ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಗುಳ ರಾಜಕಾರಣಕ್ಕೆ ಕಡಿವಾಣ ಅಗತ್ಯ

Last Updated 8 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಾಲಿಗೆ ಸಡಿಲ ಬಿಟ್ಟಿದ್ದ ಮಣಿಶಂಕರ್ ಅಯ್ಯರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿರುವ ಕಾಂಗ್ರೆಸ್ ಕ್ರ‌ಮ ಸ್ವಾಗತಾರ್ಹ. ಬೈಗುಳ ರಾಜಕಾರಣವನ್ನು ನಿರುತ್ಸಾಹಗೊಳಿಸುವ ನಿಟ್ಟಿನಲ್ಲಿ ಇಂಥ ಕಠಿಣ ಶಿಸ್ತುಕ್ರಮಗಳು ಅಗತ್ಯ. ಗುಜರಾತ್‍ ಚುನಾವಣೆಯ ಹಿನ್ನೆಲೆಯಲ್ಲಿ ಪರಸ್ಪರ ಕೆಸರು ಎರಚಿಕೊಳ‍್ಳುವ ಆಟದಲ್ಲಿ ತೊಡಗಿರುವ ಬಿಜೆಪಿ ಮತ್ತು ಕಾಂಗ್ರೆಸ್‍ ಪಕ್ಷಗಳಿಗೆ ಮಣಿಶಂಕರ್‍ ಅಯ್ಯರ್‍ ಪ್ರಕರಣ ಒಂದು ಪಾಠವಾಗಬೇಕಿದೆ. ಅಯ್ಯರ್‍ ಆಡಿರುವ ಮಾತು ಅವರ ವಯಸ್ಸು-ಅನುಭವಕ್ಕಾಗಲೀ ರಾಜಕೀಯ ಪ್ರೌಢತೆಗಾಗಲೀ ತಕ್ಕುದಾಗಿಲ್ಲ. ವ್ಯಕ್ತಿಯನ್ನು ಜಾತಿಯ ಹಿನ್ನೆಲೆಯಲ್ಲಿ ನಿಂದಿಸುವ ನಡವಳಿಕೆಗೆ ಯಾವ ಸಮರ್ಥನೆಯೂ ಇಲ್ಲ.

ಮೋದಿ ಅವರನ್ನು ‘ನೀಚ ಮನುಷ್ಯ, ರೋಗಗ್ರಸ್ತ’ ಎಂದು‌‌ ಜರೆಯುವ ಮನಸ್ಥಿತಿಯ ಆರೋಗ್ಯವನ್ನು ಯಾರು ಬೇಕಾದರೂ ಸುಲಭವಾಗಿ ಊಹಿಸಬಹುದು. ಮಣಿಶಂಕರ್‍ ಅಯ್ಯರ್‍ ಬಾಯಿ ಬಡುಕತನ ಹೊಸತೇನೂ ಅಲ್ಲ. ಮೋದಿ ಅವರನ್ನು ‘ಚಾಯ್‍ವಾಲಾ’ ಎಂದು ಹೀಗಳೆದ ಮೊದಲಿಗರಲ್ಲಿ ಅವರೂ ಒಬ್ಬರು. ಆ ಟೀಕೆಯನ್ನೇ 2014ರ ಚುನಾವಣೆಯಲ್ಲಿ ಬಿಜೆಪಿ ‘ಚಹಾದ ಬ್ರ್ಯಾಂಡ್‌’ ರೂಪದಲ್ಲಿ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಂಡಿತು. ಅಂಥ ಮತ್ತೊಂದು ಅವಕಾಶವನ್ನು ಅಯ್ಯರ್‍ ಈಗ ಗುಜರಾತ್‍ ಚುನಾವಣೆ ಸಂದರ್ಭದಲ್ಲಿ ಸೃಷ್ಟಿಸಿದ್ದಾರೆ. ಕೊಳಕು ಮಾತನ್ನಾಡಿರುವ ವ್ಯಕ್ತಿಯ ವಿರುದ್ಧ ತಕ್ಷಣ ಶಿಸ್ತುಕ್ರಮ ಕೈಗೊಳ್ಳುವ ಮೂಲಕ, ಬೈಗುಳ ರಾಜಕಾರಣವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಾಂಗ್ರೆಸ್‍ ಒಂದು ಹೆಜ್ಜೆ ಮುಂದಿಟ್ಟಿದೆ. ಈ ಕ್ರಮದಿಂದ ಬಿಜೆಪಿಗೆ ಸಮಾಧಾನ ಆದಂತೆ ಕಾಣುತ್ತಿಲ್ಲ. ‘ಪ್ರಧಾನಿ ವಿರುದ್ಧದ ಟೀಕೆಗೆ ಗುಜರಾತ್‍ ಜನರು ಉತ್ತರ ನೀಡಲಿದ್ದಾರೆ’ ಎನ್ನುವ ಪ್ರತಿಕ್ರಿಯೆಯನ್ನು ನೋಡಿದರೆ, ಪ್ರಕರಣವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ಉತ್ಸಾಹ ತೋರುತ್ತಿರುವಂತಿದೆ.

ರಾಜಕೀಯದಲ್ಲಿ ವಾದವಿವಾದ ಹಾಗೂ ಟೀಕೆಗಳು ಸಹಜ ಮತ್ತು ಅನಿವಾರ್ಯ. ಆದರೆ ಮಾತು ಮಲಿನವಾಗದಂತೆ ರಾಜಕೀಯ ಮುಖಂಡರು ಎಚ್ಚರ ವಹಿಸಬೇಕು. ರಾಜಕೀಯ ಟೀಕೆಗಳು ತಾತ್ವಿಕವಾಗಿರಬೇಕೇ ಹೊರತು ವ್ಯಕ್ತಿನಿಷ್ಠ ಮಾತು ಜಾತಿಕೇಂದ್ರಿತ ಆಗಿರಬಾರದು. ಪ್ರಸ್ತುತ ಕಾಂಗ್ರೆಸ್‍ ವಿರುದ್ಧ ಬುಸುಗುಡುತ್ತಿರುವ ಬಿಜೆಪಿ ಕೂಡ ‘ಬೈಗುಳ ರಾಜಕಾರಣ’ದಲ್ಲಿ ಹಿಂದೆ ಬಿದ್ದಿಲ್ಲ. ತೊಟ್ಟಿಲು ತೂಗುವ ಹಾಗೂ ಮಗುವನ್ನೂ ಚಿವುಟುವ ಆಟದಲ್ಲಿ ಬಿಜೆಪಿಯ ನಾಯಕರು ನಿಸ್ಸೀಮರು. ಕರ್ನಾಟಕವನ್ನು ಪ್ರತಿನಿಧಿಸುವ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹಾಗೂ ಸಂಸದ ಪ್ರತಾಪಸಿಂಹರ ಇತ್ತೀಚಿನ ಮಾತುಗಳು ಸಾರ್ವಜನಿಕ ಜೀವನದಲ್ಲಿ ಮಾದರಿಯೂ ಅಲ್ಲ, ಪ್ರಜಾಸತ್ತಾತ್ಮಕ ಆಶಯಗಳನ್ನು ಬಲಪಡಿಸುವಂತಹವೂ ಅಲ್ಲ. ‘ಪದ್ಮಾವತಿ’ ಸಿನಿಮಾಕ್ಕೆ ಸಂಬಂಧಿಸಿದಂತೆ ಹೊರಬಿದ್ದಿರುವ ಕೈಕಾಲು-ತಲೆ ಕತ್ತರಿಸುವ ಮಾತುಗಳ ಬಗ್ಗೆ ಬಿಜೆಪಿಯ ಹಿರಿಯ ನಾಯಕರು ತಲೆಕೆಡಿಸಿಕೊಂಡಿಲ್ಲ. ಸ್ವತಃ ನರೇಂದ್ರ ಮೋದಿ ಕೂಡ ಮಾತಿನಲ್ಲಿ ಕಿಡಿ ಹತ್ತಿಸುವ ಆಟದಲ್ಲಿ ಕಡಿಮೆಯೇನಿಲ್ಲ. ಶಶಿ ತರೂರ್‍ ಅವರ ಪತ್ನಿ ಸುನಂದಾ ಪುಷ್ಕರ್‍ ಅವರನ್ನು ‘50 ಕೋಟಿ ರೂಪಾಯಿಗಳ ಗರ್ಲ್ ಫ್ರೆಂಡ್‌’ ಎಂದು ಅವರು ಕಟಕಿಯಾಡಿದ್ದರು. 2002ರಲ್ಲಿ ಗುಜರಾತ್‍ನಲ್ಲಿ ವ್ಯಾಪಕ ಹಿಂಸಾಚಾರ ಸಂಭವಿಸಿದಾಗ, ಮೋದಿ ಅವರು ಮುಸ್ಲಿಂ ಸಮುದಾಯದ ಬಗ್ಗೆ ಪೂರ್ವಗ್ರಹಪೀಡಿತರಾಗಿ ಮಾತನಾಡಿದ್ದರು.

ಹೀಗೆ ಒಂದು ಸಮುದಾಯವನ್ನು ವಹಿಸಿಕೊಳ್ಳುವ ಅಥವಾ ನಿರ್ಲಕ್ಷಿಸುವ ಧೋರಣೆ ಗಣತಂತ್ರ ವ್ಯವಸ್ಥೆಯನ್ನು ಪ್ರತಿನಿಧಿಸುವ ನಾಯಕರಿಗೆ ಶೋಭೆ ತರುವಂತಹದ್ದಲ್ಲ. ಪಕ್ಷದ ಕಿರಿಯರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾದ ಹಿರಿಯ ನಾಯಕರೇ ಬೈಗುಳ ರಾಜಕಾರಣದ ಮೇಲ್ಪಂಕ್ತಿ ಹಾಕಿಕೊಡುತ್ತಿರುವ ನಿದರ್ಶನಗಳನ್ನು ಎಲ್ಲ ಪಕ್ಷಗಳಲ್ಲೂ ಕಾಣುತ್ತಿದ್ದೇವೆ. ಕೊಳಕು ಮಾತುಗಳಿಗೆ ದೊರೆಯುತ್ತಿರುವ ಮಾಧ್ಯಮ ಪ್ರಚಾರ ಕೂಡ ರಾಜಕಾರಣಿಗಳ ನಾಲಿಗೆ ಚಪಲಕ್ಕೆ ಕಾರಣಗಳಲ್ಲೊಂದಾಗಿದೆ. ಮಾತಿನ ಮೂಲಕವೇ ಎದುರಾಳಿಗಳನ್ನು ಹಳಿದು ಹಣಿಯುವ ದುಂಡಾವೃತ್ತಿ ರಾಜಕಾರಣ ವಿಜೃಂಭಿಸುತ್ತಿದೆ. ವೈಯಕ್ತಿಕ ಹಿನ್ನೆಲೆ, ಜಾತಿ ಹಾಗೂ ಲೈಂಗಿಕ ಸಂಬಂಧಗಳನ್ನು ಟೀಕೆಗಾಗಿ ಬಳಸಿಕೊಳ್ಳುವುದು ಅನೈತಿಕವಾದುದು ಹಾಗೂ ರಾಜಕಾರಣಕ್ಕೆ ಕಳಂಕ ತರುವಂತಹುದು. ಮಾತುಗಳಿಗೆ ಘನತೆ ತಂದುಕೊಡುವ ಕೆಲಸ ಪ್ರಸ್ತುತ ಪ್ರಜ್ಞಾಪೂರ್ವಕವಾಗಿ ನಡೆಯಬೇಕಾಗಿದೆ. ಈ ಪ್ರಕ್ರಿಯೆಯ ಮುನ್ನುಡಿಯ ರೂಪದಲ್ಲಿ ಮಣಿಶಂಕರ್‍ ಅಯ್ಯರ್‍ ಪ್ರಕರಣವನ್ನು ನೋಡಬಹುದಾಗಿದೆ. ಕಾಂಗ್ರೆಸ್‍ನ ಮೊದಲ ಹೆಜ್ಜೆ ಚುನಾವಣಾ ಕಾಲದ ಕಣ್ಣೊರೆಸುವ ತಂತ್ರವಾಗಿರದೆ, ನಂತರದ ದಿನಗಳಲ್ಲೂ ಪ್ರಾಮಾಣಿಕವಾಗಿ ಮುಂದುವರಿಯಬೇಕು. ಉಳಿದ ಪಕ್ಷಗಳೂ ತಮ್ಮಲ್ಲಿನ ಕೂಗುಮಾರಿಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT