ಸೋಮವಾರ, ಮೇ 17, 2021
21 °C

ತಲಾಖ್: ಸ್ತ್ರೀವಾದಿ ವಿರುದ್ಧ ಪುರುಷವಾದಿ

ರಂಜಾನ್ ದರ್ಗಾ Updated:

ಅಕ್ಷರ ಗಾತ್ರ : | |

ತಲಾಖ್: ಸ್ತ್ರೀವಾದಿ ವಿರುದ್ಧ ಪುರುಷವಾದಿ

ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ಪಡೆಯುವ ಪದ್ಧತಿ ಇಸ್ಲಾಂ ಧರ್ಮದ ಮೂಲಭೂತ ಅಂಶವೇ ಎಂಬುದನ್ನು ಮೊದಲು ನಿರ್ಧರಿಸಲಾಗುವುದು ಎಂದು ಸರ್ವೋಚ್ಚ ನ್ಯಾಯಾಲಯದ ಸಂವಿಧಾನ ಪೀಠ ಇದೇ ಮೇ 11ರಂದು ತಿಳಿಸಿದೆ.

ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಮೂಲಭೂತ ಅಂಶ ಎಂಬುದು ಸಾಬೀತಾದರೆ ಅದರ ಸಾಂವಿಧಾನಿಕ ಸಿಂಧುತ್ವದ ವಿಚಾರಣೆ ನಡೆಸಲಾಗುವುದಿಲ್ಲ ಎಂದೂ ಪೀಠ ಸ್ಪಷ್ಟ ಪಡಿಸಿದೆ. ತ್ರಿವಳಿ ತಲಾಖ್, ಧರ್ಮದ ಮೂಲಭೂತ ಅಂಶವೋ ಅಥವಾ ಧರ್ಮವಿರೋಧಿ ಅಂಶವೋ ಎಂಬುದು ಅದನ್ನು ಅರ್ಥೈಸುವುದರ ಮೇಲೆ ನಿಂತಿದೆ.ಷಾಬಾನು ಪ್ರಕರಣ: ಇಂದೋರ್‌ನ ವಕೀಲ ಮಹಮ್ಮದ್ ಅಹ್ಮದ್ ಖಾನ್ ಜೊತೆ ಷಾಬಾನು ವಿವಾಹ 1932ರಲ್ಲಿ ಆಯಿತು. ಐವರು ಮಕ್ಕಳು ಜನಿಸಿದವು. 43 ವರ್ಷಗಳ ವೈವಾಹಿಕ ಜೀವನದ ನಂತರ ಇನ್ನೊಬ್ಬಳನ್ನು ಮದುವೆಯಾದ ಗಂಡ, 1975ರಲ್ಲಿ  ಆ ವೃದ್ಧೆಯನ್ನು ಹೊರಗೆ ಅಟ್ಟಿದ.

ಷಾಬಾನು ನ್ಯಾಯಾಲಯದ ಕಟ್ಟೆ ಏರಿದಾಗ ‘ತಲಾಖ್ ತಲಾಖ್ ತಲಾಖ್ ’ ಎಂದು ಒದರಿ ‘ಅವಳ ಜೊತೆ ನನ್ನ ಸಂಬಂಧ ಇಲ್ಲ’ ಎಂದು ಸಾರಿದ. ಆದರೆ ಮಧ್ಯಪ್ರದೇಶ ಉಚ್ಚ ನ್ಯಾಯಾಲಯ 1979ರಲ್ಲಿ ಷಾಬಾನು ಪರ ತೀರ್ಪು ನೀಡಿತು. 1985ರಲ್ಲಿ ಸರ್ವೋಚ್ಚ ನ್ಯಾಯಾಲಯ ಆ ತೀರ್ಪನ್ನು ಎತ್ತಿ ಹಿಡಿಯಿತು. ‘ಇದು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿನ ಹಸ್ತಕ್ಷೇಪ’ ಎಂದು ಹೇಳಿದ ಮಹಮ್ಮದ್ ಅಹ್ಮದ್ ಖಾನ್, ಆ ತೀರ್ಪನ್ನು ಹಿಂತೆಗೆದುಕೊಳ್ಳಲು ಒತ್ತಾಯಿಸಿದರು. ಆ ಸಂದರ್ಭದಲ್ಲಿ ಮೂಲಭೂತವಾದಿಗಳು ಕ್ರಿಯಾಶೀಲರಾಗಿ ದೇಶದ ಅಮಾಯಕ ಮುಸ್ಲಿಮರನ್ನು ಅಸಹಾಯಕ ಷಾಬಾನು ವಿರುದ್ಧ ಎತ್ತಿಕಟ್ಟಿದರು!

1985ರಲ್ಲಿ ಸಂಭವಿಸಿದ ಈ ಷಾಬಾನು ವಿರುದ್ಧದ ಪ್ರತಿಗಾಮಿ ಚಳವಳಿ ಇಡೀ ದೇಶವನ್ನು ವ್ಯಾಪಿಸಿತು. ತದನಂತರ ಭಾರತದ ರಾಜಕೀಯ ಪರಿಸ್ಥಿತಿಯೇ ಬದಲಾಗಿ ಕೋಮುವಾದಿ ಶಕ್ತಿಗಳು ಪ್ರಬಲವಾಗಿ ಬೆಳೆದವು ಎಂಬುದಕ್ಕೆ ಇತಿಹಾಸದ ಸಾಕ್ಷಿ ಇದೆ.ಸ್ತ್ರೀವಾದಿ ತಲಾಖ್ ಅನ್ನು ಪುರುಷವಾದಿ ತಲಾಖ್ ಆಗಿ ಪರಿವರ್ತಿಸಿದ ಮುಸ್ಲಿಂ ಮೂಲಭೂತವಾದಿಗಳೇ ಇದಕ್ಕೆಲ್ಲ ಮೂಲ ಕಾರಣಪುರುಷರಾಗಿದ್ದಾರೆ. ತಮ್ಮ ಹಟವಾದಿ ಧೋರಣೆಯ ಮೂಲಕ ಭಾರತದ ಮುಸ್ಲಿಂ ಸಮುದಾಯವನ್ನು ಅತಂತ್ರ ಸ್ಥಿತಿಗೆ ತಂದಿಟ್ಟಿದ್ದಾರೆ.ಇಸ್ಲಾಂ ಧರ್ಮದ ತಲಾಖ್, ಸ್ತ್ರೀವಾದಿ ತಲಾಖ್ ಆಗಿದೆ. ಇದರ ನಿಜಸ್ವರೂಪ ಅರಿತಾಗ ಜಗತ್ತಿನ ಮಹಿಳೆಯರೆಲ್ಲ ಇದನ್ನು ಬೆಂಬಲಿಸುವುದರಲ್ಲಿ ಸಂಶಯವಿಲ್ಲ. ಇಸ್ಲಾಮಿನ ತಲಾಖ್ ಪದ್ಧತಿ ಮುಸ್ಲಿಂ ಮಹಿಳೆಯರನ್ನು ಸಂರಕ್ಷಿಸಿದಷ್ಟು ಇನ್ನಾವ ಪದ್ಧತಿಯೂ ಸಂರಕ್ಷಿಸಿಲ್ಲ. ಆದರೆ ಮುಸ್ಲಿಂ ಮೂಲಭೂತವಾದಿಗಳು ಅದನ್ನು ಪುರುಷವಾದಿ ತಲಾಖ್ ಆಗಿ ಪರಿವರ್ತಿಸಿದ್ದೇ ಇಷ್ಟೆಲ್ಲ ಅವಘಡಗಳಿಗೆ ಕಾರಣವಾಗಿದೆ.ತಲಾಖ್ ತಲಾಖ್ ತಲಾಖ್ ಎಂದು ಒಂದೇ ಉಸುರಿನಲ್ಲಿ ಒದರಿ ಹೆಂಡತಿಯನ್ನು ಬೀದಿಪಾಲು ಮಾಡುವ ಪದ್ಧತಿಯನ್ನು ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಸಮ್ಮತಿಸುವುದೇ ಹೊರತಾಗಿ ಇಸ್ಲಾಂ ಧರ್ಮ ಸಮ್ಮತಿಸುವುದಿಲ್ಲ.ಹಿನ್ನೆಲೆ: ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸರ್ಕಾರದ ವೈಸರಾಯ್ ವಾರನ್ ಹೇಸ್ಟಿಂಗ್ಸ್ 1772ರಲ್ಲಿ ಹಿಂದೂ–ಮುಸ್ಲಿಂ ಕಾಯ್ದೆಗಳ ಮೇಲೆ ನಿಯಂತ್ರಣ ಹೇರಿದ. 1780ರಲ್ಲಿ ಅದನ್ನು ಕಾನೂನಿನ ಮೂಲಕ ಕಾರ್ಯರೂಪಕ್ಕೆ ತರಲಾಯಿತು.

ಆಗ ಮುಸ್ಲಿಮರಿಗೆ ಅವರ ಮದುವೆ, ಉತ್ತರಾಧಿಕಾರ ಮುಂತಾದ ವಿಚಾರಗಳಿಗೆ ಸಂಬಂಧಿಸಿದ ಕಾನೂನು ಮಾತ್ರ ಹಾಗೇ ಉಳಿಯಿತು. ಮುಂದೆ ಬ್ರಿಟಿಷರು ಜಾರಿಗೆ ತಂದ ಮುಸ್ಲಿಂ ಪರ್ಸನಲ್ ಲಾ (ಷರಿಯತ್) ಅಪ್ಲಿಕೇಷನ್ ಆ್ಯಕ್ಟ್ –1937ಅನ್ನು  ಜಸ್ಟಿಸ್ ಅಮೀರ ಅಲಿ ಅವರು ಕ್ರೋಡೀಕರಿಸಿದ್ದಾರೆ.

ಷಿಯಾ ಪಂಗಡಕ್ಕೆ ಸೇರಿದ್ದ ಅವರು ಭಾರತದಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಇರುವ ಸುನ್ನಿ ಪಂಗಡಕ್ಕೆ ಅವಶ್ಯಕವೆನಿಸುವಂಥ ಕಾನೂನನ್ನು ರೂಪಿಸುವಲ್ಲಿ ವಿಫಲರಾಗಿದ್ದಾರೆ. ಅದರ ದುಷ್ಪರಿಣಾಮವೇ ತ್ರಿವಳಿ ತಲಾಖ್ ಆಗಿದೆ. ಇಸ್ಲಾಂ ಮೂಲಭೂತವಾಗಿ ಏಕಪತ್ನಿತ್ವವನ್ನು ಬೆಂಬಲಿಸುತ್ತದೆ ಮತ್ತು ವಿವಾಹ ವಿಚ್ಛೇದನವನ್ನು ತಿರಸ್ಕರಿಸುತ್ತದೆ ಎಂಬುದು ಅವರ ಗಮನಕ್ಕೆ ಬರಲೇ ಇಲ್ಲ.ಇಸ್ಲಾಂ ಪ್ರಕಾರ ತಲಾಖ್: ತಲಾಖ್‌ಗೆ ಸಂಬಂಧಿಸಿದಂತೆ ನೂರಾರು ಪ್ರಕರಣಗಳ ಅಧ್ಯಯನ ಮಾಡಿದಾಗ್ಯೂ ಅವೆಲ್ಲ ಪುರುಷ ಪ್ರಧಾನವಾಗಿದ್ದು ಇಸ್ಲಾಂ ಧರ್ಮದ ಆಶಯಗಳಿಗೆ ವಿರುದ್ಧವಾದವು ಎಂಬುದು ಮೇಲ್ನೋಟಕ್ಕೇ ಕಂಡುಬರುವುದು.‘ಯಾರು ತಮ್ಮ ಹೆಂಡಂದಿರ ಮೇಲೆ ಅತೀವ ಕರುಣೆಯುಳ್ಳವರಾಗಿರುತ್ತಾರೋ ಅವರೇ ನಿಮ್ಮೊಳಗಿನ ಶ್ರೇಷ್ಠರು’ ಎಂದು ಮುಹಮ್ಮದ್ ಪೈಗಂಬರರು ಹೇಳಿದ್ದಾರೆ. ಆದರೆ ಕೆಲ ಮುಸ್ಲಿಮರು ಹರಿದ ಚಪ್ಪಲಿಗಳನ್ನು ರಸ್ತೆಯಲ್ಲೇ ಬಿಟ್ಟು ಹೊಸ ಚಪ್ಪಲಿ ಖರೀದಿಸಿ ಹಾಕಿಕೊಂಡು ಹೋಗುವಂತೆಯೇ  ಹೆಂಡತಿಯನ್ನು ಬೀದಿಗಟ್ಟಿ ಇನ್ನೊಂದು ಮದುವೆಯಾಗುತ್ತಾರೆ.ಅವರೊಂದಿಗೆ (ನಿಮ್ಮ ಹೆಂಡಂದಿರೊಂದಿಗೆ) ಕರುಣೆಯಿಂದ ಬದುಕಿ. ನೀವು ಅವರನ್ನು ತಿರಸ್ಕರಿಸಿದರೆ ದೇವರು ಕೊಟ್ಟ ಒಳ್ಳೆಯದನ್ನೇ ನೀವು ತಿರಸ್ಕರಿಸುತ್ತಿರಬಹುದು ಎಂದು ಕುರಾನಿನ 4ನೇ ಸೂರಾ(ಅಧ್ಯಾಯ)ದ 1ನೇ ಆಯತ್ (ಸೂಕ್ತ) ಹೇಳುತ್ತದೆ. ಆದ್ದರಿಂದ ಪತ್ನಿಯ ವಿಚಾರದಲ್ಲಿ ಸಭ್ಯನಾಗಿದ್ದು, ಆಕೆಯ ಬಗ್ಗೆ ತಪ್ಪು ಕಲ್ಪನೆ ಬಂದರೆ ಕೂಲಂಕಷವಾಗಿ ಚಿಂತಿಸುವುದು ಮುಸ್ಲಿಂ ಪುರುಷರ ಆದ್ಯ ಕರ್ತವ್ಯವಾಗಿದೆ.

ನೀವು ತಲಾಖ್ ಕೊಟ್ಟ ನಂತರ ಮತ್ತು ಕಾಯುವ ಅವಧಿ ಮುಗಿದಾಗ (ಮತ್ತೆ ಬೇಕೆನಿಸಿದರೆ) ಎಲ್ಲ ಸಭ್ಯತೆಯೊಂದಿಗೆ ಉಳಿಸಿಕೊಳ್ಳಿರಿ. ಇಲ್ಲವೆ ಸಭ್ಯತೆಯೊಂದಿಗೆ ಅವರಿಂದ ದೂರವಾಗಿರಿ ಎಂದು ಕುರಾನ್ ಹೇಳಿದೆ.ಇಲ್ಲಿ ಕಾಯುವ ಅವಧಿ ಬಹುಮುಖ್ಯವಾದ ಪದ. ತಲಾಖ್ ಪಡೆದ ಪತ್ನಿ ಮೂರು ಮಾಸಿಕ ಋತುಗಳನ್ನು ಕಳೆಯುವವರೆಗೆ ಮರುವಿವಾಹದ ಕುರಿತು ಮಾತುಕತೆ ನಡೆಸುವುದು ಧರ್ಮಬಾಹಿರ. ಈ ಅವಧಿಯಲ್ಲಿ ಮನಃ ಪರಿವರ್ತನೆಯಾದರೆ ತಲಾಖ್ ಕೊಟ್ಟ ಹೆಂಡತಿಯನ್ನು ಮತ್ತೆ ಸ್ವೀಕರಿಸಬಹುದೆಂಬ ಆಶಯವಿದೆ.ಯಾವುದೇ ತಪ್ಪು ಮಾಡದ ಹೆಂಡತಿಗೆ ತಲಾಖ್ ಕೊಡುವ ಅಧಿಕಾರ ಮುಸ್ಲಿಂ ಗಂಡಸರಿಗೆ ಇಲ್ಲ. ತಮ್ಮ ತಪ್ಪನ್ನು ತಿದ್ದಿಕೊಂಡು ಗಂಡನ ಇಚ್ಛೆಗೆ ಅನುಗುಣವಾಗಿ ನಡೆಯಲು ಒಪ್ಪುವ ಹೆಂಡಂದಿರಿಗೆ ಕೂಡ ತಲಾಖ್ ಕೊಡುವ ಹಕ್ಕಿಲ್ಲ!ಸುಶೀಲೆಯರಾದ ಸ್ತ್ರೀಯರ ಮೇಲೆ ಯಾರು ಆರೋಪ ಹೊರಿಸುತ್ತಾರೋ ಮತ್ತು ನಾಲ್ಕು ಮಂದಿ ಸಾಕ್ಷಿದಾರರನ್ನು ಅವರು ತರುವುದಿಲ್ಲವೊ ಅವರಿಗೆ 80 ಛಡಿ ಏಟುಗಳನ್ನು ಹೊಡೆಯಿರಿ. ಅವರ ಸಾಕ್ಷ್ಯಗಳನ್ನು ಸ್ವೀಕರಿಸಬೇಡಿ. ಅವರೇ ಧರ್ಮಭ್ರಷ್ಟರು ಎಂದು ಕುರಾನಿನ 24ನೇ ಅಧ್ಯಾಯದ 4ನೇ ಸೂಕ್ತ ಹೇಳುತ್ತದೆ.ಈ ಸೂಕ್ತದ ಪ್ರಕಾರ ತಲಾಖ್ ಕೊಡುವ ಬಹುಪಾಲು ಗಂಡಸರು 80 ಛಡಿ ಏಟುಗಳ ಶಿಕ್ಷೆಗೆ ಅರ್ಹರಾಗಿದ್ದಾರೆ. ಆದರೆ ಒಬ್ಬನೂ ಈ ಶಿಕ್ಷೆಗೆ ಒಳಗಾದ ಉದಾಹರಣೆ ಇಲ್ಲ.‘ಗಂಡ ಹೆಂಡತಿಗೆ ಪೋಷಾಕು, ಹೆಂಡತಿ ಗಂಡನಿಗೆ ಪೋಷಾಕು’ ಎಂದು ಕುರಾನಿನ 2ನೇ ಅಧ್ಯಾಯದ 187ನೇ ಸೂಕ್ತದಲ್ಲಿ ಹೇಳಲಾಗಿದೆ. ಇದು ಗಂಡ, ಹೆಂಡತಿ ಮಧ್ಯದ ಸಮಾನತೆಗೆ ಸೂಚಕ.ಹೆಂಡತಿ ತಪ್ಪಿತಸ್ಥಳೆಂದು ಸಿದ್ಧವಾದ ಮೇಲೆ ಕೂಡ ವಿವಾಹ ವಿಚ್ಛೇದನ ನೀಡಲಾದ ಸ್ತ್ರೀಗೆ ಜೀವನೋಪಾಯಕ್ಕೆ ಏನಾದರೂ ಕೊಡಬೇಕು. ಇದು ದೈವಭಕ್ತರ ಬಾಧ್ಯತೆಯಾಗಿದೆ ಎಂದು 2ನೇ ಅಧ್ಯಾಯದ 241ನೇ ಸೂಕ್ತದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.ಷಾಬಾನು ಅವರಿಗೆ ಮೆಹರ್ (ಸ್ತ್ರೀಧನ) ಅಲ್ಲದೆ ಜೀವನಾಂಶವನ್ನೂ ಕೊಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿದ್ದ ಚಂದ್ರಚೂಡ ಅವರು 1985ನೇ ಏ. 23ರಂದು  ಐತಿಹಾಸಿಕ ತೀರ್ಪು ನೀಡುವ ಸಂದರ್ಭದಲ್ಲಿ ಪ್ರಮುಖವಾಗಿ ಈ ಸೂಕ್ತವನ್ನೇ ಬಳಸಿದ್ದಾರೆ.ಟರ್ಕಿ, ಈಜಿಪ್ಟ್, ಟುನಿಷಿಯಾ, ಪಾಕಿಸ್ತಾನ, ಸಿರಿಯಾ, ಮೊರಕ್ಕೊ, ಇರಾನ್ ದೇಶಗಳಲ್ಲಿನ ತಲಾಖ್‌ಗೆ ಸಂಬಂಧಿಸಿದ ಕಾನೂನುಗಳು ಚಂದ್ರಚೂಡ ಅವರ ತೀರ್ಪಿನ ಪರವಾಗಿ ಇವೆ. ಆದರೆ ಭಾರತದ ಮುಸ್ಲಿಂ ವೈಯಕ್ತಿಕ ಕಾನೂನು ಪಾಕಿಸ್ತಾನದ ಕಾನೂನಿನಷ್ಟು ಕೂಡ ಸ್ತ್ರೀಪರವಾಗಿಲ್ಲ. ಏಕೆಂದರೆ ಅದು ಅಪ್ಪಟ ಪುರುಷವಾದಿಯಾಗಿದೆ!ಬಹುಪತ್ನಿತ್ವ: ಅರಬಸ್ತಾನದ ಮದಿನಾ ಬಳಿಯ ಉಹುದ್ ಬೆಟ್ಟದಲ್ಲಿ ಕ್ರಿಸ್ತಶಕ  635ರಲ್ಲಿ ಕುರೈಶರು ಮತ್ತು ಮುಸ್ಲಿಮರ ಮಧ್ಯೆ ಯುದ್ಧವಾಗಿ ಮುಸ್ಲಿಮರ ಕಡೆ ಹೆಚ್ಚಿನ ಜೀವಹಾನಿಯಾಯಿತು. ಆಗ ಹುತಾತ್ಮರ ವಿಧವೆಯರು ಮತ್ತು ಅನಾಥ ಮಕ್ಕಳ ಪ್ರಶ್ನೆ ಎದುರಾಯಿತು. ಆಗ  ಬಹುಪತ್ನಿತ್ವದ ವಿಚಾರ ವ್ಯಕ್ತವಾಯಿತು. ಹುತಾತ್ಮರ ವಿಧವೆಯರು, ಮಕ್ಕಳಿಗೆ ಬದುಕಿ ಉಳಿದ ಮುಸ್ಲಿಮರು ಆಶ್ರಯ ಕೊಟ್ಟರೆ ಇಸ್ಲಾಂ ಪ್ರಕಾರ ಅದೊಂದು ದೊಡ್ಡ ಆದರ್ಶ.‘ತಬ್ಬಲಿಗಳ ಸಂಬಂಧ ನ್ಯಾಯ ಪಾಲಿಸಲಾರಿರೆಂದು ನೀವು ಭಯಪಟ್ಟರೆ, ನೀವಿಷ್ಟಪಡುವ ಸ್ತ್ರೀಯರನ್ನು (ಹುತಾತ್ಮರ ವಿಧವೆಯರನ್ನು) ಈರ್ವರನ್ನೊ, ಮೂವರನ್ನೊ, ನಾಲ್ವರನ್ನೊ ವಿವಾಹ ಮಾಡಿಕೊಳ್ಳಿರಿ. ಆದರೆ ಅವರ ಮಧ್ಯೆ ನ್ಯಾಯ ಪಾಲಿಸರಾರಿರೆಂದು ನೀವು ಭಯಪಟ್ಟರೆ ಒಬ್ಬಳು ಸ್ತ್ರೀಯೊಡನೆ ಮಾತ್ರ ವಿವಾಹ ಮಾಡಿಕೊಳ್ಳಿರಿ.

ಅದಲ್ಲದಿದ್ದರೆ (ಯುದ್ಧ ಸೆರೆಯಾಳುಗಳಾಗಿ) ನಿಮ್ಮ ಅಧೀನ ಬಂದಿರುವ ಸ್ತ್ರೀಯರನ್ನು ಸ್ವೀಕರಿಸಿರಿ. ನಿಮ್ಮಿಂದ ಅನ್ಯಾಯವಾಗದಿರಲು ಇದು ಇನ್ನಷ್ಟು ಯೋಗ್ಯವಾಗಿದೆ’ ಎಂಬುದು 4ನೇ ಅಧ್ಯಾಯದ 3ನೇ ಸೂಕ್ತದ ಆಶಯವಾಗಿದೆ.

ಇದು ಸ್ತ್ರೀ ಪರವೋ ಪುರುಷಪರವೋ? ಬಹುಪತ್ನಿತ್ವವಾದಿಗಳು ಇದಕ್ಕೆ ಏನನ್ನುತ್ತಾರೆ? ಅವರು ಹೇಳುವುದಿಷ್ಟೆ: ಹಿಂದೂಗಳಲ್ಲಿ ಬಹುಪತ್ನಿತ್ವ ಮುಸ್ಲಿಮರಿಗಿಂತ ಹೆಚ್ಚಾಗಿದೆ. ಇದು ಉತ್ತರವೇ?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.