ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪ್‌ ಆಧಾರಿತ ಬೆಳೆ ಹಾನಿ ಸಮೀಕ್ಷೆ

ಜಿಲ್ಲೆಯಲ್ಲಿ ಅ. 13ರಿಂದ ಪ್ರಾರಂಭ: 310 ಅಧಿಕಾರಿಗಳ ನೇಮಕ, ನಿಖರ ಮಾಹಿತಿ ಲಭಿಸುವ ನಿರೀಕ್ಷೆ
Last Updated 12 ಅಕ್ಟೋಬರ್ 2017, 9:33 IST
ಅಕ್ಷರ ಗಾತ್ರ

ಗದಗ: ಬೆಳೆ ಸಮೀಕ್ಷೆಯನ್ನು ಹೆಚ್ಚು ವೈಜ್ಞಾನಿಕವಾಗಿ ಮತ್ತು ನಿಖರವಾಗಿ ಮಾಡಲು, ಕರ್ನಾಟಕ ಸ್ಟೇಟ್ ರಿಮೋಟ್ ಸೆನ್ಸಿಂಗ್ ಅಪ್ಲಿಕೇಷನ್‌ ಸೆಂಟರ್ (ಕೆ.ಎಸ್‌.ಆರ್‌.ಎಸ್‌.ಎ.ಸಿ) ಹೊಸ ಮೊಬೈಲ್‌ ಅಪ್ಲಿಕೇಷನ್‌ ಅಭಿವೃದ್ಧಿಪಡಿಸಿದ್ದು, ಎಲ್ಲ ಜಿಲ್ಲೆಗಳಲ್ಲಿ ಈ ಅಪ್ಲಿಕೇಷನ್‌ ಬಳಸಿ 2017–18ನೇ ಸಾಲಿನ ಮುಂಗಾರು ಬೆಳೆಹಾನಿ ಸಮೀಕ್ಷೆ ಮಾಡುವಂತೆ ಸರ್ಕಾರ ಸೂಚನೆ ನೀಡಿದೆ.

ಆದರೆ, ಈ ಯೋಜನೆಗೆ ಆರಂಭದಲ್ಲೇ ಹಿನ್ನಡೆಯಾಗಿದ್ದು, ಸಿಬ್ಬಂದಿ ಕೊರತೆ, ಕಚೇರಿ ಕಾರ್ಯದೊತ್ತಡ ಹೆಚ್ಚಿರುವ ಹಿನ್ನೆಲೆಯಲ್ಲಿ ಸಮೀಕ್ಷೆ ಕಾರ್ಯದಿಂದ ತಮ್ಮನ್ನು ಕೈಬಿಡುವಂತೆ ಕಂದಾಯ, ಕೃಷಿ ಇಲಾಖೆಯ ಸಹಾಯಕ ಅಧಿಕಾರಿಗಳು, ಜಿಲ್ಲಾಡಳಿತ ಮೂಲಕ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಾಮಾನ್ಯವಾಗಿ ಬೆಳೆ ಕ್ಷೇತ್ರದ ಮೂಲ ಮಾಹಿತಿಯು ಗ್ರಾಮ ಲೆಕ್ಕಾಧಿಕಾರಿಗಳು ನೀಡುವ ಅಂಕಿ ಅಂಶಗಳನ್ನೇ ಅವಲಂಬಿಸಿರುತ್ತದೆ. ಆದರೆ, ಬಹಳಷ್ಟು ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಬೆಳೆ ಕ್ಷೇತ್ರಕ್ಕೆ ಭೇಟಿ ನೀಡದೆಯೇ ಕಚೇರಿಯಲ್ಲಿ ಕುಳಿತು ಹಾನಿ ಅಂದಾಜು ಸಿದ್ಧಪಡಿಸುತ್ತಾರೆ. ಕೃಷಿ, ಕಂದಾಯ, ತೋಟಗಾರಿಗೆ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳಕ್ಕೆ ಭೇಟಿ ನೀಡಬೇಕೆಂಬ ನಿರ್ದೇಶನ ಇದ್ದರೂ, ವಾಸ್ತವದಲ್ಲಿ ಇದು ಪಾಲನೆ ಆಗುತ್ತಿಲ್ಲ. ಬೆಳೆ ಕಟಾವು ಪ್ರಯೋಗದ ಆಧಾರದ ಮೇಲೆ ನಿರ್ಧರಿಸಲಾಗುವ ಇಳುವರಿ ಮಾಹಿತಿಯೂ ವಾಸ್ತವಾಂಶದಿಂದ ಕೂಡಿರುವುದಿಲ್ಲ. ಹೀಗಾಗಿ, ಬೆಳೆಹಾನಿ ಪರಿಹಾರ ವಿತರಣೆಯಲ್ಲಿ ವ್ಯತ್ಯಾಸವಾಗುತ್ತಿದೆ. ಇದನ್ನು ತಪ್ಪಿಸಲು ಮತ್ತು ಕ್ಷೇತ್ರ ತಪಾಸಣೆ ನಡೆಸಿಯೇ ಬೆಳೆ ವಿವರ ದಾಖಲಿಸಲು ಈ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದೆ.

ಮೊಬೈಲ್‌ ಅಪ್ಲಿಕೇಷನ್‌ನಲ್ಲಿ ಬೆಳೆಕ್ಷೇತ್ರ ಅಂಕಿ ಅಂಶಗಳನ್ನು ಸುಲಭವಾಗಿ ದಾಖಲು ಮಾಡಬಹುದಾದರೂ ಹೆಚ್ಚಿನ ಗ್ರಾಮ ಸಹಾಯಕರಿಗೆ ಇದರ ತಾಂತ್ರಿಕ ಜ್ಞಾನ ಇಲ್ಲ. ಜತೆಗೆ ಗ್ರಾಮ ಮಟ್ಟದಲ್ಲಿ ಆನ್‌ಲೈನ್‌ ದಾಖಲಾತಿಗೆ ನೆಟ್‌ವರ್ಕ್‌ ಸಮಸ್ಯೆಯೂ ಕಾಡಬಹುದು ಎಂಬ ದೂರುಗಳೂ ಇವೆ. ಗ್ರಾಮ ಲೆಕ್ಕಾಧಿಕಾರಿಗಳಿಗೆ ಕಂದಾಯ ಇಲಾಖೆ ಕಾರ್ಯಕ್ರಮಗಳಲ್ಲದೆ ಹಲವು ಜವಾಬ್ದಾರಿಗಳನ್ನು ನೀಡಲಾಗಿರುವುದರಿಂದ ಅವರು ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಲು ಹಿಂದೇಟು ಹಾಕಿದ್ದಾರೆ.

ಉಳಿದ ಕೆಲಸ ಸ್ಥಗಿತಗೊಳಿಸಿ: ಸಮೀಕ್ಷೆ ಕಾರ್ಯದಿಂದ ತಮ್ಮನ್ನು ಕೈಬಿಡುವಂತೆ ಅಧಿಕಾರಿಗಳು ಮನವಿ ಮಾಡಿರುವ ಹಿನ್ನೆಲೆಯಲ್ಲಿ, ಸರ್ಕಾರದ ಮಟ್ಟದಲ್ಲಿ ಈ ಕುರಿತು ಸಭೆ ನಡೆದಿದ್ದು, ಒಂದು ತಿಂಗಳ ಕಾಲ ಕೃಷಿ, ಕಂದಾಯ ಇಲಾಖೆಗಳಲ್ಲಿ ಉಳಿದ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ, ಸಂಪೂರ್ಣವಾಗಿ ಬೆಳೆ ಸಮೀಕ್ಷೆಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ. ಅಧಿಕಾರಿಗಳ ಇತರೆ ಬೇಡಿಕೆಗೆ ಸ್ಪಂದಿಸುವ ಭರವಸೆಯನ್ನೂ ಸರ್ಕಾರ ನೀಡಿದೆ.

ಈ ಅಪ್ಲಿಕೇಷನ್‌ ಮೂಲಕ ಪ್ರತಿ ಕಂದಾಯ ಗ್ರಾಮಗಳ ಬೆಳೆ, ಬೆಳೆ ವಿವರ ಸಂಗ್ರಹಿಸಲಾಗುತ್ತದೆ. ಇದನ್ನು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಬೆಳೆ ಅಂಕಿ ಅಂಶಗಳ ಸಮನ್ವಯ ಸಮಿತಿಯಲ್ಲಿ ಪರಿಶೀಲಿಸಿ, ಹೋಬಳಿ, ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಕ್ಷೇತ್ರ ವರದಿಗಳನ್ನು ಸಿದ್ಧಪಡಿಸಲಾಗುತ್ತದೆ. ಬೆಳೆ ವಿಮಾ ಯೋಜನೆಯಡಿ ವಿಮಾ ಪರಿಹಾರ ನೀಡಿಕೆಯು ಸಹ ಈ ಸಮೀಕ್ಷೆ ಆಧರಿಸಿರುವುದರಿಂದ ಇದಕ್ಕೆ ಹೆಚ್ಚಿನ ಮಹತ್ವ ಬಂದಿದೆ.

***

ಜಿಲ್ಲೆಯಲ್ಲಿ ಅ. 13ರಿಂದ ಮೊಬೈಲ್‌ ಆಧಾರಿತ ಬೆಳೆ ಸಮೀಕ್ಷೆ ಪ್ರಾರಂಭಗೊಳ್ಳಲಿದ್ದು, ಅ.12ರಂದು ತಾಲ್ಲೂಕು ಮಟ್ಟದಲ್ಲಿ ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಂತ್ರಾಂಶ ಬಳಕೆಗೆ ಸಂಬಂಧಿಸಿದಂತೆ ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ.

‘ಜಿಲ್ಲೆಯ 330 ಕಂದಾಯ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲು 310 ಸಮೀಕ್ಷಾಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಿಕೊಳ್ಳಲಾಗಿದೆ. ಇದರಲ್ಲಿ ಕಂದಾಯ ಇಲಾಖೆ 210, ಕೃಷಿ ಇಲಾಖೆಯ 25, ತೋಟಗಾರಿಕೆ ಇಲಾಖೆಯ 16 ಸಿಬ್ಬಂದಿ, 19 ಸ್ವಯಂ ಸೇವಕರು ಮತ್ತು 47 ಮಂದಿ ತಾಂತ್ರಿಕ ಉತ್ತೇಜಕರಿದ್ದಾರೆ. ಕೃಷಿ, ಕಂದಾಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಮೊಬೈಲ್‌ ಆಧಾರಿತ ಸಮೀಕ್ಷೆ ಕಾರ್ಯಕ್ಕೆ ಸ್ವಯಂ ಸೇವಕರ ನೆರವನ್ನೂ ಪಡೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ. ‘ಗಣಕ ಜ್ಞಾನ ಹೊಂದಿರುವ ಪದವೀಧರರು ಸ್ವಯಂ ಪ್ರೇರಿತರಾಗಿ ಮುಂದೆ ಬಂದರೆ ಅವರನ್ನೂ ಈ ಸಮೀಕ್ಷೆ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು. ಅವರಿಗೆ ಒಂದು ಸರ್ವೆ ನಂಬರ್‌ ಸಮೀಕ್ಷೆಗೆ ₹ 5ರಂತೆ ಗೌರವಧನ ನೀಡಲಾಗುವುದು. ಸಮೀಕ್ಷೆ ಕಾರ್ಯವು 30ರಿಂದ 35 ದಿನಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಐ.ಜೆ ಗದ್ಯಾಳ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಮೊಬೈಲ್‌ ಅಪ್ಲಿಕೇಷನ್‌ ಆಧರಿಸಿದ ಸಮೀಕ್ಷೆಯಲ್ಲಿ, ಗ್ರಾಮ ಸಹಾಯಕರು ಸಂಬಂಧಿಸಿದ ಜಮೀನಿಗೆ ಖುದ್ದಾಗಿ ಭೇಟಿ ನೀಡಬೇಕು. ರೈತನ ಜಮೀನು ಮತ್ತು ಬೆಳೆಯ ಚಿತ್ರ ತೆಗೆದು, ಆತನ ಹೆಸರು, ಸರ್ವೆ ನಂಬರ್‌ ಸಹಿತ ದಾಖಲಿಸಬೇಕು. ಪಹಣಿಯಲ್ಲಿ ನಮೂದಾಗಿರುವ ಬೆಳೆಗೂ, ಸದ್ಯ ಬೆಳೆಯಲಾಗಿರುವ ಬೆಳೆಗೂ ವ್ಯತ್ಯಾಸ ಇದೆಯೇ ಎನ್ನುವುದನ್ನು ಪರಿಶೀಲಿಸಬೇಕು. ನಂತರ ಜಮೀನಿನ ಮಾಲೀಕನ ಆಧಾರ್ ಸಂಖ್ಯೆ ಜೋಡಣೆಯಾಗಿದೆಯೇ ಎನ್ನುವುದನ್ನು ಖಚಿತಪಡಿಸಿಕೊಂಡು, ಇತರೆ ಮಾಹಿತಿಗಳನ್ನು ಭರ್ತಿ ಮಾಡಿ ಅಪ್‌ಲೋಡ್‌ ಮಾಡಬೇಕು.

***

ಈ ಅಪ್ಲಿಕೇಷನ್‌ ಬಳಸಿ ಪ್ರತಿ ದಿನ ಒಬ್ಬ ಅಧಿಕಾರಿ ಸರಾಸರಿ 50ರೈತರ ಜಮೀನಿನ ಸಮೀಕ್ಷೆ ಕಾರ್ಯ ಪೂರ್ಣಗೊಳಿಸಬಹುದು. ರೈತರಿಗೆ ಆಗಿರುವ ಬೆಳೆ ಯ ನೈಜ ಚಿತ್ರಣ ಲಭಿಸುತ್ತದೆ.
ಐ.ಜೆ. ಗದ್ಯಾಳ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT