ಭಾನುವಾರ, ಫೆಬ್ರವರಿ 28, 2021
23 °C
‘ಇಂಡಿಯಾ ಸ್ಪೀಡ್‌ ವೀಕ್‌’ನ ಬೆಂಗಳೂರು ಆವೃತ್ತಿ ಆರಂಭ

ಏರೋಡ್ರೋಮ್‌ನಲ್ಲಿ ಡ್ರ್ಯಾಗ್‌ ರೇಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಏರೋಡ್ರೋಮ್‌ನಲ್ಲಿ ಡ್ರ್ಯಾಗ್‌ ರೇಸ್‌

ಬೆಂಗಳೂರು: ಜಕ್ಕೂರು ಏರೋಡ್ರೋಮ್‌ನಲ್ಲಿ ಬೈಕ್‌ ಹಾಗೂ ಕಾರುಗಳ ಭೋರ್ಗರೆತ ಶುರುವಾಗಿದೆ.

ಇಲ್ಲಿ ಶನಿವಾರ ಆರಂಭವಾದ ‘ಇಂಡಿಯಾ ಸ್ಪೀಡ್‌ ವೀಕ್‌’ನ ಬೆಂಗಳೂರು ಆವೃತ್ತಿ ಮೋಟಾರು ಕ್ರೀಡೆಯನ್ನು ಇಷ್ಟಪಡುವವರಲ್ಲಿ ರೋಮಾಂಚನ ಉಂಟುಮಾಡಿದೆ. ವಿಶೇಷ ಕಸರತ್ತುಗಳ ಮೂಲಕ ಪ್ರತಿಭೆಗಳನ್ನು ಪಣಕ್ಕೊಡ್ಡಲು ಈ ವಾರ್ಷಿಕ ಡ್ರ್ಯಾಗ್‌ ರೇಸ್‌ ಸ್ಪರ್ಧೆ ವೇದಿಕೆ ಕಲ್ಪಿಸಿದೆ.

ಇತರ ವಾಹನಗಳ ರೇಸ್‌ಗಳಿಗೆ ಹೋಲಿಸಿದರೆ ಡ್ರ್ಯಾಗ್‌ ರೇಸ್‌ಗಳು ಅಲ್ಪಾವಧಿಯವು. ಒಂದು ಸ್ಪರ್ಧೆ 15 ರಿಂದ 20 ಸೆಕೆಂಡ್‌ಗಳಿಗಿಂತ ಹೆಚ್ಚು ಕಾಲ ನಡೆಯುವುದಿಲ್ಲ. ಇಬ್ಬರು ಸ್ಪರ್ಧಿಗಳು ಸುರಕ್ಷಾ ಕವಚ ಹಾಗೂ ಹೆಲ್ಮೆಟ್‌ ಧರಿಸಿ ಸ್ಪರ್ಧೆಗಿಳಿಯುತ್ತಾರೆ.

402 ಮೀಟರ್‌ಗಳಷ್ಟು  ದೂರ ಸಾಗುವಷ್ಟರಲ್ಲಿ ಅವರು ತಮ್ಮ ಕೌಶಲಗಳನ್ನು ಪ್ರದರ್ಶಿಸಬೇಕು. ಈ ಸ್ಪರ್ಧಿಗಳು ತೀರಾ ಜಾಗರೂಕರಾಗಿರಬೇಕು.  ಸೋಲು– ಗೆಲುವನ್ನು ನಿರ್ಧರಿಸುವಲ್ಲಿ ಒಂದೊಂದು ಸೆಕೆಂಡ್‌ ಕೂಡಾ ಅಮೂಲ್ಯ.

ಕಮರ್ಷಿಯಲ್‌ ಪೈಲಟ್‌ ಆಗಿ ತರಬೇತಿ ಪಡೆಯುತ್ತಿರುವ ಆಯೆಷಾ ಇನಾಂದಾರ್‌ ಅವರಿಗೆ ಅಪಾಯಕ್ಕೆ ಒಡ್ಡಿಕೊಳ್ಳುವುದು ಹೊಸ ವಿಚಾರವೇನಲ್ಲ. ವಿಮಾನದಲ್ಲಿ ಹಾರಾಟವೂ ರೋಮಾಂಚನಕಾರಿಯೇ. ಆದರೆ, ಅವರಿಗೆ ಅದಕ್ಕಿಂತಲೂ ಹೆಚ್ಚಾಗಿ ಖುಷಿ ನೀಡುವುದು ಡ್ರ್ಯಾಗ್‌ ರೇಸ್‌. ಅವರು ಎರಡು ವರ್ಷಗಳಿಂದ ಡ್ರ್ಯಾಗ್‌ ರೇಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

‘ನನ್ನ ಗೆಳೆಯರು ಡ್ರ್ಯಾಗ್ ರೇಸ್‌ ತೊಡಗಿಸಿಕೊಳ್ಳುತ್ತಿದ್ದರು. ಅವರು ಅಭ್ಯಾಸ ನಡೆಸುವಾಗ ಕೆಲವೊಮ್ಮೆ ನಾನೂ ಅವರ ಜೊತೆ ಸೇರಿಕೊಳ್ಳುತ್ತಿದ್ದೆ. ಅವರ ತಂಡಕ್ಕೆ ಒಬ್ಬರು ಮಹಿಳಾ ರೈಡರ್‌ನ ಅವಶ್ಯಕತೆ ಇತ್ತು. ಹಾಗಾಗಿ ನಾನು ಅವರ ತಂಡವನ್ನು ಸೇರಿಕೊಂಡೆ’ ಎಂದು ಮುಂಬೈನ ಆಯೆಷಾ ತಿಳಿಸಿದರು.

‘ಡ್ರ್ಯಾಗ್‌ ರೇಸ್‌ನಲ್ಲಿ ನಾವು ಎಷ್ಟು ಕ್ಷಿಪ್ರವಾಗಿ ಪ್ರತಿಕ್ರಿಯಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ನಾವು ಸಕಾಲದಲ್ಲಿ ಗೇರ್‌ ಬದಲಾಯಿಸದಿದ್ದರೆ ಪ್ರತಿಸ್ಪರ್ಧಿಗಿಂತ ಹಿಂದೆ ಬೀಳುತ್ತೇವೆ. ನೂರಾರು ಕಣ್ಣುಗಳು ನಮ್ಮನ್ನೇ ನೋಡುತ್ತಿರುವಾಗ ಈ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ’ ಎಂದು ಅವರು ವಿವರಿಸಿದರು.

ಆಯೆಷಾ ಅವರು ಕೆಟಿಎಂ 390 2–ಸ್ಟ್ರೋಕ್‌ ಬೈಕನ್ನು ಬಳಸುತ್ತಾರೆ. ಹೆಚ್ಚಿನ ಸ್ಪರ್ಧಿಗಳ ನೆಚ್ಚಿನ ಆಯ್ಕೆ ಕೆಟಿಎಂ ಬೈಕ್‌ ಆಗಿದೆ. ಯಮಹಾ, ಅಪಾಚೆ ಹಾಗೂ ಡಿಎಸ್‌ಕೆ–ಬೆನೆಲ್ಲಿ ಬೈಕ್‌ಗಳನ್ನೂ ಕೆಲವು ಸ್ಪರ್ಧಿಗಳು ಬಳಸುತ್ತಿದ್ದಾರೆ. ಈ ಬೈಕ್‌ಗಳನ್ನು ಡ್ರ್ಯಾಗ್‌ ರೇಸ್‌ ಸಲುವಾಗಿ ಮಾರ್ಪಾಡು ಮಾಡಲಾಗುತ್ತದೆ.

ಕಾರು ರೇಸ್‌ಗೆ ಸ್ಕೋಡಾ, ರೆನಾಲ್ಟ್‌, ಫೋಕ್ಸ್‌ವ್ಯಾಗನ್‌ ಹಾಗೂ ಸುಝುಕಿ ಕಂಪೆನಿಗಳ ಕಾರುಗಳನ್ನು ಸ್ಪರ್ಧಿಗಳು ಬಳಸುತ್ತಿದ್ದಾರೆ. ಸ್ಪರ್ಧೆ ಸಲುವಾಗಿ ಅವುಗಳಲ್ಲಿ ಕೆಲವೊಂದು ಮಾರ್ಪಾಡು ಮಾಡಲಾಗಿದೆ.

ಕುಟುಂಬವು ನಡೆಸುತ್ತಾ ಬಂದಿರುವ ವ್ಯಾಪಾರವನ್ನು ನೋಡಿಕೊಳ್ಳುತ್ತಿರುವ  ಎಂ.ಮಿಥುನ್‌ ಅವರಿಗೆ ಕಾರುಗಳೆಂದರೆ ಅಚ್ಚುಮೆಚ್ಚು. ಬೆಂಗಳೂರಿನ ಟ್ಯೂನೋಟ್ರೋನಿಕ್ಸ್‌ ತಂಡದಲ್ಲಿ ಅವರೂ ಸದಸ್ಯರು. ಕಾರುಗಳ ಮೈಲೇಜ್‌ ಜಾಸ್ತಿ ಮಾಡುವುದರಲ್ಲಿ, ಅವುಗಳ ನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುವುದರಲ್ಲಿ ಈ ತಂಡ ಎತ್ತಿದ ಕೈ. ಆದರೆ ಹೊಗೆ ಸೂಸುವಿಕೆಯ ಮಾನದಂಡಗಳಿಗೆ ಸಂಬಂಧಿಸಿದಂತೆ ಯಾವುದೇ ಏರುಪೇರಾಗದಂತೆ ನೋಡಿಕೊಂಡು ಈ ಮಾರ್ಪಾಡುಗಳನ್ನು ಮಾಡುತ್ತಾರೆ. ಅವಕಾಶ ಸಿಕ್ಕಾಗ ಡ್ರ್ಯಾಗ್‌ ರೇಸ್‌ಗಳಲ್ಲಿ ಭಾಗವಹಿಸುವುದು ಅವರ ಚಾಳಿ.

ಮಿಥುನ್‌ ಅವರ ತಂಡ ಡ್ರ್ಯಾಗ್‌ ರೇಸ್‌ನ ಅಪಾಯಗಳ ಕುರಿತೂ ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳಿಗೆ ತರಬೇತಿ ಹಮ್ಮಿಕೊಳ್ಳುತ್ತದೆ. ಸುರಕ್ಷತಾ ಕ್ರಮಗಳ ಬಗ್ಗೆ ಪಾಠ ಮಾಡುತ್ತದೆ.

‘ಚೆನ್ನೈ, ಕೊಯಂಬತ್ತೂರು, ನವದೆಹಲಿಗಳಲ್ಲಿ ಡ್ರ್ಯಾಗ್‌ ರೇಸಿಂಗ್‌ಗೆ ಪ್ರತ್ಯೇಕ ಟ್ರ್ಯಾಕ್‌ಗಳಿವೆ. ಬೆಂಗಳೂರಿನಂತಹ ನಗರದಲ್ಲೂ ಇಂತಹ ಟ್ರ್ಯಾಕ್‌ನ ಅಗತ್ಯ ಇದೆ. ಹೆದ್ದಾರಿಗಳಲ್ಲಿ ರಾತ್ರಿ ವೇಳೆ ಯುವಕರು ಇಂತಹ ದುಸ್ಸಾಹಸ ನಡೆಸುವುದನ್ನು ಇದರಿಂದ ತಡೆಯಬಹುದು’ ಎನ್ನುತ್ತಾರೆ ಮಿಥುನ್‌.

ಈ ವೇಗದ ಸ್ಪರ್ಧೆಯ ರಾಯಭಾರಿಗಳಲ್ಲಿ ಒಬ್ಬರಾದ ಬಾಲಿವುಡ್‌ ನಟಿ ರವಿನಾ ಟಂಡನ್‌ ಅವರು ಡ್ರ್ಯಾಗ್‌ ರೇಸ್‌ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಇನ್ನೊಬ್ಬ ರಾಯಭಾರಿ ಸುನಿಲ್‌ ಶೆಟ್ಟಿ ಕೂಡಾ ಭೇಟಿ ನೀಡುವ ನಿರೀಕ್ಷೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.