ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿ ಪದ್ಧತಿ ಅನುಸರಿಸಿ ಬೆಳೆ

Last Updated 10 ಡಿಸೆಂಬರ್ 2017, 8:33 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ತಾಲ್ಲೂಕಿನ ನಾರಮಾಕನಹಳ್ಳಿ ಗ್ರಾಮದ ರೈತರೊಬ್ಬರು ಸಾವಯವ ಕೃಷಿ ಪದ್ಧತಿ ಅನುಸರಿಸಿ ಬಂಪರ್ ತೊಗರಿ ಬೆಳೆ ಬೆಳೆದಿದ್ದಾರೆ. ರೈತ ಶ್ರೀನಿವಾಸರೆಡ್ಡಿ ಈ ಬಾರಿ ರಾಗಿಗೆ ಪರ್ಯಾಯವಾಗಿ ತೊಗರಿ ಬೆಳೆಯಲು ನಿರ್ಧರಿಸಿದರು. ಮಳೆಗೆ ಮೊದಲು ಹೊಲಕ್ಕೆ ತಿಪ್ಪೆ ಗೊಬ್ಬರ ಹೊಡೆದು, ಆಳದ ಉಳುಮೆ ಮಾಡಿ ಬಿತ್ತನೆಗೆ ಜಮೀನು ಸಿದ್ಧಪಡಿಸಿದರು. ಮಳೆ ಸುರಿದಾಗ ಕೃಷಿ ಇಲಾಖೆಯಿಂದ ಬಿತ್ತನೆ ಬೀಜ ಖರೀದಿಸಿ ತಂದು, ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಾಟಿ ಮಾಡಿದರು.

ಕೊಳವೆ ಬಾವಿಯಲ್ಲಿ ನೀರಿದ್ದರೂ, ಕಾಲ ಕಾಲಕ್ಕೆ ಮಳೆಯಾಗುತ್ತಿರುವುದರಿಂದ ಆ ನೀರನ್ನು ಬಳಸುವ ಗೋಜಿಗೆ ಹೋಗಲಿಲ್ಲ. ನಿಯಮಾನುಸಾರ ಅಂತರ ಬೇಸಾಯ ಮಾಡಲಾಯಿತು.ಕಳೆ ತೆಗೆದು ಸಾಲು ಮಾಡಲಾಯಿತು. ಇದರಿಂದ ಮಳೆ ನೀರು ಹೊಲದಿಂದ ಹೊರಗೆ ಹರಿದು ಹೋಗದೆ ನಿಲ್ಲಲು ಸಾಧ್ಯವಾಯಿತು. ತಿಪ್ಪೆ ಗೊಬ್ಬರದ ಸತ್ವ ಗಿಡ ಸಮೃದ್ಧವಾಗಿ ಬೆಳೆಯುವಂತೆ ಮಾಡಿತು.

ಎರಡು ಎಕರೆ ಪ್ರದೇಶದಲ್ಲಿ ಬೆಳೆಯಲಾಗಿರುವ ತೊಗರಿ ಬೆಳೆ ಈಗಿನ್ನೂ ಹೂ, ಪಿಂದೆ ಹಂತದಲ್ಲಿದೆ. ಆದರೆ 7 ಅಡಿ ಎತ್ತರ ಬೆಳೆದಿದೆ. ದಟ್ಟವಾದ ಹಸಿರೆಲೆಯಿಂದ ಕಂಗೊಳಿಸುತ್ತಿದೆ. ತೊಗರಿ ಕಾಯಿ ಕಟ್ಟುವ ಅವಧಿಯಲ್ಲಿ ಹುಳು ಬಾಧೆ ಸಾಮಾನ್ಯ. ಔಷಧ ಸಿಂಪರಣೆಯಿಂದ ನಿಯಂತ್ರಣಕ್ಕೆ ತರಬಹುದಾದರೂ, ಹಾನಿಕಾರಕ ರಾಸಾಯನಿಕ ಔಷಧ ಬಳಸದೆ, ಬೇವಿನ ಎಣ್ಣೆಯಂತಹ ಸಸ್ಯ ಜನ್ಯ ಔಷಧ ಸಿಂಪರಣೆ ಮಾಡಲು ನಿರ್ಧರಿಸಲಾಗಿದೆ.

ಬದಲಾದ ಪರಿಸ್ಥಿತಿಯಲ್ಲಿ ತೊಗರಿ ವಾಣಿಜ್ಯ ಬೆಳೆಯಾಗಿ ಮಾರ್ಪಟ್ಟಿದೆ. ಈ ಹಿಂದೆ ತಾಲ್ಲೂಕಿನ ರೈತರು ಅಪರೂಪಕ್ಕೆ ತೊಗರಿ ಬೆಳೆಯುತ್ತಿದ್ದರು. ಬೆಳೆದ ನಾಟಿ ತೊಗರಿಯನ್ನು ಮನೆ ಬಳಕೆಗೆ ಇಟ್ಟುಕೊಳ್ಳುತ್ತಿದ್ದರು. ಆದರೆ ಈಗ ಅವರೆಕಾಯಿ ಬಿಡಿಸಿದಂತೆ ತೊಗರಿ ಕಾಯಿ ಬಿಡಿಸಿ ಮಾರುಕಟ್ಟೆಗೆ ಹಾಕಲಾಗುತ್ತಿದೆ. ಅವರೆ ಕಾಯಿಗೆ ಮೊದಲಾದರೆ ಹಸಿ ತೊಗರಿ ಕಾಯಿಗೆ ಒಳ್ಳೆ ಬೆಲೆ ಸಿಗುತ್ತದೆ. ಅವರೆಕಾಯಿ ಪ್ರವೇಶದೊಂದಿಗೆ ತೊಗರಿ ಕಾಯಿ ಬೆಲೆಯಲ್ಲಿ ಇಳಿಕೆ ಉಂಟಾಗುತ್ತದೆ.

ಬೆಲೆ ಕುಸಿತ ಉಂಟಾದರೂ ಚಿಂತಿಸಬೇಕಾದ ಅಗತ್ಯವಿಲ್ಲ. ಬಲಿತು ಒಣಗಿದ ಕಾಯಿಯನ್ನು ಬಿಡಿಸಿ, ಯಂತ್ರದ ಸಹಾಯದಿಂದ ಒಕ್ಕಣೆ ಮಾಡಿ, ಚೆನ್ನಾಗಿ ಒಣಗಿಸಿ ಒಂದೆಡೆ ಸಂಗ್ರಹಿಸಿಟ್ಟಲ್ಲಿ, ಬೆಲೆ ಬಂದಾಗ ಮಾರಬಹುದಾಗಿದೆ. ಆದ್ದರಿಂದ ಈ ಬೆಳೆಯಲ್ಲಿ ನಷ್ಟದ ಮಾತು ಬರುವುದಿಲ್ಲ. ರೈತರು ಅವರೆ ಕಾಯಿ ಸುಗ್ಗಿ ಸಂದರ್ಭದಲ್ಲಿ ಹೀಗೆಯೇ ಮಾಡುತ್ತಾರೆ.

ಈ ಅನುಕೂಲದಿಂದಾಗಿ ಪ್ರತಿ ವರ್ಷ ತೊಗರಿ ಬೆಳೆಯುವ ವಿಸ್ತೀರ್ಣ ಹೆಚ್ಚುತ್ತಿದೆ. ಮಳೆಯಾದರೆ ಬೆಳೆ ಕೈಗೆ ಬರುತ್ತದೆ. ಮಳೆ ಕೈ ಕೊಟ್ಟರೆ ಬೆಳೆ ಕೈಗೆ ಸಿಗುವುದಿಲ್ಲ. ಆದರೆ ಈ ಬಾರಿ ಅಂತಹ ಪರಿಸ್ಥಿತಿ ಇಲ್ಲ. ಕೃಷಿಕ ಶ್ರೀನಿವಾಸರೆಡ್ಡಿ ಅವರು ತೊಗರಿ ಬೆಳೆಯನ್ನು ವಿಶೇಷವಾಗಿ ಬೆಳೆದಿರುವುದೇ ಒಂದು ವಿಶೇಷ.

* * 

ಮಣ್ಣಿನ ಹಾಗೂ ಮನುಷ್ಯನ ಆರೋಗ್ಯದ ದೃಷ್ಟಿಯಿಂದ ರೈತ ಸಮುದಾಯ ಸಾವಯವ ಕೃಷಿಗೆ ಮಹತ್ವ ನೀಡಬೇಕು. ವಿಶೇಷ ಆಸಕ್ತಿ ವಹಿಸಿದಲ್ಲಿ, ಸಾವಯವ ಕೃಷಿಯಲ್ಲೂ ಅಧಿಕ ಇಳುವರಿ ಪಡೆಯಲು ಸಾಧ್ಯ
ಶ್ರೀನಿವಾಸರೆಡ್ಡಿ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT