ಶುಕ್ರವಾರ, ಜುಲೈ 1, 2022
28 °C

ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತಂದ ‘ಅಗ್ನಿ–5’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ರಕ್ಷಣಾ ವ್ಯವಸ್ಥೆಗೆ ಬಲ ತಂದ ‘ಅಗ್ನಿ–5’

ಭಾರತದ ರಕ್ಷಣಾ ವ್ಯವಸ್ಥೆಗೆ ಬಲ ತುಂಬುವ ‘ಅಗ್ನಿ–5’ ಕ್ಷಿಪಣಿಯ ಪರೀಕ್ಷೆ ನಾಲ್ಕನೇ ಸಲ ಯಶಸ್ವಿಯಾಗಿದೆ. 1,500 ಕೆ.ಜಿ. ಸಿಡಿತಲೆಯನ್ನು ಹೊತ್ತು ಐದು ಸಾವಿರ ಕಿ.ಮೀ. ದೂರ ಕ್ರಮಿಸುವ ಕ್ಷಮತೆಯನ್ನು ಹೊಂದಿರುವ ಈ ಖಂಡಾಂತರ ಕ್ಷಿಪಣಿಯು ಏಷ್ಯಾದ  ಬಹುಪಾಲು ಭಾಗವನ್ನು, ಆಫ್ರಿಕಾ  ಮತ್ತು ಯುರೋಪ್‌ ಖಂಡಗಳ ಕೆಲ ಭಾಗಗಳನ್ನು ತಲುಪುವ ಸಾಮರ್ಥ್ಯ ಹೊಂದಿದೆ.ಕಡಿಮೆ ತೂಕದ ಸಿಡಿತಲೆ ಹೊತ್ತು  ದಾಳಿ ವ್ಯಾಪ್ತಿಯನ್ನು ಎಂಟು ಸಾವಿರ ಕಿ.ಮೀ.ವರೆಗೂ ವಿಸ್ತರಿಸುವ ಅವಕಾಶ ಈ ಕ್ಷಿಪಣಿಗೆ ಇದೆ. ಈ ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗಿರುವುದು  ದೇಶದ ಭದ್ರತಾ ವ್ಯವಸ್ಥೆ ಬಲಪಡಿಸುವಲ್ಲಿ ಅತ್ಯಂತ ಮಹತ್ವದ್ದು. ಇದಕ್ಕಾಗಿ ಶ್ರಮಿಸಿದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ ವಿಜ್ಞಾನಿಗಳು ಅಭಿನಂದನೆಗೆ ಅರ್ಹರು.ಗಡಿ ವಿಚಾರದಲ್ಲಿ ಭಾರತವನ್ನು ಸದಾ ಕೆಣಕುವ  ಪಾಕಿಸ್ತಾನ ಮತ್ತು ಚೀನಾ ದೇಶಗಳು ವ್ಯಾಪಾರ, ರಕ್ಷಣಾ ಕ್ಷೇತ್ರಗಳಲ್ಲಿ ಕೈಜೋಡಿಸಿವೆ. ಪಾಕಿಸ್ತಾನವು 1200 ಕಿ.ಮೀ. ದೂರ ಕ್ರಮಿಸುವ ಶಹೀನ್‌–2 ಕ್ಷಿಪಣಿ ಹೊಂದಿದ್ದರೆ, ಚೀನಾ  10 ಸಾವಿರ ಕಿ.ಮೀ. ದೂರ ಕ್ರಮಿಸುವ  ಕ್ಷಮತೆಯ ಕ್ಷಿಪಣಿ ಹೊಂದಿದೆ. ಇವೆಲ್ಲ ನಮ್ಮ ದಾಳಿನಿಗ್ರಹ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ಅನಿವಾರ್ಯ ಸೃಷ್ಟಿಸಿದ್ದವು.ಅಗ್ನಿ ಸರಣಿಯ ಕ್ಷಿಪಣಿಗಳು ನಮ್ಮ ರಕ್ಷಣಾ ವ್ಯವಸ್ಥೆಗೆ ಅಗಾಧ ಬಲ ನೀಡಲಿವೆ. ಈ ಸರಣಿ ಕ್ಷಿಪಣಿಗಳಲ್ಲೇ ‘ಅಗ್ನಿ–5’ ಅತ್ಯಂತ ಆಧುನಿಕವಾದುದು. ಇದರಲ್ಲಿ ನಿರ್ದೇಶನ ವ್ಯವಸ್ಥೆ, ಸಿಡಿತಲೆ ಮತ್ತು ಎಂಜಿನ್‌ ಅಭಿವೃದ್ಧಿಯಲ್ಲಿ ನವೀನ ತಂತ್ರಜ್ಞಾನ ಬಳಸಲಾಗಿದೆ. ಗುರಿಯನ್ನು ನಿಖರವಾಗಿ ತೋರಿಸುವ ಲೇಸರ್‌ ಆಧರಿತ ವ್ಯವಸ್ಥೆ, ಆತ್ಯಾಧುನಿಕ ಸೂಕ್ಷ್ಮ ಪಥದರ್ಶಕ, ಹೆಚ್ಚು ಕ್ಷಮತೆಯ ವೇಗದ ಕಂಪ್ಯೂಟರ್‌ ಹಾಗೂ ಹಾರಾಟ ನಡೆಸುವಾಗ ಎದುರಾಗಬಹುದಾದ  ದೋಷಗಳನ್ನು ಸರಿಪಡಿಸುವ ತಂತ್ರಾಂಶ ಒಳಗೊಂಡಿದೆ.  ಅಭಿವೃದ್ಧಿ ಹೊಂದಿದ ದೇಶಗಳು ದಶಕಗಳ ಹಿಂದೆ  ರಾಕೆಟ್‌ನಲ್ಲಿ ಬಳಸುವ ಘನ ಇಂಧನ ತಂತ್ರಜ್ಞಾನ ವರ್ಗಾವಣೆಯನ್ನು ಭಾರತಕ್ಕೆ ನಿರಾಕರಿಸಿದ್ದವು.  ಇಂತಹ ಕ್ಲಿಷ್ಟ ತಂತ್ರಜ್ಞಾನವೂ ಈ ಕ್ಷಿಪಣಿಯಲ್ಲಿ ಅಡಕವಾಗಿದೆ. ಒಟ್ಟಾರೆ ದೇಶಿ ತಂತ್ರಜ್ಞಾನದ ಪ್ರಮಾಣ ‘ಅಗ್ನಿ–5’ರಲ್ಲಿ ಹೆಚ್ಚೇ ಇದೆ.ಕ್ಷಿಪಣಿಯನ್ನು ರಸ್ತೆ ಅಥವಾ ರೈಲಿನ ಮೂಲಕ ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ನಿರ್ವಹಣಾ ವೆಚ್ಚ ಕೂಡ ಕಡಿಮೆ. ಬರೀ ಐದು ನಿಮಿಷ ಕಾಲಾವಧಿಯಲ್ಲಿ ಉಡಾವಣೆ ಮಾಡಬಹುದು. ಭಾರತವು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕೂಟದ (ಎಂಟಿಸಿಆರ್‌) ಸದಸ್ಯತ್ವ ಪಡೆದ ನಂತರ ನಡೆದ ಈ ಪರೀಕ್ಷೆಯು ದೇಶದ ರಕ್ಷಣೆಯ ವಿಚಾರದಲ್ಲಿ ಹೊಸ ಅಧ್ಯಾಯ ಬರೆದಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಮುಂದಿನ ದಿನಗಳಲ್ಲಿ  8 ಸಾವಿರದಿಂದ 10 ಸಾವಿರ ಕಿ.ಮೀ.ವರೆಗೆ ಕ್ರಮಿಸುವ ಸಾಮರ್ಥ್ಯ ಇರುವ ‘ಅಗ್ನಿ– 6’ ಕ್ಷಿಪಣಿ ಅಭಿವೃದ್ಧಿಪಡಿಸಲು ಮುಂದಡಿ ಇಟ್ಟಿದೆ. ಇದರ ಜತೆಯಲ್ಲೇ ರಷ್ಯಾ ಸಹಭಾಗಿತ್ವದಿಂದ ಅಭಿವೃದ್ಧಿಪಡಿಸಿರುವ ಬ್ರಹ್ಮೋಸ್‌ ಕ್ಷಿಪಣಿ ಮತ್ತಷ್ಟು ಆಧುನಿಕ ಆಗುತ್ತಿದೆ. ಸೂಪರ್‌ಸಾನಿಕ್‌ ವೇಗದ ಬ್ರಹ್ಮೋಸ್‌–2  ಕ್ಷಿಪಣಿಯು ಮತ್ತಷ್ಟು ವೇಗ ಪಡೆದುಕೊಳ್ಳಲಿದೆ.  ಇದೇ ಕ್ಷಿಪಣಿಯ ಸಣ್ಣ ಮಾದರಿಯನ್ನು ಸಹ ಸಿದ್ಧಪಡಿಸುವ ಯೋಜನೆ ಇದೆ. ಇವೆಲ್ಲ ಸಾಕಾರವಾದರೆ ದೇಶದ ರಕ್ಷಣಾ ವ್ಯವಸ್ಥೆಗೆ ಮತ್ತಷ್ಟು  ಬಲ ಬರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.