ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪಾಲಿ ಚಿತ್ರಮಂದಿರ ಇನ್ನು ನೆನಪು ಮಾತ್ರ

Last Updated 30 ಆಗಸ್ಟ್ 2019, 19:00 IST
ಅಕ್ಷರ ಗಾತ್ರ
ಬೆಂಗಳೂರು: ಏಷ್ಯಾದಲ್ಲೇ ಮೊದಲ ಬಾರಿಗೆ ‘ಸಿನೆರಾಮ್‌ ತಂತ್ರಜ್ಞಾನ’ ಅಳವಡಿಸಿಕೊಂಡು 49 ವರ್ಷ ಸಿನಿಪ್ರಿಯರ ನೆಚ್ಚಿನ ಚಿತ್ರಗಳ ಪ್ರದರ್ಶನಕ್ಕೆ ಸಾಕ್ಷಿಯಾಗಿದ್ದ ಗಾಂಧಿನಗರದ ‘ಕಪಾಲಿ’ ಚಿತ್ರಮಂದಿರ ತಿಂಗಳಿನಲ್ಲಿ ನೆಲಸಮವಾಗಲಿದೆ. ಈ ಜಾಗದಲ್ಲಿ ಬಹುಮಹಡಿ ಕಟ್ಟಡದ ಮಾಲ್‌ ತಲೆ ಎತ್ತಲಿದೆ.
ಚಿತ್ರಮಂದಿರದ ಜಾಗವನ್ನು ಮಾಲೀಕರಾದ ದಾಸಪ್ಪ ಸಹೋದರರು, ಬೆಳಗಾವಿಯ ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದ್ದಾರೆ. ಮುಂಗಡ ಹಣವನ್ನೂ ಪಡೆದುಕೊಂಡಿದ್ದಾರೆ.

ಕಾಗದ ಪತ್ರಗಳ ವರ್ಗಾವಣೆ ಮಾತ್ರ ಬಾಕಿ ಇದ್ದು, ಅದು ಪೂರ್ಣಗೊಂಡ ಬಳಿಕ ಚಿತ್ರಮಂದಿರದ ನೆಲಸಮ ಕೆಲಸ ಆರಂಭವಾಗಲಿದೆ. ಮಾಲ್‌ ನಿರ್ಮಾಣ ಕೆಲಸ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಹಂಚಿಕೆದಾರ ಜಯಣ್ಣ, ಈ ಚಿತ್ರಮಂದಿರವನ್ನು 5 ವರ್ಷಗಳವರೆಗೆ ಗುತ್ತಿಗೆ ಪಡೆದಿದ್ದರು. ಅದರ ಅವಧಿ ಸಹ ಇದೇ ತಿಂಗಳು ಮುಕ್ತಾಯವಾಗಲಿದೆ.
1968ರಲ್ಲಿ  ಚಿತ್ರಮಂದಿರ ನಿರ್ಮಾಣ: ಸುಬೇದಾರ್‌ ಛತ್ರಂ ರಸ್ತೆಯಲ್ಲಿರುವ 44,184 ಚದರ ಅಡಿ ಜಾಗದಲ್ಲಿ 1968ರಲ್ಲಿ ಈ ಚಿತ್ರಮಂದಿರವನ್ನು ನಿರ್ಮಿಸಲಾಗಿತ್ತು. ಅಂದಿನ ಪ್ರಧಾನಿ  ಮೊರಾರ್ಜಿ ದೇಸಾಯಿ ಅವರು ಉದ್ಘಾಟಿಸಿದ್ದರು.
ಆರಂಭದಲ್ಲಿದ್ದ 1,465 ಆಸನಗಳ ಸಾಮರ್ಥ್ಯವನ್ನು ಕ್ರಮೇಣ 1,112ಕ್ಕೆ ಇಳಿಸಲಾಗಿತ್ತು. ಈ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದ ಡಾ. ರಾಜ್‌ಕುಮಾರ್ ಅಭಿನಯದ ‘ಮಣ್ಣಿನ ಮಗ’ ಚಿತ್ರವು 100 ದಿನ ಯಶಸ್ವಿ ಪ್ರದರ್ಶನ ಕಂಡ ಮೊದಲ ಚಿತ್ರವಾಗಿದೆ. ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯ ಚಿತ್ರಗಳು ಸಹ ಇಲ್ಲಿ ಪ್ರದರ್ಶನಗೊಂಡಿದ್ದವು.
‘ಹಾಲು ಜೇನು’ ಚಿತ್ರ ಬಿಡುಗಡೆ ವೇಳೆ ಪ್ರಚಾರಕ್ಕಾಗಿ ಚಿತ್ರಮಂದಿರದ ಹೊರಗೆ ಮೊದಲ ಬಾರಿಗೆ ರಾಜ್‌ಕುಮಾರ್‌ ಅವರ 58 ಅಡಿ ಉದ್ದದ ಕಟೌಟ್‌ ನಿಲ್ಲಿಸಲಾಗಿತ್ತು. ಅಂದಿನಿಂದ ಕಟೌಟ್‌ ನಿಲ್ಲಿಸುವ ಪದ್ಧತಿ ಶುರುವಾಗಿತ್ತು.
ಶಿವರಾಜ್‌ಕುಮಾರ್‌ ಅಭಿನಯದ ‘ಓಂ’ ಚಿತ್ರ 30 ಬಾರಿ ಈ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡಿದ್ದು ದಾಖಲೆಯಾಗಿದೆ. ಈ ಹಿಂದೆ ಕೆ.ಜಿ.ರಸ್ತೆಯ ಸಂಗಮ್‌, ಮೆಜೆಸ್ಟಿಕ್‌, ಹಿಮಾಲಯ, ತ್ರಿಭುವನ್‌, ಸಾಗರ್‌, ಕೆಂಪೇಗೌಡ, ಕೈಲಾಶ್‌, ಕಲ್ಪನಾ ಚಿತ್ರಮಂದಿರಗಳು ಬಂದ್‌ ಆಗಿದ್ದವು. ಈಗ ಅವುಗಳ ಸಾಲಿಗೆ ಕಪಾಲಿ ಚಿತ್ರಮಂದಿರ ಸಹ ಸೇರ್ಪಡೆಗೊಂಡಂತಾಗಲಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT