ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್‌ ಆ್ಯಪ್‌ ಬಳಕೆ

ಮಂಗಳವಾರ, ಜೂನ್ 25, 2019
25 °C

ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್‌ ಆ್ಯಪ್‌ ಬಳಕೆ

Published:
Updated:
ಮುಂಗಾರು ಬೆಳೆ ಸಮೀಕ್ಷೆಗೆ ಮೊಬೈಲ್‌ ಆ್ಯಪ್‌ ಬಳಕೆ

ಮಂಡ್ಯ: ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಮೊಬೈಲ್‌ ಆ್ಯಪ್‌ ಮೂಲಕ ಬೆಳೆ ಸಮೀಕ್ಷೆ ನಡೆಸಲು ಮುಂದಾಗಿದೆ. ಜಿಲ್ಲೆಯಲ್ಲಿ ಅ.13ರಿಂದ ಮುಂಗಾರು ಬೆಳೆ ಸಮೀಕ್ಷಾ ಕಾರ್ಯ ಆರಂಭವಾಗಿದ್ದು ವಿವಿಧ ಇಲಾಖೆಗಳ ಸಿಬ್ಬಂದಿ ಹಳ್ಳಿಗಳಿಗೆ ಭೇಟಿ ನೀಡಿ ಮುಂಗಾರು ಬೆಳೆಗಳ ಮಾಹಿತಿ ಸಂಗ್ರಹ ಮಾಡುತ್ತಿದ್ದಾರೆ.

ಜಮೀನಿನಲ್ಲಿ ಬಿತ್ತನೆಯಾದ ಬೆಳೆ, ವಿಸ್ತೀರ್ಣ, ನೀರಾವರಿ ಪದ್ಧತಿ ಕುರಿತು ನಿಖರ ಹಾಗೂ ಏಕರೂಪ ಮಾಹಿತಿ ಸಂಗ್ರಹಿಸಲು ಸಮೀಕ್ಷಾ ಸಿಬ್ಬಂದಿ ರೈತರ ಮನೆ, ಜಮೀನುಗಳಿಗೆ ಭೇಟಿ ನೀಡಲಿದ್ದಾರೆ. ಕೃಷಿ, ತೋಟಗಾರಿಕೆ, ಕಂದಾಯ ಇಲಾಖೆ ಸಿಬ್ಬಂದಿ ಸೇರಿ ಗ್ರಾಮ ಲೆಕ್ಕಾಧಿಕಾರಿ, ಗ್ರಾಮ ಸಹಾಯಕ ಹಾಗೂ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಉದ್ಯೋಗಾರ್ಥಿಗಳು ಸಮೀಕ್ಷೆಗೆ ವಿಶೇಷ ತರಬೇತಿ ಪಡೆದಿದ್ದು ಮೊಬೈಲ್‌ ಆ್ಯಪ್‌ ಮೂಲಕ ಬೆಳೆಯ ಮಾಹಿತಿ ಪಡೆಯಲಿದ್ದಾರೆ. ಸರ್ಕಾರ ‘ಕ್ರಾಪ್‌ ಸರ್ವೆ ಆ್ಯಪ್’ ರೂಪಿಸಿದ್ದು ಗೂಗಲ್‌ ಪ್ಲೇಸ್ಟೋರ್‌ನಲ್ಲಿ ಡೌನ್‌ಲೋಡ್‌ ಮಾಡಿಕೊಳ್ಳಬಹುದಾಗಿದೆ. ಗ್ರಾಮದ ಹೆಸರು, ಜಮೀನಿನ ಸರ್ವೆ ನಂಬರ್‌, ಭೂ ಮಾಲೀಕರ ಹೆಸರನ್ನು ಹೊಂದಿದ ಆ್ಯಪ್‌ನಲ್ಲಿ ಬೆಳೆಯ ವಿವರ ದಾಖಲು ಮಾಡಲಿದ್ದಾರೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ಏಕಕಾಲದಲ್ಲಿ ಸಮೀಕ್ಷೆ ನಡೆಯಲಿದ್ದು ಸಿಬ್ಬಂದಿಗೆ ಒಂದು ತಿಂಗಳ ಗಡುವು ನೀಡಲಾಗಿದೆ.

ಸಿಬ್ಬಂದಿಗೆ ಕಾರ್ಯಾಗಾರ: ಬೆಳೆ ಸಮೀಕ್ಷೆಯಲ್ಲಿ ಭಾಗವಹಿಸುವ ಸಿಬ್ಬಂದಿಗೆ ಕಾರ್ಯಗಾರ ಆಯೋಜಿಸುವ ಮೂಲಕ ತರಬೇತಿ ನೀಡಲಾಗಿದೆ. ವಿಶೇಷ ತರಬೇತುದಾರ ಕೆ.ಗುಣಶೇಖರ್‌ ಮೊಬೈಲ್‌ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ಸಂಗ್ರಹ ಪ್ರಕ್ರಿಯೆಯನ್ನು ತಿಳಿಸಿಕೊಟ್ಟಿದ್ದಾರೆ. ಬೆಳೆ ವಿಧಾನ, ವಸ್ತುಸ್ಥಿತಿ ಅಧ್ಯಯನ, ದೀರ್ಘಕಾಲಿಕ ಬೆಳೆ, ಅಂತರ ಬೆಳೆ, ಮಿಶ್ರ ಬೆಳೆ ಮುಂತಾದ ಮಾಹಿತಿಯನ್ನು ಪತ್ರ್ಯೇಕವಾಗಿ ದಾಖಲು ಮಾಡುವ ಬಗೆಯನ್ನು ಪ್ರಾಯೋಗಿಕವಾಗಿ ವಿವರಿಸಿದ್ದಾರೆ. ಜಿಲ್ಲೆಯಾದ್ಯಂತ 400ಕ್ಕೂ ಹೆಚ್ಚು ಜನರು ಸಮೀಕ್ಷಾ ಕಾರ್ಯದಲ್ಲಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

‘ಆರಂಭದಲ್ಲಿ ತಾಂತ್ರಿಕವಾಗಿ ಕೆಲವೊಂದು ಸಮಸ್ಯೆಗಳಿದ್ದವು. ಆ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ. ತಾಲ್ಲೂಕಿನಲ್ಲಿ ಶನಿವಾರದಿಂದ(ಅ.14) ಸಮೀಕ್ಷಾ ಕಾರ್ಯ ಆರಂಭವಾಗಿದೆ. ಸಮೀಕ್ಷೆ ನಡೆಸುವ ಸಿಬ್ಬಂದಿಗೆ ಸೂಕ್ತ ತರಬೇತಿ ನೀಡಲಾಗಿದ್ದು ಮುಂಗಾರು ಬೆಳೆಯ ಪೂರ್ಣ ಮಾಹಿತಿ ಸಂಗ್ರಹ ಮಾಡಲಿದ್ದಾರೆ’ ಎಂದು ತಹಶೀಲ್ದಾರ್‌ ಎಲ್‌.ನಾಗೇಶ್‌ ತಿಳಿಸಿದರು.

ನ್ಯಾಯಯುತ ಪರಿಹಾರ ಉದ್ದೇಶ: ‘ಮೊದಲು ಆಯಾ ಗ್ರಾಮ ಲೆಕ್ಕಿಗರು ಬೆಳೆ ಸಮೀಕ್ಷೆಯ ವರದಿ ನೀಡುತ್ತಿದ್ದರು. ಆದರೆ ಗ್ರಾಮ ಲೆಕ್ಕಿಗರು ಜಮೀನಿಗೆ ತೆರಳದೇ ಅಂದಾಜಿನ ಮೇಲೆ ವರದಿ ನೀಡುತ್ತಿದ್ದರು. ಹೀಗಾಗಿ ಬೆಳೆ ನಷ್ಟವಾದರೆ ರೈತರಿಗೆ ನ್ಯಾಯಯುತವಾದ ಪರಿಹಾರ ಸಿಗುತ್ತಿರಲಿಲ್ಲ. ಇದನ್ನು ಮನಗಂಡ ಸರ್ಕಾರ ಮೊಬೈಲ್‌ ಆ್ಯಪ್‌ ಮೂಲಕ ಮಾಹಿತಿ ಸಂಗ್ರಹಿಸುತ್ತಿದೆ. ಇದರಿಂದ ಜಮೀನು ಹಾಗೂ ಬೆಳೆಯ ಸ್ಪಷ್ಟ ಮಾಹಿತಿ ಸಿಗಲಿದೆ. ಗ್ರಾಮ ಲೆಕ್ಕಿಗರು, ಗ್ರಾಮ ಸಹಾಯಕರ ನೆರವಿನಿಂದ ಸ್ಥಳಕ್ಕೆ ತೆರಳಿ ಮಾಹಿತಿ ಸಂಗ್ರಹಿಸುತ್ತೇವೆ’ ಎಂದು ಸಾಮಾನ್ಯ ಸೇವಾ ಕೇಂದ್ರದಿಂದ ಬೆಳೆ ಸಮೀಕ್ಷೆಗೆ ನೇಮಕಗೊಂಡಿರುವ ಕೆ.ಆರ್‌.ಕೃಷ್ಣ ಹೇಳಿದರು.

‘ವರ್ಷದಲ್ಲಿ ಮೂರು ಬಾರಿ ಬೆಳೆ ಸಮೀಕ್ಷೆ ನಡೆಸಲಾಗುತ್ತದೆ. ಮುಂಗಾರು ಬೆಳೆ, ಹಿಂಗಾರು ಬೆಳೆ ಹಾಗೂ ಬೇಸಿಗೆ ಬೆಳೆ ಕಾಲದಲ್ಲಿ ಬೆಳೆಗಳ ಮಾಹಿತಿ ಅಧ್ಯಯನ ಮಾಡಲಾಗುತ್ತದೆ. ಇದೇ ಮೊದಲ ಬಾರಿಗೆ ಮೊಬೈಲ್‌ ಆ್ಯಪ್‌ ಮೂಲಕ ಸಮೀಕ್ಷೆ ನಡೆಸುತ್ತಿರುವ ಕಾರಣ ಯಾವುದೇ ರೈತರಿಗೆ ಅನ್ಯಾಯವಾಗುವುದಿಲ್ಲ. ಅಲ್ಲದೆ ಆರ್‌.ಟಿ.ಸಿಗಳಲ್ಲಿ ತಪ್ಪುಗಳಿದ್ದರೆ ತಿದ್ದುಪಡಿ ಮಾಡಲು ಈ ಸಮೀಕ್ಷೆ ಸಹಾಯಕವಾಗಲಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ತಿಳಿಸಿದರು.

ಸಿಬ್ಬಂದಿಗೆ ₹ 5 ಗೌರವಧನ

ಮಂಡ್ಯ: ಬೆಳೆ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳಲುವ ಸಿಬ್ಬಂದಿ ಪ್ರತಿ ರೈತನ ಬೆಳೆ ಸಮೀಕ್ಷೆಗೆ ₹ 5 ಗೌರವ ಧನ ಪಡೆಯಲಿದ್ದಾರೆ. ಜಮೀನುಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಸಿಬ್ಬಂದಿ ದಿನಕ್ಕೆ ಎಷ್ಟಾದರೂ ರೈತರನ್ನು ಭೇಟಿ ಮಾಡಿ ಮಾಹಿತಿ ದಾಖಲು ಮಾಡಬಹುದು. ಇಷ್ಟೇ ರೈತರನ್ನು ಸಂಪರ್ಕ ಮಾಡಬೇಕು ಎಂಬ ನಿಯಮ ಇಲ್ಲ. ಸಿಬ್ಬಂದಿಗೆ ಇಲಾಖೆ ವತಿಯಿಂದಲೇ ಪ್ರತ್ಯೇಕ ಮೊಬೈಲ್‌ ವಿತರಣೆ ಮಾಡಲಾಗಿದೆ. ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಹೆಚ್ಚೆಚ್ಚು ರೈತರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಬಹುದು. ಸಮೀಕ್ಷೆ ಪೂರ್ಣಗೊಳಿಸಿ, ಮಾಹಿತಿಯ ಪೂರ್ಣ ವಿವರ ಸಲ್ಲಿಸಿದ ನಂತರ ಗೌರವಧನ ಅವರ ಬ್ಯಾಂಕ್‌ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ.

ಬೆಳೆ ಸಮೀಕ್ಷೆಯ ಉದ್ದೇಶಗಳು

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ನಷ್ಟದ ನೈಜ ಸ್ಥಿತಿಯ ಮಾಹಿತಿ ಸಂಗ್ರಹ

ರೈತರಿಗೆ ಸಕಾಲಿಕ ಹಾಗೂ ನ್ಯಾಯಯುತವಾದ ಪರಿಹಾರ ವಿತರಣೆ

ಪಹಣಿ ಹಾಗೂ ವಿಮಾ ದಾಖಲಾತಿ ವಿವರಗಳ ಪರಿಶೀಲನೆ

ಮಳೆಯಾಧಾರಿತ, ನೀರಾವರಿ ಕೃಷಿ ಭೂಮಿಯ ಮಾಹಿತಿ ಸಂಗ್ರಹ

ಅಂತರ ಬೆಳೆ, ಮಿಶ್ರಬೆಳೆಗಳ ಕುರಿತ ವಸ್ತುಸ್ಥಿತಿ ಸಂಗ್ರಹ

ಬೆಳೆ ಸ್ವರೂಪಕ್ಕೆ ಅನುಗುಣವಾಗಿ ಜಮೀನಿನ ಸಮೀಕರಣ

ಬೆಳೆಗಳಿಗೆ ನೀಡುವ ಸಹಾಯಧನದ ಫಲಿತಾಂಶ ಅಧ್ಯಯನ

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry