ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕ್ರೆಟೀಸ್‌: ಆದರ್ಶ ಗುರು

Last Updated 1 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

–ಸುಜನ್‌

‘ಹೇಗಾದರೂ ಮದುವೆಯಾಗಿ. ಒಳ್ಳೆಯ ಹೆಂಡತಿ ಸಿಕ್ಕರೆ ಜೀವನ ಸಂತೋಷಮಯವಾಗಿರುತ್ತದೆ; ಒಂದು ವೇಳೆ ಕೆಟ್ಟವಳು ಸಿಕ್ಕರೆ, ನೀವೊಬ್ಬ ತತ್ತ್ವಜ್ಞಾನಿಯಂತೂ ಆಗುತ್ತೀರಿ.’ ಈ ಮಾತು ಸಾಕ್ರೆಟಿಸ್‌ನದು ಎಂದು ಪ್ರಸಿದ್ಧವಾಗಿದೆ.

ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ತತ್ತ್ವಜ್ಞಾನಿಗಳಲ್ಲಿ ಪ್ರಮುಖನಾದವನು ಸಾಕ್ರೆಟಿಸ್‌. ಅವನು ಹಾಗೆ ತತ್ತ್ವಜ್ಞಾನಿಯಾಗಲು ಅವನ ಹೆಂಡತಿ ಎಷ್ಟು ಕಾರಣಕರ್ತಳೋ? ನಮಗೆ ಸ್ಪಷ್ಟವಾಗಿ ಗೊತ್ತಿಲ್ಲವೆನ್ನಿ! ಆದರೆ ಅವನ ಹೆಂಡತಿಯ ಸ್ವಭಾವವನ್ನು ಪರಿಚಯಿಸುವಂಥ ಘಟನೆಯೊಂದನ್ನು ಹೇಳುವುದುಂಟು. ಅವನ ಹೆಂಡತಿ ಸಾಂತಿಪಿ (Xanthippe); ತುಂಬ ಗಯ್ಯಾಳಿಯಂತೆ. (ಸಾಕ್ರೆಟಿಸನಿಗೆ ಇಬ್ಬರು ಹೆಂಡತಿಯರಿದ್ದರು ಎಂಬ ಅಭಿಪ್ರಾಯವೂ ಇದೆ.) ಒಮ್ಮೆ ಸಾಕ್ರೆಟಿಸ್‌ ಮನೆಯಲ್ಲಿ ಶಿಷ್ಯರ ಸಂಗಡ ಚರ್ಚಿಸುತ್ತಿದ್ದನಂತೆ. ಆಗ ಕೋಪಗೊಂಡ ಅವನ ಹೆಂಡತಿ ಅವನನ್ನು ಬಯ್ಯಲು ತೊಡಗಿದಳು. ಸಮೃದ್ಧಿಯಾಗಿ ಬೈದಾದ ಬಳಿಕ ಒಂದು ಬಿಂದಿಗೆ ನೀರನ್ನು ಅವನ ತಲೆಯ ಮೇಲೆ ಸುರಿದಳಂತೆ. ಈ ಘಟನೆಯಿಂದ ಶಿಷ್ಯರೆಲ್ಲರೂ ಗಲಿಬಿಲಿಗೊಂಡರು. ಆದರೆ ಸಾಕ್ರೆಟಿಸ್‌ ಮಾತ್ರ ವಿಚಲಿತನಾಗದೆ ಮಾತನ್ನು ಮುಂದುವರೆಸಿದ್ದ. ಶಿಷ್ಯರಿಗೆ ಆಶ್ಚರ್ಯವಾಯಿತು. ಆಗ ಸಾಕ್ರೆಟಿಸ್‌ ‘ಹೆದರಬೇಡಿ! ಮೊದಲು ಗುಡುಗು, ಆಮೇಲೆ ಮಳೆ ಸುರಿಯುವುದು ಸ್ವಾಭಾವಿಕವಲ್ಲವೆ?!’ ಎಂದು ಉದ್ಗರಿಸಿದನಂತೆ.

ಈ ಘಟನೆ ಐತಿಹಾಸಿಕವಾಗಿ ಎಷ್ಟು ನಿಜವೋ, ತಿಳಿಯದು! ಆದರೆ ಸಂಸಾರದ ತೊಂದರೆಗಳಿಗೂ ತತ್ತ್ವಜ್ಞಾನಕ್ಕೂ ಇರುವ ಸಂಬಂಧವನ್ನು ಈ ವಿವರ ಹೇಳುವಂತಿದೆ.

ಸಾಕ್ರೆಟಿಸ್‌ (ಕ್ರಿ. ಪೂ. 469–ಕ್ರಿ. ಪೂ. 399) ಗ್ರೀಕ್‌ ತತ್ತ್ವಜ್ಞಾನಿ; ಅಥೆನ್ಸ್‌ ನಗರಕ್ಕೆ ಸೇರಿದವನು. ಇಡಿಯ ಪಾಶ್ಚಾತ್ಯ ತತ್ತ್ವಜ್ಞಾನದ ಮೇಲೆ ಅವನ ಪ್ರಭಾವ ಅಪರಿಮಿತವಾದುದು. ಒಮ್ಮೆ ದೇವವಾಣಿಯನ್ನು ಕಣಿ ಕೇಳಲಾಯಿತಂತೆ: ‘ಸಾಕ್ರೆಟಿಸ್‌ನಿಗಿಂತ ಹೆಚ್ಚು ಜ್ಞಾನಿಗಳು ಯಾರಾದರೂ ಇದ್ದಾರೆಯೆ?’ ಆಗ ದೈವವಾಣಿಯಿಂದ ‘ಇಲ್ಲ’ ಎಂದು ಉತ್ತರ ಬಂದಿತಂತೆ. ಸಾಕ್ರೆಟಿಸ್‌ನ ಜ್ಞಾನದ ಬಗ್ಗೆ ಅವನ ಕಾಲದಲ್ಲಿಯೇ ಎಂಥ ಪ್ರಶಂಸೆಯಿತ್ತು ಎನ್ನುವುದು ಈ ವಿವರದಿಂದ ತಿಳಿಯುತ್ತದೆ. ದೈವವಾಣಿಯ ಬಗ್ಗೆ ಸ್ವತಃ ಸಾಕ್ರೆಟಿಸ್‌ನಿಗೂ ಆಶ್ಚರ್ಯವಾಯಿತಂತೆ. ಆಗ ಅವನು ಸಮಾಜದಲ್ಲಿ ಜ್ಞಾನಿಗಳು ಎಂದು ಪ್ರಸಿದ್ಧರಾದವರನ್ನು ಭೇಟಿಯಾಗಿ ಅರಿವಿನ ಸ್ವರೂಪದ ಬಗ್ಗೆ ಮಾತನಾಡಿದ. ಆದರೆ ಅವನಿಗೆ ಅವರ ಮಾತುಕತೆಯಿಂದ ನಿರಾಶೆಯಾಯಿತು. ಆಗ ಅವನಿಗೆ ದೈವವಾಣಿಯ ಸಂದೇಶ ಅರ್ಥವಾಯಿತಂತೆ. ‘ನಮಗೆ ತಿಳಿದಿಲ್ಲ ಎಂಬ ತಿಳಿವೇ ದಿಟವಾದ ಅರಿವು’ ಎಂದು ಮನವರಿಕೆಯಾಯಿತಂತೆ.

ಜೀವನದುದ್ದಕ್ಕೂ ಅರಿವನ್ನು ಪಡೆಯಲು ಮತ್ತು ಹಾಗೆ ಪಡೆದ ಅರಿವನ್ನು ಹಂಚಲು ಪ್ರಯಾಸಪಟ್ಟ ಆದರ್ಶ ಗುರು ಸಾಕ್ರೆಟಿಸ್‌. ತಾನು ನಂಬಿದ ಮೌಲ್ಯಕ್ಕಾಗಿ ಸಾವನ್ನೂ ಸಂತೋಷದಿಂದ ಸ್ವೀಕರಿಸಿದವನು ಅವನು. ರಾಜ್ಯ, ಕುಟುಂಬ ಮತ್ತು ವ್ಯಕ್ತಿಗಳ ಸಾರ್ಥಕತೆ ಇರುವುದೇ ನಮ್ಮ ಅರಿವು ಮತ್ತು ನಡತೆಗಳ ಸಾಮರಸ್ಯದಲ್ಲಿ ಎಂದು ಪ್ರತಿಪಾದಿಸಿದ ಅವನ ಚಿಂತನೆಗಳು ನಮಗೆ ಇಂದಿಗೂ ಬೆಳಕಾಗುವಂಥವು.

ಸಾಕ್ರೆಟಿಸ್‌ ಬಗ್ಗೆ ಮತ್ತಷ್ಟು ವಿವರಗಳನ್ನು ಮುಂದೆ ತಿಳಿದುಕೊಳ್ಳೋಣ.

ಜಿಜ್ಞಾಸೆ

ಧರ್ಮ, ಸಂಸ್ಕೃತಿ, ಅಧ್ಯಾತ್ಮ, ಆಚಾರ– ವಿಚಾರಗಳನ್ನು ಕುರಿತಂತೆ ನಿಮ್ಮಲ್ಲಿ ಸಂದೇಹಗಳಿರಬಹುದು. ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ಆಯಾ ವಿಷಯತಜ್ಞರೂ ವಿದ್ವಾಂಸರೂ ಉತ್ತರಿಸಲಿದ್ದಾರೆ. ಪ್ರಶ್ನೆಗಳನ್ನು ಕಳುಹಿಸಬೇಕಾದ ವಿಳಾಸ: ಸಂಪಾದಕರು, ಪ್ರಜಾವಾಣಿ, ಅರಿವು ವಿಭಾಗ, ನಂ. 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು – 560001. email: arivu@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT