ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಿ ಉದ್ಯಮಕ್ಕೆ ಕುತ್ತು ತಂದ ‘ಅನ್ನಭಾಗ್ಯ’?

Last Updated 6 ನವೆಂಬರ್ 2017, 19:26 IST
ಅಕ್ಷರ ಗಾತ್ರ

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಅಕ್ಕಿ ಗಿರಣಿಗಳು ಕೆಲಸವಿಲ್ಲದೇ ತೀವ್ರ ನಷ್ಟ ಅನುಭವಿಸುತ್ತಿವೆ. ನಾಲ್ಕೈದು ವರ್ಷಗಳಲ್ಲಿ ಜಿಲ್ಲೆಯಲ್ಲಿ 60ಕ್ಕೂ ಅಧಿಕ ಗಿರಣಿಗಳು ಶಾಶ್ವತವಾಗಿ ಬಾಗಿಲು ಮುಚ್ಚಿವೆ, ಕೆಲವು ಉಗ್ರಾಣಗಳಾಗಿ ಪರಿವರ್ತನೆ ಹೊಂದಿವೆ.

‘ಜಿಲ್ಲೆಯಲ್ಲಿ ಒಟ್ಟು 158 ಅಕ್ಕಿ ಮಿಲ್‌ಗಳು ಇದ್ದವು. ಅವುಗಳಲ್ಲಿ ಶೇ 20ರಷ್ಟು ಮಿಲ್‌ಗಳು ಮಾತ್ರ ವರ್ಷವಿಡೀ ಕಾರ್ಯನಿರ್ವಹಿಸುತ್ತವೆ. 60 ಮಿಲ್‌ಗಳು ಬಂದ್‌ ಆಗಿವೆ. ಇನ್ನುಳಿದವು ಭತ್ತದ ಕೊಯ್ಲಿನ ಹಂಗಾಮಿನ ನಾಲ್ಕು ತಿಂಗಳು ಮಾತ್ರ ಬಾಗಿಲು ತೆರೆಯುತ್ತವೆ. ಸರ್ಕಾರ ಜನರಿಗೆ ಉಚಿತವಾಗಿ ಅಕ್ಕಿ ಪೂರೈಕೆ ಮಾಡುವಾಗ ಉತ್ಪಾದನೆ, ಖರೀದಿಯಲ್ಲಿ ಇಳಿಮುಖವಾಗುವುದು ಸಹಜವಲ್ಲವೇ’ ಎಂದು ಪ್ರಶ್ನಿಸುತ್ತಾರೆ ಉತ್ತರ ಕನ್ನಡ ಜಿಲ್ಲಾ ಅಕ್ಕಿ ಗಿರಣಿ ಮಾಲೀಕರ ಸಂಘದ ಅಧ್ಯಕ್ಷ ಗಜಾನನ ಪಾಲೇಕರ್.

‘ಬಿಪಿಎಲ್ ಪಡಿತರ ಚೀಟಿ ಹೊಂದಿದ ಕುಟುಂಬಕ್ಕೆ ಒಬ್ಬರಿಗೆ 7 ಕೆ.ಜಿ ಅಕ್ಕಿ ಕೊಡುತ್ತಾರೆ. ಕುಟುಂಬಕ್ಕೆ ನೀಡುವ ಅಕ್ಕಿ ತಿಂಗಳ ಖರ್ಚಿಗೆ ಆಗಿ ಮಿಕ್ಕಿ ಉಳಿಯುವುದರಿಂದ ಅನೇಕ ಮಂದಿ ಅಕ್ಕಿಯ ಬದಲಾಗಿ ಗೋವಿನ ಜೋಳ, ಶುಂಠಿ ಬೆಳೆಯುತ್ತಾರೆ. ಕೆಲವೆಡೆ ಭತ್ತದ ಗದ್ದೆಗಳು ಅಡಿಕೆ ತೋಟಗಳಾಗಿ ಮಾರ್ಪಟ್ಟಿವೆ. ಅನ್ನಭಾಗ್ಯ ಬಡವರಿಗೆ ಅನುಕೂಲವಾಗಿರಬಹುದು, ಆದರೆ, ಅಕ್ಕಿ ಉದ್ಯಮಕ್ಕೆ ನಷ್ಟ ಉಂಟು ಮಾಡಿದೆ. ಇದರ ಜೊತೆಗೆ ಪಾಲಿಷರ್ ಬದಲಾವಣೆ, ಗ್ರೇಡಿಂಗ್‌ ಯಂತ್ರದಂತಹ ಆಧುನಿಕ ತಂತ್ರಜ್ಞಾನಗಳ ಕೊರತೆ ಗಿರಣಿ ಉದ್ಯಮದ ನಷ್ಟವನ್ನು ಇಮ್ಮಡಿಸಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಕೃಷಿ ಇಲಾಖೆಯ ದಾಖಲೆ ಪ್ರಕಾರ ಜಿಲ್ಲೆಯ 11 ತಾಲ್ಲೂಕುಗಳಿಂದ ಒಟ್ಟು 67,400 ಹೆಕ್ಟೇರ್‌ಗಳಲ್ಲಿ ಭತ್ತ ಬೆಳೆಯಲಾಗುತ್ತಿದೆ. ಹವಾಮಾನ ಬದಲಾವಣೆ, ಮಳೆಯ ಕೊರತೆಯ ಕಾರಣಕ್ಕೆ ಕೆಲವು ರೈತರು ಭತ್ತ ಬಿಟ್ಟು, ಉಳಿದ ಬೆಳೆಗಳೆಡೆಗೆ ವಾಲಿರುವ ಪರಿಣಾಮ 2ರಿಂದ 3 ಸಾವಿರ ಹೆಕ್ಟೇರ್ ಭತ್ತ ಬೆಳೆಯ ಕ್ಷೇತ್ರ ಕಡಿಮೆಯಾಗಿದೆ.

‘ದಶಕದ ಹಿಂದೆ ಪ್ರತಿದಿನ 50–60 ಚೀಲ ಭತ್ತದ ಮಿಲ್ಲಿಂಗ್ ಮಾಡುತ್ತಿದ್ದೆವು. ಭತ್ತ ತರುವವರಲ್ಲಿ ವ್ಯಾಪಾರಸ್ಥರಿಗಿಂತ ಬೆಳೆಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು. ಈಗ ದಿನಕ್ಕೆ ಸರಾಸರಿ 15 ಚೀಲ ಭತ್ತ ಮಿಲ್ಲಿಂಗ್‌ಗೆ ಬರುತ್ತದೆ. ಅಕ್ಕಿ ಮಾಡಿಸಲು ಬರುವವರಲ್ಲಿ
ರೇಷನ್ ಅಕ್ಕಿ ಪಡೆಯುವ ಸಣ್ಣ ಹಿಡುವಳಿದಾರರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಮೊದಲು ಭತ್ತ ಬೆಳೆಯುತ್ತಿದ್ದ ಸಣ್ಣ ರೈತರು ಈಗ ಅದೇ ಜಮೀನಿನಲ್ಲಿ ಶುಂಠಿ, ಬಾಳೆ ಬೆಳೆಯುತ್ತಾರೆ’ ಎಂದು ಅಕ್ಕಿ ಗಿರಣಿ ಮಾಲೀಕರ ಸಂಘದ ಶಿರಸಿ ತಾಲ್ಲೂಕು ಘಟಕದ ಅಧ್ಯಕ್ಷ ಜಯರಾಮ ನಾಯಕ ಹೇಳಿದರು.

‘ತಾಲ್ಲೂಕಿನಲ್ಲಿ ಅವಲಕ್ಕಿ ತಯಾರಿಸುವ ಯಂತ್ರಗಳು ಸ್ಥಗಿತಗೊಂಡು ವರ್ಷಗಳೇ ಕಳೆದಿವೆ. ಉತ್ಪಾದನಾ ವೆಚ್ಚ ಹೆಚ್ಚಳ, ಕೂಲಿಕಾರರ ಕೊರತೆ, ಮಾರುಕಟ್ಟೆಯಲ್ಲಿ ಕುಸಿತವಾಗಿರುವ ಬೆಲೆ ಸಹ ರೈತರು ಭತ್ತ ಬಿಟ್ಟು ಇತರ ಬೆಳೆಗಳೆಡೆಗೆ ಆಕರ್ಷಿತರಾಗಲು ಕಾರಣವಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT