ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಡುವ: ದೂರವಾಗದ ಮಂಗನ ಕಾಯಿಲೆ ಭೀತಿ

Last Updated 6 ಡಿಸೆಂಬರ್ 2017, 9:29 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಮಂಗನ ಕಾಯಿಲೆ (ಕೆ.ಎಫ್‌.ಡಿ) ಮಲೆನಾಡಿನ ಭಾಗದಲ್ಲಿ ಹೆಚ್ಚಾಗುವ ಭೀತಿ ಎದುರಾಗಿದೆ. ಬಿಸಿಲ ಝಳ ಹೆಚ್ಚುತ್ತಿದ್ದಂತೆ ತಾಲ್ಲೂಕಿನ ಅನೇಕ ಭಾಗಗಳಲ್ಲಿ ಈ ಕಾಯಿಲೆ ಉಲ್ಬಣಿಸುವ ಆತಂಕ ಎದುರಾಗಿದ್ದು, ರೋಗ ನಿಯಂತ್ರಣಕ್ಕೆ ಸಜ್ಜಾಗಿದೆ.

ಮಂಗನ ಕಾಯಿಲೆಯಿಂದ ಕಳೆದ ಬಾರಿ ತಾಲ್ಲೂಕಿನಲ್ಲಿ 3 ಮಂದಿ ಪ್ರಾಣ ಕಳೆದುಕೊಳ್ಳುವಂತಾಗಿತ್ತು. ಕುಡುಮಲ್ಲಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಚಿಡುವ ಗ್ರಾಮದ ಶೇಷಪ್ಪನಾಯ್ಕ, ಜನಾರ್ದನ, ಇಂದಿರಾ ನಗರದ ನಾರಾಯಣ ರೋಗಕ್ಕೆ ಬಲಿಯಾಗಿದ್ದರು. 5 ವರ್ಷಗಳಲ್ಲಿ ಈ ಕಾಯಿಲೆಯಿಂದ 5 ಮಂದಿ ಜೀವ ಕಳೆದುಕೊಂಡಿದ್ದಾರೆ.

ಚಿಡುವ ಗ್ರಾಮದಲ್ಲಿ ಮಂಗನ ಕಾಯಿಲೆಯಿಂದ ಇಬ್ಬರು ಮೃತಪಟ್ಟಿದ್ದರೆ, ಇದೇ ವೇಳೆ ತಿಂಗಳ ಅವಧಿಯೊಳಗೆ ವಿವಿಧ ರೋಗಕ್ಕೆ ತುತ್ತಾಗಿ ಮತ್ತಿಬ್ಬರು ಮೃತಪಟ್ಟಿದ್ದರು. ಗ್ರಾಮಸ್ಥರು ಆತಂಕದಲ್ಲಿ ದಿನದೂಡುವಂತಾಗಿದೆ.

ಕಳೆದ ವರ್ಷ 43 ಸಾವಿರ ಜನರಿಗೆ ಮಂಗನ ಕಾಯಿಲೆ ರೋಗ ನಿರೋಧಕ ಲಸಿಕೆ ಹಾಕಲಾಗಿದೆ. ಈ ಬಾರಿ 28 ಸಾವಿರ ಜನರಿಗೆ ಈಗಾಗಲೇ ಬೂಸ್ಟರ್ ಡೋಸ್‌ ನೀಡಲಾಗಿದೆ. ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ತೊಡಗಿದೆ. ಮೊಬೈಲ್‌ ಘಟಕದ ಮೂಲಕ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಲಸಿಕೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ರೋಗ ನಿರೋಧಕ ಲಸಿಕೆ ಹಾಕಿಸಿಕೊಳ್ಳದೇ ಇರುವವರನ್ನು ಪತ್ತೆಹಚ್ಚಿ ಲಸಿಕೆ ಹಾಕಿಸಿಕೊಳ್ಳುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.

‘ಮಂಗನ ಕಾಯಿಲೆ ಹೆಚ್ಚಾಗಿ ಕಾಣಿಸಿಕೊಂಡ ಪ್ರದೇಶಗಳಲ್ಲಿ ರೋಗ ನಿರೋಧಕ ಲಸಿಕೆ ಪಡೆಯಲು ಜನರಿಂದ ಬೇಡಿಕೆ ಹೆಚ್ಚಿತ್ತು. ರೋಗ ಕಾಣಿಸಿಕೊಳ್ಳದ ಸಂದರ್ಭಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜನರು ಮುಂದೆ ಬರುತ್ತಿಲ್ಲ. ಇದು ಆಗಬಾರದು. ಒಂದು ತಿಂಗಳಿನಿಂದ ತಾಲ್ಲೂಕಿನ ಮಾಳೂರು, ಬೆಟ್ಟಬಸರವಾನಿ, ಕೋಣಂದೂರು, ಆರಗ, ಅರಳಸುರಳಿ, ಹುಂಚದಕಟ್ಟೆ, ದೇವಂಗಿ, ಹಾರೋಗೊಳಿಗೆ, ಗುತ್ತಿಯಡೇಹಳ್ಳಿ, ಮಂಡಗದ್ದೆ ಭಾಗಗಳಲ್ಲಿ ಲಸಿಕೆ ಹಾಕುವ ಕಾರ್ಯ ಕೈಗೊಳ್ಳಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಕಿರಣ್‌ ತಿಳಿಸಿದ್ದಾರೆ.

ಮಂಗನ ಕಾಯಿಲೆಗೆ ತುತ್ತಾಗಿ 3 ಮಂದಿ ಪ್ರಾಣ ಕಳೆದುಕೊಂಡ ಪ್ರದೇಶಗಳಿಗೆ ಹಿಂದಿನ ಆರೋಗ್ಯ ಸಚಿವ ಯು.ಟಿ.ಖಾದರ್‌, ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್‌ ಭೇಟಿ ನೀಡಿ ತುರ್ತುಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ರೋಗ ಉಲ್ಬಣಿಸಿದ್ದ ಹಿನ್ನೆಲೆಯಲ್ಲಿ ಚಿಡುವ ಗ್ರಾಮದಲ್ಲಿ ಸಂಚಾರ ಆರೋಗ್ಯ ಸೇವಾ ಘಟಕವನ್ನು ತೆರೆಯಲಾಗಿತ್ತು.

ಮಂಗನ ಕಾಯಿಲೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೆ ರೋಗದ ಕುರಿತು ಅಧ್ಯಯನ, ಸಂಶೋಧನೆ ಆರಂಭವಾಗಿದೆ. ಆರೋಗ್ಯ ಇಲಾಖೆ, ಸ್ಕಾಟ್ಲೆಂಡ್‌ನ ಎಕಾಲಜಿ ಮತ್ತು ಹೈಡ್ರಾಲಜಿ, ಇಂಡಿಯನ್‌ ಕೌನ್ಸಿಲ್‌ ಆಫ್‌ ರಿಸರ್ಚ್‌, ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಫಾರ್‌ ವೆಟನರಿ ಇನ್ಫರ್‌ಮ್ಯಾಟಿಕ್‌ ಹಾಗೂ ಖಾಸಗಿ ಸಂಸ್ಥೆ ಮಂಗನ ಕಾಯಿಲೆ ಎಲ್ಲಿ, ಹೇಗೆ ಬರುತ್ತದೆ ಎಂಬ ಕುರಿತು ಸಂಶೋಧನೆಯಲ್ಲಿ ತೊಡಗಿದೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡಿದೆ.

* *

ಮಂಗನ ಕಾಯಿಲೆ ತಡೆಗಟ್ಟಲು ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ಔಷಧಿ ದಾಸ್ತಾನು ಇದೆ.
ಡಾ.ರಾಜೇಶ್‌ ಸುರಗೀಹಳ್ಳಿ, ಜಿಲ್ಲಾ ಆರೋಗ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT