾನವನ್ನು ಮಣಿಸುವ ಅಸ್ತ್ರವಾಗಿ ಬಳಸುವ ಮಾತುಗಳು ಕೇಳಿಬರುತ್ತಿವೆ. ಅದಕ್ಕೆ ಪೂರಕ ಎಂಬಂತೆ ಪ್ರಧಾನಿ ನರೇಂದ್ರ ಮೋದಿ ಅವರು, ‘ನೆತ್ತರು ಮತ್ತು ನೀರು ಜತೆಯಾಗಿ ಹರಿಯಲು ಸಾಧ್ಯವೇ ಇಲ್ಲ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವ ಧಾಟಿಯಲ್ಲಿ ಹೇಳಿದ್ದಾರೆ. ಅದರ ಅರ್ಥ ತುಂಬ ಸ್ಪಷ್ಟವಾಗಿಯೇ ಇದೆ.

ಹಿಮಾಲಯದಲ್ಲಿ ಹುಟ್ಟಿ ಭಾರತದ ಪ್ರದೇಶಗಳಲ್ಲಿ ಹರಿದು ಪಾಕಿಸ್ತಾನದ ಮೂಲಕ ಅರಬ್ಬಿ ಸಮುದ್ರ ಸೇರುವ ಸಿಂಧೂ ಮತ್ತು ಅದರ ಜಲಾನಯನದ ವ್ಯಾಪ್ತಿಗೆ ಸೇರಿದ ಝೇಲಂ, ಚಿನಾಬ್‌, ರಾವಿ, ಬಿಯಾಸ್‌, ಸಟ್ಲೇಜ್‌ ನದಿಗಳ ನೀರನ್ನು ಹಂಚಿಕೊಳ್ಳುವುದಕ್ಕೆ ಸಂಬಂಧಪಟ್ಟಂತೆ 1960ರಲ್ಲಿ ಮಾಡಿಕೊಂಡ ಒಪ್ಪಂದವೇ ಡೋಲಾಯಮಾನವಾಗಲಿದೆ. ಪಾಕಿಸ್ತಾನದ ಜತೆ  ನೀರು ಹಂಚಿಕೆ ಮಾತುಕತೆಗಳು ಸ್ಥಗಿತಗೊಳ್ಳಲಿವೆ. ಪಾಕಿಸ್ತಾನ ಭಯೋತ್ಪಾದನೆಗೆ ಕುಮ್ಮಕ್ಕು ಕೊಡುವುದನ್ನು ನಿಲ್ಲಿಸುವವರೆಗೂ ಅದರ ಜತೆಗೆ ಮಾತುಕತೆ ಅರ್ಥಹೀನ ಎಂಬುದು ರಾಜಕೀಯವಾಗಿ ಸರಿ.

ಆದರೆ ನೀರಿನ ವಿಷಯ ಬಂದಾಗ ಅದನ್ನು ಬೇರೆ ರೀತಿಯಲ್ಲೇ ನೋಡಬೇಕು. ನೀರು ಭಾವನಾತ್ಮಕ ನಂಟು ಹೊಂದಿರುವ ಜೀವದಾಯಿನಿ. ‘ನೀರಿಲ್ಲದೇ ಬದುಕೇ ಇಲ್ಲ. ಆ ಜೀವಜಲಕ್ಕೇ ಕತ್ತರಿ ಬಿದ್ದರೆ ಪ್ರಜೆಗಳ ಸಿಟ್ಟು ಸಹಜವಾಗಿಯೇ ತಮ್ಮ ಸರ್ಕಾರ ಮತ್ತು ಜನಪ್ರತಿನಿಧಿಗಳ ಮೇಲೆ ತಿರುಗುತ್ತದೆ. ಭಯೋತ್ಪಾದಕರನ್ನು ಬಗ್ಗು ಬಡಿಯುವಂತೆ ಅವರು ತಮ್ಮ ಸರ್ಕಾರದ ಮೇಲೆ ಒತ್ತಡ ತರುವ ಸನ್ನಿವೇಶ ನಿರ್ಮಾಣವಾಗುತ್ತದೆ. ಜನಾಭಿಪ್ರಾಯವನ್ನು ಕಡೆಗಣಿಸಲು ಅಲ್ಲಿನ ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ’ ಎನ್ನುವುದು ಒಪ್ಪಂದ ಮರುಪರಿಶೀಲನೆಯ ಆಗ್ರಹದ  ಹಿಂದಿರುವ ಲೆಕ್ಕಾಚಾರ. ಪಾಕ್‌ಗೆ ಹರಿಯುವ ನೀರನ್ನು ನಿಯಂತ್ರಿಸಿ ಒತ್ತಡ ಹೇರುವ ತಂತ್ರ ಹೊಸದಲ್ಲ; 2008ರಲ್ಲಿ ಆಗಿನ ಸರ್ಕಾರವೂ ಮಾಡಿತ್ತು.

ಒಪ್ಪಂದದ ಪ್ರಕಾರ ಪಾಕಿಸ್ತಾನದ ಪಶ್ಚಿಮದಲ್ಲಿ ಹರಿಯುವ ಸಿಂಧೂ, ಝೇಲಂ ಮತ್ತು ಚಿನಾಬ್‌ಗಳ ಮೇಲೆ ಆ ದೇಶಕ್ಕೆ ಹೆಚ್ಚಿನ ಹಕ್ಕು ನೀಡಲಾಗಿದೆ. ಆದರೆ ಈ ನದಿಗಳ ಮೂಲ ಇರುವುದು ನಮ್ಮ ದೇಶದಲ್ಲಿ. ಹಾಗಾಗಿ ಇವುಗಳ ನೀರಿನ ಶೇ 20ರಷ್ಟನ್ನು ನಾವು ಬಳಸಬಹುದು. ಈ ನದಿಗಳಿಂದ 13.32 ಲಕ್ಷ ಎಕರೆಗೆ ನೀರಾವರಿ, 18,600 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ನಮಗೆ ಅವಕಾಶವಿದೆ. ಆದರೆ ಈಗ 8 ಲಕ್ಷ ಎಕರೆ ಮಾತ್ರ ನೀರಾವರಿಗೆ ಒಳಪಡಿಸಿದ್ದು 3,034 ಮೆಗಾವಾಟ್‌ ವಿದ್ಯುತ್‌ ಉತ್ಪಾದನೆ ಮಾಡಲಾಗುತ್ತಿದೆ.

ನಮ್ಮ ಪಾಲನ್ನು ಪೂರ್ಣವಾಗಿ ಬಳಸಿಕೊಂಡಲ್ಲಿ ಪಾಕ್‌ಗೆ ಹರಿದುಹೋಗುವ ನೀರು ಸಹಜವಾಗಿಯೇ ಕಡಿಮೆ ಆಗುತ್ತದೆ. ಆದರೆ ನಮ್ಮಲ್ಲಿ  ಅದಕ್ಕೆ ಅಗತ್ಯವಾದ ಮೂಲಸೌಕರ್ಯ, ಜಲಾಶಯಗಳು, ಕಾಲುವೆಗಳು ಈಗ ಇಲ್ಲ.  ಹಾಗಾಗಿ  ಇಂತಹ ವಿಷಯಗಳ ಬಗ್ಗೆ ಸಾರಾಸಾರ ವಿಚಾರ ಮಾಡಿ, ಸಂಯಮದಿಂದ ಆಲೋಚಿಸಿ ನಿರ್ಧಾರ ಕೈಗೊಳ್ಳುವುದು ಒಳಿತು. ಭಾವೋದ್ವೇಗದ  ಮಾತುಗಳಿಂದ ಪ್ರಯೋಜನ ಇಲ್ಲ.

ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಇದುವರೆಗೂ ಪಾಕ್‌ ವಿರುದ್ಧ ಅಭಿಪ್ರಾಯ ಮೂಡಿಸುವಲ್ಲಿ ನಾವು ಬಹುತೇಕ ಯಶಸ್ಸು ಕಾಣುತ್ತಲೇ ಬಂದಿದ್ದೇವೆ. ಅದು ಭಯೋತ್ಪಾದನೆಯನ್ನು ರಫ್ತು ಮಾಡುವ ದೇಶ ಎಂಬುದು ವಿಶ್ವ ಸಮುದಾಯದ ಅರಿವಿಗೂ ಬರುತ್ತಿದೆ. ಇದಕ್ಕೆಲ್ಲ ಕಾರಣ ನಿರಂತರ ರಾಜತಾಂತ್ರಿಕ ಪ್ರಯತ್ನ ಮತ್ತು ಸಂಯಮದ ನಡೆ.

ಪಾಕಿಸ್ತಾನದ ಅಕೃತ್ಯಗಳನ್ನು ವಿಶ್ವ ಸಮುದಾಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನವನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ವಿಶ್ವಸಂಸ್ಥೆ  ಮಹಾ ಅಧಿವೇಶನದಲ್ಲಿ ಚೆನ್ನಾಗಿಯೇ ಮಾಡಿದ್ದಾರೆ. ಕಾಶ್ಮೀರ ವಿವಾದ ಕುರಿತಂತೆ ಪಾಕ್‌ ನಿಲುವನ್ನು ತಾನು ಬೆಂಬಲಿಸಿಲ್ಲ ಎಂದು ಚೀನಾ ಒಂದು ವಾರದಲ್ಲಿ ಎರಡನೇ ಸಲ ಸ್ಪಷ್ಟನೆ  ನೀಡಿರುವುದೂ ಅಲಕ್ಷಿಸುವಂತಹ ಸಂಗತಿಯಲ್ಲ.

ಇವೆಲ್ಲ ನಮಗೆ ಮುನ್ನಡೆ, ಪಾಕ್‌ಗೆ ಹಿನ್ನಡೆ. ಆದ್ದರಿಂದ ವಿಶ್ವ ನಮ್ಮ ಬಗ್ಗೆ ಹೊಂದಿರುವ ಸದಭಿಪ್ರಾಯಕ್ಕೆ  ನದಿ ನೀರು ಒಪ್ಪಂದ ಮರುಪರಿಶೀಲನೆಯಿಂದ ಧಕ್ಕೆ ಆಗದಂತೆ ಎಚ್ಚರಿಕೆಯ ಹೆಜ್ಜೆ ಇಡಬೇಕು. ಅಂತರರಾಷ್ಟ್ರೀಯ ಪರಿಣಾಮಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಇಂಥ ವಿಚಾರಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT