ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಸಾಧನೆ ಎದುರು ನೋಡುತ್ತಾ...

Last Updated 10 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬ್ಯಾಡ್ಮಿಂಟನ್ ಅಂಗಳದಲ್ಲಿ ಭಾರತ ಇಡುವ ಪ್ರತಿ ಹೆಜ್ಜೆಯನ್ನೂ ವಿಶ್ವ ಕ್ರೀಡಾಲೋಕ ಕುತೂಹಲದಿಂದ ಗಮನಿಸುತ್ತಿದೆ. ವಿದೇಶಿ ಆಟಗಾರರಂತೂ ಭಯಭೀತರಾಗುತ್ತಿದ್ದಾರೆ. ಇದಕ್ಕೆ ಕಾರಣ ಈಚಿನ ವರ್ಷಗಳಲ್ಲಿ ಭಾರತದ ಆಟಗಾರರು ಸಾಧಿಸಿರುವ ಪಾರಮ್ಯ.

ಇಲ್ಲೊಂದು ಉದಾಹರಣೆ ಗಮನಿಸಿ. ಬ್ಯಾಡ್ಮಿಂಟನ್‌ ವಿಶ್ವ ಸೂಪರ್‌ ಸರಣಿಯು ಪ್ರತಿ ವರ್ಷ ವಿವಿಧ ದೇಶಗಳಲ್ಲಿ ಒಟ್ಟು 12 ಹಂತಗಳಲ್ಲಿ ನಡೆಯುತ್ತದೆ. ಅದರಲ್ಲಿ ಭಾರತದವರು ಪುರುಷರ ವಿಭಾಗದಲ್ಲಿ ಐದು ಹಂತಗಳಲ್ಲಿ ಹಾಗೂ ಮಹಿಳೆಯರ ವಿಭಾಗದಲ್ಲಿ ಎರಡು ಹಂತಗಳಲ್ಲಿ ಚಾಂಪಿಯನ್‌ ಆಗಿದ್ದಾರೆ. ಎರಡು ಹಂತಗಳಲ್ಲಿ ರನ್ನರ್‌ ಅಪ್‌ ಆಗಿದ್ದಾರೆ. ಇದು ಭಾರತದ ಸಾಧನೆಯನ್ನು ಬಿಚ್ಚಿಡುತ್ತದೆ.

ಈಗ ಮತ್ತೊಂದು ಸವಾಲು ಎದುರು ಬಂದು ನಿಂತಿದೆ. ಅದೆಂದರೆ ಬ್ಯಾಡ್ಮಿಂಟನ್‌ ವಿಶ್ವ ಸೂಪರ್‌ ಸರಣಿ ಫೈನಲ್ಸ್‌. ದುಬೈನಲ್ಲಿ ಡಿಸೆಂಬರ್‌ 13ರಿಂದ 17ರವರೆಗೆ ನಡೆಯಲಿರುವ ಈ ಟೂರ್ನಿಗೆ ಭಾರತದಿಂದ ಕೆ.ಶ್ರೀಕಾಂತ್‌ ಹಾಗೂ ಪಿ.ವಿ.ಸಿಂಧು ಅರ್ಹತೆ ಪಡೆದಿದ್ದಾರೆ. ಅವರೀಗ ಅಗ್ರ ಎಂಟು ಆಟಗಾರರೊಂದಿಗೆ ಪೈಪೋಟಿ ನಡೆಸಲು ಸಜ್ಜಾಗುತ್ತಿದ್ದಾರೆ.

ಈ ಋತುವಿನಲ್ಲಿ ಅಮೋಘ ಸಾಮರ್ಥ್ಯ ತೋರಿರುವ ಶ್ರೀಕಾಂತ್‌ ಅವರು ನಾಲ್ಕು ಸೂಪರ್‌ ಸರಣಿ ಪ್ರಶಸ್ತಿ ಗೆದ್ದಿದ್ದಾರೆ. ಇಂಡೊ ನೇಷ್ಯಾ ಮಾಸ್ಟರ್ಸ್‌, ಆಸ್ಟ್ರೇಲಿಯಾ ಓಪನ್, ಡೆನ್ಮಾರ್ಕ್ ಓಪನ್ ಹಾಗೂ ಫ್ರೆಂಚ್‌ ಓಪನ್ ಬ್ಯಾಡ್ಮಿಂಟನ್ ಟೂರ್ನಿಗಳಲ್ಲಿ ಈ ಸಾಧನೆ ಮಾಡಿದ್ದಾರೆ. ವಿಶ್ವದ ನಾಲ್ವರು ಆಟ ಗಾರರು ಮಾತ್ರ ಒಂದೇ ವರ್ಷದಲ್ಲಿ ನಾಲ್ಕು ಸೂಪರ್ ಸರಣಿ ಗೆದ್ದುಕೊಂಡಿದ್ದಾರೆ. ಈ ಯಶಸ್ಸಿನಿಂದ ವಿಶ್ವ ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್‌ನಲ್ಲಿ ಶ್ರೀಕಾಂತ್‌ ಮೊದಲ ಬಾರಿ ಎರಡನೇ ಸ್ಥಾನಕ್ಕೇರಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ನ ದಿಗ್ಗಜ ಆಟಗಾರರಾದ ಲಿನ್‌ ಡಾನ್‌, ಲೀ ಚೊಂಗ್ ವೀ, ಚೆನ್ ಲಾಂಗ್ ಎದುರು ಗೆಲುವಿನ ರುಚಿ ಕಂಡಿರುವ ಅವರು 2020ರ ಟೋಕಿಯೊ ಒಲಿಂಪಿಕ್ಸ್‌ನತ್ತ ಚಿತ್ತ ಹರಿಸಿದ್ದಾರೆ.

ದುಬೈನಲ್ಲಿ ಅವರು ದಕ್ಷಿಣ ಕೊರಿಯಾದ ಸನ್ ವಾನ್‌ ಹೊ, ಚೀನಾದ ಶಿ ಯುಕಿ, ಮಲೇಷ್ಯಾದ ಲೀ ಚೋಂಗ್‌ ವೀ, ಚೀನಾದ ಚೆನ್‌ ಲಾಂಗ್‌, ಡೆನ್ಮಾರ್ಕ್‌ನ ವಿಕ್ಟರ್‌ ಆ್ಯಕ್ಸೆಲ್ಸನ್‌ ಅವರ ಸವಾಲು ಎದುರಿಸಬೇಕಿದೆ.

ಮಹಿಳೆಯರ ವಿಭಾಗದಲ್ಲಿ ದೊಡ್ಡ ಶಕ್ತಿಯಾಗಿ ಬೆಳೆದಿರುವ ಪಿ.ವಿ.ಸಿಂಧು ಈ ವರ್ಷ ಎರಡು ಸೂಪರ್‌ ಸರಣಿಗಳಲ್ಲಿ ಗೆದ್ದಿದ್ದಾರೆ. ಒಂದರಲ್ಲಿ ರನ್ನರ್ ಅಪ್‌ ಆಗಿದ್ದಾರೆ. ವಿಶ್ವ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲೂ ರನ್ನರ್‌ಅಪ್‌ ಆಗಿದ್ದರು.

ದುಬೈ ಫೈನಲ್ಸ್‌ನಲ್ಲಿ ಸಿಂಧು ಅವರಿಗೆ ಜಪಾನ್‌ನ ಅಕಾನೆ ಯಮಗುಚಿ, ಚೀನಾ ತೈಪೆಯ ಥೈಜು ಯಿಂಗ್‌, ದಕ್ಷಿಣ ಕೊರಿಯಾದ ಸಂಗ್‌ ಜಿ ಹಿಯುನ್‌, ಥಾಯ್ಲೆಂಡ್‌ನ ರಚನೋಕ್‌ ಇಂಟನಾನ್‌, ಸ್ಪೇನ್‌ನ ಕ್ಯಾರೊಲಿನಾ ಮರಿನ್‌ ಸವಾಲಾಗಿ ನಿಂತಿದ್ದಾರೆ.

ಸಾಯಿ ಪ್ರಣೀತ್‌ ಕೊಂಚದರಲ್ಲಿ ಅವಕಾಶ ತಪ್ಪಿಸಿಕೊಂಡರು. ಅವರು ಸಿಂಗಪುರ ಓಪನ್‌ ಮಾತ್ರ ಗೆದ್ದುಕೊಂಡಿದ್ದಾರೆ. ಪುರುಷ ಮತ್ತು ಮಹಿಳೆಯರ ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಭಾರತದ ಯಾರೂ ಅರ್ಹತೆ ಪಡೆದುಕೊಂಡಿಲ್ಲ.

ವಿಶ್ವ ಸೂಪರ್‌ ಸರಣಿ ಫೈನಲ್ಸ್‌ನಲ್ಲಿ ಇದುವರೆಗೆ ಭಾರತದ ಆಟಗಾರರಿಂದ ಹೇಳಿಕೊಳ್ಳುವ ಸಾಧನೆ ಮೂಡಿಬಂದಿಲ್ಲ. ಆದರೆ, ಈ ಬಾರಿ ಹೆಜ್ಜೆ ಗುರುತು ಮೂಡಿಸುವ ಅವಕಾಶ ಎದುರಿದೆ. ಈ ಟೂರ್ನಿಯಲ್ಲಿ ಹಲವು ವರ್ಷಗಳಿಂದ ಚೀನಾ, ಡೆನ್ಮಾರ್ಕ್‌ ಹಾಗೂ ಮಲೇಷ್ಯಾ ಆಟಗಾರರದ್ದೇ ದರ್ಬಾರ್‌.

***

ಸೂಪರ್‌ ಸರಣಿ ಫೈನಲ್ಸ್‌ ಕುರಿತು...

ಬ್ಯಾಡ್ಮಿಂಟನ್‌ ವಿಶ್ವ ಸೂಪರ್‌ ಸರಣಿ ಒಟ್ಟು 12 ಹಂತಗಳಲ್ಲಿ ನಡೆಯುತ್ತದೆ. ಮೊದಲ 32 ಸ್ಥಾನ ಹೊಂದಿದ ಆಟಗಾರರು ಪುರುಷ ಹಾಗೂ ಮಹಿಳೆಯರ ಸಿಂಗಲ್ಸ್‌, ಡಬಲ್ಸ್‌, ಮಿಶ್ರ ಡಬಲ್ಸ್‌ನಲ್ಲಿ ಪೈಪೋಟಿ ನಡೆಸುತ್ತಾರೆ. ಎಂಟು ಟೂರ್ನಿ ಏಷ್ಯಾದಲ್ಲಿ, ಯೂರೋಪ್‌ನಲ್ಲಿ ಮೂರು ಟೂರ್ನಿ, ಒಸೀನಿಯಾದಲ್ಲಿ ಒಂದು ಟೂರ್ನಿ ಏರ್ಪಡಿಸಲಾಗುತ್ತದೆ. ಬಳಿಕ ದುಬೈನಲ್ಲಿ ವಿಶ್ವ ಸೂಪರ್‌ ಸರಣಿ ಫೈನಲ್ಸ್‌ ಆಯೋಜಿಸಲಾಗುತ್ತದೆ. ಸೂಪರ್‌ ಸರಣಿ ಟೂರ್ನಿಗಳಲ್ಲಿ ಗೆದ್ದು ಹೆಚ್ಚು ಪಾಯಿಂಟ್‌ ಪಡೆದ 8 ಆಟಗಾರರು ಇಲ್ಲಿ ಪೈಪೋಟಿ ನಡೆಸಲು ಅವಕಾಶ ಪಡೆಯುತ್ತಾರೆ.

***

* ಹಾಂಕಾಂಗ್‌ ಓಪನ್‌

* ಚೀನಾ ಓಪನ್‌

* ಫ್ರೆಂಚ್‌ ಓಪನ್

* ಡೆನ್ಮಾರ್ಕ್‌ ಓಪನ್‌

* ಜಪಾನ್‌ ಓಪನ್‌

* ಕೊರಿಯಾ ಓಪನ್‌

* ಆಸ್ಟ್ರೇಲಿಯಾ ಓಪನ್‌

* ಇಂಡೊನೇಷ್ಯಾ ಓಪನ್

* ಸಿಂಗಪುರ ಓಪನ್‌

* ಮಲೇಷ್ಯಾ ಓಪನ್‌

* ಇಂಡಿಯನ್‌ ಓಪನ್‌

* ಆಲ್‌ ಇಂಗ್ಲೆಂಡ್‌ ಓಪನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT