ಶುಕ್ರವಾರ, ಮಾರ್ಚ್ 5, 2021
27 °C

ಪ್ರಜಾಪ್ರಭುತ್ವ ನೆಲೆಗಟ್ಟಿನ ‘ಲಿಂಗಾಯತ ಧರ್ಮ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾಪ್ರಭುತ್ವ ನೆಲೆಗಟ್ಟಿನ ‘ಲಿಂಗಾಯತ ಧರ್ಮ’

–ನಿಜಗುಣಾನಂದ ಸ್ವಾಮೀಜಿ, ಮುಂಡರಗಿ ತೋಂಟದಾರ್ಯ ಮಠ

ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಆರಂಭವಾಗಿರುವ ಬಹುದೊಡ್ಡ ಚಳವಳಿಯು ಈ ಕಾಲದಲ್ಲಿ ಧರ್ಮ ಧರ್ಮಗಳ ನಡುವಿನ ತಿಕ್ಕಾಟವಾಗಿಯೋ, ರಾಜಕೀಯವಾಗಿಯೋ ಜನರಿಗೆ ಕಾಣುತ್ತಿದೆ. ಆದರೆ, ಬಸವಣ್ಣ ಸ್ಥಾಪಿಸಿದ ಈ ಧರ್ಮದ ಮಾನ್ಯತೆಗಾಗಿನ ಹೋರಾಟಕ್ಕೂ ಮೊದಲು, ಈ ಧರ್ಮ ಏಕೆ ಹುಟ್ಟಿತು ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ ಎನಿಸುತ್ತದೆ. ಈ ದೇಶದ ಚಾತುರ್ವರ್ಣ ವ್ಯವಸ್ಥೆಯೊಳಗೆ ಮನುಷ್ಯರನ್ನು ಪಶು–ಪಕ್ಷಿಗಳಿಗಿಂತಲೂ ಕೀಳಾಗಿ ಕಂಡ ದಿನಗಳಲ್ಲಿ ಅವರಿಗೂ ಅಸ್ಮಿತೆ, ಘನತೆ, ಆತ್ಮಗೌರವವನ್ನು ನೀಡಿದ್ದು ಲಿಂಗಾಯತ ಧರ್ಮ.

‘ಉತ್ತಮ’ ಸ್ಥಿತಿಯಲ್ಲೇ ಇದ್ದ ಬಸವಣ್ಣ, ಇದ್ದ ವ್ಯವಸ್ಥೆಯನ್ನು ವಿರೋಧಿಸಿ ಹೊಸದೊಂದು ಧರ್ಮ ಕಟ್ಟಿದರು. ಇದಕ್ಕೆ ಕಾರಣ, ಚಾತುರ್ವರ್ಣ ವ್ಯವಸ್ಥೆಯಿಂದಾಗಿ, ಈ ದೇಶ ಒಂದಲ್ಲ ಒಂದು ದಿವಸ ಮತಾಂತರಗೊಳ್ಳಬಹುದು, ಇನ್ನೊಬ್ಬರ ಕೈಗೆ ಹೋಗಿಬಿಡಬಹುದು. ಶೇ 2ರಷ್ಟು ಇರುವ ‘ಉತ್ತಮ’ರ ಆಡಳಿತ ವ್ಯವಸ್ಥೆಯಿಂದಾಗಿ ನಲುಗಿಹೋಗಬಹುದು ಎಂಬ ಆತಂಕ. ಜೊತೆಗೆ ಅವರಿಗಿದ್ದ ದೂರದೃಷ್ಟಿಯೂ ಇದಕ್ಕೆ ಕಾರಣ ಎಂಬುದು ನನ್ನ ಅಭಿಪ್ರಾಯ.

ಮನುಧರ್ಮ ಶಾಸ್ತ್ರದ ಆಧಾರದಲ್ಲಿ ಸಮಾಜ ಕಟ್ಟಬೇಕು ಎನ್ನುವ ಕಾಲದಲ್ಲಿ ಲಿಂಗಾಯತ ಎನ್ನುವ ‘ಪ್ರಜಾಧರ್ಮ’ವನ್ನು ಕಟ್ಟಿದವರು ಅವರು. ಇದು ಬಹುದೊಡ್ಡ ಪ್ರಜಾಧರ್ಮ ಎಂದೇ ನಾನು ನಂಬುತ್ತೇನೆ. ಅರಸನ ಆಳ್ವಿಕೆ ಕಾಲದಲ್ಲೇ ಪ್ರಜಾಪ್ರಭುತ್ವದ ಅನುಷ್ಠಾನದ ಪ್ರಯತ್ನವಾಗಿ ಹುಟ್ಟಿದ ಈ ಧರ್ಮದೆಡೆಗೆ ನೂರಾರು ಕಡೆಯಿಂದ ಜನರು ಬಂದರು.

ಪ್ರತಿಯೊಬ್ಬರಿಗೂ ಸಮಾನತೆ, ಸಹಬಾಳ್ವೆ ನೀಡಬೇಕು ಎನ್ನುವ ಉದ್ದೇಶ ಒಂದು ಕಡೆಯಾದರೆ, ಈ ಸೃಷ್ಟಿಯಲ್ಲಿ ದೇವರು ಕೊಟ್ಟಿರುವ ಹಕ್ಕನ್ನು ಪ್ರತಿಯೊಬ್ಬರೂ ಬಳಸಿಕೊಂಡು ಬದುಕಬಹುದು ಎನ್ನುವಂಥ ತಿಳಿವಳಿಕೆ ನೀಡಬೇಕು ಎಂಬುದು ಬಸವಣ್ಣನವರ ಚಿಂತನೆಯಾಗಿತ್ತು.

ಈ ಕಾರಣಕ್ಕಾಗಿ ಅವರು ಮನೆಯನ್ನು ತೊರೆದರು. ಆಚರಣೆಗಳನ್ನು ತೊರೆದರು. ಕೂಡಲಸಂಗಮಕ್ಕೆ ಬಂದು ತಮ್ಮದೇ ಆದ ಅಸ್ಮಿತೆಯನ್ನು ಹುಡುಕಿಕೊಂಡರು. ‘ಉತ್ತಮ’ರ ಕೈಯಲ್ಲಿನ ದೇಶ ಜನಸಾಮಾನ್ಯರ ಕೈಗೆ ಸಿಗಬೇಕಾದರೆ ಏನು ಮಾಡಬೇಕೆಂದು ವಿಚಾರ ಮಾಡಿದರು. ಜನರ ಆಡುಭಾಷೆಯಲ್ಲಿ ವಚನಗಳನ್ನು ಬರೆಯುವ ಮೂಲಕ ಹೊಸ ಹೆಜ್ಜೆ ಇಟ್ಟರು.

ಈ ದಾರಿಯಲ್ಲಿ ಬಹುದೂರ ಬಂದರು ಕೂಡ. ಅವರೊಂದಿಗೆ ಮೋಳಿಗೆ ಮಾರಯ್ಯ, ಮರುಳಶಂಕರ ದೇವ ಹೀಗೆ ನಾನಾ ಭಾಗದ ರಾಜರು, ನಾನಾ ಸಮುದಾಯದವರು ಜೊತೆಗೂಡಿ, ಒಂದೆಡೆ ಸೇರಿದರು. ಅವರೆಲ್ಲರಿಗೂ ಬಸವಣ್ಣ ಸಮಾನತೆ ತಳಹದಿಯ ಲಿಂಗಾಯತ ಧರ್ಮ ನೀಡಿದರು.

900 ವರ್ಷಗಳ ಹಿಂದೆಯೇ ಸ್ಥಾಪನೆಯಾದ ಈ ಧರ್ಮದ ಆಚರಣೆ ಚೆನ್ನಾಗಿಯೇ ಇತ್ತು. ಆದರೆ, ವರ್ಣಾಶ್ರಮ ವ್ಯವಸ್ಥೆ ವಿರುದ್ಧದ ಹೋರಾಟದ ಫಲವಾಗಿ ಹರಳಯ್ಯ–ಮಧುವರಸರ ಹತ್ಯೆಯಾಯಿತು. ವಚನಗಳನ್ನು ಸುಟ್ಟುಹಾಕಲಾಯಿತು. ಸಂಪ್ರದಾಯವಾದಿಗಳು ಶರಣರನ್ನು ಅಲ್ಲಿಂದ ಓಡಿಸಿದರು. ಈ ಸಂದರ್ಭದಲ್ಲಿ ಲಿಂಗಾಯತ ಧರ್ಮವು ಸಂಪ್ರದಾಯವಾದಿಗಳ ಕೈಗೆ ಸಿಕ್ಕಿತು. ಭಯದ ವಾತಾವರಣದಿಂದ ಶರಣರು ಅಜ್ಞಾತವಾಸಕ್ಕೆ ಸಿಲುಕಿದರು.

15ನೇ ಶತಮಾನದವರೆಗೂ ಕತ್ತಲೆಯಲ್ಲಿದ್ದ ಲಿಂಗಾಯತ ಧರ್ಮವನ್ನು ಎಡೆಯೂರು ಸಿದ್ಧಲಿಂಗೇಶ್ವರರು ಪುನರುತ್ಥಾನ ಮಾಡಿದರು. 770 ವಿರಕ್ತರನ್ನು ಕಟ್ಟಿಕೊಂಡು, ದೇಶ ಸುತ್ತಾಡಿ ಬಸವಾದಿ ಪ್ರಮಥರ ವಿಚಾರಗಳನ್ನು ಪ್ರಚುರಪಡಿಸಿದ್ದು ಫಲ ನೀಡಿತು. ಆದರೆ, 12ನೇ ಶತಮಾನದಲ್ಲಿ ಲಿಂಗಾಯತದಲ್ಲಿ ಬಂದು ಸೇರಿಕೊಂಡಿದ್ದ ವೀರಶೈವವಾದಿಗಳು ಲಿಂಗಾಯತ ಧರ್ಮವನ್ನು ಹೈಜಾಕ್‌ ಮಾಡಿದರು.

ಆ ಸಂದರ್ಭದಲ್ಲಿ ಅವರು ಶಿವಾಗಮ, ಶಾಸ್ತ್ರ, ವೇದ, ಆಗಮ ಇವೆಲ್ಲವುಗಳನ್ನು ವಚನ ಸಾಹಿತ್ಯದಲ್ಲಿ ತೂರಿಸಿ ನಿಜವಾದ ವಚನ ಸಾಹಿತ್ಯವನ್ನು ನಮಗೆ ಗೊತ್ತಿಲ್ಲದಂತೆ ಮಣ್ಣುಪಾಲು ಮಾಡಿದರು. ಆದರೆ, ಉತ್ತಂಗಿ ಚನ್ನಪ್ಪ, ಹರ್ಡೇಕರ್‌ ಮಂಜಪ್ಪ ಅಂಥವರು ಅದನ್ನು ಪರಿಷ್ಕರಿಸುತ್ತ ಬಂದು ಲಿಂಗಾಯತ ಸ್ವತಂತ್ರ ಧರ್ಮ ಎಂದು ಪ್ರತಿಪಾದಿಸುತ್ತ ಬಂದರು.

ಅಖಂಡ ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಎಲ್ಲ ಕಡೆಯಲ್ಲೂ ‘ಲಿಂಗಾಯತ’ ಶಬ್ದದ ಮೇಲೆಯೇ ನಿಂತ ಧರ್ಮ ಇದು. ಆದರೆ, ದೇಶದ ಸನಾತನವಾದಿಗಳು, ಲಿಂಗಾಯತ ಎಂಬುದೊಂದು ಧರ್ಮವಿಲ್ಲ. ಇದು ಕೂಡ ‘ಹಿಂದೂ’ ಧರ್ಮದ ಅಡಿಯಲ್ಲಿ ನಿಂತಿದೆ ಎಂದು ಹೇಳುತ್ತ ಬಂದಾಗ ಅದರ ಸ್ವರೂಪ ಹಾಳಾಗಿ ಹೋಯಿತು. ಇದಾದ ಮೇಲೆ ಲಿಂಗಾಯತರು ಗೊತ್ತಿಲ್ಲದಂತೆಯೇ ವೈದಿಕರಾದರು. ಇದರಿಂದ ಅವರನ್ನು ಹೊರಕ್ಕೆ ತರಲೂ ಆಗುತ್ತಿಲ್ಲ. ಅವರಿಗೆ ಒಳಹೋಗಲೂ ಆಗುತ್ತಿಲ್ಲ.

ಇಲ್ಲಿರುವ ಎಲ್ಲ ಕೆಳವರ್ಗದ ಜನರಿಗೆ, ಬಹುಮುಖ್ಯವಾಗಿ ತಾವು ಯಾವ ಕಡೆಗೆ ಹೋಗಬೇಕು ಎಂಬುದು ಗೊತ್ತಾಗುತ್ತಿಲ್ಲ. ಯಾವಾಗ ಅವರಿಗೆ ಇದು ಹಿಂದೂ ಧರ್ಮದ ಭಾಗ ಅಲ್ಲ, ಧಾರ್ಮಿಕ ಮೀಸಲಾತಿಯ ಧರ್ಮ, ಸಮಾನತೆ, ಆತ್ಮಗೌರವದ ಅರ್ಹತೆ ಸಿಗುವ ಧರ್ಮ ಎಂಬುದು ಅರಿವಿಗೆ ಬರುತ್ತದೆಯೋ, ಆಗ ಎಲ್ಲರೂ ಇದರಲ್ಲಿ ಬಂದು ಸೇರುತ್ತಾರೆ. ಆಗ ಇದು ರಾಷ್ಟ್ರಧರ್ಮವಾಗುತ್ತದೆ.

ಮಾನವೀಯ ಪರ ನಿಲುವಿನ, ಅಸ್ಪೃಶ್ಯತೆ ನಿವಾರಣೆಯ ಈ ಧರ್ಮಕ್ಕೆ ಜಾಗತಿಕ ಮನ್ನಣೆ ಬೇಕು ಎಂದು ಬಹಳ ವರ್ಷಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಸಣ್ಣ ತೊರೆಯಾಗಿ ಆರಂಭವಾದ ಈ ಹೋರಾಟ ಇಂದು ಪ್ರವಾಹ ರೂಪ ಪಡೆದಿದೆ. ಹೀಗಾಗಿ ರಾಜ್ಯದ ಉಸ್ತುವಾರಿ ವಹಿಸಿರುವವರನ್ನೇ ನಾವು ಈ ಬಗ್ಗೆ ಕೇಳುತ್ತಿದ್ದೇವೆ.

91 ಪಂಗಡ, ಉಪಪಂಗಡಗಳನ್ನು ಒಳಗೊಂಡಿರುವ ಈ ಧರ್ಮದ ಮಾನ್ಯತೆಗಾಗಿನ ಹೋರಾಟವು, ಸ್ಪಷ್ಟವಾಗಿ ಧಾರ್ಮಿಕ ಮೀಸಲಾತಿಯ ಹೋರಾಟ. ಇದರಿಂದ ಈಗಾಗಲೇ ಇರುವ ಮೀಸಲಾತಿ ವ್ಯವಸ್ಥೆಗೆ ಯಾವುದೇ ಧಕ್ಕೆ ಆಗುವುದಿಲ್ಲ. ಸಿಖ್‌, ಬೌದ್ಧ ಮತ್ತು ಜೈನ ಧರ್ಮಗಳನ್ನು ಅಲ್ಪಸಂಖ್ಯಾತ ಧರ್ಮಗಳೆಂದು ಪರಿಗಣಿಸಿ ವಿಶೇಷ ಸೌಲಭ್ಯಗಳನ್ನು ನೀಡಿದಂತೆ, ಲಿಂಗಾಯತರಿಗೂ ಆ ಸೌಲಭ್ಯ ಸಿಗಬೇಕು ಎಂಬುದೇ ಈ ಹೋರಾಟದ ಪ್ರಮುಖ ಬೇಡಿಕೆ. ಇದು ಯಾವುದೇ ಧರ್ಮ, ಪಕ್ಷ, ಸಂಘಟನೆ ಅಥವಾ ಉಪಜಾತಿಯ ವಿರುದ್ಧ ಅಲ್ಲವೇ ಅಲ್ಲ.

ಹಿಂದೂ ಎಂಬುದು ಪ್ರದೇಶವನ್ನು ಸೂಚಿಸುವ ಶಬ್ದ. ಹೀಗಾಗಿ ಪ್ರಾದೇಶಿಕವಾಗಿ ನಾವೆಲ್ಲ ಹಿಂದೂಗಳು. ಆದರೆ, ಅದನ್ನು ಧರ್ಮ ಎಂದು ಪರಿಗಣಿಸುವುದಕ್ಕೆ ನಮ್ಮ ವಿರೋಧವಿದೆ. ಪ್ರಾದೇಶಿಕ ಶಬ್ದವನ್ನೇ ಅವರು ಧರ್ಮ ಎಂದು ಹೇಳುತ್ತ ಬಂದಿರುವುದರಿಂದ, ನಾವೂ ಅವರಿಗೆ ‘ನಾವು ಹಿಂದೂಗಳಲ್ಲ’ ಎಂದು ಹೇಳುವ ಪರಿಸ್ಥಿತಿಗೆ ಬಂದಿದ್ದೇವೆ.

ಇದು ಒಕ್ಕೂಟ ವ್ಯವಸ್ಥೆಯ ದೇಶವಾಗಿದ್ದು ಎಲ್ಲ ಧರ್ಮದವರೂ ಇದ್ದಾರೆ. ಆದರೆ, ‘ಇಲ್ಲಿ ಇರುವವರು ಎಲ್ಲರೂ ಹಿಂದೂಗಳೇ’ ಎಂದರೆ ಅದನ್ನು ಒಪ್ಪಲಾಗದು. ನಾವೆಲ್ಲ ‘ಭಾರತೀಯರು’ ಅಷ್ಟೆ. ಆದರೆ, ಹಿಂದೂ ಧರ್ಮ ಎಂಬುದು ಸನಾತನದಿಂದ ಬಂದಿದ್ದು, ವೇದ–ಆಗಮಗಳಿಂದ ಬಂದಿದ್ದು ಎಂದು ಹೇಳಿದರೆ ಅದನ್ನು ಒಪ್ಪಲು ನಾವು ತಯಾರಿಲ್ಲ. ಅದರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ.

ಯಾರೇ ಆಗಲಿ, ಭಾವೈಕ್ಯ ಮತ್ತು ಅಭಿವೃದ್ಧಿಯ ಮೇಲೆ ರಾಷ್ಟ್ರವನ್ನು ಕಟ್ಟಬೇಕು. ನಮ್ಮ ಧರ್ಮ ಈ ತೆರನಾದುದು. ಆದರೆ, ಸನಾತನವಾದಿಗಳ ವ್ಯವಸ್ಥೆಯಲ್ಲಿ ಒಂದು ಧರ್ಮವನ್ನು ತೆಗಳಿ, ಮತ್ತೊಂದು ಧರ್ಮವನ್ನು ಕಟ್ಟುವ ರೀತಿಯಲ್ಲಿ ಯುವಕರನ್ನು ತಯಾರು ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಈ ದೇಶದಲ್ಲಿ ಮುಸ್ಲಿಮರು, ಕ್ರೈಸ್ತರು, ಜೈನರು... ಹೀಗೆ ಬೇರೆಬೇರೆ ಧರ್ಮದವರು ಇದ್ದಾರೆ. ಭಾರತೀಯರಾಗಿ ಅವರೂ ಉಳಿಯಬೇಕು. ನಾವೂ ಉಳಿಯಬೇಕು. ನಮ್ಮ ಧರ್ಮಗಳ ಆಚರಣೆ ನಮ್ಮ ಮನೆಯಲ್ಲಿರಬೇಕು. ‘ಭಾರತ ಒಂದೇ’ ಎಂಬ ಭಾವದಲ್ಲಿ ಧಾರ್ಮಿಕ ಮುಖಂಡರ ಮನಸ್ಸು ಬದಲಾಗಬೇಕು. ಆವಾಗ ಮಾತ್ರ ಸಂಘಟನೆಗಳಿಗೆ ಬೆಲೆ ಬರುತ್ತದೆ.

ಪ್ರಜೆಗಳ ಕೂಗನ್ನು ಆಲಿಸುವುದು ಪ್ರಜಾಪ್ರಭುತ್ವದ ಧರ್ಮ. ಹೀಗಾಗಿ ನಮ್ಮ ಬೇಡಿಕೆ ಈಡೇರುತ್ತದೆ ಎಂಬ ವಿಶ್ವಾಸ ಇದೆ. ಈಡೇರದೇ ಹೋದರೂ ಈ ಹೋರಾಟ ನಿಲ್ಲದು. ಕಾನೂನಾತ್ಮಕವಾಗಿ ಹೋರಾಟ ನಡೆಸುವ ಬಗ್ಗೆಯೂ ನಮ್ಮ ಸಮಾಜ ನಿರ್ಧರಿಸುತ್ತದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.