ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರಾರು ಅಂಗವಿಕಲರಿಗೆ ‘ಆಸರೆ’ಯಾದ ವೃದ್ಧೆ

ನೆರವು ಪಡೆದವರು ನ್ಯಾಯಾಧೀಶರು, ವಕೀಲರು, ಎಂಜಿನಿಯರ್‌ಗಳೂ ಆಗಿದ್ದಾರೆ
Last Updated 2 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ: ತನ್ನಂತೆಯೇ ಅಂಗವೈಕಲ್ಯದ ನೋವು ಅನುಭವಿಸುತ್ತಿರುವವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮಹತ್ವದ ಕಾರ್ಯವನ್ನು ವೃದ್ಧ ಮಹಿಳೆಯೊಬ್ಬರು ಇಲ್ಲಿ ಮಾಡುತ್ತಿದ್ದಾರೆ.

ಅವರ ಹೆಸರು ಶಕುಂತಲಾ ಸದಾಶಿವ ಪರಾಂಜಪೆ. ಪೋಲಿಯೊಗೆ ತುತ್ತಾಗಿರುವ 83 ವರ್ಷದ ಈ ಹಿರಿಯ ಜೀವ, ನೂರಾರು ಮಂದಿಗೆ ಆಸರೆಯಾಗಿ ನಿಂತಿದೆ. ಇಲ್ಲಿನ ಶಹಾಪುರದ ಅಳವನಗಲ್ಲಿಯಲ್ಲಿ ‘ಅಂಗವಿಕಲರಿಗಾಗಿ ಸಂಸ್ಥೆ’ ನಡೆಸುತ್ತಿದ್ದಾರೆ. ಅವರಿಗಾಗಿ ಹಾಸ್ಟೆಲ್‌, ಶಾಲೆ, ಆರ್ಥೊಪೆಡಿಕ್‌ ಘಟಕ ಸ್ಥಾಪಿಸಿದ್ದಾರೆ. ನಾನಾವಾಡಿಯಲ್ಲಿ ವೃದ್ಧಾಶ್ರಮವನ್ನೂ ಸ್ಥಾಪಿಸಿದ್ದಾರೆ. ಇಲ್ಲಿನ ಕೆಲಸಗಳಿಗೆ ಅಂಗವಿಕಲರನ್ನೇ ನೇಮಿಸಿಕೊಂಡು, ಅವರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿದ್ದಾರೆ.

ಕೆಇಬಿಯಲ್ಲಿ ಸಹಾಯಕ ಕ್ಲರ್ಕ್‌ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಅವರು 45 ವರ್ಷಗಳಿಂದಲೂ ಅಂಗವಿಕಲರ ಶ್ರೇಯೋಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಸ್ಥೆಗೆ ಯಾವುದೇ ಹೆಸರಿಲ್ಲ. ಬದಲಿಗೆ, ‘ಅಂಗವಿಕಲರಿಗಾಗಿ ಸಂಸ್ಥೆ’ ಎಂದು ನಾಮಕರಣ ಮಾಡಿದ್ದು, 3 ಸಾವಿರಕ್ಕೂ ಹೆಚ್ಚು ಮಂದಿಗೆ ಬ್ಯಾಗ್‌, ಮೊಂಬತ್ತಿ, ಪೇಪರ್‌ ಪ್ಲೇಟ್‌ ತಯಾರಿಸುವುದು, ವ್ಹೀಲ್‌ಚೇರ್‌ ಹಾಗೂ ತ್ರಿಚಕ್ರ ವಾಹನ ದುರಸ್ತಿ ತರಬೇತಿ ನೀಡಲಾಗಿದೆ. ಅಗತ್ಯ ಇರುವವರಿಗೆ ವ್ಹೀಲ್‌ಚೇರ್‌ ಹಾಗೂ ತ್ರಿಚಕ್ರ ವಾಹನ ನೀಡಲಾಗಿದೆ. ತರಬೇತಿ ಪಡೆದವರಿಗೆ ಇತರೆಡೆ ಕೆಲಸ ಕೊಡಿಸುವ ಕಾರ್ಯವನ್ನೂ ಇಲ್ಲಿನವರು ಮಾಡಿದ್ದಾರೆ.

ಉದ್ಯೋಗ ತರಬೇತಿ:

ನಗರ ಹಾಗೂ ಗ್ರಾಮೀಣ ಪ್ರದೇಶದವರು ಇಲ್ಲಿ ತರಬೇತಿ ಪಡೆಯುತ್ತಾರೆ. ಅನಾಥರಿಗೆ ಹಾಸ್ಟೆಲ್‌ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ. ತರಬೇತಿ ನೀಡಿ, ಉದ್ಯೋಗ ಕಂಡುಕೊಳ್ಳಲು ಸಹಾಯ ಮಾಡಲಾಗುತ್ತದೆ. ಹಾಸ್ಟೆಲ್‌ನಲ್ಲಿ ಈಗ 8 ಮಂದಿ ಅಂಗವಿಕಲರು ನೆಲೆ ಕಂಡುಕೊಂಡಿದ್ದಾರೆ.

ಓದಿನಲ್ಲಿ ಮುಂದೆ ಇದ್ದ ಹಾಗೂ ಆರ್ಥಿಕವಾಗಿ ಹಿಂದುಳಿದ 6 ಮಂದಿ ಅಂಗವಿಕಲರನ್ನು ದತ್ತು ಸ್ವೀಕರಿಸಿ, ಉನ್ನತ ಶಿಕ್ಷಣ ಕೊಡಿಸಿದ್ದಾರೆ. ಅವರಲ್ಲಿ ಮೂವರು ವಕೀಲರಾಗಿದ್ದಾರೆ. ಒಬ್ಬರು ನ್ಯಾಯಾಧೀಶರಾಗಿದ್ದಾರೆ. ಮತ್ತೊಬ್ಬರು ಸಹಾಯಕ ಎಂಜಿನಿಯರ್‌ ಆಗಿದ್ದಾರೆ. ಇನ್ನೊಬ್ಬರು ಉನ್ನತ ಅಧಿಕಾರಿಯಾಗಿದ್ದಾರೆ.

‘ಅಂಗವಿಕಲರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಅವರಿಗೆ 2010ರಲ್ಲಿ ರಾಷ್ಟ್ರಪತಿ ಪುರಸ್ಕಾರ, ರಾನಡೆ ಸಾಹಸಿ ಮಹಿಳಾ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ– ಪುರಸ್ಕಾರ ದೊರೆತಿವೆ. ಪ್ರಸ್ತುತ 73 ಮಂದಿ ತರಬೇತಿ ಪಡೆಯುತ್ತಿದ್ದಾರೆ. ತರಬೇತಿ ಪೂರ್ಣಗೊಳಿಸಿದವರಿಗೆ ಉದ್ಯೋಗ ಕೊಡಿಸಲಾಗುತ್ತಿದೆ. ಎಲ್ಲ ರೀತಿಯ ಅಂಗವಿಕಲರು, ಬುದ್ಧಿಮಾಂದ್ಯರು ಕೂಡ ಪ್ರಯೋಜನ ಪಡೆಯುತ್ತಿದ್ದಾರೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಗಿರೀಶ್‌ ಸವ್ವಾಸೇರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬದುಕು ನೀಡಿದವರು:

‘ಅಂಗವಿಕಲನೆಂದು ನಮ್ಮ ಮನೆಯವರು ಕಡೆಗಣಿಸಿದ್ದರು. ಕೊಠಡಿಯಲ್ಲಿ ಇರಿಸಿದ್ದರು. ಅಂಗವಿಕಲರ ಮದುವೆಯೊಂದಕ್ಕೆ ಬಂದಿದ್ದ ಮೇಡಂ ನನ್ನ ವಿಷಯ ತಿಳಿದು, ಕರೆದುಕೊಂಡು ಬಂದರು. ಏಳು ವರ್ಷದವನಾಗಿದ್ದಾಗಿನಿಂದಲೂ ಸಂಸ್ಥೆಯಲ್ಲಿ ತರಬೇತಿ ಕೊಡಿಸಿದರು. ನಂತರ ಬೇರೆಡೆ ಕೆಲಸ ಮಾಡುತ್ತಿದ್ದೆ. ಬಳಿಕ ಅನಿಲ ಸಿಲಿಂಡರ್‌ ಏಜೆನ್ಸಿಯಲ್ಲಿ ಕೆಲಸ ಕೊಟ್ಟರು. ಆರು ವರ್ಷಗಳಿಂದ ಇಲ್ಲಿ ಕಾರ್ಯದರ್ಶಿಯಾಗಿದ್ದೇನೆ. ಬಹಳಷ್ಟು ಮಂದಿಗೆ ರಿಕ್ಷಾ ಕಳುಹಿಸಿ ತರಬೇತಿ ಕೊಡಿಸುತ್ತಾರೆ. ನನ್ನಂತಹ ನೂರಾರು ಮಂದಿಗೆ ಬದುಕು ಕಲ್ಪಿಸಿದ್ದಾರೆ. ಅವರ ಋಣ ತೀರಿಸಲಾಗದು’ ಎನ್ನುತ್ತಾರೆ ಗಿರೀಶ್‌.

‘ಅಂಗವೈಕಲ್ಯ ಶಾಪವೆಂದು ಭಾವಿಸಿ ಮುಖ್ಯವಾಹಿನಿಯಿಂದ ದೂರವಿರುವವರೇ ಹೆಚ್ಚು. ಅಂಥವರನ್ನು ಹುಡುಕಿ ತರಬೇತಿ ಕೊಡಿಸುತ್ತಿದ್ದೇನೆ. ಈಚೆಗೆ ಪೋಲಿಯೊ ಪೀಡಿತರು ಕಡಿಮೆಯಾಗಿದ್ದಾರೆ. ಹೀಗಾಗಿ, ವಿಶೇಷ ಮಕ್ಕಳು, ವ್ಯಕ್ತಿಗಳ ಮೇಲೆ ಹೆಚ್ಚಿನ ಒತ್ತು ಕೊಡಲು ಉದ್ದೇಶಿಸಿದ್ದೇನೆ’ ಎಂದು ಶಕುಂತಲಾ ಹೇಳುತ್ತಾರೆ.

***

ಅಂಗವಿಕಲರೆಲ್ಲರೂ ನನ್ನವರೆಂದು ಭಾವಿಸಿ ಅವರಿಗೆ ಸಹಾಯ ಮಾಡುತ್ತಿದ್ದೇನೆ.
– ಶಕುಂತಲಾ ಪರಾಂಜಪೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT