ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ದೀಪಾವಳಿ ಸ್ಪರ್ಧೆ ವಿಜೇತರು

Last Updated 13 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶಿರಸಿಯ ರಾಜು ಹೆಗಡೆ ಅವರ ‘ಕತ್ತಲೆ ಮೌನ ಮತ್ತು...’ ಕಥೆ ಹಾಗೂ ಹಿರಿಯೂರು ತಾಲ್ಲೂಕಿನ ಆರನಕಟ್ಟೆಯ ಎನ್. ರಂಗನಾಥ ಅವರ ‘ಬೆವರಿನ ಗಂಜಿ’ ಕವಿತೆ, ‘ಪ್ರಜಾವಾಣಿ’ ದೀಪಾವಳಿ 2016ರ ಸಾಹಿತ್ಯಿಕ ಸ್ಪರ್ಧೆಗಳಲ್ಲಿ ಮೊದಲ ಬಹುಮಾನಕ್ಕೆ ಆಯ್ಕೆಯಾಗಿವೆ.

ಮೈಸೂರಿನ ಆಲೂರು ದೊಡ್ಡನಿಂಗಪ್ಪ (‘ಒಂದು ಕಂಪೆನಿಯ ಕಥೆ’) ಹಾಗೂ ಬೆಂಗಳೂರಿನ ವಿ.ಎಂ. ಮಂಜುನಾಥ (‘ಅಸ್ಪೃಶ್ಯ ಗುಲಾಬಿ’) ಕಥಾಸ್ಪರ್ಧೆಯಲ್ಲಿ ಎರಡು ಮತ್ತು ಮೂರನೇ ಬಹುಮಾನಗಳಿಗೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿ ವಿಭಾಗದ ಬಹುಮಾನ ಪ್ರವೀಣ ಪೊಲೀಸ ಪಾಟೀಲ (‘ನಿರ್ದೇಶಕಿಯಾದ ನನ್ನವ್ವ’) ಅವರಿಗೆ ದೊರೆತಿದೆ.

ಕವನ ಸ್ಪರ್ಧೆ ವಿಭಾಗದಲ್ಲಿ ತುಮಕೂರಿನ ದುಡ್ಡನಹಳ್ಳಿ ಮಂಜುನಾಥ್‌ (‘ಚಡ್ಡಿ’) ಹಾಗೂ ಸಿದ್ದಾಪುರದ ನಾಣಿಕಟ್ಟಾದ ಮಾನಸಾ ಹೆಗಡೆ (‘ನವಿಲು’) ಎರಡು ಮತ್ತು ಮೂರನೇ ಬಹುಮಾನಗಳಿಗೆ ಆಯ್ಕೆಯಾಗಿದ್ದರೆ, ವಿದ್ಯಾರ್ಥಿ ವಿಭಾಗದ ಬಹುಮಾನ ಗಾಣಿಗರ್‌ ಎನ್‌.ಎಸ್‌. (‘ಉರಿಯ ಹೂವಿಗೆ ಹಾರಿದ ಚಿಟ್ಟೆ’) ಅವರಿಗೆ ದೊರೆತಿದೆ.

ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದ ಮೊದಲ ಮೂರು ಕಥೆಗಳಿಗೆ ₹ 20000, ₹15000 ಹಾಗೂ ₹10000 ಬಹುಮಾನ ದೊರೆಯಲಿದೆ. ವಿದ್ಯಾರ್ಥಿ ವಿಭಾಗದ ಕಥೆ ₹5000 ಬಹುಮಾನ ಪಡೆಯಲಿದೆ. ಕವನ ಸ್ಪರ್ಧೆ ವಿಭಾಗದಲ್ಲಿ ಮೊದಲ ಮೂರು ಕವಿತೆಗಳಿಗೆ ₹5000, ₹3000 ಹಾಗೂ ₹2500 ಬಹುಮಾನ ದೊರೆಯಲಿದ್ದು, ವಿದ್ಯಾರ್ಥಿ ವಿಭಾಗದ ಕವಿತೆ ₹2000 ರೂಪಾಯಿ ಬಹುಮಾನ ಪಡೆಯಲಿದೆ.

ಕಥಾಸ್ಪರ್ಧೆಯಲ್ಲಿ ಹರಿಯಪ್ಪ ಪೇಜಾವರ (‘ಹೆಸರು’), ಕೆ.ಪಿ. ಮೃತ್ಯುಂಜಯ (’ಕೊಲೆ’), ಮಹಾಂತ ಮಯೂರಶಿಲೆ (‘ನಿಮ್ಮ ಕೆರವಿಂಗೆ ಯನ್ನ ಶಿರ’), ಮೋದೂರು ತೇಜ (‘ದಾಹ’) ಹಾಗೂ ಮಂಜುನಾಥ್ ಲತಾ (‘ಎರಡೆಂಬ ಭಿನ್ನ ವೇಷ’) ಕಥೆಗಳು ತೀರ್ಪುಗಾರರ ಮೆಚ್ಚುಗೆ ಗಳಿಸಿವೆ. ಕವನ ಸ್ಪರ್ಧೆಯಲ್ಲಿ ಸಿ.ವಿ. ಶೇಷಾದ್ರಿ ಹೊಳವನಹಳ್ಳಿ (‘ಎಲ್ಲರೂ ಕೈಯೆತ್ತಿ ನಿಂತಿದ್ದಾರೆ’), ಕೆ.ಪಿ. ಮೃತ್ಯುಂಜಯ (‘ಉಳಿದುಬಿಡು ಒಂದು ಬಿಂದುವಾಗಿ’), ಸ್ಮಿತಾ ಅಮೃತರಾಜ್‌ (‘ಆದರೂ ನಾವು ಮರವಾಗಿದ್ದೇವೆ’), ಚಿದಾನಂದ ಸಾಲಿ (‘ಕಾಡು’), ಚೀಮನಹಳ್ಳಿ ರಮೇಶಬಾಬು (ಮಣ್ಣು–ಬೀಜ) ರಚನೆಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ.

ತೀರ್ಪುಗಾರರು: ಖ್ಯಾತ ಕಥೆಗಾರ ಮೊಗಳ್ಳಿ ಗಣೇಶ್‌ ಹಾಗೂ ವಿಮರ್ಶಕ ನರೇಂದ್ರ ಪೈ ಅವರು ಕಥಾಸ್ಪರ್ಧೆಯ ತೀರ್ಪುಗಾರ­ರಾಗಿ, ಕವಿಗಳಾದ ಪ್ರತಿಭಾ ನಂದಕುಮಾರ್‌ ಹಾಗೂ ಲಕ್ಷ್ಮೀಪತಿ ಕೋಲಾರ ಕವನಸ್ಪರ್ಧೆಯ ನಿರ್ಣಾಯಕರಾಗಿ ಕಾರ್ಯ ನಿರ್ವಹಿಸಿದ್ದರು

ಮಕ್ಕಳ ವರ್ಣಚಿತ್ರ ಸ್ಪರ್ಧೆ:  ಮಕ್ಕಳ ವರ್ಣಚಿತ್ರ ಸ್ಪರ್ಧೆಯಲ್ಲಿ ಆಕಾಶ ವಗ್ಗಾ (ಚಿಕ್ಕಮುಚ್ಚಳ ಗುಡ್ಡ), ಬಸವರಾಜ ಸಿದ್ದಪ್ಪ ನಂದೇಶ್ವರ (ಜಮಖಂಡಿ), ಜೆ.ಎಂ. ಭಾಗ್ಯಶ್ರೀ (ಕೊಪ್ಪಳ), ಭೂಮಿ ಭಂಡಾರಿ (ಇಳಕಲ್), ಗಾಯತ್ರಿ ಷಣ್ಮುಖಪ್ಪ (ರಾಯಚೂರು), ಮೋಹನ ಮೊರಬದ (ಬಾಗಲಕೋಟೆ), ಪುಂಡಲೀಕ ಸದಾಶಿವ ಅಮಜವ್ವಗೋಳ (ಜಮಖಂಡಿ) ಹಾಗೂ ಅಪೂರ್ವ (ಸುರತ್ಕಲ್) ಬಹುಮಾನ ಪಡೆದಿದ್ದಾರೆ. ಪ್ರಸಿದ್ಧ ಕಲಾ ಇತಿಹಾಸಕಾರ ಡಾ. ಆರ್‌.ಎಚ್‌. ಕುಲಕರ್ಣಿ ಈ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

***
ತೀರ್ಪುಗಾರರ ಅನಿಸಿಕೆ

ಪ್ರತಿಭಾವಂತ ಕಥೆಗಾರರು ‘ಪ್ರಜಾವಾಣಿ’ಯ ದೀಪಾವಳಿ ಕಥಾಸ್ಪರ್ಧೆಗೆ ಮೂಲಕವೇ ಬಂದವರಾಗಿದ್ದಾರೆ. ಅತ್ಯುತ್ತಮ ಕಥೆಗಳ ಮೈಲಿಗಲ್ಲುಗಳು ‘ಪ್ರಜಾವಾಣಿ’ಯ ಮೂಲಕ ದಾಖಲಾಗಿವೆ. ಇತರೆ ಯಾವೊಂದು ಸಾಹಿತ್ಯ ವೇದಿಕೆಗೂ ಇಷ್ಟೊಂದು ಕಥೆಗಾರರನ್ನು ಪರಿಚಯಿಸಲು ಸಾಧ್ಯವಾಗಿಲ್ಲ.
–ಮೊಗಳ್ಳಿ ಗಣೇಶ್

*

ಸ್ಪಷ್ಟವಾದ ಕಥಾನಕದ ಹಂಗನ್ನು ಬಿಟ್ಟುಕೊಟ್ಟು ಯಾವುದೋ ಒಂದು ಸನ್ನಿವೇಶವನ್ನೋ ಕ್ಷಣವನ್ನೋ ತಮ್ಮ ನೆಲೆಯಾಗಿಸಿಕೊಂಡು ಅದನ್ನೇ ನೆಚ್ಚಿ ಹುಟ್ಟಿದ ಕಥೆ ಒಂದೂ ಇಲ್ಲದಿರುವುದು ಆಶ್ಚರ್ಯ!
  –ನರೇಂದ್ರ ಪೈ

*

ಕಾವ್ಯ ಈಗ ಮರುವ್ಯಾಖ್ಯಾನಕ್ಕೆ ಒಳಗಾಗುತ್ತಿದೆ. ಇತರ ಕಲೆಗಳಲ್ಲಿ ಆದ ಬದಲಾವಣೆಯೇ ಕಾವ್ಯದಲ್ಲೂ ಆಗಿದೆ/ಆಗುತ್ತಿದೆ. ಆದರೂ, ಇಂದಿನ ಕವಿಗಳು ನಿಜವಾದ ಅರ್ಥದಲ್ಲಿ ಹೊಸ ಮಾದರಿಯನ್ನು ಹುಟ್ಟುಹಾಕುತ್ತಿಲ್ಲ. 
–ಪ್ರತಿಭಾ ನಂದಕುಮಾರ್

*

ಏನನ್ನು ಬರೆದರೂ ಅಂತಿಮವಾಗಿ ಅದು ಕಾವ್ಯವಾಗಿದೆಯೇ ಅಂತ ಆತ್ಮಾವಲೋಕನ ಮಾಡಿಕೊಳ್ಳುವಷ್ಟು ವ್ಯವಧಾನ ಮತ್ತು ತಾಳ್ಮೆಯ ಗುಣವೂ ಇಲ್ಲದಿರುವಾಗ ಧ್ಯಾನಸ್ಥ ರಚನೆಗಳನ್ನು ನಿರೀಕ್ಷಿಸುವುದು ಕಷ್ಟಸಾಧ್ಯ.
– ಲಕ್ಷ್ಮೀಪತಿ ಕೋಲಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT