ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಲ್ಕುನಾಡಿ’ನಲ್ಲಿ ಹಾಕಿ ನಮ್ಮೆಯ ಕಲರವ

‘ಬಿದ್ದಾಟಂಡ ಹಾಕಿ ನಮ್ಮೆ’ ಇಂದಿನಿಂದ ಆರಂಭ
Last Updated 17 ಏಪ್ರಿಲ್ 2017, 7:18 IST
ಅಕ್ಷರ ಗಾತ್ರ
ಮಡಿಕೇರಿ: ಕೊಡಗು ಜಿಲ್ಲೆ ಪ್ರಕೃತಿಯ ರಮಣೀಯ ತಾಣ. ಇಷ್ಟು ದಿವಸ ಬರದಿಂದ ಜಿಲ್ಲೆ ಜನರು ಕಂಗೆಟ್ಟಿದ್ದರು. ಕಳೆದ ವಾರದಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿ ಸ್ವಲ್ಪಮಟ್ಟಿಗೆ ಹಸಿರು ಕಾಣಿಸುತ್ತಿದೆ. ಇದರೊಂದಿಗೆ ಜನರ ಉತ್ಸಾಹ ಹೆಚ್ಚಾಗಿ ಜಿಲ್ಲೆಯಲ್ಲಿ ಕ್ರೀಡಾ ಚಟುವಟಿಕೆಗಳು ಗರಿಗೆದರುವಂತೆ ಮಾಡಿದೆ.
 
ಕೊಡಗು ಸೇನೆ, ಕ್ರೀಡೆಗೆ ಪ್ರಸಿದ್ಧಿ ಪಡೆದ ಜಿಲ್ಲೆ. ಇಲ್ಲಿ ಪ್ರತಿ ವರ್ಷ ನಡೆಯುವ ಕೊಡವ ಕುಟುಂಬಗಳ ಹಾಕಿ ಹಬ್ಬಕ್ಕೂ ತನ್ನದೇ ಪ್ರಾಮುಖ್ಯತೆ ಇದ್ದು, ಈ ಬಾರಿಯ ಹಾಕಿ ಹಬ್ಬ ಮಡಿಕೇರಿ ತಾಲ್ಲೂಕಿನ ನಾಲ್ಕುನಾಡು ಖ್ಯಾತಿಯ ನಾಪೋಕ್ಲು ಹೋಬಳಿಯಲ್ಲಿ ನಡೆಯಲಿದೆ.
 
ಬಿದ್ದಾಟಂಡ ಕುಟುಂಬದ ಸಾರಥ್ಯದಲ್ಲಿ ಹಾಕಿ ನಮ್ಮೆ ನಡೆಯುತ್ತಿದ್ದು, ಕಾವೇರಿ ನದಿಯ ಪಕ್ಕದ ನಾಡು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ. ಭಾನುವಾರ ಕಾರ್ಮಿಕರು ವೇದಿಕೆ, ಕ್ರೀಡಾಂಗಣಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದರು. 
 
ಕೊಡಗು ಜಿಲ್ಲೆಯ ‘ಹಾಕಿ ತವರು’ ಮನೆ ನಾಪೋಕ್ಲು. ಇಲ್ಲಿನ ಪರಿಸರದಲ್ಲಿ ಸಾಕಷ್ಟು ಮಂದಿ ಹಾಕಿ ಕ್ರೀಡಾಪಟು ಹಾಗೂ ಹಾಕಿ ಪ್ರೇಮಿಗಳು ನೆಲೆಸಿದ್ದಾರೆ. ಇನ್ನು ಒಂದು ತಿಂಗಳ ಕಾಲ ಈ ತೀರದಲ್ಲಿ ಹಾಕಿ ಕಲರವ, ಸಂಭ್ರಮ ಮನೆ ಮಾಡಲಿದೆ.
 
ಕೊಡವ ಕುಟುಂಬಗಳ ಹಾಕಿ ನಮ್ಮೆಗೆ ತನ್ನದೇ ಇತಿಹಾಸವಿದೆ. ಜಿಲ್ಲೆಗೆ ಕಾಫಿಯಂತೆ ಹಾಕಿ ಪರಿಚಯವಾಗಿದ್ದೂ ಬ್ರಿಟಿಷರಿಂದ. ಬೆಟ್ಟಗುಡ್ಡಗಳಲ್ಲಿ ಕಾಫಿ ಉತ್ತಮವಾಗಿ ಬೆಳೆಯಲಿದೆ ಎಂದು ಅಂದಾಜಿಸಿದ್ದ ಬ್ರಿಟಿಷರು ಕಾಫಿಯನ್ನೂ ಈ ನಾಡಿಗೆ ಪರಿಚಯಿಸಿದ್ದರು.

ಬಿಡುವಿನ ಸಂದರ್ಭದಲ್ಲಿ ಹಾಕಿಯನ್ನು ಆಡುತ್ತಿದ್ದರು. ಇದನ್ನು ನೋಡಿದ ಜಿಲ್ಲೆಯ ಜನರೂ ಹಾಕಿಯನ್ನು ಅಭ್ಯಾಸ ಮಾಡತೊಡಗಿದರು. ಹಾಕಿ ಈಗ ಕೊಡಗಿನಲ್ಲಿ ಮನೆಮಾತಾಗಿದೆ. ಬಂದೂಕು, ಹಾಕಿ ಸ್ಟಿಕ್‌ ಇಲ್ಲದ ಕೊಡಗಿನ ಮನೆಗಳಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ ಎನ್ನುತ್ತಾರೆ ಜಿಲ್ಲೆಯ ಹಾಕಿ ಪ್ರೇಮಿಗಳು.
 
ಬಾಂಧವ್ಯ ಬೆಸೆಯುವ ಹಾಕಿ ಉತ್ಸವ:  ಕೊಡಗು ಪುಟ್ಟ ಜಿಲ್ಲೆಯಾದ ಕಾರಣಕ್ಕೆ ವಲಸೆ ಹೆಚ್ಚಾಯಿತು. ದಿನೇ ದಿನೇ ಹಾಕಿ ಆಡುವವರ ಸಂಖ್ಯೆಯೂ ಕಡಿಮೆ ಆಗುತ್ತಾ ಹೋಯಿತು. ಇದನ್ನು ಕಂಡು ಜಿಲ್ಲೆಯ ಕರಡ ಗ್ರಾಮದ ಪಾಂಡಂಡ ಕುಟ್ಟಪ್ಪ ಹಾಗೂ ಅವರ ಸಹೋದರ ಕಾಶಿ ಎಂಬುವರು 1997ರಲ್ಲಿ ಕೌಟುಂಬಿಕ ಹಾಕಿಗೆ ಮುನ್ನುಡಿ ಬರೆದರು. 
 
ಆಗ ಆರಂಭಿಸಿದ ಹಾಕಿ ಹಬ್ಬ ಇಂದು ಬೃಹದಾಕಾರವಾಗಿ ಬೆಳೆದಿದೆ. 60 ತಂಡಗಳು ಮೊದಲ ಬಾರಿಗೆ ಆಡಿದ್ದವು. ಇಂದು 306 ತಂಡಗಳು ಈ ಹಬ್ಬದಲ್ಲಿ ಪಾಲ್ಗೊಳ್ಳುವ ಮಟ್ಟಿಗೆ ಬೆಳೆದು ನಿಂತಿದೆ ಎನ್ನುತ್ತಾರೆ ಆಯೋಜಕರು. ಹಾಕಿ ಕೇವಲ ಆಟಕ್ಕೆ ಸೀಮಿತಗೊಂಡಿಲ್ಲ. ಬದಲಿಗೆ ಜಿಲ್ಲೆಯ ಜನರಲ್ಲಿ ಒಗ್ಗಟ್ಟು ಮೂಡಿಸಲೂ ಕಾರಣವಾಗುತ್ತಿದೆ. ಜನರ ನಡುವೆ ಬಾಂಧವ್ಯ ಮೂಡಿಸಿದೆ.
 
ಪ್ರತಿ ವರ್ಷ ಒಂದೊಂದು ಕುಟುಂಬ ಉತ್ಸವದ ಜವಾಬ್ದಾರಿ ವಹಿಸಿಕೊಂಡು ನಡೆಸಿದರೂ ಉಳಿದ ಸಮುದಾಯಗಳ ಜನರು, ಪ್ರೋತ್ಸಾಹ ನೀಡುತ್ತಿದ್ದಾರೆ. ಸಣ್ಣ ಮಕ್ಕಳಿಂದ ಹಿಡಿದು ದೊಡ್ಡವರ ತನಕವೂ ಆಟದಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧೆ ಎನ್ನುವುದಕ್ಕಿಂತ ಹಬ್ಬದಂತೆಯೇ ಹಾಕಿ ನಡೆಯುತ್ತಿದೆ.
 
ಈ ಬಾರಿಯ ಹಾಕಿಗೆ ನಾಪೋಕ್ಲು ಚೆರಿಯಪರಂಬುವಿನ ಜನರಲ್‌ ತಿಮ್ಮಯ್ಯ ಕ್ರೀಡಾಂಗಣ ಸಂಪೂರ್ಣ ಸಜ್ಜಾಗಿದೆ. ಏಕಕಾಲದಲ್ಲಿ ಮೂರು ಮೈದಾನದಲ್ಲೂ ಪಂದ್ಯಾವಳಿಗಳು ಆರಂಭಗೊಳ್ಳಲಿವೆ. ಪ್ರತಿನಿತ್ಯ 24 ಪಂದ್ಯಗಳು ನಡೆಯಲಿವೆ.
 
ಮೂರು ಮೈದಾನಗಳ ನಿರ್ವಹಣೆಗೆ ಸುಮಾರು ₹ 16 ಲಕ್ಷ ವೆಚ್ಚವಾಗಿದೆ. ಅಗತ್ಯ ಬಿದ್ದರೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನವನ್ನೂ ಬಳಸಿಕೊಳ್ಳಲು ತಯಾರಿ ನಡೆಸಲಾಗಿದೆ. ₹ 1.60 ಕೋಟಿ ವೆಚ್ಚದಲ್ಲಿ ಹಾಕಿ ಉತ್ಸವ ನಡೆಯುತ್ತಿದೆ ಎಂದು ಮೈದಾನ ಸಮಿತಿ ಅಧ್ಯಕ್ಷ ಬಿ.ಬಿ. ಬೆಳ್ಯಪ್ಪ ಹೇಳಿದರು. 
 
ಕೊಡವ ಹಾಕಿ ನಮ್ಮೆಯ ಇತಿಹಾಸದಲ್ಲಿ ಮೊದಲ ಬಾರಿಗೆ  ಮೆಟಲ್ ಗ್ಯಾಲರಿ ಅಳವಡಿಸಲಾಗಿದೆ. ಮೈದಾನದ ಸುತ್ತ ಗ್ಯಾಲರಿ, ನೆಲ ಹಾಸು, ತಾಂತ್ರಿಕ ವಿಭಾಗ, ಮಾಧ್ಯಮ ವಿಭಾಗ, ಧ್ವನಿ ವರ್ಧಕ, ಬೆಳಕು ಸೇರಿದಂತೆ ಸಂಪೂರ್ಣ ವ್ಯವಸ್ಥೆಗಳಿಗೆ ₹ 33.50 ಲಕ್ಷ ವೆಚ್ಚ ಮಾಡಲಾಗಿದೆ. ವಾಟರ್ ಫ್ರೂಫ್‌ನ 30 ಮಾರಾಟ ಮಳಿಗೆಗಳು ತೆರೆಯಲಾಗಿದೆ. ಮೈದಾನದ ಬಲ ಭಾಗದಲ್ಲಿ ಹೋಟೆಲ್, ತಂಪು ಪಾನಿಯಗಳ ಅಂಗಡಿಗಳು ಇರುತ್ತವೆ ಎಂದು ಮಾಹಿತಿ ನೀಡಿದರು. 
 
ಪದವಿ ಪೂರ್ವ ಕಾಲೇಜು ಬಳಿಯ ಮೈದಾನ ದುರಸ್ತಿಗೆ ಸಂಸದ ಪ್ರತಾಪ್ ಸಿಂಹ ₹ 30 ಲಕ್ಷ ನೀಡಿದ್ದು, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ₹ 5 ಲಕ್ಷ, ಶಾಸಕ ಕೆ.ಜಿ. ಬೋಪಯ್ಯ, ವಿಧಾನ ಪರಿಷತ್‌ ಸದಸ್ಯ ಸುನಿಲ್ ಸುಬ್ರಮಣಿ ಕೂಡಾ ಅನುದಾನ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ಬೆಳ್ಯಪ್ಪ ತಿಳಿಸಿದ್ದಾರೆ. 
 
ನಮ್ಮೆಗೆ ಹಾಕಿ ಇಂಡಿಯಾ, ಹಾಕಿ ಕರ್ನಾಟಕ, ಹಾಕಿ ಕೊಡಗು ಸಂಸ್ಥೆಗಳು ಸಂಪೂರ್ಣ ಸಹಕಾರ ನೀಡಲಿದೆ. ಅದರೊಂದಿಗೆ ಅಂಪೈರ್‌ ಅಸೋಸಿಯೇಷನ್ ಕೂಡ ಸಹಕಾರ ನೀಡುತ್ತಿದ್ದು, ಅದರ ಅಧ್ಯಕ್ಷ ಕಾಟುಮಣಿಯಂಡ ಉಮೇಶ್ ಹಾಕಿ ನಮ್ಮೆಯ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಬಿದ್ದಾಟಂಡ ಹಾಕಿ ನಮ್ಮೆಯ ತಾಂತ್ರಿಕ ಸಮಿತಿ ನಿರ್ದೇಶಕ ಬಿ.ಎಸ್‌. ತಮ್ಮಯ್ಯ ತಿಳಿಸಿದರು.
***
ಈ ಬಾರಿಯ ವಿಶೇಷಗಳು...
* ಒಂದು ತಿಂಗಳು ನಡೆಯುವ ‘ಹಾಕಿ ನಮ್ಮೆ’
* ಭಾರತೀಯ ಹಾಕಿ ತಂಡ, ಕೂರ್ಗ್‌ ರೆಜಿಮೆಂಟ್, ಕರ್ನಾಟಕ ಇಲೆವೆನ್‌ ನಡುವೆ ಪ್ರದರ್ಶನ ಪಂದ್ಯ
* ಎಂಇಜಿ ತಂಡದಿಂದ ಬ್ಯಾಂಡ್ ಆಕರ್ಷಣೆ
* 306 ಕೌಟುಂಬಿಕ ತಂಡಗಳು ಈ ಭಾಗಿ, ಹೊಸ ದಾಖಲೆ
***
ಮುಂದಿನ ವರ್ಷಕ್ಕೆ ಸಜ್ಜು
ಮಡಿಕೇರಿ:
ಬಿದ್ದಾಟಂಡ ಕುಟುಂಬಸ್ಥರ ಹಾಕಿ ಉತ್ಸವದ ಬೆನ್ನಲ್ಲೇ ಕುಲ್ಲೇಟಿರ, ಅಪ್ಪಚೆಟ್ಟೋ ಳಂಡ, ಮುಕ್ಕಾಟಿರ ಕುಟುಂಬಸ್ಥರು ಹಾಕಿ ಉತ್ಸವ ಆಯೋಜಿಸಲು ಸಿದ್ಧರಾಗಿದ್ದಾರೆ... ಹೀಗೆ ಕೌಟುಂಬಿಕ ಹಾಕಿ ವೈಭವ ಸದ್ಯದ ವರ್ಷಗಳಲ್ಲಿ ನಾಲ್ಕುನಾಡು ವ್ಯಾಪ್ತಿಯಲ್ಲಿ ಜನಮನ ರಂಜಿಸುವ ಸಾಧ್ಯತೆಯಿದೆ.
***
ಸಕಲ ಸಿದ್ಧತೆ ಪೂರ್ಣ
ಮಡಿಕೇರಿ: ಕೊಡವ ಹಾಕಿ ನಮ್ಮೆ ಇತಿಹಾಸದಲ್ಲಿ ಮೊದಲ ಬಾರಿಗೆ  ಮೆಟಲ್ ಗ್ಯಾಲರಿ ಅಳವಡಿಸ ಲಾಗಿದೆ. ಮೈದಾನದ ಸುತ್ತ ಗ್ಯಾಲರಿ, ನೆಲ ಹಾಸು, ತಾಂತ್ರಿಕ ವಿಭಾಗ, ಮಾಧ್ಯಮ ವಿಭಾಗ, ಧ್ವನಿ ವರ್ಧಕ, ಬೆಳಕು ಸೇರಿದಂತೆ ಸಂಪೂರ್ಣ ವ್ಯವಸ್ಥೆ ಗಳಿಗೆ ₹ 33.50 ಲಕ್ಷ ವೆಚ್ಚ ಮಾಡಲಾಗಿದೆ.
***
ಹಾಕಿ ನಮ್ಮೆಗೆ ಸಕಲ ಸಿದ್ಧತೆ
₹16 ಲಕ್ಷ ಮೈದಾನಗಳ ಅಭಿವೃದ್ಧಿಗೆ ಆಗಿರುವ ವೆಚ್ಚ
₹ 1.6 ಕೋಟಿ ವೆಚ್ಚ ಹಾಕಿ ನಮ್ಮೆಯ ಒಟ್ಟು ವೆಚ್ಚ ಸುಮಾರು 1.6 ಕೋಟಿ ಎನ್ನುತ್ತಾರೆ ಮೈದಾನ ಸಮಿತಿ ಅಧ್ಯಕ್ಷ ಬೆಳ್ಳಪ್ಪ
306 ಭಾಗವಹಿಸುತ್ತಿರುವ ಒಟ್ಟು ತಂಡಗಳು
 
ಗಿನಿಸ್‌ ದಾಖಲೆಯತ್ತ...
ನಾಪೋಕ್ಲು: ವಿರಾಜಪೇಟೆ ಬಳಿಯ ಕರಡ ಗ್ರಾಮದ ಪಾಂಡಂಡ ಕುಟ್ಟಪ್ಪ ಮತ್ತು ಕಾಶಿ ಸಹೋದರರು ಜಿಲ್ಲೆಯಲ್ಲಿ ಹಾಕಿಗೆ ಕಾಯಕಲ್ಪ ನೀಡುವ ಉದ್ದೇಶದಿಂದ 21 ವರ್ಷಗಳ ಹಿಂದೆ ಹೊಸ ಚಿಂತನೆಗೆ ನಾಂದಿ ಹಾಡಿದರು.

ಆ ಚಿಂತನೆಯೇ ಪ್ರತಿವರ್ಷ ನಡೆಯುವ ಕೊಡವ ಕುಟುಂಬಗಳ ನಡುವಿನ ಹಾಕಿ ಉತ್ಸವ. ಮಡಿಕೇರಿ ತಾಲ್ಲೂಕಿನ ಎರಡನೇ ದೊಡ್ಡ ಪಟ್ಟಣವಾದ ನಾಪೋಕ್ಲುವಿನಲ್ಲೂ ಹಾಕಿ ಪ್ರೇಮಿಗಳಿಗೆ ಕೊರತೆ ಇಲ್ಲ. ಇದಕ್ಕೆ ಸಾಕ್ಷಿಯಾಗಿ 2003ರಲ್ಲಿ ನಾಪೋಕ್ಲುವಿನಲ್ಲಿ ಕಲಿಯಂಡ ಕಪ್‌ ಹಾಕಿ ಉತ್ಸವ ಜರುಗಿತ್ತು.

281 ತಂಡಗಳು ಪಾಲ್ಗೊಂಡಿದ್ದವು. ಇದೀಗ 2017ರಲ್ಲಿ ಮತ್ತೆ ಬಿದ್ದಾಟಂಡ ಕುಟುಂಬಸ್ಥರ ಸಾರಥ್ಯದಲ್ಲಿ ಹಾಕಿ ಉತ್ಸವಕ್ಕೆ ನಾಡು ಸಜ್ಜಾಗಿದೆ. ಕರಡದ ಪುಟ್ಟ ಮೈದಾನದಲ್ಲಿ ಮೊದಲ ಕೌಟುಂಬಿಕ ಹಾಕಿ ಪಂದ್ಯಾವಳಿ ಆಯೋಜಿ ಸಿದಾಗ 60 ಕುಟುಂಬಗಳು ನೋಂದಾಯಿಸಿದ್ದವು.

ಕೊಡವ ಕೌಟುಂಬಿಕ ಹಾಕಿ ಉತ್ಸವ 20 ವರ್ಷಗಳನ್ನು ಪೂರೈಸಿದೆ. ಒಂದು ಜಿಲ್ಲೆಯಲ್ಲಿ ಒಂದೇ ಜನಾಂಗದವರು ಒಂದೇ ಆಟವನ್ನು ತಿಂಗಳುಗಳ ಕಾಲ ಆಡುವ ಮೂಲಕ ಹೊಸ ಇತಿಹಾಸವನ್ನು ಬರೆದಿದ್ದಾರೆ. ಈಗಾಗಲೇ ಅತ್ಯಧಿಕ ತಂಡಗಳು ಪಾಲ್ಗೊಳ್ಳುವ ಹಾಕಿ ಟೂರ್ನಿ ಎಂಬ ಲಿಮ್ಕಾ ರಾಷ್ಟ್ರೀಯ ದಾಖಲೆಗೆ ಸೇರಿದೆ. ಈ ಬಾರಿ 4,000 ಸಾವಿರಕ್ಕೂ ಅಧಿಕ ಆಟಗಾರರು ಪಾಲ್ಗೊಂಡರೆ ಗಿನಿಸ್‌ ದಾಖಲೆಗೂ ಸೇರಲಿದೆ.
***
ವಯೋ ನಿರ್ಬಂಧ ಇಲ್ಲ!
ಮಡಿಕೇರಿ:
ಕೊಡವ ಕೌಟುಂಬಿಕ ಹಾಕಿ ಉತ್ಸವದಲ್ಲಿ ವಯಸ್ಸಿನ ನಿರ್ಬಂಧವಿಲ್ಲ. ಇದನ್ನು ಟೂರ್ನಿ ಎನ್ನುವುದಕ್ಕಿಂತ ಹಬ್ಬ (ನಮ್ಮೆ) ಎನ್ನಲಾಗುತ್ತದೆ. ಪುರುಷರ ಜೊತೆಗೆ ಮಹಿಳೆಗೂ ಸಮಾನ ಅವಕಾಶ ನೀಡಲಾಗಿದೆ.

ಈ ಹಾಕಿ ಉತ್ಸವದಲ್ಲಿ ಯುವತಿಯರಿಗೆ, ಮಹಿಳೆಯರಿಗೆ ಪ್ರತ್ಯೇಕ ಟೂರ್ನಿ ಇಲ್ಲ. ಜನಿಸಿದ ಕುಟುಂಬದ ತಂಡ ಅಥವಾ ವಿವಾಹವಾದ ಕುಟುಂಬದ ತಂಡಕ್ಕಾಗಿ ಇವರು ಆಡಬಹುದು ಎನ್ನುತ್ತಾರೆ ಹಾಕಿ ಆಯೋಜಕರು.
***
ಕೂರ್ಗ್‌ ರಿಜಿಮೆಂಟ್‌– ಕರ್ನಾಟಕ ಹಾಕಿ ತಂಡಗಳ ನಡುವೆ ಪ್ರದರ್ಶನ ಪಂದ್ಯ
ಮಡಿಕೇರಿ:  ಬಿದ್ದಾಟಂಡ ಕುಟುಂಬದ ಸಾರಥ್ಯದಲ್ಲಿ ನಡೆಯುತ್ತಿರುವ ಹಾಕಿ ನಮ್ಮೆ  ಉದ್ಘಾಟನೆಯ ಬಳಿಕ ರೆಸ್ಟ್‌ ಆಫ್‌ ಇಂಡಿಯಾ, ಸೇನೆಯ ಕೂರ್ಗ್‌ ರಿಜಿಮೆಂಟ್‌ ಹಾಗೂ ಕರ್ನಾಟಕ ಹಾಕಿ ತಂಡಗಳ ನಡುವೆ ಪ್ರದರ್ಶನ ಪಂದ್ಯವು ನಡೆಯಲಿದೆ.

ರೆಸ್ಟ್ ಆಫ್‌ ಇಂಡಿಯಾವನ್ನು ವಿ.ಆರ್‌. ರಘುನಾಥ್‌ (ನಾಯಕ), ಜಗದೀಪ್‌ ದಯಾಳ್‌, ನಿರ್ಮಲ್‌ ಚಿಣ್ಣಪ್ಪ, ವಿಕ್ರಂಕಾಂತ್‌, ವಿ.ಎಸ್‌. ವಿನಯ್‌, ಎ.ಬಿ. ಚೆಯ್ಯಣ್ಣ, ಕೆ.ಎಸ್‌. ಅಪ್ಪಣ್ಣ, ಕೆ.ಪಿ. ಸೋಮಯ್ಯ, ಜಿ.ಎನ್‌. ಪೃಥ್ವಿರಾಜ್‌, ಪಿ.ಸೋಮಣ್ಣ, ಪಿ.ಎಲ್‌. ತಿಮ್ಮಣ್ಣ, ಎಂ.ನಿತಿನ್‌ ತಿಮ್ಮಯ್ಯ, ಕೆ.ಎ. ನೀಲೇಶ್‌, ಕೆ.ಎಂ. ಸೋಮಣ್ಣ, ಪಿ.ಆರ್‌. ಅಯ್ಯಪ್ಪ, ಎಂ.ಜಿ. ಪೂಣಚ್ಚ, ಪಿ.ಮುತ್ತಣ್ಣ, ಬಿ.ಜೆ. ಕಾರ್ಯಪ್ಪ ಪ್ರತಿನಿಧಿಸಲಿದ್ದಾರೆ.

ಕರ್ನಾಟಕ ಇಲೆವೆನ್‌ ತಂಡದಲ್ಲಿ ಶರತ್‌ ಸೋಮಣ್ಣ (ಗೋಲ್‌ ಕೀಪರ್‌), ಕೆ.ಟಿ. ಕಾರ್ಯಪ್ಪ, ಸೋನು ಪೊನ್ನಣ್ಣ, ಕೆ.ಕೆ. ಭರತ್‌, ಎಚ್‌.ಎಸ್‌. ಅಭಿಷೇಕ್‌, ಸಿರಾಜ್‌, ಎಂ.ಎಸ್‌. ಬೋಪಣ್ಣ, ರತನ್‌ ಮುತ್ತಣ್ಣ, ಬಿ.ಬಿ. ಮಾಚಯ್ಯ, ಕೆ.ಟಿ. ಕುಂಜಪ್ಪ, ಆಭರಣ್‌, ಜೆ.ಪಿ. ಕುಶ (ನಾಯಕ), ರೋಹಿಲ್‌, ಹೊನ್ನೂರುಸ್ವಾಮಿ, ಶೇಷೇಗೌಡ ಆಡಲಿದ್ದಾರೆ.
****
21ನೇ ಕೊಡವ ಹಾಕಿ ಉತ್ಸವವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಲು ಸಕಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿನಿತ್ಯ 24ರಿಂದ 26 ಪಂದ್ಯಗಳು ನಡೆಯಲಿವೆ.
ರಮೇಶ್‌ ಚೆಂಗಪ್ಪ, ಅಧ್ಯಕ್ಷ, ಬಿದ್ದಾಟಂಡ ಹಾಕಿ ಉತ್ಸವ ಸಮಿತಿ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT