ಶುಕ್ರವಾರ, ಫೆಬ್ರವರಿ 26, 2021
28 °C

ಕ್ಯಾಮೆರಾ ಕಣ್ಣು ಕಂಡ ಬಣ್ಣದ ಬದುಕು

ಹರವು ಸ್ಫೂರ್ತಿ Updated:

ಅಕ್ಷರ ಗಾತ್ರ : | |

ಕ್ಯಾಮೆರಾ ಕಣ್ಣು ಕಂಡ ಬಣ್ಣದ ಬದುಕು

ನಾನು ಹುಟ್ಟಿದ್ದು ಮಲ್ಲೇಶ್ವರ. ಅಲ್ಲಿನ ಇಂಡಿಯನ್ ಪ್ರಿಪರೇಟರಿ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದೆ. ಶಾಲೆಯಲ್ಲಿ ಜಗ್ಗೇಶ್‌, ರಾಕ್‌ಲೈನ್‌ ವೆಂಕಟೇಶ್‌ ಮತ್ತು ನಾನು ಒಂದೇ ಸಾಲಿನಲ್ಲಿ ಕೂರುತ್ತಿದ್ದೆವು. ನಾವೆಲ್ಲಾ ಒಟ್ಟಿಗೆ ಜಗಳ ಆಡಿಕೊಂಡು ಬೆಳೆದವರು, ಮಹಾ ತುಂಟರ ಸಂಘ ನಮ್ಮದು. ಆ ದಿನಗಳಲ್ಲಿ ನಮಗೆ, ಸಿನಿಮಾ ಕ್ಷೇತ್ರಕ್ಕೆ ಬರುತ್ತೀವಿ ಎನ್ನುವ ಯಾವ ಕಲ್ಪನೆಯೂ ಇರಲಿಲ್ಲ.

ಇಂದು ನಟ, ನಿರ್ಮಾಪಕ, ಛಾಯಾಗ್ರಾಹಕರಾಗಿದ್ದೇವೆ. ರಾಕ್‌ಲೈನ್‌ ಬಾಲ್ಯದಲ್ಲಿ ಒರಟ, ರೌಡಿ ಥರ ಇದ್ದ. ಜಗ್ಗೇಶ್‌ ತುಂಟ. ನಾನು ತುಂಬಾ ಮೃದು. ಮುಂದೆ ನಾನು ಮೈಸೂರಿಗೆ ಹೋಗಿ ಸೇಂಟ್‌ ಫಿಲೋಮಿನಾದಲ್ಲಿ ಪ್ರೌಢಶಾಲೆ ಮುಗಿಸಿದೆ.

ಕಾಲೇಜು ಮೆಟ್ಟಿಲು ಹತ್ತುವ ವಯಸ್ಸಾಗುತ್ತಿದ್ದಂತೆ ನನಗೂ ಸಿನಿಮಾದಲ್ಲಿ ಅಭಿನಯಿಸುವ ಹಂಬಲ ಹೆಚ್ಚಾಯಿತು. ಇದಕ್ಕೆ ಕಾರಣ ಡಾ. ರಾಜಕುಮಾರ್ ಅವರ ಸಿನಿಮಾಗಳನ್ನೇ ನೋಡಿ ಬೆಳೆದಿದ್ದು. ಅವರ ಸಿನಿಮಾಗಳನ್ನು ನೋಡಿದಾಗಲೆಲ್ಲಾ, ಎಷ್ಟು ಸಿನಿಮಾ ನೋಡಿದೆ ಎಂದು ಲೆಕ್ಕ ಬರೆದಿಡುತ್ತಿದ್ದೆ. ಅವರನ್ನು ನೋಡುತ್ತಾ ಅಭಿನಯದ ಗುಂಗು ಹತ್ತಿಸಿಕೊಂಡೆ.

ಆಗ ಸಿನಿಮಾಗಳಲ್ಲಿ ಅಭಿನಯಿಸಲು ಅವಕಾಶಗಳು ಅಷ್ಟು ಸುಲಭವಾಗಿ ಸಿಗುತ್ತಿರಲಿಲ್ಲ. ಸಿನಿಮಾದ ಅನೇಕರನ್ನು ಸಂಪರ್ಕಿಸಿದ್ದೆ ಕೂಡ. ನಿನ್ನನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ನಮಗೇನು ಲಾಭ ಎನ್ನಲು ಶುರು ಮಾಡಿದರು. ಇನ್ನು ಕೆಲವರು, ರೀಲ್‌ಗೆ ಆಗುವ ಹಣವನ್ನಾದರೂ ಕೊಡಬೇಕಾಗುತ್ತದೆ ಎಂದರು.

ಹೀರೊ ಮಾಡ್ತಿನಿ ಒಂದು ಲಕ್ಷ ಕೊಡು; ಐವತ್ತು ಸಾವಿರ ಕೊಡು ಎಂದು ನೇರವಾಗೇ ಕೇಳುತ್ತಿದ್ದರು. ನನಗೆ, ಏನಪ್ಪ ಇದು? ಎಲ್ಲಾ ಕಳ್ಳರೆ? ಯೋಗ್ಯವಾದವರು ಯಾರೂ ಇಲ್ಲವಾ? ಬೇರೆ ದಾರಿಯನ್ನು ಹುಡುಕಿಕೊಳ್ಳಬೇಕು ಎನಿಸಿತು. ಸಿನಿಮಾದಲ್ಲಿ ಅಭಿನಯಿಸಬೇಕು ಎಂದರೆ, ಸಿನಿಮಾ ತಂತ್ರಜ್ಞನಾಗೇ ಬರಬೇಕು ಎಂಬ ವಿಚಾರ ಮೂಡಿತು. ಇವೆಲ್ಲವುಗಳ ನಡುವೆ ನನಗೆ ಛಾಯಾಗ್ರಹಣದ ಮೇಲೂ ಆಸಕ್ತಿ ಇತ್ತು. ಹಾಗಾಗಿ ಎಸ್‌.ಜೆ. ಪಾಲಿಟೆಕ್ನಿಕ್‌ನಲ್ಲಿ ಸಿನಿಮಾಟೊಗ್ರಫಿ ಡಿಪ್ಲೊಮಾ ಮಾಡಿದೆ. ನಂತರ ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ಗೆ ಹೋಗಿ ಅಲ್ಲೂ ಈ ಬಗ್ಗೆ ಕಲಿತೆ.

ಮಧುರೈ ಕಾಮರಾಜ ಯುನಿವರ್ಸಿಟಿಯಲ್ಲಿ ಸಿನಿಮಾ ಮತ್ತು ಪತ್ರಿಕೋದ್ಯಮದಲ್ಲಿ ಪದವಿ ಪಡೆದೆ. ಓದೋದಿಕ್ಕೆ ಎಲ್ಲೆಲ್ಲಿ ಅವಕಾಶ ಸಿಗುತ್ತಿತ್ತೋ ಅಲ್ಲೆಲ್ಲಾ ಹೋಗಿ ಓದುತ್ತಿದ್ದೆ. ಸಿನಿಮಾ ತಾಂತ್ರಿಕತೆ, ಛಾಯಾಗ್ರಹಣದ ಬಗ್ಗೆ ಶೈಕ್ಷಣಿಕವಾಗಿ ಕಲಿಯುವ ಹಂಬಲ ಹೆಚ್ಚಿತ್ತು. ಎಲ್ಲೆಲ್ಲಿ ಮಾಹಿತಿ ಸಿಗುತ್ತದೋ ಅಲ್ಲಿ ನನ್ನ ರೆಕ್ಕೆಗಳನ್ನು ಹರಡಲು ಬಿಟ್ಟೆ.

ವಿ. ಶಾಂತರಾಮ್‌ ಅವರು ‘ಪ್ರೇಮದ ಪುತ್ರಿ’ ಸಿನಿಮಾ ನಿರ್ದೇಶಿಸುತ್ತಿದ್ದರು. ಅದಕ್ಕೆ ಆರ್‌.ಸಿ. ಮಾಪಾಕ್ಷಿ ಛಾಯಾಗ್ರಾಹಕರಾಗಿದ್ದರು. ಈ ಸಿನಿಮಾದಲ್ಲಿ ಸಹ ಛಾಯಾಗ್ರಾಹಕನಾಗಿ ನನಗೆ ಅವಕಾಶ ಸಿಕ್ಕಿತು. ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲೇ ಇಂತಹ ಅವಕಾಶ ಸಿಕ್ಕಿದ್ದು ಒಂದು ರೀತಿ ಖುಷಿ, ಅದೃಷ್ಟ. ಸಿನಿಮಾದಲ್ಲಿ ಕೆಲಸ ಮಾಡಿದ್ದಾನೆ ಎಂದು ಕಾಲೇಜಿನಲ್ಲೂ ಸೂಪರ್‌ಸ್ಟಾರ್‌ ಥರ ನೋಡೋರು. ಹೀಗೆ ನನ್ನ ಛಾಯಾಗ್ರಾಹಕನ ಬದುಕು ಆರಂಭವಾಯ್ತು.

ಡಬಲ್ ಧಮಾಕ ಎಂದರೆ, ಕಾಲೇಜು ಮುಗಿಯುವ ಹೊತ್ತಿಗೆ ದೂರದರ್ಶನದಲ್ಲಿ ಛಾಯಾಗ್ರಾಹಕನ ಕೆಲಸ ಸಿಕ್ಕಿತು. ಸಿನಿಮಾದ ಮೇಲೂ ವ್ಯಾಮೋಹ; ಕೆಲಸಕ್ಕೆ ಸೇರುವ ಆಸೆ. ಆಗ ಕೆ.ವಿ.ರಾಜು ಅವರು ತಮ್ಮ ಮೊದಲ ಸಿನಿಮಾ ‘ಬಂಧ ಮುಕ್ತ’ ಮಾಡುತ್ತಿದ್ದರು. ಅದರಲ್ಲಿ ನಾನು ಸಹಛಾಯಾಗ್ರಾಹಕ. ಅವರು ಬೈದು, ಕೇಂದ್ರ ಸರ್ಕಾರದ ಕೆಲಸ ಬಿಡಬೇಡ ಎಂದು ಕಟ್ಟಪ್ಪಣೆ ಮಾಡಿದರು.

ದೂರದರ್ಶನದ ಕೆಲಸ, ಐದಾರು ವರ್ಷ ದುಡಿದು ನಂತರ ಸಿನಿಮಾ ಕ್ಷೇತ್ರಕ್ಕೆ ಬರೋಣ ಎಂದುಕೊಂಡು ಕೆಲಸಕ್ಕೆ ಸೇರಿಕೊಂಡೆ. ಕಾಶ್ಮೀರ, ದೆಹಲಿ, ಪಂಜಾಬ್‌ಗಳಲ್ಲಿ ಕೆಲಸ ಮಾಡಿ ಬೆಂಗಳೂರು ದೂರದರ್ಶನಕ್ಕೆ ವರ್ಗ ಮಾಡಿಸಿಕೊಂಡೆ. ಹಲವು ಸಾಕ್ಷ್ಯಚಿತ್ರಗಳನ್ನೂ ಮಾಡಿದೆ. ಜಲಪಾತದಿಂದ ನೀರು ಧುಮ್ಮಿಕ್ಕುವ ಹಾಗೇ ಮೇಲಿನಿಂದ ಕೆಳಗಿನವರೆಗೂ ಚಿತ್ರೀಕರಣ ಮಾಡಬೇಕು ಎಂಬ ಬಯಕೆ ಶುರುವಾಯಿತು.

ಆಗೆಲ್ಲಾ ಜಿಮ್ಮಿಜಿಪ್ ಕ್ಯಾಮೆರಾಗಳು ಇರಲಿಲ್ಲ. ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಇಳಿದು ಉತ್ತರ ಕನ್ನಡ ಜಿಲ್ಲೆಯ ಅಪ್ಸರಕೊಂಡ ಜಲಪಾತ ಚಿತ್ರೀಕರಣ ಮಾಡಿದೆ. ಇದೆಲ್ಲವನ್ನು ಉಪೇಂದ್ರ ನೋಡಿ ಥ್ರಿಲ್ ಆದರು. ‘ಶ್’ ಸಿನಿಮಾ ಛಾಯಾಗ್ರಹಣ ಮಾಡಿಕೊಡುವಂತೆ ಕೇಳಿದರು. ಅದರ ಕಥೆ ಕೇಳಿ ತುಂಬಾ ಖುಷಿ ಆಯ್ತು. ಇದು ನನಗಾಗೇ ಹೇಳಿ ಮಾಡಿಸಿದ ಕಥೆ ಎನಿಸಿತು.

ಆಗೆಲ್ಲಾ ವಿಷುವಲ್ ಗ್ರಾಫಿಕ್ಸ್‌ ಹೆಚ್ಚು ಇರಲಿಲ್ಲ. ಎಂಥ ಭಯಂಕರ ದೃಶ್ಯವಾದರೂ ಕ್ಯಾಮೆರಾ ಕಲೆಯ ಮೂಲಕ ಚಿತ್ರೀಕರಿಸುತ್ತಿದ್ದೆವು. ಇದೊಂದು ಪ್ರಯೋಗಾತ್ಮಕ ಸಿನಿಮಾ. ರಾತ್ರಿ ಹೊತ್ತಿನ ಭಯಾನಕ ದೃಶ್ಯಗಳನ್ನು ಚಿತ್ರೀಕರಿಸಬೇಕಾದಾಗಲೆಲ್ಲಾ ಲೈಟಿಂಗ್ ಬಗ್ಗೆ, ಕತ್ತಲಲ್ಲಿ ವಿವಿಧ ಫಿಲ್ಟರ್‌ ಬಳಸಿ ಮೂಡಿಸಬಹುದಾದ ಬಣ್ಣಗಳ ಬಗ್ಗೆ ಹೇಳುತ್ತಿದ್ದೆ. ಕಾಗದದ ಮೇಲೆ ಬಣ್ಣದ ಪೆನ್ಸಿಲ್‌ನಿಂದ ಬರೆದು ತೋರಿಸುತ್ತಿದ್ದೆ. ಹೀಗೆ ಬಣ್ಣಗಳ ಮೂಲಕ ಕಥೆಯ ಭೀಕರತೆಯನ್ನು ಚಿತ್ರೀಕರಿಸಬಹುದು ಎಂದು ವಿವರಿಸುತ್ತಿದ್ದೆ. ಅವರಿಗೂ ಇದೆಲ್ಲ ಹೊಸತು. ಏನೇನೋ ಹೇಳುತ್ತಾನೆ ಎಂದು ಕುತೂಹಲದಿಂದ ಕೇಳುತ್ತಿದ್ದರು.

ಹಾಲಿವುಡ್‌ ಸಿನಿಮಾ ಚಿತ್ರೀಕರಿಸುವ ಹಾಗೇ ‘ಶ್’ ಸಿನಿಮಾ ಮಾಡಿದೆವು. ಆಗ ಛಾಯಾಗ್ರಹಣವನ್ನು ಶೈಕ್ಷಣಿಕವಾಗಿ ಕಲಿತು ಸಿನಿಮಾ ಕ್ಷೇತ್ರಕ್ಕೆ ಬರುತ್ತಿದ್ದವರು ಕಡಿಮೆ. ಸ್ಟೋರಿಬೋರ್ಡ್‌, ಕಲರ್‌ ಮಿಕ್ಸಿಂಗ್ ಇವೆಲ್ಲಾ ಪ್ರಚಲಿತವಿರಲಿಲ್ಲ. ನಾನು ಆಗ ಇಂಗ್ಲಿಷ್‌ನಲ್ಲಿ ಹೆಚ್ಚು ಮಾತನಾಡುತ್ತಿದ್ದೆ. ನನ್ನನ್ನು ನೋಡಿ, ಹಾಲಿವುಡ್‌ನಿಂದ ಬಂದವನು ಎಂದೇ ರೇಗಿಸುತ್ತಿದ್ದರು. ನನಗೂ ಆ ಸಿನಿಮಾದಿಂದ ಒಳ್ಳೆಯ ಬ್ರೇಕ್‌ ಸಿಕ್ಕಿತು. ಇಂದಿಗೂ ‘ಶ್‌’ದಿಂದ ಸಿಕ್ಕಿದ ತೃಪ್ತಿ ಬೇರೆ ಸಿನಿಮಾಗಳಲ್ಲಿ ಸಿಕ್ಕಿಲ್ಲ.

‘ಶ್’ ನೋಡಿ ಖುಷಿಯಾದ ಡಿ. ರಾಜೇಂದ್ರ ಬಾಬು, ‘ಪ್ರಜಾಶಕ್ತಿ’ ಸಿನಿಮಾಕ್ಕೆ ನನ್ನನ್ನು ಛಾಯಾಗ್ರಾಹಕನಾಗಿ ಆಯ್ಕೆ ಮಾಡಿದರು. ಇದಾದ ನಂತರ ಅವರೊಂದಿಗೆ ಸಾಲುಸಾಲು ಸಿನಿಮಾಗಳನ್ನು ಮಾಡಿದೆ. ‘ಕರುಳಿನ ಕೂಗು’, ‘ಹಾಲುಂಡ ತವರು’, ‘ದೀರ್ಘ ಸುಮಂಗಲಿ’ ಅತಿ ಹೆಚ್ಚು ಹಿಟ್‌ ನೀಡಿದ ಸಿನಿಮಾಗಳು. ‘ಎಲೆ ಹೊಂಬಿಸಿಲೆ...’ ಹಾಡನ್ನು ಹೊರ ರಾಜ್ಯದಲ್ಲಿ ಚಿತ್ರೀಕರಣ ಮಾಡಬೇಕಾ ಎಂದು ಡಿ. ರಾಜೇಂದ್ರ ಬಾಬು ಕೇಳಿದ್ದರು. ನಾನು ನಂದಿಬೆಟ್ಟದಲ್ಲೇ ಮಾಡೋಣ ಎಂದೆ. ಇದು ವಿಷ್ಣವರ್ಧನ್‌ ಅವರಿಗೆ ಸಿಟ್ಟು ತರಿಸಿತ್ತು. ಆದರೆ ನಂದಿಬೆಟ್ಟದಲ್ಲೇ ಅದ್ಭುತವಾಗಿ ಮಂಜಿನ ನಡುವೆ ಚಿತ್ರೀಕರಣ ಮಾಡಿದ್ದೆವು. ಇಂದಿಗೂ ಈ ಹಾಡನ್ನು ಜನ ಇಷ್ಟಪಡುತ್ತಾರೆ.

ವಿ. ಮನೋಹರ್‌ ಅವರ ‘ಓ ಮಲ್ಲಿಗೆ’ ಸಿನಿಮಾದಲ್ಲಿ ಕೆಲಸ ಮಾಡಿದ್ದು ಕೂಡ ಅದ್ಭುತ ಅನುಭವ. ಹೊಸ ನಿರ್ದೇಶಕರೊಂದಿಗೆ ಕೆಲಸ ಮಾಡಲು ನನಗೆ ಹೆಚ್ಚು ಖುಷಿ ಎನಿಸೋದು. ಹೊಸಬರ ಉತ್ಸಾಹ, ಪ್ರಯೋಗಶೀಲ ಮನೋಭಾವ ನನಗೆ ಇಷ್ಟವಾಗುತ್ತಿತ್ತು. ನಾನು ರೀಲ್ ಕ್ಯಾಮೆರಾದಿಂದ ಡಿಜಿಟಲ್ ಕ್ಯಾಮೆರಾದವರೆಗೆ ನೋಡಿದ್ದೇನೆ. ಎರಡೂ ತಾಂತ್ರಿಕತೆಯ ಪರಿಚಯವಿದೆ.

ಮುಂದೆ, ‘ಉಲ್ಟಾಪಲ್ಟಾ’ ಸಿನಿಮಾ ಮೂಲಕ ನಿರ್ಮಾಪಕನೂ ಆದೆ. ಇದೇ ಸಿನಿಮಾದ ರಿಮೇಕ್‌ ಅನ್ನು ತಮಿಳಿನಲ್ಲಿ ‘ಅಂಬುಟ್ಟು ಇಂಬುಟ್ಟು ಎಂಬುಟ್ಟು’ ಎನ್ನುವ ಹೆಸರಿನಲ್ಲಿ ಮಾಡಿ ನಟ ಹಾಗೂ ನಿರ್ದೇಶಕನೂ ಆದೆ. ಮೊದಲ ಸಿನಿಮಾದಲ್ಲೇ ದ್ವಿಪಾತ್ರ ಮಾಡಿದ್ದು ಖುಷಿ ನೀಡಿತು. ತಮಿಳಿನಲ್ಲಿ ಅಂಥ ದೊಡ್ಡ ಅವಕಾಶಗಳೇನೂ ಸಿಗಲಿಲ್ಲ. ಹಾಗಾಗಿ ಕನ್ನಡದಲ್ಲೇ ಛಾಯಾಗ್ರಾಹಕನಾಗಿ ಮುಂದುವರೆದೆ.

ಸಿನಿಮಾ ಕೆಲಸದ ಜತೆಯೇ ಧಾರಾವಾಹಿ ನಿರ್ಮಾಣ ಮಾಡುವ ಆಸಕ್ತಿ ಬಂತು. ಇದರ ನಡುವೆ ಲಂಕೇಶ್ ಪತ್ರಿಕೆಯಲ್ಲಿ ದುಡಿದು ಅನುಭವವಿದ್ದ ಕಥೆಗಾರ್ತಿ ರೇಖಾರಾಣಿ ಪರಿಚಯವಾಯ್ತು. ಅವರು ಬರೆಯುತ್ತಿದ್ದ ಸ್ಕ್ರಿಪ್ಟ್‌ ನನಗೆ ತುಂಬಾ ಇಷ್ಟ ಆಗೋದು. ರೇಖಾ ಬರೆಯುವ ಸ್ಕ್ರಿಪ್ಟ್‌ಗೆ ನಾನು ನಿರ್ದೇಶನ ಮಾಡಬೇಕು ಎಂಬ ಆಸೆ ಆಯ್ತು. ಇಬ್ಬರೂ ಒಳ್ಳೆಯ ಸ್ನೇಹಿತರಾದೆವು. ಇಷ್ಟಪಟ್ಟು ಮದುವೆಯಾದೆವು.

ನಮ್ಮಿಬ್ಬರ ಸಂಬಂಧ ಹೇಗಿತ್ತು ಅಂದ್ರೆ ಗಂಡ–ಹೆಂಡತಿ ಅನ್ನೋದಕ್ಕಿಂತ ಕಥೆಗಾರ್ತಿ ಮತ್ತು ನಿರ್ದೇಶಕನಂತೆ ಇತ್ತು. ಇಬ್ಬರೂ ಸೇರಿಕೊಂಡು ಮನೆಯಲ್ಲೇ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದೆವು. ರೇಖಾ ಅವರಿಗೆ ಬರೆಯುವ ಹುಚ್ಚು. ಅದೆಷ್ಟು ಸಾವಿರ ಧಾರಾವಾಹಿ ಸಂಚಿಕೆಯನ್ನು ಬರೆದಿದ್ದಾರೊ ಗೊತ್ತಿಲ್ಲ. ಅವರಿಗಾಗಿ ಧಾರಾವಾಹಿ ನಿರ್ಮಾಣ ಮಾಡುವುದು ನನ್ನ ಆಸೆ. ‘ಸೀತೆ’, ‘ನಂದಗೋಕುಲ’ ಧಾರಾವಾಹಿಗಳನ್ನು ಮಾಡಿದೆವು. ನಂದಗೋಕುಲ ಅಂದಿಗೆ ದೊಡ್ಡ ಯಶಸ್ಸು ಗಳಿಸಿತು. ಆ ಧಾರಾವಾಹಿಯಿಂದ ರಾಧಿಕಾ ಪಂಡಿತ್, ಯಶ್, ಅರವಿಂದ್‌ ಕೌಶಿಕ್ ಮನೆಮನೆಗೂ ಪರಿಚಿತರಾದರು.

ನಲವತ್ತೈದಕ್ಕೂ ಹೆಚ್ಚು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದೆ, ತಮಿಳು ಸೇರಿದಂತೆ 4 ಸಿನಿಮಾ ನಿರ್ದೇಶನ ಮಾಡಿದ್ದೇನೆ. ಧಾರಾವಾಹಿ ನಿರ್ಮಾಣ ಮಾಡಿದೆ, ನಿರ್ಮಾಪಕನಾದೆ. ನನ್ನ ಜೀವನದಲ್ಲಿ ಎಲ್ಲವೂ ಚೆನ್ನಾಗಿದೆ ಎನ್ನುವಾಗ ಕ್ಯಾನ್ಸರ್‌ ಕಾಣಿಸಿಕೊಂಡಿತು.

ಬೆಂಗಳೂರಿನ ವಾತಾವರಣದಲ್ಲಿ ಆಮ್ಲಜನಕ ಕಡಿಮೆ ಇದೆ; ಇಲ್ಲಿ ಇದ್ದರೆ ಇನ್ನೆರಡು ವರ್ಷದಲ್ಲಿ ನೀವು ಸಾಯುತ್ತೀರಿ ಎಂದರು ವೈದ್ಯರು. ಹಾಗಾಗಿ ಬೆಂಗಳೂರು ಬಿಟ್ಟು ಹತ್ತು ವರ್ಷ ತೀರ್ಥಹಳ್ಳಿಯಲ್ಲಿ ಇದ್ದೆ. ಆರೋಗ್ಯವೂ ಸುಧಾರಿಸಿತು. ಈಗ ಮ್ಯಾಕ್ಸ್‌ ಫೌಂಡೇಷನ್ ಜತೆ ಸೇರಿ ಕ್ಯಾನ್ಸರ್‌ ರೋಗಿಗಳಿಗೆ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಮಾಡುತ್ತಿದ್ದೇನೆ. ಅಂದಹಾಗೆ ಕ್ಯಾನ್ಸರ್‌ ಬಗ್ಗೆ ಸಿನಿಮಾ ಮಾಡಿ ಅದರಿಂದ ಬಂದ ಹಣವನ್ನು ಕ್ಯಾನ್ಸರ್‌ ರೋಗಿಗಳಿಗೆ ಕೊಡುವ ಆಸೆಯೂ ಇದೆ.

ಕ್ಯಾನ್ಸರ್‌ನಿಂದ ಹೊರಬಂದ ನಂತರವೂ ‘ಉಪ್ಪಿ–2, ಸೂಪರ್, ಕಾಫಿತೋಟ’ ಹೀಗೆ ಹತ್ತಾರು ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿ, ‘ಧ್ವಜ’ ಸಿನಿಮಾ ನಿರ್ದೇಶಿಸಿದೆ. ಕಾಯಿಲೆ ಬಂತು ಎಂದುಕೊಂಡು ನನಗೆ ಎಂದೂ ಸೋತ ಭಾವ ಕಾಡಿಲ್ಲ. ನಾನು ಬದುಕಿ ಉಳಿದವನಲ್ಲ; ಬದುಕಿನೊಂದಿಗೆ ಹೋರಾಡಿ ಗೆದ್ದವನು.

ಜನನ: 26 ಡಿಸೆಂಬರ್
ಕುಟುಂಬ: ಜಯಮ್ಮ (ತಾಯಿ), ಕೃಷ್ಣಪ್ಪ (ತಂದೆ), ರೇಖಾರಾಣಿ (ಪತ್ನಿ)
ಛಾಯಾಗ್ರಹಣ ಮಾಡಿದ ಸಿನಿಮಾ: ಶ್, ಹಾಲುಂಡ ತವರು, ಉಲ್ಟಾಪಲ್ಟಾ, ದೀರ್ಘ ಸುಮಂಗಲಿ, ಕರುಳಿನ ಕೂಗು, ಸೂಪರ್, ಸೂಪರ್ ರಂಗ, ಉಪ್ಪಿ–2, ಓ ಮಲ್ಲಿಗೆ, ಲಾ ಅಂಡ್ ಆರ್ಡರ್, ಭಾವ ಬಾಮೈದ, ಕಾಫಿತೋಟ, ಮತ್ತೆ ಬನ್ನಿ ಪ್ರೀತ್ಸೋಣ ಸೇರಿ 45ಕ್ಕೂ ಹೆಚ್ಚು
ನಿರ್ದೇಶನ ಮಾಡಿದ ಸಿನಿಮಾ: ಅಂಬುಟ್ಟು ಇಂಬುಟ್ಟು ಎಂಬುಟ್ಟು (ತಮಿಳು), ಲಿಫ್ಟ್‌ ಕೊಡ್ಲಾ, ಪ್ರೀತಿ, ಧ್ವಜ
ಧಾರಾವಾಹಿ: ಸೀತೆ, ನಂದಗೋಕುಲ, ಪ್ರೀತಿಯಿಂದ, ಅನುಬಂಧ
ಪ್ರಶಸ್ತಿಗಳು: ಶ್‌, ಶಾಪ ಸಿನಿಮಾದ ಛಾಯಾಗ್ರಹಣಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ
ಇಮೇಲ್: ashokcashyap@gmail.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.