ಭಾನುವಾರ, ಜನವರಿ 17, 2021
28 °C
ವಿಷಕಾರಿ ಹುಳು

ಅತಿ ಅಪಾಯಕಾರಿ ಈ ಶಂಖುಹುಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿ ಅಪಾಯಕಾರಿ ಈ ಶಂಖುಹುಳು

ಕೆಲವರಿಗೆ ಕಪ್ಪೆ ಚಿಪ್ಪು, ಶಂಖಗಳನ್ನು ಕೂಡಿಟ್ಟುಕೊಳ್ಳುವುದೆಂದರೆ ಬಲು ಇಷ್ಟ. ಬಗೆ ಬಗೆಯ ಶಂಖಗಳನ್ನು ಸಂಗ್ರಹಿಸಿಟ್ಟುಕೊಳ್ಳುವವರನ್ನು ನಾವೂ ನೋಡಿರುತ್ತೇವೆ.ಅಂಥವರಿಗೆ ಈ ಕೋನ್‌ ಎಂಬ ಶಂಖು ಇಷ್ಟವಾಗದೇ ಇರಲು ಸಾಧ್ಯವೇ ಇಲ್ಲ. ಆದರೆ ಅದರ ಸೌಂದರ್ಯಕ್ಕೆ ಮರುಳಾಗಿ ಮುಟ್ಟಲು ಹೋದಿರೋ, ಕಥೆ ಮುಗಿಯಿತೆಂದೇ ಅರ್ಥ. ಏಕೆಂದರೆ ಈ ಪುಟ್ಟ ಶಂಖುಹುಳು ಜೀವಕ್ಕೇ ಎರವಾಗುವಷ್ಟು ಶಕ್ತಿಶಾಲಿಯಾದುದು. ಈ ಸಾಗರದಾಳದ ಜೀವಿಗೆ ಈಟಿಯಂಥ ಕೊಕ್ಕೆಯಿದ್ದು, ಆ ಮೂಲಕ ಮಾರಣಾಂತಿಕ ವಿಷಕಾರಿ ಅಂಶವನ್ನು ದೇಹಕ್ಕೆ ಚುಚ್ಚಬಲ್ಲದು. ಈ ಕೊಕ್ಕೆ ಮನುಷ್ಯರ ಚರ್ಮದ ಒಳಗೆ ಸಲೀಸಾಗಿ ಹೋಗಬಲ್ಲದು. ಗಟ್ಟಿಯಾದ ಕೈಗವಸನ್ನು ತೊಟ್ಟಿದ್ದರೂ ಅವುಗಳ ಒಳಗೂ ಹೊಕ್ಕಬಲ್ಲಷ್ಟು ಮೊನಚಿರುತ್ತದೆ.ತನ್ನ ಈ ಮೊನಚಾದ ಕೊಕ್ಕೆಯಿಂದಲೇ ಮೀನುಗಳನ್ನು ಒಂದೆರಡು ಸೆಕೆಂಡುಗಳಲ್ಲೇ ದುರ್ಬಲಗೊಳಿಸಬಲ್ಲದು. ಕೊಕ್ಕೆಯನ್ನು ತನ್ನ ಬೇಟೆಗೆ ಅಂಟಿಸಿ ನಂತರ ವಿಷವನ್ನು ಕಕ್ಕುತ್ತದೆ. ಕೆಲವೇ ನಿಮಿಷಗಳಲ್ಲಿ ಅದನ್ನು ತಿಂದು ಹಾಕುತ್ತದೆ. ಮೀನಿಗಷ್ಟೇ ಅಲ್ಲ, ಮನುಷ್ಯರಿಗೂ ಇದು ಮಾರಣಾಂತಿಕ. ಈ ಶಂಖು ಹುಳುವಿನ ವಿಷದ ಒಂದು ಹನಿ ಇಪ್ಪತ್ತು ಮಂದಿಯನ್ನು ಕೊಲ್ಲಬಲ್ಲಷ್ಟು ಸಮರ್ಥವಾಗಿರುವುದರಿಂದ ಇದಕ್ಕೆ ‘ಸಾಗರದಲ್ಲಿನ ಅತಿ ಹೆಚ್ಚು ವಿಷಕಾರಿ ಪ್ರಭೇದ’ ಎಂದು ಕರೆಯಲಾಗಿದೆ.ಕೋನೊಟಾಕ್ಸಿನ್ ಎಂದು ಕರೆಸಿಕೊಳ್ಳುವ ಈ ವಿಷ, ಕೆಲವು ವಿಧದ ನರಗಳ ಮೇಲೆ ಅತಿ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಮನುಷ್ಯರಿಗೆ ಚುಚ್ಚಿದರೆ ಸಾಕು, ತೀವ್ರ ನೋವಿನೊಂದಿಗೆ ಶ್ವಾಸಕೋಶದ ತೊಂದರೆ ಉಂಟಾಗುತ್ತದೆ. ದೃಷ್ಟಿ ಮಸುಕಾಗುವುದು, ಶ್ರವಣ ದೋಷ ಉಂಟಾಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಸೂಕ್ತ ಚಿಕಿತ್ಸೆ ದೊರೆಯದೇ ಇದ್ದರೆ, ಚುಚ್ಚಿದ ಕೆಲವೇ ಗಂಟೆಗಳಲ್ಲಿ ಸಾವೂ ಸಮೀಪಿಸುತ್ತದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.