ಗುರುವಾರ , ಫೆಬ್ರವರಿ 25, 2021
29 °C

ಕೃಷಿ ಉತ್ಪನ್ನಗಳಿಗೆ ಪರಿಷ್ಕೃತ ಬೆಲೆ ನಿಗದಿಗೆ ರೈತರ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೃಷಿ ಉತ್ಪನ್ನಗಳಿಗೆ ಪರಿಷ್ಕೃತ ಬೆಲೆ ನಿಗದಿಗೆ ರೈತರ ಆಗ್ರಹ

ಧಾರವಾಡ: ಭತ್ತ, ರಾಗಿ, ಜೋಳ, ಮೆಕ್ಕೆಜೋಳ, ತೊಗರಿ ಸೇರಿದಂತೆ ವಿವಿಧ ಕೃಷಿ ಉತ್ಪನ್ನಗಳಿಗೆ ಪರಿಷ್ಕೃತ ಬೆಲೆ ನಿಗದಿಪಡಿಸಿ, ಖರೀದಿ ಕೇಂದ್ರ ತೆರೆಯಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಲಾಯಿತು.

‘ಕೆಲವೆಡೆ ಮಳೆ ಹೆಚ್ಚಾಗಿ ಬೆಳೆ ನಷ್ಟವಾಗಿದೆ. ಇನ್ನು ಕೆಲವೆಡೆ ಕೀಟ ಬಾಧೆಯಿಂದ ಹಾಳಾಗಿದೆ. ಹೀಗಾಗಿ ರೈತರು ಸಂಕಷ್ಟದಲ್ಲಿದ್ದಾರೆ. ಕಳೆದ ವರ್ಷ ಭತ್ತಕ್ಕೆ ₹2,500 ಬೆಲೆ ಇತ್ತು. ಈಗ ₹1,600 ಇದೆ. ಇದೆಲ್ಲ ಸರ್ಕಾರದ ಗಮನದಲ್ಲಿದ್ದರೂ ಮಾರುಕಟ್ಟೆಯಲ್ಲಿ ಮಧ್ಯಪ್ರವೇಶಿಸುತ್ತಿಲ್ಲ’ ಎಂದು ಪ್ರತಿಭಟನಾಕಾರರು ಆರೋಪಿಸಿದರು.

‘ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಬರ ಪರಿಸ್ಥಿತಿ ತಲೆದೋರಿದೆ. ರಾಜ್ಯದಲ್ಲಿ ಪ್ರಸಕ್ತ ವರ್ಷದ ಕೊನೆಯಲ್ಲಿ ಅಲ್ಪಸ್ವಲ್ಪ ಮಳೆಯಾಗಿದ್ದರಿಂದಾಗಿ ಬೆಳೆ ಕೈಸೇರುವ ಹಂತದಲ್ಲಿದೆ. ಇಂಥ ಸಂದರ್ಭದಲ್ಲಿ, ಬೆಳೆಗೆ ಸರಿಯಾದ ಬೆಲೆಯೂ ಸಿಗದೆ ರೈತರು ನಷ್ಟಕ್ಕೀಡಾಗುತ್ತಿದ್ದಾರೆ. ಬೀಜ, ಗೊಬ್ಬರ ಹಾಗೂ ಕೀಟನಾಶಕಗಳ ದರವೂ ಹೆಚ್ಚಿದ್ದು ಕೃಷಿ ನಿರ್ವಹಣೆ ಕಷ್ಟವಾಗಿದೆ. ಕುಟುಂಬದ ಖರ್ಚನ್ನು ನಿಭಾಯಿಸುವುದೂ ದುಸ್ತರವಾಗಿದ್ದು, ರೈತರು ಸಾಲದ ಸುಳಿಗೆ ಸಿಲುಕಿದ್ದಾರೆ’ ಎಂದು ಅಳಲು ತೋಡಿಕೊಂಡರು.

ಬೆಳೆ ನಷ್ಟ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಹಾಗೂ ಕೃಷಿ ಕಾರ್ಮಿಕರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಫಾರೂಕ್‌ ಕಿಲ್ಲೇದಾರ, ಚಂದ್ರಶೇಖರ ಕಬ್ಬೂರ, ಅಮೃತ ಕಂಬಾರ, ಫಕೀರಗೌಡ ಹೂವನ್ನವರ, ಬಸವನಗೌಡ ಪಾಟೀಲ, ಸುಶೀಲಾ ತಾರಿಹಾಳ, ಶಾರದಾ ಹಿರೇಮಠ, ಮೈಲಾರಿ, ಮಂಜು ಕೊಪ್ಪದ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.