ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದ್ದಲದಲ್ಲಿ ಕರಗಿ ಹೋದ ವಿಧಾನಸಭೆ ಕಲಾಪ

ಸಭಾಧ್ಯಕ್ಷರ ಪೀಠದ ಮುಂದೆ ಬಿಜೆಪಿ ಸದಸ್ಯರ ಧರಣಿ
Last Updated 14 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ವಿಧಾನಸಭೆಯಲ್ಲೂ ಬಿಜೆಪಿ ಹೋರಾಟ ಆರಂಭಿಸಿದ್ದರಿಂದಾಗಿ ಮಂಗಳವಾರ ಅರ್ಧ ದಿನ ಮಾತ್ರ ಕಲಾಪ ನಡೆಸಲು ಸಾಧ್ಯವಾಯಿತು.

ವಿಧಾನಪರಿಷತ್ತಿನಲ್ಲಿ ಮೊದಲ ದಿನ (ಸೋಮವಾರ) ಬಿಜೆಪಿ ಧರಣಿ ನಡೆಸಿದ್ದರಿಂದ ಇಡೀ ದಿನದ ಕಲಾಪ ಬಲಿಯಾಗಿತ್ತು.

ಕಲಾಪ ಆರಂಭವಾಗುತ್ತಿದ್ದಂತೆ ನಿಲುವಳಿ ಸೂಚನೆ ಮಂಡಿಸಲು ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್ ಮುಂದಾದರು. ಇದಕ್ಕೆ ಅನೇಕ ಸಚಿವರು, ಕಾಂಗ್ರೆಸ್ ಸದಸ್ಯರು ಪ್ರತಿರೋಧ ಒಡ್ಡಿದರು. ಪ್ರಶ್ನೋತ್ತರ ಅವಧಿ ಮುಗಿದ ಬಳಿಕ ಪ್ರಸ್ತಾವ ಮಂಡಿಸಿ ಎಂದು ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಸೂಚಿಸಿದರು.

ಪ್ರಶ್ನೋತ್ತರ ಅವಧಿ ಮುಗಿದ ಬಳಿಕ, ಕಾಂಗ್ರೆಸ್  ಸದಸ್ಯರ ವಿರೋಧದ ಮಧ್ಯೆಯೇ ಶೆಟ್ಟರ್ ಪ್ರಸ್ತಾವ ಮಂಡಿಸಿದರು. ಕ್ರಿಯಾಲೋಪ ಎತ್ತಿದ ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ನಿಯಮಾವಳಿಗಳ ಪ್ರಕಾರ ಅವಕಾಶ ಇಲ್ಲ ಎಂದು ಪ್ರತಿಪಾದಿಸಿದರು. ಉಭಯ ಪಕ್ಷಗಳ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ಬಿಜೆಪಿ ಸದಸ್ಯರು ಸಭಾಧ್ಯಕ್ಷರ ಪೀಠದ ಮುಂದೆ ಧರಣಿಗೆ ಇಳಿದರು.

ಗದ್ದಲದ ನಡುವೆ, ರೂಲಿಂಗ್ ನೀಡಿದ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ, ‘ಈ ಪ್ರಕರಣದ ತನಿಖೆ ನಡೆಯುತ್ತಿದೆ. ನಿಲುವಳಿ ಸೂಚನೆ ಮಂಡಿಸುವ ತುರ್ತು ಕಾಣುತ್ತಿಲ್ಲ. ವಿಧಾನಪರಿಷತ್ತಿನಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡಿಲ್ಲ. ಹೀಗಾಗಿ ಕ್ರಿಯಾಲೋಪ ಎತ್ತಿ ಹಿಡಿದು, ನಿಲುವಳಿ ಸೂಚನೆ ಬೇಡಿಕೆ ತಿರಸ್ಕರಿಸುತ್ತೇನೆ’ ಎಂದು ಹೇಳಿದರು.

ಮಧ್ಯಾಹ್ನ 12ಗಂಟೆ ಹೊತ್ತಿಗೆ ಕಲಾಪ ಮುಂದೂಡಿದ ಸಭಾಧ್ಯಕ್ಷ, ಮತ್ತೆ 3 ಗಂಟೆಗೆ ಸೇರುವುದಾಗಿ ಪ್ರಕಟಿಸಿದರು.

3.30ಕ್ಕೆ ಕಲಾಪ ಆರಂಭವಾದಾಗ, ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ ಮುಂದುವರಿಸಿತು. ಗದ್ದಲದ ಮಧ್ಯೆಯೇ ನಾಲ್ಕು ಮಸೂದೆಗಳನ್ನು ಮಂಡಿಸಲು ಅವಕಾಶ ನೀಡಿದ ಕೋಳಿವಾಡ, ಕಲಾಪವನ್ನು ಬುಧವಾರಕ್ಕೆ ಮುಂದೂಡಿದರು.

ಕ್ಲೀನ್‌ಚಿಟ್‌ ಭಾಗ್ಯ: ನಿಲುವಳಿ ಸೂಚನೆಗೆ ಸಭಾಧ್ಯಕ್ಷರು ನಿರಾಕರಿಸಿದ್ದನ್ನು ವಿರೋಧಿಸಿ ಧರಣಿ ನಡೆಸಿದ ಬಿಜೆಪಿ ಸದಸ್ಯರು, ರೇಪ್‌, ಕೊಲೆ ಮಾಡಿದವರಿಗೆ ಕ್ಲೀನ್‌ಚಿಟ್‌ ಭಾಗ್ಯ ನೀಡುವ ಸರ್ಕಾರ ಇದು ಎಂದು ಟೀಕಾಪ್ರಹಾರ ನಡೆಸಿದರು.

‘ರೇಪ್‌ ಮಾಡಿದವರಿಗೆ, ಲೂಟಿ ಹೊಡೆದವರಿಗೆ, ಕೊಲೆ ಮಾಡಿದವರಿಗೆ ಕ್ಲೀನ್‌ಚಿಟ್‌ ಭಾಗ್ಯ ಎಂಬ ಘೋಷಣೆಗಳನ್ನು ಬಿಜೆಪಿ ಸದಸ್ಯರು ಕೂಗಿದರು. ‘ಇದೆಲ್ಲ ನಿಮಗೆ ಅನ್ವಯಿಸುತ್ತದೆ’ ಎಂದು ಕಾಂಗ್ರೆಸ್‌ ಶಾಸಕರು ತಿರುಗೇಟು ಕೊಟ್ಟರು.

ಜಾರ್ಜ್ ಬೆಂಬಲಕ್ಕೆ ಸಚಿವರು: ‘ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮುನ್ನವೇ ಸಿಐಡಿ ಬಿ ರಿಪೋರ್ಟ್ ಸಲ್ಲಿಸಿದೆ. ಆತ್ಮಹತ್ಯೆ ಮಾಡಿಕೊಳ್ಳಲು ಅಂದು ಗೃಹ ಸಚಿವರಾಗಿದ್ದ ಜಾರ್ಜ್ ಕಾರಣ ಎಂದು ಸಾವಿಗೆ ಮುನ್ನ ಗಣಪತಿ ಹೇಳಿಕೆ ನೀಡಿದ್ದರು. ಈಗ ಸಿಬಿಐ ಎಫ್ಐಆರ್ ದಾಖಲಿಸಿದ್ದರಿಂದ ಸಚಿವರಾಗಿ ಮುಂದುವರಿಯುವುದು ಸರಿಯಲ್ಲ. ಈ ಬಗ್ಗೆ ಚರ್ಚೆಗೆ ಅವಕಾಶ ಕೊಡಬೇಕು’ ಎಂದು ಶೆಟ್ಟರ್ ಆಗ್ರಹಿಸಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಜಯಚಂದ್ರ, ‘ಅತ್ಯಂತ ಜರೂರು ಇರುವ ಸಾರ್ವಜನಿಕ ಮಹತ್ವದ ವಿಷಯ ಇದಲ್ಲ. ಇಂತಹ ವಿಷಯದಲ್ಲಿ ನಿಲುವಳಿ ಸೂಚನೆಗೆ ಅವಕಾಶ ನೀಡುವುದು ಬೇಡ’ ಎಂದು ಪ‍್ರತಿಪಾದಿಸಿದರು.

‘ಅಧಿಕಾರಿ  ಕೊಲೆ ಪ್ರಕರಣದಲ್ಲಿ ಸಾರ್ವಜನಿಕ ಮಹತ್ವ ಇಲ್ಲವೇ. ಸಾರ್ವಜನಿಕ ಮಹತ್ವ ಇಲ್ಲ ಎಂದು ಅವಕಾಶ ನಿರಾಕರಿಸುವುದಾದರೆ, ಇದರಲ್ಲಿ ವೈಯಕ್ತಿಕ ಹಿತ ಕಾಯುವ ಮಹತ್ವ ಇದೆಯೇ’ ಎಂದು ಬಿಜೆಪಿಯ ಸುರೇಶ್ ಕುಮಾರ್ ಕುಟುಕಿದರು.

ಉಭಯ ಪಕ್ಷಗಳ ಮಧ್ಯೆ ಪರಸ್ಪರ ಆರೋಪ, ಪ್ರತ್ಯಾರೋಪ ನಡೆಯಿತು. ಸಚಿವರಾದ ಆರ್.ವಿ. ದೇಶಪಾಂಡೆ, ಆರ್. ರೋಷನ್ ಬೇಗ್‌, ಶರಣ ಪ್ರಕಾಶ ಪಾಟೀಲ, ರಮಾನಾಥ ರೈ, ಯು.ಟಿ. ಖಾದರ್ ಹಾಗೂ ಎಲ್ಲ ಶಾಸಕರು ಜಾರ್ಜ್ ಬೆಂಬಲಕ್ಕೆ ನಿಂತರು.

* ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸದ  ಸಿಬಿಐ ಕೈತೊಳೆದು ಕೊಂಡಿದೆ. ಸಿಬಿಐಗೆ ಕೊಟ್ಟಿದ್ದಕ್ಕೆ ಏನಾಯ್ತು?

- ಟಿ.ಬಿ. ಜಯಚಂದ್ರ, ಕಾನೂನು ಮತ್ತು ಸಂಸದೀಯ ಸಚಿವ

* ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸತ್ಯ ಹೊರಬೇಕು ಎಂಬ ಕಳಕಳಿ ಇದ್ದರೆ ಜಾರ್ಜ್ ರಾಜೀನಾಮೆ ಪಡೆಯಿರಿ.
 - ಜಗದೀಶ ಶೆಟ್ಟರ್, ವಿರೋಧ ಪಕ್ಷದ ನಾಯಕ

* ರಾಜಕೀಯ ಕಾರಣಕ್ಕೆ ಬಿಜೆಪಿ ಇದನ್ನು ವಿವಾದ ಮಾಡುತ್ತಿದೆ. ನಿಲುವಳಿ ಸೂಚನೆ ಬೇಡಿಕೆಗೆ ಅವಕಾಶ ನೀಡಬೇಡಿ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT